
ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ನೀಟ್ ಹಾಗೂ ನೆಟ್ ಪರೀಕ್ಷಾ ಅಕ್ರಮಗಳ ಕುರಿತು ಪ್ರತಿಕ್ರಿಯಿಸಿದ್ದು ‘ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಮತ್ತು ಅವರ ಭವಿಷ್ಯದ ಬಗ್ಗೆ ಯಾವುದೇ ರಾಜಿ ಇಲ್ಲ. ಪ್ರವೇಶ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ಆರೋಪದ ಬಗ್ಗೆ ವಿಶೇಷ ಉನ್ನತ ಮಟ್ಟದ ಸಮಿತಿಯಿಂದ ತನಿಖೆ ನಡೆಸಲಾಗುವುದು ಮತ್ತು ಯಾವುದೇ ಅಪರಾಧಿಗಳನ್ನು ಬಿಡುವುದಿಲ್ಲ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಪರೀಕ್ಷಾ ಅಕ್ರಮದ ತನಿಖೆಯ ಜತೆಗೆ, ಪರೀಕ್ಷೆ ನಡೆಸುವ ಹೊಣೆ ಹೊತ್ತಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ದತ್ತಾಂಶ ಕಾರ್ಯನಿರ್ವಹಣೆ ಪರಿಶೀಲಿಸಲು ಸರ್ಕಾರವು ವಿಶೇಷ ಸಮಿತಿಯನ್ನು ರಚಿಸಲಿದೆ. ಅದರ ರಚನೆ, ಕಾರ್ಯನಿರ್ವಹಣೆ, ಪರೀಕ್ಷಾ ಪ್ರಕ್ರಿಯೆ, ಪಾರದರ್ಶಕತೆ ಸುಧಾರಿಸಲು ಉನ್ನತ ಮಟ್ಟದ ಸಮಿತಿಯಿಂದ ಶಿಫಾರಸುಗಳನ್ನು ಬಯಸಲಿದೆ’ ಎಂದರು.
ಇನ್ನು ನೆಟ್ ಪರೀಕ್ಷೆಯ ರದ್ದತಿಯ ಕುರಿತು ಮಾತನಾಡಿದ ಅವರು ನೆಟ್ ಪ್ರಶ್ನೆಪತ್ರಿಕೆ ಡಾರ್ಕ್‌ನೆಟ್‌ನಲ್ಲಿ ಸೋರಿಕೆ ಆಗಿ ಟೆಲಿಗ್ರಾಂ ಆ್ಯಪ್‌ನಲ್ಲಿ ಹರಿದಾಡಿದ್ದರಿಂದ ಪರೀಕ್ಷೆ ರದ್ದು ಮಾಡಲಾಯಿತು ಎಂದು ಸ್ಪಷ್ಟನೆ ನೀಡಿದರು.