
ಹೊಸದಿಲ್ಲಿ: ವಿದೇಶಿ ಪ್ರಯಾಣಗಳ ಮೇಲೆ ಹೊಸ ತೆರಿಗೆ, ಸೆಸ್ ಅಥವಾ ಸರ್ಚಾರ್ಜ್ ವಿಧಿಸುವ ಬಗ್ಗೆ ಹರಿದಾಡುತ್ತಿರುವ ವರದಿಗಳನ್ನು ಪ್ರಧಾನಿ ನರೇಂದ್ರ ಮೋದಿ ತಳ್ಳಿಹಾಕಿದ್ದು ಈ ಕುರಿತು ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿದೇಶಿ ಪ್ರವಾಸಗಳ ಮೇಲೆ ನಿರ್ಬಂಧ ಅಥವಾ ಹೆಚ್ಚುವರಿ ಶುಲ್ಕ ವಿಧಿಸುವ ಪ್ರಶ್ನೆಯೇ ಇಲ್ಲ ಎಂದು ಮೋದಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಜನರ ದೈನಂದಿನ ಜೀವನ ಹಾಗೂ ವ್ಯಾಪಾರ ಸುಗಮವಾಗಲು ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.
ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ವರದಿಗಳ ಪ್ರಕಾರ, ವಿದೇಶಿ ಪ್ರಯಾಣದ ಮೇಲೆ ಸೆಸ್, ತೆರಿಗೆ ಅಥವಾ ಸರ್ಚಾರ್ಜ್ ವಿಧಿಸುವ ಪ್ರಸ್ತಾವ ಕುರಿತು ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚೆ ನಡೆದಿತ್ತು ಎನ್ನಲಾಗಿತ್ತು. ಆದರೆ ಅವುಗಳಲ್ಲಿ ಸತ್ಯಾಂಶವಿಲ್ಲ ಎಂದು ಸ್ವತಃ ಪ್ರಧಾನಿ ಸ್ಪಷ್ಟನೆ ನೀಡಿದ್ದಾರೆ.
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆ ಇಂಧನ ಉಳಿತಾಯ ಮತ್ತು ವಿದೇಶಿ ವಿನಿಮಯ ಸಂರಕ್ಷಣೆಗೆ ಒತ್ತು ನೀಡಿರುವ ಮೋದಿ, ಸಾರ್ವಜನಿಕ ಸಾರಿಗೆ, ಕಾರ್ಪೂಲಿಂಗ್, ಎಲೆಕ್ಟ್ರಿಕ್ ವಾಹನ ಬಳಕೆ ಹಾಗೂ ವರ್ಕ್ ಫ್ರಂ ಹೋಮ್ಗೆ ಉತ್ತೇಜನ ನೀಡುವಂತೆ ಕರೆ ನೀಡಿದ್ದಾರೆ. ಜೊತೆಗೆ ಚಿನ್ನ ಖರೀದಿ ಮತ್ತು ವಿದೇಶ ಪ್ರವಾಸಗಳನ್ನು ತಾತ್ಕಾಲಿಕವಾಗಿ ಮುಂದೂಡಲು ಜನರಲ್ಲಿ ಮನವಿ ಮಾಡಿದ್ದರು.























