
ಹೊಸಪೇಟೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದಲ್ಲಿ ಬುಧವಾರ ಡಿಎಆರ್ ಕಟ್ಟಡ, ಕವಾಯತು ಮೈದಾನ ಉದ್ಘಾಟನೆ ಮತ್ತು ಪೊಲೀಸ್ ವಸತಿ ಗೃಹಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ್ದು ಈ ವೇಳೆ ರಾಜ್ಯದ ಪೊಲೀಸರಿಗೆ 5000 ಮನೆಗಳ ನಿರ್ಮಾಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ₹1500 ಕೋಟಿ ಅನುದಾನ ನೀಡಲು ಕೋರಿದ್ದೇವೆ. ಇನ್ನು ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಪೊಲೀಸರಿಗೆ ಮನೆಗಳ ನಿರ್ಮಾಣಕ್ಕಾಗಿ ಕೆಕೆಆರ್‌ಡಿಬಿ ಅನುದಾನ ಬಳಕೆಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ವಿಜಯನಗರ ಐತಿಹಾಸಿಕ ಜಿಲ್ಲೆಯಾಗಿದ್ದು ವಿಜಯನಗರ ಸಾಮ್ರಾಜ್ಯದ ಗತ ವೈಭವ ಮತ್ತೆ ಮರಳಿಸೋಣ, ಪೊಲೀಸರಿಗೂ ಉತ್ತಮ ವಸತಿ ವ್ಯವಸ್ಥೆ ಕಲ್ಪಿಸೋಣ. ರಾಜ್ಯದ ಎಲ್ಲ ಪೊಲೀಸರಿಗೂ ವಸತಿ ವ್ಯವಸ್ಥೆ ಕಲ್ಪಿಸಲು ನಾವು ಕ್ರಮ ಕೈಗೊಂಡಿದ್ದೇವೆ. ಈಗಾಗಲೇ ಕೇಂದ್ರ ಗೃಹ ಸಚಿವರನ್ನೂ ಭೇಟಿ ಮಾಡಿರುವೆ. ಒಂದು ವೇಳೆ ಅವರು ನೀಡದಿದ್ದರೆ, ನಮ್ಮ ಅನುದಾನದಲ್ಲೇ ನಿರ್ಮಾಣ ಮಾಡುತ್ತೇವೆ. ಕಲ್ಯಾಣ ಕರ್ನಾಟಕದಲ್ಲಿ ಕೆಕೆಆರ್‌ಡಿಬಿಯ ₹500 ಕೋಟಿ ಅನುದಾನದಲ್ಲಿ ಪೊಲೀಸರಿಗೆ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಾಸಕರಾದ ಎಚ್.ಆರ್. ಗವಿಯಪ್ಪ, ಪ್ರಸಾದ್ ಅಬ್ಬಯ್ಯ, ಎಂ.ಪಿ. ಲತಾ ಮಲ್ಲಿಕಾರ್ಜುನ, ಹುಡಾ ಅಧ್ಯಕ್ಷ ಎಚ್‌ಎನ್‌ಎಫ್ ಇಮಾಮ್, ಎಡಿಜಿಪಿ ಆರ್. ಹಿತೇಂದ್ರ, ಐಜಿಪಿ ಲೋಕೇಶಕುಮಾರ ಬಿ., ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಜಿಪಂ ಸಿಇಒ ಅಕ್ರಂ ಶಾ, ಎಸ್ಪಿ ಶ್ರೀಹರಿಬಾಬು, ಎಎಸ್ಪಿ ಸಲೀಂ ಪಾಷಾ ಮತ್ತಿತರರು ಪಾಲ್ಗೊಂಡಿದ್ದರು.













