32.6 C
Udupi
Thursday, May 7, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 92

ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೯೨ ಮಹಾಭಾರತ

ಇತ್ತ ಪೂರಕವೋ ಎಂಬಂತೆ ಕಲಹ ಪ್ರಿಯ = : ಕಮಲಪೀಠ – ಬ್ರಹ್ಮ, : ಲಕ್ಷ್ಮೀ ರಮಣ – ವಿಷ್ಣು, : ಹರ ಮಹಾದೇವ- ಶಿವ ಹೀಗೆ ತ್ರಿಮೂರ್ತಿಗಳಿಗೂ ಪ್ರಿಯನಾದ ನಾರದ ಮುನಿ ದೇವಲೋಕದ ಪಾರಿಜಾತ ಪುಷ್ಪ ತನ್ನೊಡನೆ ತಂದು ಶ್ರೀ ಕೃಷ್ಣನ ಕೈಗಿತ್ತು ತನ್ನ ಮನದಾಸೆಯ ಈಡೇರಿಕೆಗಾಗಿ ಬೇಡಿದನು. “ದೇವಾ, ನಿಮ್ಮ ಕೈಯಾರೆ ರುಕ್ಮಿಣಿ ಮಾತೆಗೆ ಮುಡಿಸುವುದನ್ನು ಕಾಣುವ ಹೆಬ್ಬಯಕೆ ನಿಮ್ಮ ಭಕ್ತನಾದ ನನ್ನದು.” ಭಕ್ತವತ್ಸಲನಲ್ಲವೇ ಶ್ರೀ ಹರಿ, ಹಾಗೇ ಮಾಡಿ ನಾರದರ ಇಷ್ಟಾರ್ಥ ಪೂರೈಸಿದನು. ಹೀಗಾದಾಗ ಈ ಘಟನೆಯನ್ನು ನೋಡಿದ ಸಖಿಯ ಮೂಲಕ ಸತ್ಯಭಾಮೆ ವಿಚಾರ ತಿಲಿದುಕೊಂಡಳು. ಶ್ರೀಕೃಷ್ಣನನ್ನು ತಾನು ಅತಿಯಾಗಿ ಪ್ರೀತಿಸಿ ಪೂಜಿಸುವವಳು. ಆದರೂ ನನಗೆ ಹೂ ನೀಡಲಿಲ್ಲ, ಕನಿಷ್ಟ ಪಕ್ಷ ತೋರಿಸಬಹುದಾಗಿತ್ತು. ಹೀಗೆ ಮೋಹ ಭಾವದಿಂದ ವೇದನೆಯಾಗಿ ಕೋಪ ತಳೆದಳು. ವೇದನೆ ಅರ್ಥೈಸಿದ ಶ್ರೀ ಹರಿ, ಸಂತೈಸುತ್ತಾ, ಒಂದು ಹಂತ ಮೀರಿದಾಗ ಪತ್ನಿ ಸತ್ಯಭಾಮೆಯನ್ನು ಸಮಾಧಾನ ಪಡಿಸಲು ಮುಂದಾದನು. “ಪ್ರಿಯೆ ರುಕ್ಮಿಣಿಗೆ ನಾರದರಿತ್ತ ಒಂದು ಹೂವನ್ನಲ್ಲವೇ ಕೊಟ್ಟದ್ದು? ನಿನ್ನನ್ನು ಸ್ವರ್ಗಕ್ಕೆ ಕರೆದೊಯ್ದು ಪಾರಿಜಾತ ಮರವನ್ನೇ ತೋರಿಸುವೆ. ಬೇಕಾದಷ್ಟು ಹೂ ಮುಡಿಸುವೆ” ಎಂದು ಹೇಳಿ ಮುದಗೊಳಿಸಿದನು.

