ಭಾಗ – 73
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೭೩ ಮಹಾಭಾರತ
ಮರಗಳ ಮಧ್ಯೆ ಸಿಕ್ಕಿ ಹಾಕಿಕೊಂಡ ಒರಲು ಕಲ್ಲು ಕೃಷ್ಣನನ್ನು ಹಿಂದಕ್ಕೆಳೆಯಿತು. ಮುದ್ದು ಕಂದ ಕಾಲ ತುದಿಬೆರಳುಗಳನ್ನು ನೆಲಕ್ಕೊತ್ತಿ, ಬೆನ್ನು ಬಾಗಿಸಿ ಮುಂದಕ್ಕೆಳೆದ. ಏನು ವಿಚಿತ್ರ ಹೆಮ್ಮರಗಳು ಬುಡಮೇಲಾಗಿ ಉರುಳಿಬಿದ್ದವು. ಬಿದ್ದ ಮರಗಳಿಗೆ ಕೃಷ್ಣ ಪರಮಾತ್ಮನ ಸ್ಪರ್ಶವಾದೊಡನೆ ಇಬ್ಬರು ದಿವ್ಯ ಪುರುಷರು ಪ್ರಕಟರಾಗಿ ಕೈ ಮುಗಿದು ನಿಂತರು. ಶಾಸ್ತ್ರೋಕ್ತವಾಗಿ ಸುಶ್ರಾವ್ಯವಾಗಿ ಕೃಷ್ಣನ ಸ್ತುತಿ ಮಾಡತೊಡಗಿದರು.
ಕುಬೇರನ ಮಕ್ಕಳಾದ “ನಳಕೂಬರ” ಮತ್ತು “ಮಣಿಗ್ರೀವ” ರೇ ಈ ದಿವ್ಯ ಪುರುಷರು. ಶಿವ ಪರಮಾತ್ಮನ ಅನುಗ್ರಹ ಪಡೆದು ವಿಶೇಷರಾಗಿದ್ದವರು. ಇದೇ ಅವರಲ್ಲಿ ಶ್ರೇಷ್ಟರು ತಾವು ಎಂಬ ಅಹಂ ಬೆಳೆಯಲೂ ಕಾರಣವಾಗಿತ್ತು. ಹೀಗಿರಲು ಒಂದು ದಿನ ತಮ್ಮ ಸಖಿಯರ ಜೊತೆ ವಿಹಾರಕ್ಕೆ ಹೊರಟು ಬಳಿಕ ಜಲ ಕ್ರೀಡೆಯಲ್ಲಿ ತೊಡಗಿದರು. ತಮ್ಮ ಮೈಮೇಲಿನ ಬಟ್ಟೆಗಳನ್ನು ಬಿಚ್ಚಿ ಎಲ್ಲರೂ ನಗ್ನರಾಗಿ ಜಲಕೇಳಿಯಾಡುತ್ತಿರುವಾಗ ನಾರದರು ಆ ದಾರಿಯಾಗಿ ಬರುತ್ತಾರೆ. ಇವರ ಈ ಸ್ಥಿತಿಯನ್ನು ಕಂಡು ಸೂಚನೆ ನೀಡಲು ತನ್ನ ವೀಣೆಯನ್ನು ಮೀಟಿ ಧ್ವನಿಯೆಬ್ಬಿಸಿದರು. ಇದನ್ನು ಕೇಳಿದ ಹೆಣ್ಮಕ್ಕಳು ಓಡಿಬಂದು ತಮ್ಮ ವಸ್ತ್ರ ಧರಿಸಿ ನಾಚಿ ಬದಿಗೆ ಸರಿದು ನಿಂತರು. ಆದರೆ ಈ ಕುಬೇರ ಪುತ್ರರು ಹಾಗೆಯೇ ವಿವಸ್ತ್ರರಾಗಿ ನಾರದರ ಸಮ್ಮುಖ ನೀರಿನಲ್ಲಿ ನಿಂತಿದ್ದರು. ನಾರದರಿಗೇಕೋ ಇವರ ಈ ಉದ್ದಟ ವರ್ತನೆ ತನ್ನನ್ನು ಅಪಮಾನಿಸಿದಂತೆಯೋ, ಇಲ್ಲಾ ಲಜ್ಜೆಗೆಟ್ಟವರಂತೆಯೋ ಭಾಸವಾಯಿತು. ಪರಿಣಾಮ ಕ್ರೋಧವಶರಾಗಿ ವಿವಸ್ತ್ರರಾಗಿ ಮರದಂತೆ ನಿಂತ ನೀವು ಮರವಾಗಿ ಹೋಗಿ ಎಂದು ಶಪಿಸಿದರು. ತಮ್ಮ ತಪ್ಪಿನ ಅರಿವಾಗಿ ಪರಿ ಪರಿಯಾಗಿ ಕ್ಷಮೆ ಬೇಡಿದಾಗ, ಕುಬೇರ ಪುತ್ರರನ್ನು ಮನ್ನಿಸಿ ಮುಂದೆ ಶ್ರೀ ಹರಿಯೇ ಕಿಶೋರನಾಗಿ ಬಂದು ನಿಮ್ಮನ್ನು ಎಳೆದಾಗ ನೀವು ಶಾಪ ಮುಕ್ತರಾಗುವಿರಿ ಎಂದು ಪರಿಮಾರ್ಜನೆ ಸೂಚಿಸಿ ಹೋದರು. ಅಂದಿನಿಂದ “ಮತ್ತಿ” ಯ ಜೋಡು ಮರಗಳಾಗಿ ನಿಂತು ಹರಿ ನಾಮ ಸ್ಮರಣೆ ನಿರತರಾಗಿದ್ದರು. ಇಂದು ಶಾಪ ವಿಮೋಚನೆಯಾಗಿ ಹರಿ ಸಂಕೀರ್ತನೆಗೈದು ಶೀ ಕೃಷ್ಣನಿಗೆ ನಮಿಸಿ ತಮ್ಮ ಲೋಕವನೈದಿದರು.
ಮರ ಬಿದ್ದ ಸದ್ದು ಕೇಳಿ ಓಡಿ ಬಂದ ನಂದ ಗೋಪ, ಮರದೆಡೆಯಲ್ಲಿದ್ದ ಕೃಷ್ಣನನ್ನು ಬಂಧಮುಕ್ತಗೊಳಿಸಿದ. ಮರವೇನಾದರು ಮಗುವಿನ ಮೇಲೆ ಬಿದ್ದಿದ್ದರೆ ? ಅಯ್ಯೋ ದೇವರೇ! ಎಂದು ಭಯಗೊಂಡು ಯಶೋದೆಯನ್ನು ಕರೆದು ಗದರಿಸಿ, ಎಚ್ಚರಿಸಿ ಜಾಗೃತೆವಹಿಸಲು ಹೇಳಿದನು. ತಾಯಿ ಯಶೋದೆ ಮಗುವಿನ ತಲೆ ಮೈ ಪೂಸಿ, ತನ್ನ ಎರಡೂ ಕೈಬೆರಳುಗಳನ್ನು ತಲೆಗೊತ್ತಿ ಕೈಲಟಿಕೆ ಮುರಿದು ದೃಷ್ಟಿ ನಿವಾಳಿಸಿದಳು.
ಹೀಗೆ ಒಂದು ದಿನ ನಂದಗೋಪ ಯಶೋದೆಯರ ಜೊತೆ ಕೃಷ್ಣ ಬಲರಾಮರೂ ಆಡುತ್ತಾ ಮನೆಯಲ್ಲಿದ್ದರು. ಹೊರಗೆ ಬೀದಿಯ ದಾರಿಯಿಂದ ಓರ್ವ ಅಜ್ಜಿ ಹಣ್ಣು ಬೇಕೇ ಎಂದು ಕೇಳುತ್ತಾ ನಂದಗೋಪನ ಮನೆಯತ್ತ ಬಂದಳು. ಕೃಷ್ಣನು ಹಣ್ಣು ಬೇಕೆಂಬ ಭಾವದ ನೋಟದಿಂದ ನೋಡಿದಾಗ ಯಶೋದೆ ಧಾನ್ಯ ನೀಡಿ ಹಣ್ಣು ಕೊಳ್ಳಲು ಕೃಷ್ಣನನ್ನು ಕಳುಹಿಸಿ ಜೊತೆಗೆ ತಾನೂ ಬಾಗಿಲ ಬಳಿ ಬಂದಳು. ಹಣ್ಣು ಮಾರುವ ಮುದುಕಿ ಬಲಿತು ಮಾಗಿದ ಸೊಗಸಾದ ಹಣ್ಣುಗಳನ್ನು ಆಯ್ದು ನೀಡಿದಳು. ಕೃಷ್ಣ ಆಕೆಯ ಖಾಲಿ ಜೋಳಿಗೆಗೆ ಧಾನ್ಯ ಸುರಿದಾಗ ಮುತ್ತುಗಳಾಗಿ ತುಂಬಿದವು. ನೋಡುತ್ತಿದ್ದ ಯಶೋದೆ – ನಂದಗೋಪರಿಗೆ ಪರಮಾಶ್ಚರ್ಯ. ಮುದುಕಿಗೋ ವಿಸ್ಮಯ! ತಕ್ಷಣ ಪರಿಸ್ಥಿತಿ ಅರ್ಥೈಸಿಕೊಂಡು ಎದ್ದು ಬಂದ ನಂದಗೋಪ “ಅಮ್ಮಾ ದೇವರು ನಿನಗೆ ಕೊಟ್ಟಿದ್ದಾನೆ. ಅದು ನಿನ್ನದೇ. ನೀನದನ್ನು ಕೊಂಡು ಹೋಗು” ಎಂದು ಹೇಳಿದ. ಆಕೆ ಸಾಷ್ಟಾಂಗ ನಮಸ್ಕರಿಸಿ ತಾನು ತಂದಿದ್ದ ಹಣ್ಣುಗಳೆಲ್ಲವನ್ನೂ ಕೃಷ್ಣನಿಗರ್ಪಿಸಿ, ನಮಿಸಿ ಹೋದಳು.
