
ಮುಂಬೈ: ಕಲ್ಲಂಗಡಿ ಹಣ್ಣು ತಿಂದು ಮುಂಬೈನ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಮೊದಲಿಗೆ ಹಣ್ಣಿನಿಂದ ಈ ಸಾವಾಗಿದೆ ಎಂದು ಶಂಕಿಸಲಾಗಿದ್ದು ಆದರೆ ಇದೀಗ ಹಣ್ಣಿನಲ್ಲಿ ಬೆರೆಸಿದ್ದ ವಿಷಕಾರಿ ಇಲಿ ಪಾಷಾಣದಿಂದ ಸಂಭವಿಸಿದೆ ಎಂದು ವಿಧಿ ವಿಜ್ಞಾನ ವರದಿ ತಿಳಿಸಿದೆ.
ಅಬ್ಬುಲ್ಲಾ ಡೊಕಾಡಿಯಾ (45), ಪತ್ನಿ ನಸ್ರೀನ್ (35) ಹಾಗೂ ಮಕ್ಕಳಾದ ಝೈನಬ್ (13) ಮತ್ತು ಆಯೇಷಾ (16) ಮೃತಪಟ್ಟವರು. ಸಂಬಂಧಿಕರಿಗೆ ಔತಣ ನೀಡಿದ ಬಳಿಕ ಕುಟುಂಬದವರು ರಾತ್ರಿ ಕಲ್ಲಂಗಡಿ ಹಣ್ಣು ಸೇವಿಸಿದ್ದರು. ಬಳಿಕ ಬೆಳಗಿನ ಜಾವ ತೀವ್ರ ವಾಂತಿ ಮತ್ತು ಭೇದಿ ಕಾಣಿಸಿಕೊಂಡು ನಾಲ್ವರೂ ಮೃತಪಟ್ಟಿದ್ದರು.
ಪರಿಶೀಲನೆ ವೇಳೆ ಮೃತರ ದೇಹ ಮತ್ತು ಹಣ್ಣಿನ ಮಾದರಿಗಳಲ್ಲಿ ಜಿಂಕ್ ಫಾಸ್ಫೈಟ್ (Zinc Phosphide) ಎಂಬ ಅಪಾಯಕಾರಿ ರಾಸಾಯನಿಕ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಮಿದುಳು, ಹೃದಯ ಹಾಗೂ ಕರುಳು ಹಸಿರು ಬಣ್ಣಕ್ಕೆ ತಿರುಗಿರುವುದು ವಿಷಪ್ರಯೋಗದ ಲಕ್ಷಣ ಎಂದು ವೈದ್ಯರು ತಿಳಿಸಿದ್ದಾರೆ.
ಇದಲ್ಲದೆ, ಅಬ್ಬುಲ್ಲಾ ಅವರ ದೇಹದಲ್ಲಿ ‘ಮಾರ್ಫಿನ್’ ಅಂಶವೂ ಪತ್ತೆಯಾಗಿದ್ದು, ಇದರ ಹಿನ್ನೆಲೆ ಕುರಿತು ತನಿಖೆ ಮುಂದುವರಿದಿದೆ. ಹಣ್ಣಿಗೆ ವಿಷಕಾರಿ ರಾಸಾಯನಿಕ ಆಕಸ್ಮಿಕವಾಗಿ ಸೇರ್ಪಡೆಯಾಗಿದೆಯೋ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಇಂಜೆಕ್ಟ್ ಮಾಡಿದ್ದಾರೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





















