32.6 C
Udupi
Thursday, May 7, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 93

ಭರತೇಶ್ ಶೆಟ್ಟಿ ,ಎಕ್ಕಾರ್

ಇತ್ತ ದ್ರುಪದರಾಜನನ್ನು ಹೆಡೆಮುರಿ ಕಟ್ಟಿ ತಂದು ದ್ರೋಣರಿಗೆ ಗುರು ದಕ್ಷಿಣೆ ಒಪ್ಪಿಸಿದ ಅರ್ಜುನನ ಶೌರ್ಯ, ಸ್ಥೈರ್ಯ, ಧೈರ್ಯ, ಸಾಹಸ, ಪರಾಕ್ರಮ, ಸಮರ ಸಾಧನೆ ಹಸ್ತಿನಾವತಿಯ ಉದ್ದಗಲಕ್ಕೂ ಪ್ರತಿಧ್ವನಿಸುತ್ತಿತ್ತು. ಈ ಪ್ರಸಿದ್ಧಿ ಕೌರವರ ಪಾಲಿಗೆ ಅಹಿತಕರ ಘಟನೆಯಾಗಿ ಪರಿಣಾಮ ಮತ್ಸರ, ಅಸೂಯೆಗೆ ಕಾರಣವಾಗಿತ್ತು.

ಮಕ್ಕಳು ಬೆಳೆದು ವಿದ್ಯಾಭ್ಯಾಸ ಪೂರೈಸಿ ಬಂದ ಈ ಸಮಯ ಧೃತರಾಷ್ಟ್ರ ಗಾಂಧಾರಿಯ ಏಕಮಾತ್ರ ಪುತ್ರಿ ದುಶ್ಯಲೆಯೂ ಬೆಳೆದು ವಿವಾಹ ಯೋಗ್ಯ ವಧುವಾಗಿದ್ದಳು. ಸಿಂಧೂ ದೇಶದ ಅಧಿಪತಿ ಜಯದ್ರಥನ ಜೊತೆ ಈಕೆಯ ವಿವಾಹ ಹಿರಿಯರ ನಿರ್ಣಯದಂತೆ ಬಹಳ ವಿಜ್ರಂಬಣೆಯಿಂದ ನೆರವೇರಿತು. ಇದಾದ ಬಳಿಕ ಭೀಷ್ಮ, ವಿದುರಾದಿಗಳು ಸಮಾಲೋಚಿಸಿ ಧೃತರಾಷ್ಟ್ರನ ಸಮ್ಮತಿಯಂತೆ ಹಿರಿಯವನಾದ ಪಾಂಡುಪುತ್ರ ಧರ್ಮರಾಯನಿಗೆ ಯುವರಾಜ ಪಟ್ಟಾಭಿಷೇಕ ಮಾಡುವುದೆಂದು ನಿರ್ಣಯವಾಯಿತು. ವೈದಿಕ ವಿಧಿ ವಿಧಾನಗಳೇ ಪ್ರಧಾನವಾಗಿ ಧರ್ಮರಾಯನಿಗೆ ಹಸ್ತಿನಾವತಿಯ ಯುವರಾಜ ಪಟ್ಟಾಭಿಷೇಕವಾಯಿತು.

ಚಕ್ರವರ್ತಿ ಪಾಂಡು ಮಹಾರಾಜ ಕಿಂದಮ ಋಷಿಯ ಶಾಪದ ಕಾರಣ ಅಧಿಕಾರದ ಅಪೇಕ್ಷೆಯಿಂದ ವಿರಕ್ತನಾದ ಸಮಯ, ಸಮರ್ಥ ಉತ್ತರಾಧಿಕಾರಿಯಿಲ್ಲದ ಕಾರಣ -ಹುಟ್ಟು ಕುರುಡ ಧೃತರಾಷ್ಟ್ರ ಮಧ್ಯಮ ಅರ್ಹತೆ ಪಡೆದು ರಾಜ ಪ್ರತಿನಿಧಿಯಾಗಿದ್ದನು. ಈಗ ಪೂರ್ಣ ಪ್ರಮಾಣದ ಅಭಿಷಿಕ್ತ ಮಹಾರಾಜನನ್ನು ಪಡೆಯುವ ಭಾಗ್ಯ ಹಸ್ತಿನೆಗೆ ಇದ್ದರೂ, ವಯೋ ವೃದ್ದ ಧೃತರಾಷ್ಟ್ರನನ್ನು ಅಧಿಕಾರದಿಂದ ಕೆಳಗಿಳಿಸಿದರೆ ಆತನಿಗೆ ಮಾನಸಿಕ ವೇದನೆಯಾದೀತು. ಮಾತ್ರವಲ್ಲ ಧೃತರಾಷ್ಟ್ರನ ಪುತ್ರರೂ ಅಧಿಕಾರದ ಲಾಲಸೆ ಹೊಂದಿದ್ದಾರೆ. ಇಂತಹ ಸೂಕ್ಷ್ಮ ಸನ್ನಿವೇಶ ಅರಿತು ಗೊಂದಲಕ್ಕೆ ಅವಕಾಶ ಬೇಡವೆಂದು ಈ ತನಕ ಹೆಸರಿಗೆ ಮಾತ್ರ ಸಿಂಹಾಸನಾರೂಢನಾಗಿದ್ದ ಧೃತರಾಷ್ಟ್ರನನ್ನೇ ರಾಜಪ್ರತಿನಿಧಿಯಾಗಿ ಮುಂದುವರೆಸುವ ನಿರ್ಣಯವಾಯಿತು. ರಾಜ್ಯಭಾರದ ಹೊಣೆ ಹೊತ್ತಿದ್ದ ಭೀಷ್ಮನೂ ಸೂಕ್ತ ಅರ್ಹ ಯುವರಾಜನ ಅಗತ್ಯ ರಾಜ್ಯಕ್ಕಿದೆ ಎಂದು ಭಾವಿಸಿದ ಪರಿಣಾಮ ಧರ್ಮರಾಜನಿಗೆ ಯುವರಾಜ ಪಟ್ಟಾಭಿಷೇಕವಾಯಿತು. ಮಹಾರಾಜನ ನಂತರ ಯುವರಾಜನೇ ಮಹಾರಾಜನಾಗಬಹುದು. ಹೀಗೆ ರಾಜತಾಂತ್ರಿಕ ನಿರ್ಧಾರ ಭೀಷ್ಮ – ವಿದುರರದ್ದು.