ಈ ಘಟನೆ ನಡೆದು ಕೆಲಕಾಲದಲ್ಲಿ ದೇವರಾಜ ಇಂದ್ರನ ಮೊರೆಯಾಲಿಸಿದ ಶ್ರೀಕೃಷ್ಣ, ನರಕಾಸುರನ ವಧೆಗಾಗಿ ತೆರಳಲು ಹೊರಟು ನಿಂತಾಗ ರಾಣಿಯರು ಬಂದು ಆರತಿ ಬೆಳಗಿದರು. ಸ್ವರ್ಗದ ಸಂಕಷ್ಟ ನಿವಾರಣೆಗೆ ಹೋಗುವ ವಿಚಾರ ತಿಳಿದು ಸತ್ಯಭಾಮೆ ತಾನೂ ಜೊತೆ ಬರುವೆ, ಹಿಂದೆ ನೀವಿತ್ತ ವಚನ ಪೂರೈಕೆಗೂ ಅವಕಾಶವಾಗುತ್ತದೆ ಎಂದಳು. ಭಗವತ್ಸಂಕಲ್ಪದಂತೆ ಹಾಗೆಯೇ ಆಗಬೇಕಾಗಿತ್ತು. ಕೃಷ್ಣ ಒಪ್ಪಿ ಸತಿಪತಿಗಳು ಗರುಡಗಮನರಾಗಿ ಹೊರಟರು. ಹೀಗೆ ಹೊರಟವರು ನರಕಾಸುರನ ರಾಜಧಾನಿ ಪ್ರಾಗ್ಜೋತಿಷ ಪುರ ಪ್ರವೇಶಿಸಿದರು. ಶ್ರೀ ಕೃಷ್ಣ ಸಮರ ಸೂಚಕವಾಗಿ ಪಾಂಚಜನ್ಯ ಮೊಳಗಿಸಿದ. ಗರುಡನೂ ಪ್ರೇರಿತನಾಗಿ ಬಲವಾಗಿ ವಿಶಾಲ ರೆಕ್ಕೆಗಳನ್ನು ಬಡಿದಾಗ ಬಿರುಗಾಳಿಯೇ ಎದ್ದಿತು. ಪಾಂಚಜನ್ಯದ ನಿಸ್ಪನ ಧ್ವನಿಯೂ, ಗರುಡಜನ್ಯ ಬಿರುಗಾಳಿಯೂ ಓಲೆದೂತನಂತೆ ಕದನ ಕಥನ ಹಬ್ಬಿಸಿದವು.

ಸೇನಾಧಿಪತಿ ಪಂಚ ಶಿರ ಮುರಾಸುರ ತನ್ನ ಮುರ ಪಾಶ ಹಿಡಿದು, ವೀರ ರಾಕ್ಷಸರಾದ ತಾಮ್ರ, ಶ್ರವಣ, ನಭಸ್ಪಂತ, ಅರುಣ, ಅಂತರಿಕ್ಷಾದಿಗಳನ್ನು ಕೂಡಿಕೊಂಡು ಸೈನ್ಯ ಸಮೇತನಾಗಿ ಸಂಗ್ರಾಮ ಸಾರಿದನು. ಕೃಷ್ಣನ ಸಜೀವಾಸ್ತ್ರ ಸುದರ್ಶನ ತನ್ನ ಹರಿತ ಹತಿಗಳಿಂದ ರಾಕ್ಷಸರು ಪ್ರಯೋಗಿಸಿದ ಆಯುಧಗಳನ್ನು ಕತ್ತರಿಸುತ್ತಾ, ಮುರ ಪಾಶಗಳನ್ನೂ ಭೇದಿಸಿ ಛೇದಿಸಿತು. ಸಮಸ್ತ ಸೇನೆ ರಾಕ್ಷಸ ವೀರರ ಸಹಿತ ಮುರಾಸುರನೂ ಸಂಹೃತನಾದ. ಶ್ರೀ ಕೃಷ್ಣ ಮುರಾಸರನನ್ನು ವಧಿಸಿ ಮುರಾರಿ ಎಂಬ ಸಾಧಕನಾಮ ಕೀರ್ತನಾದನು.

ಮುಂದುವರಿದು ನರಕಾಸುರನ ವ್ಯವಸ್ಥಿತ ಗಿರಿದುರ್ಗ, ಜಲದುರ್ಗ, ಅಗ್ನಿದುರ್ಗ, ಆಯುಧ ದುರ್ಗ, ಯೋಧ ದುರ್ಗ, ವಾಯು ದುರ್ಗಗಳೆಂಬ ಆರು ದುರ್ಗಗಳನ್ನು ತನ್ನ ಕೌಮೋಧಕೀ ಗದೆ, ಸುದರ್ಶನ, ಶೂಲ, ಖಡ್ಗ, ಧನುರ್ಬಾಣ, ಮಂತ್ರಾಸ್ತ್ರಗಳ ಏಕಕಾಲದ ಪ್ರಯೋಗದಿಂದ ಕ್ಷಣಾರ್ಧದಲ್ಲಿ ಬಡಿದು, ಕಡಿದು ಪುಡಿಗಟ್ಟಿ ಕೆಡಹಿದನು. ಪುರವೇ ಸರ್ವನಾಶವಾಗುತ್ತಿರುವುದನ್ನು ಕಂಡು ಕೋಪಾವಿಷ್ಟನಾದ ನರಕಾಸುರ ಮಹಾಬಲ ಆಯುಧಗಳನ್ನು ಸೇರಿಸಿ, ಕದನಕಲಿ ಸೇನೆಯನ್ನು ಕೂಡಿಕೊಂಡು ಯುದ್ದೋನ್ಮುಖನಾಗಲು ಮಹಾಗಜರಥವೇರಿ ಬಂದನು.
