
ಪಾಟ್ನಾ: ಕೇಂದ್ರೀಯ ತನಿಖಾ ದಳದ ಅಧಿಕಾರಿಗಳು ಯುಜಿಸಿ ನೆಟ್ ಪೇಪರ್ ಸೋರಿಕೆ ಪ್ರಕರಣದ ತನಿಖೆಗೆ ತೆರಳಿದ್ದ ವೇಳೆ ಬಿಹಾರದ ನಾವಡಾದ ಗ್ರಾಮಸ್ಥರು ಹಲ್ಲೆ ನಡೆಸಿದ ಘಟನೆ ನಡೆದಿದೆ.
ನಾಲ್ವರು ಅಧಿಕಾರಿಗಳು ಮತ್ತು ಒಬ್ಬ ಮಹಿಳಾ ಪೇದೆ ಸೆಲ್‍ಫೋನ್ ಟ್ರ್ಯಾಕ್ ಮಾಡಿ ಆರೋಪಿಗಳ ಪತ್ತೆಗೆ ತೆರಳಿದ್ದು ಈ ವೇಳೆ ನಕಲಿ ಅಧಿಕಾರಿಗಳು ಎಂದು ಭಾವಿಸಿದ ಗ್ರಾಮಸ್ಥರು ಹಲ್ಲೆ ನಡೆಸಿದ್ದಲ್ಲದೆ ವಾಹನಗಳನ್ನೂ ಧ್ವಂಸಗೊಳಿಸಿದ್ದಾರೆ. ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಈ ವೇಳೆ ಸ್ಥಳೀಯ ಪೊಲೀಸರು ಆಗಮಿಸಿ ಅಧಿಕಾರಿಗಳನ್ನು ರಕ್ಷಿಸಿದ್ದಾರೆ.
ಈ ಸಂಬಂಧ ಸುಮಾರು 200 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಅವರಲ್ಲಿ ಎಂಟು ಮಂದಿಯನ್ನು ಮಾತ್ರ ಹೆಸರಿಸಲಾಗಿದ್ದು ಹಲ್ಲೆ ಮಾಡಿದ್ದನ್ನು ಮೊಬೈಲ್‍ನಲ್ಲಿ ಸೆರೆ ಹಿಡಿಯಲಾಗಿದೆ. ಈ ವಿಡಿಯೋದ ಆಧಾರದ ಮೇಲೆ ಭಾಗಿಯಾಗಿರುವ ವ್ಯಕ್ತಿಗಳನ್ನು ಗುರುತಿಸಲಾಗುತ್ತಿದ್ದು ಈಗಾಗಲೇ ಭಾಗಿಯಾದ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.