ಈ ಬೆಳವಣಿಗೆಯಿಂದ ಪಾಂಡವರ ಬಗ್ಗೆ ಮೊದಲೇ ಅಸೂಯೆ, ಮತ್ಸರ ಹೊಂದಿದ್ದ ಕೌರವರು ತೀವ್ರ ಅಸಹನೆಗೆ ಒಳಗಾದರು. ಧರ್ಮರಾಯನಿಗೆ ಯುವರಾಜ ಪಟ್ಟಾಭಿಷೇಕವಾಗುವಲ್ಲಿ ದ್ರೋಣಾಚಾರ್ಯ, ಭೀಷ್ಮಾಚಾರ್ಯ, ಕೃಪಾಚಾರ್ಯ, ಧರ್ಮ ಭೀರು ವಿದುರ ಹೀಗೆ ಎಲ್ಲರ ಸರ್ವಾನುಮತದ ಸೂಚನೆ ಅನುಮೋದನೆಯಂತೆ ಧರ್ಮರಾಯ ಯುವರಾಜನಾಗಿ ಆಯ್ಕೆಯಾಗಿದ್ದನು. ನ್ಯಾಯವಾಗಿ ಜೇಷ್ಠನೂ, ಶ್ರೇಷ್ಠನೂ ಆಗಿದ್ದು, ಅಭಿಷಿಕ್ತ ಚಕ್ರವರ್ತಿ ಪಾಂಡುವಿನ ಮಗನಾದ ಕಾರಣ ಕೌರವರು ವಿರೋಧಿಸಲಾಗದೆ, ಶಕುನಿಗೂ ತಂತ್ರಗಾರಿಕೆಗೆ ಅವಕಾಶ ಸಿಗದೆ ಸುಮ್ಮನುಳಿಯಬೇಕಾಯಿತು. ಆದರೂ ಅಸಹನೆ ಭುಗಿಲೆದ್ದು ಕ್ರೋಧ ಉಲ್ಬಣಿಸಿ ನೇರ ಹಗೆಗಳಾಗಿ ಬದಲಾದರು. ಭೀಮನಿಗೆ ಕೌರವರ ನಡೆ ಅಪಥ್ಯವಾಗಿ ಹೊಸಕಿ ಬಿಸಾಡುವಂತಹ ಕೋಪ ಬಂದರೂ ಧರ್ಮರಾಯನ ಒಪ್ಪಿಗೆಯಿಲ್ಲದೆ ಗೆರೆದಾಟದ ಸಹೋದರರಾದ ಕಾರಣ ಸುಮ್ಮನುಳಿದಿದ್ದ‌ನು. ಕೌರವರು ದ್ವೇಷ ಸಾಧನೆಗೆ ತೊಡಗಿ ಆ ದಿಕ್ಕಿನಲ್ಲೇ ಪ್ರಯತ್ನವೆಸಗುತ್ತಾ ನಿತ್ಯ ಚಿಂತೆ – ಚಿಂತನೆಯಲ್ಲಿ ತೊಡಗಿದರು. ದುರ್ಯೋಧನನಿಗೆ ಈ ವಿಚಾರದಲ್ಲಿ ಪ್ರೇರಕರಾಗಿ ಮಾವ ಶಕುನಿ, ಸಹೋದರ ದುಶ್ಯಾಸನ ಇದ್ದರೆ, ಸಾಹಸ ಸ್ಥೈರ್ಯಕ್ಕೆ ಮಿತ್ರ ಕರ್ಣ, ಭಾವ ಜಯದ್ರಥ, ಗುರುದ್ರೋಣ ಪುತ್ರ ಅಶ್ವತ್ಥಾಮ ಜೊತೆಗಿದ್ದರು. ಧೃತರಾಷ್ಟ್ರನ ಪುತ್ರರಲ್ಲಿ ವಿಕರ್ಣ ಹಾಗೂ ವಿಲಾಸಿನಿ ಪುತ್ರ ಯುಯುತ್ಸು ಪಾಂಡವರ ಬಗೆಗೆ ಗೌರವ, ಆದರ ಭಾವ ಹೊಂದಿದ್ದರೂ ತಟಸ್ಥರಾಗಿ ತಾಳ್ಮೆ ವಹಿಸಿದ್ದರು. ಕೌರವರ ಕ್ರೋಧ ದ್ವೇಷ ಯಾವ ಮಟ್ಟಕ್ಕೆ ಬೆಳೆಯತೊಡಗಿದೆ ಎಂದರೆ ಅವಕಾಶ ಸಿಕ್ಕಿದರೆ ಕೊಲೆಗೈದು ಪಾಂಡವರು ಇನ್ನಿಲ್ಲ ಎಂಬಂತೆ ಮಾಡಿ ಪೀಡೆ ತೊಲಗಿತು ಎಂದು ಸೂತಕ ಸ್ನಾನ ಮಾಡಲು ತುದಿಗಾಲಲ್ಲಿ ನಿಂತಿದ್ದರು.

