
ಬೆಂಗಳೂರು: ತಾತನ ಸ್ವಯಂ ಸಂಪಾದಿತ ಆಸ್ತಿ ವಿಭಜನೆಯ ಬಳಿಕ ತಂದೆಗೆ ಬಂದರೆ ಅದು ವೈಯಕ್ತಿಕ ಆಸ್ತಿಯಾಗುತ್ತದೆ, ಪಿತ್ರಾರ್ಜಿತ ಆಸ್ತಿಯಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹೀಗಾಗಿ ಮೊಮ್ಮಕ್ಕಳಿಗೆ ಅದರಲ್ಲಿ ನೇರ ಪಾಲು ಕೇಳುವ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಹಾಗೂ ಟಿ.ಎಂ. ನದಾಫ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ತಾತನ ಆಸ್ತಿಯಲ್ಲಿ ಪಾಲು ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ. ಆಸ್ತಿ ತಾತನ ಸ್ವಂತ ಸಂಪಾದನೆ ಎಂಬುದು ದಾಖಲೆಗಳಿಂದ ದೃಢಪಟ್ಟಿದೆ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಪೀಠದ ಪ್ರಕಾರ, ಕುಟುಂಬ ಹಂಚಿಕೆಯಲ್ಲಿ ತಂದೆಗೆ ಬಂದ ಸ್ವಯಂ ಸಂಪಾದಿತ ಆಸ್ತಿ ಅವರ ಸಂಪೂರ್ಣ ನಿಯಂತ್ರಣದಲ್ಲಿರುತ್ತದೆ. ಮಿತಾಕ್ಷರ ಕಾನೂನಿನಡಿ ಅದನ್ನು ಮಾರಾಟ ಅಥವಾ ವಿಲ್ ಮಾಡುವ ಹಕ್ಕು ತಂದೆಗೆ ಇದೆ.
ಪಿತ್ರಾರ್ಜಿತ ಆಸ್ತಿ ಎಂದರೆ ನಾಲ್ಕು ತಲೆಮಾರುಗಳಿಂದ ವಿಭಜನೆಯಾಗದೆ ಬಂದಿರುವ ಆಸ್ತಿ. ಆದರೆ ಸ್ವಯಂ ಸಂಪಾದಿತ ಆಸ್ತಿಯಲ್ಲಿ ಮಕ್ಕಳಿಗೆ ಜನ್ಮಸಿದ್ಧ ಹಕ್ಕು ಇರುವುದಿಲ್ಲ ಎಂದು ನ್ಯಾಯಾಲಯ ಪುನರುಚ್ಚರಿಸಿದೆ.

