ಹೀಗೆ ಬಾಲಕೃಷ್ಣನ ಬಾಲಲೀಲೆಗಳು ನಿರಂತರವಾಗ ತೊಡಗಿತು. ಬೆಳೆಯುತ್ತಿದ್ದ ಕೃಷ್ಣ ಬಲರಾಮರಿಗೆ ಓರಗೆಯ ಮಕ್ಕಳೂ ಜೊತೆಯಾದರು. ಮನೆಯ ಹೊರಗೋಡಿ ಆಡುತ್ತಿದ್ದರು. ಗೋಕುಲದಲ್ಲೆಲ್ಲಾ ಅಡ್ಡಾಡಿ ಓಡಾಡಿ ಆಡುತ್ತಿದ್ದರು. ಮುದ್ದು ಕೃಷ್ಣನ ಕೀಟಲೆ ಆರಂಭವಾಗತೊಡಗಿತು. ಹಸಿವಾದರೆ ಗೋಪಿಕೆಯರ ಮನೆಗೆ ಹೋಗಿ ಕಾಡಿ ಬೇಡಿ ಕೇಳಿ ಬೆಣ್ಣೆ ತಿನ್ನುವುದು. ಮನೆಯಲ್ಲಿ ಯಾರು ಇಲ್ಲದಿದ್ದರೆ ಕದ್ದು ಬೆಣ್ಣೆ ತಿಂದು, ಗೆಳೆಯರಿಗೂ ತಿನ್ನಿಸುವುದು. ಮಡಕೆಗಳನ್ನು ಒಡೆದು ಹಾಕುವುದು. ಎತ್ತರದಲ್ಲಿಟ್ಟ ಹಾಲಿನ ಮಡಕೆಗೆ ಕುಟ್ಟಿ ತೂತು ಮಾಡಿ ಒಸರಿ ಚಿಮ್ಮುವ ಹಾಲಿನ ಧಾರೆಗೆ ಬಾಯ್ತೆರೆದು ಹೀರಿ ಕುಡಿಯುವುದು. ಅಯ್ಯೋ ಹೇಳಿ ಮುಗಿದೀತೆ ಕೃಷ್ಣನ ಚೇಷ್ಟೆ… ಒಂದೇ ಎರಡೇ!! ಬೆಣ್ಣೆ ಕಡೆಯುತ್ತಿರುವ ಗೋಪಿಕೆಯರ ಬೆನ್ನೇರಿ ಬಗ್ಗಿಸಿ ಕೈ ಹಾಕಿ ಬೆಣ್ಣೆ ಎತ್ತಿ ಓಡಿ ತಿನ್ನುವುದು. ಕಡೆದು ಆಯ್ದು ಎತ್ತಿಟ್ಟ ಮಡಕೆ ಹಿಡಿದೋಡಿ ತಿಂದು ಮಂಗಗಳಿಗೂ ತಿನಿಸುವುದು. ಮತ್ತೆ ಕೆಲವರ ಮನೆ ಹೊಕ್ಕು ಕೆಲಸ ನಿರತ ಗೋಪಿಕೆಯರ ಕಟ್ಟಿದ ಕೂದಲು ಬಿಚ್ಚಿ ಹಿಡಿದು ಜಗ್ಗಿ ಬೆನ್ನೇರಿ ಕುಳಿತು ಹೈ ಹೈ ಹೈ ಎನ್ನುತ್ತಾ ಸವಾರಿ ಮಾಡುವುದು. ದುಡಿದು ದಣಿದು ಮಧ್ಯಾಹ್ನ ಉಂಡು ಮಲಗಿದ ಗೋಪಿಕೆಯರ ಕೂದಲನ್ನು ಬಿಚ್ಚಿ ಒಬ್ಬರದ್ದನ್ನು ಪಕ್ಕ ಮಲಗಿದವರ ಕೂದಲಿಗೆ ಗಂಟಿಕ್ಕಿ ಓಡಿ ಅಡಗಿ ಕೂರುವುದು. ಅವರೆದ್ದು