ಇಂತಹ ಸಂದರ್ಭದಲ್ಲಿ ಅಧಿಕಾರ ಇಲ್ಲದಿದ್ದರೂ, ಅಪ್ಪ ಧೃತರಾಷ್ಟ್ರ ಕಾರ್ಯಕಾರಿಣಿ ರಾಜ ಮಾತ್ರ ಆಗಿದ್ದರೂ ದುರ್ಯೋಧನ ತನ್ನ ಪಿತನ ಅಧಿಕಾರ ಬಳಸಿ ಮನಸಾ ಇಚ್ಚೆ ಪ್ರಕಾರ ಖಜಾನೆ ಬಳಕೆ, ಅಧಿಕಾರ ಪ್ರಯೋಗ ಮಾಡತೊಡಗಿದ. ರಾಜ್ಯಭಾರ ಹೇಗಿದ್ದರೂ ಭೀಷ್ಮಾಚಾರ್ಯರ ಸುಪರ್ದಿಯಲ್ಲಿತ್ತು. ಧರ್ಮರಾಯ ಸ್ಥಿತ ಪ್ರಜ್ಞನಾಗಿ ಹೆಸರಿಗೆ ಮಾತ್ರ ಯುವರಾಜ ಎಂಬಂತೆ ಪರಿಗಣಿಸಲ್ಪಟ್ಟರೂ ತಾಳ್ಮೆ ವಹಿಸಿ, ಏನನ್ನೂ ಅಪೇಕ್ಷಿಸದೆ ಸಾಮ್ರಾಜ್ಯದ ಹಿತರಕ್ಷಣೆ ಬಗ್ಗೆ ಯೋಚಿಸುತ್ತಿದ್ದನು.

ಹೀಗಿರಲು ಆಕಸ್ಮಿಕವಾಗಿ ಒಂದು ದಿನ ದುರ್ಯೋಧನನಿಗೆ “ಕಣಿಕ” ನೆಂಬ ಚಾಣಾಕ್ಷನೂ ಮೇಧಾವಿಯೂ ಆಗಿರುವ ವಯೋವೃದ್ಧ ಬ್ರಾಹ್ಮಣನ ಪರಿಚಯವಾಗಿ ಸ್ನೇಹವಾಯಿತು. ಈತನೂ ದುರ್ಯೋಧನನ ಒಳ ಓಲಗದ ಖಾಯಂ ಸದಸ್ಯನಾದನು. ಅರ್ಥಶಾಸ್ತ್ರ ಪರಿಣತಿ, ರಾಜನೀತಿ, ಸೂಕ್ಷ್ಮ ಮತಿ, ಜಾಣ್ಮೆ, ನಿಪುಣತೆ, ದೂರಾಲೋಚನೆ, ಸಮಯ ಸಾಧಕ ತಂತ್ರಗಾರಿಕೆ ಇತ್ಯಾದಿ ಗುಣಗಳನ್ನು ಕಣಿಕನಲ್ಲಿ ಕಂಡು ಶಕುನಿಗೂ ಆಪ್ತನಾದ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page