
ಬೆಳಗಾವಿ: ಅಯೋಧ್ಯೆಯ ಶ್ರೀರಾಮ ಮಂದಿರದ ಹುಂಡಿ ಹಣ ಎಣಿಕೆಯಲ್ಲಿ ನಡೆದಿರುವ ಆರೋಪಿತ ಅಕ್ರಮದ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತೀವ್ರ ಕಳವಳ ವ್ಯಕ್ತಪಡಿಸಿದೆ. ಬೆಳಗಾವಿಯಲ್ಲಿ ನಡೆದ ಮೂರು ದಿನಗಳ ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್‌ನ ಸಮಾರೋಪದ ವೇಳೆ ಈ ಕುರಿತು ಪ್ರಕಟಣೆ ಹೊರಡಿಸಲಾಗಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮನವಿಯ ಮೇರೆಗೆ ನಡೆಯುತ್ತಿರುವ ಎಸ್‌ಐಟಿ ಹಾಗೂ ಪೊಲೀಸ್ ತನಿಖೆ ಶೀಘ್ರದಲ್ಲೇ ಮಹತ್ವದ ಹಂತ ತಲುಪಲಿದೆ ಎಂಬ ವಿಶ್ವಾಸವನ್ನು ಸಂಘ ವ್ಯಕ್ತಪಡಿಸಿದೆ. ಇಂತಹ ಘಟನೆಗಳು ಮರುಕಳಿಸದಂತೆ ಟ್ರಸ್ಟ್ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ.
ರಾಮಮಂದಿರ ಹುಂಡಿ ಹಣ ದುರ್ಬಳಕೆಯ ಆರೋಪ ಜೂನ್ 7ರಂದು ಬೆಳಕಿಗೆ ಬಂದಿದ್ದು, ಎಸ್‌ಐಟಿ ಪ್ರಾಥಮಿಕ ವರದಿ ಆಧರಿಸಿ ಜೂನ್ 25ರಂದು ಎಫ್‌ಐಆರ್ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಎಣಿಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಎಂಟು ಮಂದಿಯನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ.
ಜುಲೈ 10ರಿಂದ 12ರವರೆಗೆ ನಡೆದ ಸಭೆಯಲ್ಲಿ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್, ಸರ್ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ 226 ಕಾರ್ಯಕರ್ತರು ಭಾಗವಹಿಸಿದ್ದರು. ದೇಶಾದ್ಯಂತ ನಡೆದ ಸಂಘ ಶಿಕ್ಷಣ ವರ್ಗಗಳು, ಕಾರ್ಯಕರ್ತರ ತರಬೇತಿ ಹಾಗೂ ವಿವಿಧ ಸಂಘಟನೆ ಚಟುವಟಿಕೆಗಳ ಪರಿಶೀಲನೆ ನಡೆಸಲಾಯಿತು.
ಸಭೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮಗಳ ಪ್ರಗತಿ, ಹೊಸ ಶಾಖೆಗಳ ಆರಂಭ, ಸಾಮಾಜಿಕ ಸೇವಾ ಯೋಜನೆಗಳು ಹಾಗೂ ಪಂಚ ಪರಿವರ್ತನ ಅಭಿಯಾನದ ಕುರಿತು ಚರ್ಚೆ ನಡೆಯಿತು. ಜೊತೆಗೆ 2026–27ರ ಮೋಹನ್ ಭಾಗವತ್ ಅವರ ಪ್ರವಾಸ ಯೋಜನೆಯನ್ನೂ ಪರಿಶೀಲಿಸಲಾಯಿತು.
ಜನಗಣತಿ, ಜನಸಂಖ್ಯೆ ಅಸಮತೋಲನ, ಹೆಚ್ಚುತ್ತಿರುವ ಮಾದಕ ವ್ಯಸನ ಹಾಗೂ ವ್ಯಸನಮುಕ್ತಿ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು. ಸಂತ ಶಿರೋಮಣಿ ರವಿದಾಸ್ ಮಹಾರಾಜರ 650ನೇ ಜನ್ಮ ವಾರ್ಷಿಕೋತ್ಸವ ಆಚರಣೆಗೆ ಸಂಬಂಧಿಸಿದ ಕಾರ್ಯಕ್ರಮಗಳ ಬಗ್ಗೆಯೂ ಸಮಾಲೋಚನೆ ನಡೆಯಿತು.











































