
ನವದೆಹಲಿ: 7 ಹಂತಗಳಲ್ಲಿ ನಡೆದ ಚುನಾವಣಾ ಹಬ್ಬದ ಮಹಾ ಫಲಿತಾಂಶಕ್ಕಾಗಿ ಇಡೀ ಜಗತ್ತೇ ತುದಿಗಾಲಲ್ಲಿ ನಿಂತಿದ್ದು
ಮತ ಎಣಿಕೆಗೆ ಅಂತಿಮ ಹಂತದ ಸಿದ್ದತೆಗಳು ಎಲ್ಲಾ ಕಡೆ ಮುಗಿದಿವೆ. ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಶುರುವಾಗಲಿದ್ದು ಮೊದಲಿಗೆ ಅಂಚೆ ಮತಗಳು ಮತ್ತು ಹಿರಿಯ ಮತದಾರರ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಅರ್ಧ ಗಂಟೆ ನಂತರ ಇವಿಎಂ ಮತಗಳ ಎಣಿಕೆ ಕಾರ್ಯ ಶುರುವಾಗಲಿದೆ. ಮಧ್ಯಾಹ್ನದ ಹೊತ್ತಿಗೆ ನಿಖರ ಟ್ರೆಂಡ್ ಗೊತ್ತಾಗುವ ನಿರೀಕ್ಷೆಯಿದ್ದು ಬೆಂಗಳೂರು ಕೇಂದ್ರ ಕ್ಷೇತ್ರದ ಮತ ಎಣಿಕೆ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ, ಬೆಂಗಳೂರು ಉತ್ತರ ಕ್ಷೇತ್ರದ ಮತ ಎಣಿಕೆ ಸೆಂಟ್ ಜೋಸೆಫ್ ಕಾಲೇಜಿಲ್ಲಿ, ಬೆಂಗಳೂರು ದಕ್ಷಿಣ ಕ್ಷೇತ್ರದ ಮತ ಎಣಿಕೆ ಜಯನಗರದ ಎಸ್‍ಎಸ್‍ಎಂಆರ್‍ವಿ ಕಾಲೇಜಿನಲ್ಲಿ ನಡೆಯಲಿದೆ.
ಬೆಂಗಳೂರು ಗ್ರಾಮಾಂತರದ ಮತ ಎಣಿಕೆ ರಾಮನಗರದಲ್ಲಿ, ಬೆಳಗಾವಿ ಮತ ಎಣಿಕೆ ಬೆಳಗಾವಿಯಲ್ಲಿ, ಚಿಕ್ಕೋಡಿ ಮತ ಎಣಿಕೆ ಚಿಕ್ಕೋಡಿಯಲ್ಲಿ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮತ ಎಣಿಕೆ ಉಡುಪಿಯಲ್ಲಿ, ಮೈಸೂರು-ಮಡಿಕೇರಿ ಕ್ಷೇತ್ರದ ಮತ ಎಣಿಕೆ ಮೈಸೂರಿನಲ್ಲಿ ಇನ್ನುಳಿದಂತೆ ಆಯಾ ಕ್ಷೇತ್ರಗಳ ಮತ ಎಣಿಕೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ. ಮತ ಎಣಿಕೆ ಕೇಂದ್ರಗಳ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಇದೇ ವೇಳೆ, ಸುರಪುರ ವಿಧಾನಸಭೆ ಉಪ ಚುನಾವಣೆ ಫಲಿತಾಂಶವೂ ಇಂದೇ ಪ್ರಕಟಗೊಳ್ಳಲಿದೆ.
ಎಕ್ಸಿಟ್ ಪೋಲ್‍ಗಳಲ್ಲಿ ಎನ್‍ಡಿಎ ಮೈತ್ರಿಕೂಟ ಜಯಭೇರಿ ಬಾರಿಸಲಿದೆ ಅಂತ ಹೇಳುತ್ತಿದ್ದರೂ, ಐಎನ್‍ಡಿಐಎ ಮೈತ್ರಿಕೂಟದ ಉತ್ಸಾಹವೇನೂ ಕುಗ್ಗಿಲ್ಲ. ಪ್ರಧಾನಿ ನರೇಂದ್ರ ಮೋದಿ, ಹ್ಯಾಟ್ರಿಕ್ ರಾಜ್ಯಭಾರದ ನಿರೀಕ್ಷೆಯಲ್ಲಿದ್ದರೆ 27 ಪಕ್ಷಗಳ ಮೈತ್ರಿಕೂಟ ಕಟ್ಟಿಕೊಂಡಿರೋ ಇಂಡಿಯಾ ಒಕ್ಕೂಟ ಕೂಡ ಅಧಿಕಾರದ ಹಿಡಿಯುವ ನಿರೀಕ್ಷೆಯಲ್ಲಿದೆ.