ಗರುಡನೂ ಯುದ್ದದಲ್ಲಿ ತನ್ನ ಸೇವೆಯೂ ಇರಲಿ ಎಂಬಂತೆ ರೆಕ್ಕೆಯಲ್ಲಿ ಬಡಿದು, ಕೊಕ್ಕಿನಲ್ಲಿ ಕುಕ್ಕಿ, ನಖಪಂಜಗಳಿಂದ ಅಮುಕಿ ತಿವಿದು ಸೈನ್ಯನಾಶಗೈಯತೊಡಗಿದನು. ಇದನ್ನು ಕಂಡು ಯುದ್ದೋತ್ಸಾಹ ತಳೆದ ಸತ್ಯಭಾಮೆಯೂ ಆಯುಧ ಧಾರಣೆ ಮಾಡಿದಳು. ಏಕಕಾಲದಲ್ಲಿ – ಏಕಸ್ಥಾನದಲ್ಲಿ, ಕೃಷ್ಣ – ಸತ್ಯ ಭಾಮೆಯರು ನಿಂತು ಕಾಳಗ ಮುಂದುವರಿಸಿದಾಗ ನರಕಾಸುರನ ಸೇನೆ, ಅಂಗರಕ್ಷಕರು, ರಥರಕ್ಷಕರು ಹತಪ್ರಾಣರಾದರು. ಅಜೇಯನಾಗಿ ಮೆರೆಯುತ್ತಿದ್ದ ನರಕಾಸುರನ ಪಾಲಿಗೆ ಸೋಲಾಯಿತು. ಪ್ರಪ್ರಥಮ ಬಾರಿಗೆ ಸೋಲುಂಡ ನರಕಾಸುರನಿಗೂ ಮನವರಿಕೆಯಾಯಿತು. ತನ್ನ ಹೆತ್ತವರು ಇವರೇ ಆಗಿದ್ದಾರೆ. ಬ್ರಹ್ಮದೇವರಲ್ಲಿ ಬೇಡಿ ಪಡೆದ ವರ ಇಂದು ನನಗೆ ಮರಣಪ್ರಾಯವಾಗಿ ಪರಿಣಮಿಸಿದೆ. ಇದನ್ನು ಅರಿತು ಧೃತಿಗೆಡದೆ ಮೋಕ್ಷಾರ್ಥಿಯಾಗಿ ಸಂಕಲ್ಪ ಮಾಡಿ ಕೃಷ್ಣ ಸತ್ಯಭಾಮೆಯರಲ್ಲಿ ನೀವ್ಯಾರೆಂದು ಕೇಳಿ ತಿಳಿದು ದರ್ಶನ ಪಡೆದನು. ಸತ್ಯಭಾಮೆ ಭೂದೇವಿ, ಕೃಷ್ಣನೇ ಮಹಾವಿಷ್ಣು, ಇವರೇ ತನ್ನ ಹೆತ್ತವರೆಂಬ ಸತ್ಯ ತಿಳಿಯಿತು. ಅಂತಹ ದಿವ್ಯದರುಶನದಿಂದ ಸುಜ್ಞಾನಿಯಾಗಿ ಬಹುವಿಧದಿಂದ ಸ್ತುತಿಸಿದನು. ಮೋಹ ನಷ್ಟವಾಗಿ ಜೀವನಾಂತ್ಯ ಬಯಸಿ ಮೋಕ್ಷ ಬಯಸಿದನು. ಅದಕ್ಕಾಗಿ ಉಗ್ರ ಹೋರಾಟಕ್ಕೆ ಮನಮಾಡಿ ಎದ್ದು ಮುಂದಾದನು ನರಕಾಸುರ. ಮಾತಾಪಿತರಿಂದ ಪ್ರಯೋಗವಾದ ಶರ ನರಕಾಸುರನಿಗೆ ಮೋಕ್ಷಪ್ರದವಾಯಿತು. ನರಕಾಸುರನ ಮಗ ಭಗದತ್ತನಿಗೆ ಮಹಾಯೋಗವೋ ಎಂಬಂತೆ ಶ್ರೀ ಹರಿ ಸಮ್ಮುಖದಲ್ಲಿ ಪ್ರಾಗ್ಜೋತಿಷಪುರದ ರಾಜ ಸಿಂಹಾಸನದಲ್ಲಿ ಪಟ್ಟಾಭಿಷೇಕವಾಯಿತು.

