
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಇದುವರೆಗೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ವಿಫಲವಾಗಿದೆ . ಜನರಿಗೆ ಉಚಿತ ಗ್ಯಾರಂಟಿಯ ಆಮಿಷ ತೋರಿಸಿ ಅಧಿಕಾರಕ್ಕೆ ಬಂದ ಸರಕಾರ ಈಗ ಉಚಿತ ಯೋಜನೆಗಳಿಗಾಗಿ ಹಣ ಹೊಂದಿಸಲು ಎಲ್ಲಿಲ್ಲದ ಕಸರತ್ತು ನಡೆಸುತ್ತಿದೆ ಎಂದು ಬಿಜೆಪಿ ಕಾರ್ಕಳ ಮಂಡಲ ಅಧ್ಯಕ್ಷ ನವೀನ್ ನಾಯಕ್ ತಿಳಿಸಿದ್ದಾರೆ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗ ಅಭಿವೃದ್ಧಿಗೆ ಮೀಸಲಿರಿಸಿದ್ದ ೧೦೦೦ ಕೋಟಿ ಹಣವನ್ನು ತನ್ನ ಗ್ಯಾರಂಟಿ ಯೋಜನೆಗೆ ಬಳಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಅನ್ಯಾಯ ಮಾಡಿದ್ದಲ್ಲದೆ, ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಕೋಟಿ ಕೋಟಿ ರೂಪಾಯಿಗಳನ್ನೂ ದೋಚಿರುವ ಕಾಂಗ್ರೆಸ್ ಆ ಹಣವನ್ನು ಲೋಕಸಭಾ ಚುನಾವಣಾ ಖರ್ಚಿಗೆ ಬಳಸಿದೆಯೇ? ಅನ್ನೋ ಪ್ರಶ್ನೆ ಜನರಲ್ಲಿ ಎದ್ದಿದೆ. ರಾಷ್ಟೀಯ ಕಾಂಗ್ರೆಸ್ ತನ್ನ ಚುನಾವಣಾ ಖರ್ಚಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಏಟಿಎಂ ಆಗಿ ಬಳಸಿಕೊಂಡಿತೇ? ಅನ್ನುವ ಪ್ರಶ್ನೆಯು ಸಹ ಇಂದು ಜನರ ನಡುವಲ್ಲಿದೆ.
ಉಚಿತ ಗ್ಯಾರಂಟಿ ನೀಡುತ್ತೇವೆ ಎಂದು ಅಧಿಕಾರ ಪಡೆದ ಕಾಂಗ್ರೆಸ್ ಸರ್ಕಾರ ಮೊದಲಿಗೆ ಅಬಕಾರಿ ಶುಲ್ಕ, ನೊಂದಣಿ ಶುಲ್ಕ, ವಾಹನ ತೆರಿಗೆ ಏರಿಕೆ ಮಾಡಿ ರಾಜ್ಯದ ಜನರಿಗೆ ಶಾಕ್ ನೀಡಿತ್ತು. ಈಗ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕೂಡ ಏರಿಕೆ ಮಾಡಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ದಿನಬಳಕೆ ವಸ್ತುಗಳು ಸೇರಿದಂತೆ ಪ್ರತಿಯೊಂದು ವಸ್ತುವಿನ ಬೆಲೆ ಹೆಚ್ಚಾಗಲಿದ್ದು ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟು ಹೋಗಿರುವ ಜನಸಾಮಾನ್ಯರ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.
ನಿರಂತರವಾಗಿ ಅವೈಜ್ಞಾನಿಕವಾಗಿ ಬೆಲೆ ಏರಿಸುತ್ತಿರುವ, ಜನಸಾಮಾನ್ಯರ ಕಷ್ಟವನ್ನು ಅರ್ಥಮಾಡಿಕೊಳ್ಳದ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಾರ್ಕಳ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಲಿದೆ. ದಿನಾಂಕ 21.6 2024 ಶುಕ್ರವಾರದಂದು ಬೆಳಿಗ್ಗೆ 11 ಗಂಟೆಗೆ ಕಾರ್ಕಳದ ಅನಂತಶಯನ ವೃತ್ತದಿಂದ ಕಾರ್ಕಳ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಜಾಥ ನಡೆಯಲಿದೆ ಎಂದು ಕಾರ್ಕಳ ಮಂಡಲ ಬಿಜೆಪಿ ಅಧ್ಯಕ್ಷರಾದ ನವೀನ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.