
ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪ್ರತಿದಿನ ಕನಿಷ್ಠ 10 ನಿಮಿಷ ಕನ್ನಡ ದಿನಪತ್ರಿಕೆಗಳನ್ನು ಓದುವುದು ಕಡ್ಡಾಯ ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸಿನ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದ್ದು
ಶಾಲೆಗಳಲ್ಲಿ ಪ್ರತಿದಿನ ಪ್ರಾರ್ಥನೆಯ ಬಳಿಕ ವಿದ್ಯಾರ್ಥಿಗಳು ಪತ್ರಿಕೆ ಓದುವ ಅಭ್ಯಾಸ ರೂಢಿಸಿಕೊಳ್ಳುವಂತೆ ಸೂಚಿಸಲಾಗಿದೆ. ಈ ಕ್ರಮದಿಂದ ಓದುವ ಹವ್ಯಾಸ ಬೆಳೆಸುವುದು ಹಾಗೂ ಪ್ರಸ್ತುತ ಘಟನೆಗಳ ಅರಿವು ಮೂಡಿಸುವುದು ಉದ್ದೇಶವಾಗಿದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆ, ಅದನ್ನು ನಿಯಂತ್ರಿಸಲು ಈ ಕ್ರಮ ಸಹಾಯಕವಾಗಲಿದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ. ಇದರಿಂದ ಮಾನಸಿಕ ಒತ್ತಡ ಮತ್ತು ಕಣ್ಣಿನ ಸಮಸ್ಯೆಗಳಂತಹ ಅಡಚಣೆಗಳನ್ನು ಕೂಡ ಕಡಿಮೆ ಮಾಡಲು ಸಾಧ್ಯವೆಂದು ಹೇಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಯಂತ್ರಿಸುವ ಬಗ್ಗೆ ಮಾಡಿದ ಘೋಷಣೆಯ ಮುಂದುವರಿದ ಭಾಗವಾಗಿ ಈ ಕ್ರಮ ಜಾರಿಯಾಗಿದೆ ಎಂದು ತಿಳಿಸಲಾಗಿದೆ.