ಸೆರೆಯಲ್ಲಿದ್ದ ಹದಿನಾರು ಸಹಸ್ರ ನಾರಿಯರಿಗೆ ಬಂಧ ಮುಕ್ತಿಯಾಯಿತು. ಎಲ್ಲರೂ ನಮಿಸಿ ಪ್ರಣಾಮಗಳನ್ನು ಸಲ್ಲಿಸಿದರು. ಅವರಲ್ಲೊಬ್ಬಾಕೆ ಎಲ್ಲರ ಪ್ರತಿನಿಧಿಯಾಗಿ ಮುಂದೆ ಬಂದು ಕೃತಜ್ಞತೆ ಅರ್ಪಿಸಿ ಮನದಿಂಗಿತ ನಿವೇದಿಸಲು ಶ್ರೀಕೃಷ್ಣ ಭಾಮೆಯರ ಅನುಮತಿ ಕೇಳಿ ಆರಂಭಿಸಿದಳು.

“ದೇವಾ!… ಬಹುಕಾಲ ಬಂಧನದಲ್ಲಿದ್ದರೂ ನಿರಂತರ ನಾರದ ಪ್ರಣೀತವಾದ ನಿಮ್ಮ ಲೀಲಾವಿಶೇಷ ಮನನ, ವಾಸುದೇವ ಧ್ಯಾನ ಮಂತ್ರ ಪಠಣದ ಮೂಲಕ ನಾವು ಸಂರಕ್ಷಿಸಲ್ಪಟ್ಟೆವು. ಈಗ ಬಂಧಮುಕ್ತರಾದೆವಾದರೂ ನಮ್ಮ ಬಂಧು ಬಳಗ ಸತ್ತವರನ್ನು ಮರೆತಂತೆ ಕಣ್ಣೀರುಗರೆದು ನೊಂದು, ನಮ್ಮ ಬಗೆಗೆ ವಿಸ್ಮರಣೆಯಾಗಿ ಮನಪರಿವರ್ತಿತರಾಗಿರಬಹುದು‌. ನರಕಾಸುರ ನಮ್ಮನ್ನು ಎಷ್ಟೆಷ್ಟೋ ಬಾರಿ ಸಿಕ್ಕಿದಷ್ಟು ಮಂದಿಯನ್ನು ಎಳೆದು ತಂದು ಶೇಖರಿಸಿಟ್ಟಿದ್ದ. ನಮ್ಮ ನಮ್ಮ ಸಂಬಂಧಿಗಳಷ್ಟೇ ನಮ್ಮ ರಕ್ಷಣೆಗಾಗಿ ಹೋರಾಡಿ ಸೋತರೋ, ಮಡಿದರೋ ಹೊರತು ಅನ್ಯರಾರು ಈ ದುರುಳನ ನಡೆಯ ಬಗ್ಗೆ ಚಿಂತಿಸದೆ ಸುಮ್ಮನುಳಿದರು. ಲೋಕದ ರೂಢಿಯೇ ಹೀಗಾಗಿ ಹೋಯಿತೇ ಯಾರಿಗೆ ಅನ್ಯಾಯವಾಗಿದೆ ಅವರಷ್ಟೇ ಎದ್ದು ಬಿದ್ದು ಹೋರಾಡುತ್ತಾರೆ. ಉಳಿದವರು ನೋಡಿ ಸುಮ್ಮನಾಗುತ್ತಾರೆ. ಒಂದೊಮ್ಮೆಗೆ ನಾಳೆ ನಮ್ಮ ಮನೆಗೂ ಇಂತಹ ಅನ್ಯಾಯ ಬಾಧೆ ತಟ್ಟಬಹುದು