
ಮಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಧಾರವಾಡ ಜಿಲ್ಲೆಯ ಪಶ್ಚಿಮ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿರುವ ಹಿನ್ನೆಲೆಯಲ್ಲಿ, ಅವರ ಶಾಸಕ ಸ್ಥಾನಕ್ಕೆ ಸಂಬಂಧಿಸಿದ ಭವಿಷ್ಯ ಕುರಿತು ಸೋಮವಾರ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, “ವಿನಯ್ ಕುಲಕರ್ಣಿ ಅವರಿಗೆ ಶಿಕ್ಷೆ ವಿಧಿಸಿರುವ ಮಾಹಿತಿ ನಮಗೆ ಲಭ್ಯವಾಗಿದೆ. ಆದರೆ, ಈ ಕುರಿತು ನ್ಯಾಯಾಲಯದ ಅಧಿಕೃತ ಆದೇಶದ ಪ್ರತಿ ಇನ್ನೂ ನಮ್ಮ ಕೈಗೆ ಬಂದಿಲ್ಲ. ಆದೇಶದ ಪ್ರತಿ ದೊರಕಿದ ನಂತರವೇ ಮುಂದಿನ ಕಾನೂನು ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ,” ಎಂದು ಹೇಳಿದರು.
ಶಾಸಕ ಸ್ಥಾನ ಮುಂದುವರಿಯುವ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಅವರು, ಕೆಳಹಂತದ ನ್ಯಾಯಾಲಯದ ತೀರ್ಪನ್ನು ಮೇಲಿನ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ಪ್ರಶ್ನಿಸುವ ಅವಕಾಶವಿದೆ. ಮೇಲಿನ ನ್ಯಾಯಾಲಯ ಶಿಕ್ಷೆಗೆ ತಡೆ ನೀಡಿದರೆ, ಅವರ ಶಾಸಕ ಸ್ಥಾನ ಮುಂದುವರಿಯಬಹುದು ಎಂದೂ ಹೇಳಿದರು.
ಜೊತೆಗೆ, ಸಂವಿಧಾನದ ನಿಯಮಗಳ ಪ್ರಕಾರ ಆಡಳಿತ ಮತ್ತು ಪ್ರತಿಪಕ್ಷದ ಎಲ್ಲ ಸದಸ್ಯರ ಹಿತವನ್ನು ಕಾಪಾಡುವುದು ಸಭಾಧ್ಯಕ್ಷನಾಗಿ ತನ್ನ ಕರ್ತವ್ಯ ಎಂದು ಅವರು ತಿಳಿಸಿದರು.













