
ನವದೆಹಲಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಜೂನ್ 26 ರಂದು ಉಪಗ್ರಹ ಆಧಾರಿತ ಟೋಲಿಂಗ್ ನ ಜಾಗತಿಕ ಕಾರ್ಯಗಾರದಲ್ಲಿ ಮಾತನಾಡಿದ್ದು ಈ ವೇಳೆ ರಸ್ತೆಗಳು ಸುಸ್ಥಿತಿಯಲ್ಲಿ ಇರದಿದ್ದರೆ ಹೆದ್ದಾರಿ ಏಜೆನ್ಸಿಗಳು ಟೋಲ್ ವಿಧಿಸಬಾರದು ಎಂದು ಹೇಳಿದ್ದಾರೆ.
ಈ ಹಣಕಾಸು ವರ್ಷದಲ್ಲಿ 5,000 ಕಿ.ಮೀ. ಗೂ ಹೆಚ್ಚು ಉಪಗ್ರಹ ಆಧಾರಿತ ಟೋಲಿಂಗ್, ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ ಅನ್ನು ಜಾರಿಗೊಳಿಸಲು ಉದ್ದೇಶಿಸಿರುವುದಾಗಿ ತಿಳಿಸಿದ ನಿತಿನ್ ಗಡ್ಕರಿ ನೀವು ಉತ್ತಮ ಗುಣಮಟ್ಟದ ಸೇವೆಯನ್ನು ನೀಡದಿದ್ದರೆ ಟೋಲ್ ವಿಧಿಸಬಾರದು. ನೀವು ಉತ್ತಮ ಗುಣಮಟ್ಟದ ರಸ್ತೆಯನ್ನು ಒದಗಿಸುವ ಮೂಲಕ ಬಳಕೆದಾರರ ಶುಲ್ಕವನ್ನು ನೀವು ಸಂಗ್ರಹಿಸಬೇಕು. ನೀವು ಗುಂಡಿಗಳು, ಕೆಸರು ಇರುವ ರಸ್ತೆಗಳಲ್ಲಿ ಟೋಲ್ ಸಂಗ್ರಹಿಸಿದರೆ ಜನರು ಕಿಡಿಕಾರುತ್ತಾರೆ ಎಂದು ತಿಳಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜಿಎನ್ಎಸ್ ಎಸ್ ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಗೆ ಮುಂದಾಗಿದ್ದು ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನೇ ಶುಲ್ಕ ಸಂಗ್ರಹಕ್ಕೆ ಬಳಸಿಕೊಳ್ಳಲಿದೆ.