ಎಂದು ತಿಳಿದು, ಇಷ್ಟೂ ಹೆಣ್ಮಕ್ಕಳ, ಇನ್ನೂ ಹೊರಗಿರುವ ಅದೆಷ್ಟೋ ನಾರಿಯರ ಮನೆಯ ಗಂಡಸರು ಸಂಘಟಿತರಾಗಿ ಉಗ್ರ ಹೋರಾಟ ನೀಡಿ, ನಮ್ಮ ಸೆರೆ ವಿಮೋಚನೆಗೆ ಒಗ್ಗಟಿನ ಪ್ರಯತ್ನ ಮಾಡಬಹುದಿತ್ತು. ಮನುಜರ ಸ್ವಭಾವವೇ ಹಾಗೆ ನಮಗ್ಯಾಕೆ ಇತರರ ಉಸಾಬರಿ ಎಂದು ಸುಮ್ಮನುಳಿದು ಪಾಪದ ಹೊರೆ ಹೊರಲು ಸಿದ್ದರಾದರೋ ಅಥವಾ ನರಕಾಸುರನ ಶಕ್ತಿಗೆ ಹೆದರಿದರೋ! ತಮ್ಮ ತಮ್ಮ ಬುಡಕ್ಕೆ ಸಮಸ್ಯೆ ಬಂದಾಗ ವಿಭಜಿತರಾಗಿ ಕಾದಾಡಿ ಹತರಾಗಿ ಹೋಗುತ್ತಾರೆ. ಈಗ ಬಂಧನ ಮುಕ್ತರಾದ ನಾವು ಅಂತಹ ನಮ್ಮ ಬಂಧುಗಳನ್ನು ಕಾಣಲು ಹೋದರೆ ಅಳಿದವರೆಷ್ಟೋ? ಉಳಿದವರ್ಯಾರೋ? ಅಲ್ಲೂ ನೋವೇ ನಮಗೆ ಸಿಗಲಿರುವುದು. ಹಾಗೂ ನಾವು ಸಹಿಸಿ ಹೋಗಿ ಬಾಳುವ ಮನ ಮಾಡಿದರೆ ನಮ್ಮನ್ನು ಮನ್ನಿಸಿ ಯಾರೂ ವರಿಸಲಾರರು. ಕಾರಣ ನರಕಾಸುರನ ವಶದಲ್ಲಿದ್ದ ನಾವು ಸುಶೀಲೆಯರೇ ಆಗಿ ಉಳಿದಿದ್ದರೂ ಲೋಕದ ದೃಷ್ಟಿಯಲ್ಲಿ ನಮಗೆ ಮಿಥ್ಯಾಪವಾದ ಖಂಡಿತಾ ತಪ್ಪದು. ಸಂಶಯದ ದೃಷ್ಟಿಗಳಿಗೆ ನಾವು ಕನ್ಯೆಯರಾಗಿ ಕಾಣಲಾರೆವು. ನಿಜವಾಗಿಯೂ ನಿರ್ದೋಷಿಗಳಾದ ನಾವು ಪತಿತೆಯರಾಗಿ ಬದುಕಬೇಕಾದೀತು. ಈ ಸ್ಥಿತಿಯ ಲಾಭ ಪಡೆದು ನಮ್ಮನ್ನು ನಿಜವಾಗಿಯೂ ಶೀಲಭ್ರಷ್ಟರಾಗಿಸಲು ಬರುವವರು ಇದ್ದೇ ಇರುವರು. ಇಂತಹ ಅಪವಾದ, ಯಾತನಾಮಯ ಬದುಕು ನಮೊಗೊದಗಲಿದೆ.
