
ಕಾರ್ಕಳ: ಶಾಲೆಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಉತ್ತೇಜನ ನೀಡುವ ರಾಷ್ಟ್ರಮಟ್ಟದ ‘ಸ್ವಚ್ಛ ವಿದ್ಯಾಲಯ ಪುರಸ್ಕಾರ’ ಪ್ರಕಟವಾಗಿದ್ದು, ಕರ್ನಾಟಕದ ಮೂರು ಶಾಲೆಗಳು ಈ ಬಾರಿ ಆಯ್ಕೆಯಾಗಿವೆ. ಅವುಗಳಲ್ಲಿ ಕಾರ್ಕಳ ತಾಲೂಕಿನ ಮುಳ್ಳಾಡು ಎಳ್ಳಾರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸ್ಥಾನ ಪಡೆದಿದ್ದು ವಿಶೇಷ ಗಮನ ಸೆಳೆದಿದೆ.
ಈ ಪ್ರಶಸ್ತಿಗಾಗಿ ದೇಶದಾದ್ಯಂತ 11 ಲಕ್ಷಕ್ಕೂ ಹೆಚ್ಚು ಶಾಲೆಗಳು ನೋಂದಾಯಿಸಿಕೊಂಡಿದ್ದವು. ಕರ್ನಾಟಕದಿಂದ ಸಾವಿರಾರು ಶಾಲೆಗಳು ಭಾಗವಹಿಸಿದ್ದರೆ, ಅಂತಿಮವಾಗಿ ರಾಷ್ಟ್ರ ಮಟ್ಟದಲ್ಲಿ 191 ಶಾಲೆಗಳು ಆಯ್ಕೆಯಾಗಿವೆ. ಕರ್ನಾಟಕದಿಂದ ಮುಳ್ಳಾಡು ಎಳ್ಳಾರೆ ಶಾಲೆಯ ಜೊತೆಗೆ ಬೆಂಗಳೂರು ಗ್ರಾಮಾಂತರದ ಕನ್ನಮಂಗಲ ಹಾಗೂ ಮೈಸೂರಿನ ಅಟ್ಟಿಗೋಡು ಸರ್ಕಾರಿ ಶಾಲೆಗಳು ಪ್ರಶಸ್ತಿಗೆ ಭಾಜನವಾಗಿವೆ.
1959ರಲ್ಲಿ ಆರಂಭವಾದ ಮುಳ್ಳಾಡು ಎಳ್ಳಾರೆ ಶಾಲೆ ಗ್ರಾಮೀಣ ಪ್ರದೇಶದಲ್ಲಿದ್ದರೂ ಶಿಕ್ಷಣ ಹಾಗೂ ಸ್ವಚ್ಛತಾ ನಿರ್ವಹಣೆಯಲ್ಲಿ ಮಾದರಿಯಾಗಿ ಬೆಳೆದಿದೆ. ಪ್ರಸ್ತುತ 35 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮುಖ್ಯ ಶಿಕ್ಷಕ ಜನಾರ್ಧನ ಬೆಳ್ಳಿರಾಯ ಅವರ ಮಾರ್ಗದರ್ಶನದಲ್ಲಿ ಶಾಲೆ ಉತ್ತಮ ಕಾರ್ಯನಿರ್ವಹಣೆ ಮಾಡುತ್ತಿದೆ.
ಪ್ರಶಸ್ತಿಯ ಅಂಗವಾಗಿ ಶಾಲೆಗೆ ಒಂದು ಲಕ್ಷ ರೂ. ನಗದು, ಪ್ರಮಾಣಪತ್ರ ಹಾಗೂ ರಾಷ್ಟ್ರಮಟ್ಟದ ಗೌರವ ಲಭಿಸಲಿದ್ದು, ಈ ಸಾಧನೆ ಗ್ರಾಮೀಣ ಶಾಲೆಗೆ ಹೆಮ್ಮೆಯ ಕ್ಷಣವಾಗಿದೆ.





















































