ಈ ನಿಕೃಷ್ಟ ಸ್ಥಿತಿಯಿಂದ ನಮ್ಮನ್ನು ಉದ್ದರಿಸು ದೇವಾ, ನಮಗೆ ಕಾಣುತ್ತಿರುವ ಪರಿಹಾರವೊಂದೇ, ನಿನ್ನ ಧ್ಯಾನದಲ್ಲೇ ಕಾಲ ಕಳೆದವರು, ಸಂತಸ ಪಟ್ಟವರು. ಈಗ ನಮ್ಮ ಬದುಕು ಹಸನಾಗಿಸಲು ನಿನ್ನಿಂದ ಮಾತ್ರ ಸಾಧ್ಯ. ನೀನಲ್ಲದೆ ನಮಗೆ ಅನ್ಯ ಗತಿಯಿಲ್ಲ. ಶರೀರ ಸುಖಕ್ಕಾಗಿ ನಾವು ಯಾರನ್ನೂ ಮದುವೆಯಾಗಬಯಸುವ ಮನಸ್ಸು ಹೊಂದಿಲ್ಲ. ನಮ್ಮಲ್ಲಿ ಹಲವರಿಗೆ ಆ ಪ್ರಾಯವೂ ದಾಟಿದೆ, ಕೂದಲೂ ನೆರೆದಿದೆ. ನಾರದರ ಉಪದೇಶದಿಂದ ಆ ಬಗ್ಗೆ ವಿರಕ್ತರಾಗಿ ನಿನ್ನ ಭಕ್ತಿಯಲ್ಲೇ ಅನುರಕ್ತರಾಗಿದ್ದೇವೆ. ಹುರಿದ ಬೀಜ ಹೇಗೆ ಮೊಳಕೆಯೊಡೆಯದೋ ಹಾಗೇ ನಮ್ಮ ತನು ಮನದ ಸ್ವಾರ್ಥ ಕಾಮ ಸುಡಲ್ಪಟ್ಟಿದೆ. ಮತ್ತೆ ಅಂತಹ ಭಾವ ಉದ್ಭವಿಸದು. ಈ ವಿರಕ್ತಿಯಿಂದ ತಪೋವನ ಸೇರಿ ತಪಸ್ಸನ್ನೇ ಕೈಗೊಂಡೆವೆಂದಾದರೂ, ಇಲ್ಲಾ ಜಿಗುಪ್ಸೆ ತಳೆದು ಪ್ರಾಣ ತ್ಯಾಗ ಮಾಡಿದೆವೆಂದಾದರೂ ನಮ್ಮ ಮೇಲಿರುವ ಸಾರ್ವಜನಿಕ ಸಂಶಯದ ಅಪವಾದ ಕಳೆಯಲಾಗದು. ಅದು ನಿರಸನವಾಗಿ ಉಳಿದರೆ ನಮ್ಮ ಹುಟ್ಟೂ – ಬದುಕೂ ನಿರರ್ಥಕವಾಗುತ್ತದೆ. ಇಂದು ನಮ್ಮ ಮುಕ್ತಿಗೆ ಕಾರಣನಾದ ನಿನ್ನನ್ನೇ ಮಾನಸಿಕವಾಗಿ ಆಶ್ರಯಿಸಿದವರು ನಾವು. ನಿನ್ನ ಆಶ್ರಿತರೇ ಆಗಿ ಬಹುಕಾಲವಾಗಿದೆ. ತಂದೆ, ತಾಯಿ, ಬಂಧು, ಬಳಗ, ಸಂಪತ್ತು, ಸುಖ,ಸಂಸಾರ, ಕೀರ್ತಿ ಯಾವುದೂ ನಮಗೆ ಬೇಡವಾಗಿದೆ. ದೇವರೇ, ನಾವು ನಿನ್ನಲ್ಲಿ ಬೇಡಿಕೊಳ್ಳುವುದಿಷ್ಟೇ, ಬದುಕಿದಷ್ಟು ಕಾಲ ನಿನ್ನ ಪಾದ ಸೇವೆ ಮಾಡುವ ಸೌಭಾಗ್ಯ ಕರುಣಿಸಿ ನಮ್ಮೆಲ್ಲರನ್ನೂ ಉದ್ದಾರ ಮಾಡು” ಎಂದು ಪ್ರಾರ್ಥಿಸುತ್ತಾ ಆರ್ತರಾಗಿ ಎಲ್ಲರೂ ನಮಸ್ಕರಿಸಿದರು.

ಶ್ರೀ ಕೃಷ್ಣ ಸತ್ಯಭಾಮೆಯತ್ತ ನೋಡಿ ಮುಗುಳ್ನಗೆ ಬೀರಿದಾಗ, ಅರ್ಥೈಸಿಕೊಂಡ ಕ್ಷಮಯಾಧರಿತ್ರಿ ಭಾಮೆ ಭೂದೇವಿಯಲ್ಲವೇ! ಎಲ್ಲರನ್ನು ಎದ್ದೇಳುವಂತೆ ಬೇಡಿಕೊಂಡಳು. ಆದರ, ವಿನಯ ಮೃದು ವಚನಗಳಿಂದ ಸಂತೈಸಿದಳು. “ಅಕ್ಕಂದಿರೇ! ನಮ್ಮ ಸ್ವಾಮಿ ತನಗೆ ಬೇಕು ಎಂದು ಯಾರನ್ನೂ ಮದುವೆಯಾದವರಲ್ಲ. ಆಗುವವರೂ ಅಲ್ಲ. ಹಾಗೆಯೇ ನೀನೇ ಗತಿಯೆಂದು ಬಯಸಿ ಬೇಡಿ ಬಂದವರನ್ನು ಯಾರನ್ನೇ ಆದರೂ ಬಿಟ್ಟವರಲ್ಲ. ಅವರಿಗೆ ಯಾರೂ ಬೇಡ – ಅವರಲ್ಲದೆ ಇನ್ಯಾವುದೂ ಬೇಡ. ಸಕಲ ಸರ್ವವೂ ಅವರಲ್ಲೇ ಇದೆ. ಹಾಗಿದ್ದೂ ಎಷ್ಟಿದ್ದರೂ ಸತ್ಪಾತ್ರರನ್ನು, ಸದ್ಭಕ್ತರನ್ನು ಬೇಡ, ಸಾಕು ಎನ್ನುವವರೂ ಅಲ್ಲ. ಭಾವ ಶುದ್ದಿಯಿಂದ ಬಯಸಿದರೆ ಯಾರಿಗಾದರೂ ಸಿಗಬಲ್ಲ ಸಾಧನವೂ ಆಗಿದ್ದಾರೆ. ಸಾಧಿಸಿ ಪಡೆಯುವ ಯೋಗ್ಯತೆ ನಮ್ಮದಾಗಬೇಕಷ್ಟೇ” ಹೀಗೆ ಸವಿವರವಾಗಿ ತಾನು ತಿಳಿದ ಕೃಷ್ಣನ ಗುಣಗಳನ್ನು ವಿವರಿಸಿ ಹೇಳಿ ತನ್ಮಯಳಾಗಿ ಕೃಷ್ಣ ಪಾದಗಳಿಗೆ ನಮಿಸಿ ತನ್ನ ಕೈಗಳನ್ನು ಕಣ್ಣಿಗೊತ್ತಿಕೊಂಡು ನಿಂತಳು.

“ನೀನೇ ಪರಮಗತಿ” ಎಂಬ ಏಕಲಕ್ಷ್ಯದ ಅನನ್ಯ ಭಾವದಿಂದ ಆಶ್ರಯಿಸಿ ಪೊಡಮಟ್ಟ ಹದಿನಾರು ಸಾವಿರ ಭಕ್ತೆಯರನ್ನೂ ಪಾಲಿಸುವ ಹೊಣೆಹೊತ್ತು ಕರಗ್ರಹಣ ಮಾಡಿ ಅನುಗ್ರಹಿಸಿದ ಕೃಷ್ಣ ಪರಮಾತ್ಮ. ಅವರೆಲ್ಲರನ್ನೂ ದ್ವಾರಕೆ ಸೇರುವಂತೆ ವಿನಂತಿಸಿದ. ಆ ಕಾಲಕ್ಕೆ ಸುಮನಸರೊಡನೆ ಬಂದು ಸೇರಿದ್ದ ದೇವರಾಜ ಇಂದ್ರ ಸಂಕೀರ್ತನೆ ಮಾಡಿ ಸ್ತುತಿಸಿ ಕೃಷ್ಣ ಸತ್ಯಭಾಮೆಯರನ್ನು ಅಮರಾವತಿಗೆ ಆಮಂತ್ರಿಸಿದ. ಸ್ವರ್ಗದ ನಂದನವನದಲ್ಲಿ ಪಾರಿಜಾತ ವೃಕ್ಷ ದರ್ಶನವೂ, ಪುಷ್ಪಧಾರಣೆಯನ್ನೂ ಮಾಡಿದ ಭಾಮೆ, ದೇವಲೋಕದ ಸುಮ ಸಸಿಯನ್ನು ಭೂಲೋಕದ ದ್ವಾರಕೆಗೂ ತಂದು ಬೆಳೆಸಿದಳು. ದೇವ ಸುಮ ಪಾರಿಜಾತ ಸತ್ಯಭಾಮೆಯಿಂದ ಭೂಲೋಕಕ್ಕೆ ಬರುವಂತಾಯಿತು.

ಮುಂದುವರಿಯುವುದು….

✍🏻ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page