ಕೂದಲು ಎಳೆದಾಡಿ ಬಿದ್ದಾಗ ಕೇಕೆ ಹಾಕಿ ನಗುವುದು. ಹಿಡಿಯಲು ಬೆನ್ನಟ್ಟಿದರೆ ಓಡುವುದು ಸಿಗುವವನೆ ಕೃಷ್ಣ? ಹೀಗೆ ದೂರಿನ ಸರ ಮಾಲೆ ನೆಯ್ದು ಗೋಪಿಕೆಯರ ದಂಡೇ ನಂದಗೋಪನ ಮನೆಯ ಮುಂದೆ ಸೇರಿ ಆರೋಪಗಳ ಮಳೆ ಸುರಿಯುತ್ತಿದ್ದರು. ಕೃಷ್ಣ ಆ ಹೊತ್ತು ಅಲ್ಲಿರದೆ ತಪ್ಪಿಸುತ್ತಿದ್ದ. ಯಶೋದೆ ಎಲ್ಲರ ಕ್ಷಮೆ ಕೇಳಿ ಸಮಧಾನಿಸಿ ಅವರನ್ನು ಕಳುಹಿಸುತ್ತಿದ್ದಳು. ಮತ್ತೆ ಬಂದ ಕೃಷ್ಣನನ್ನು ಗದರಿಸಿ ಬೈದು ಬುದ್ದಿ ಹೇಳಿದರೆ ಇಲ್ಲ ಅಮ್ಮಾ ನಾನೇನೂ ಮಾಡಿಲ್ಲ ಎಂದು ಪೆಚ್ಚು ಮೋರೆ ಹಾಕಿ ಪೆದ್ದು ಪೆದ್ದಾಗಿ ಅಮ್ಮನನ್ನು ಮೋಡಿ ಮಾಡುತ್ತಿದ್ದ ಕಳ್ಳ ಕೃಷ್ಣ.
ಹಾಗೆಂದು ಒಂದು ದಿನ ಕೃಷ್ಣ ಬರದೆ ಇದ್ದರೆ ಹುಡುಕಿಕೊಂಡು ಬಂದು ನೋಡಿ ಹೋಗುವಷ್ಟು ಗೋಪಿಕೆಯರ ಮನಪ್ರೀತನಾಗಿಯೂ ಇದ್ದ ಮನಮೋಹನ ಕೃಷ್ಣ. ಹಾಗಿದ್ದೂ ಕೀಟಲೆ ಮಿತಿ ಮೀರಿದಾಗ ಇನ್ನು ಈ ಕೃಷ್ಣನನ್ನು ಹೀಗೇ ಬಿಟ್ಟರೆ ಆಗದು ಹಿಡಿಯಲೇ ಬೇಕೆಂದು ನಿರ್ಧರಿಸಿ ಗೋಪಿಕೆಯರು ಕಾದು ಮನೆಯಲ್ಲೇ ಅಡಗಿ ಕುಳಿತು ಹಿಡಿದೇ ಬಿಟ್ಟರು. ಅವರವರ ಮನೆಯಲ್ಲಿ ಹಿಡಿದ ಕೃಷ್ಣನನ್ನು ಯಶೋದೆಯ ಬಳಿ ಒಯ್ಯಲು ಮನೆಯತ್ತ ಸಾಗಿದರೆ ಎಲ್ಲರ ಕೈಯಲ್ಲಿಯೂ ಒಬ್ಬೊಬ್ಬ ಕೃಷ್ಣ!!! ಅರೆ ಏನಾಶ್ಚರ್ಯ! ನಂದ ಗೋಪನ ಮನೆ ತಲುಪಿದರೆ ಒಬ್ಬನೇ ಕೃಷ್ಣ! ದೇವನ ಲೀಲಾ ವಿನೋದ ವರ್ಣಿಸಲಾದೀತೇ ಹೇಳಿ… ನಂದ ಗೋಪ ಯಶೋದೆಯರಿಗೆ ಕೆಲವೊಮ್ಮೆ ಅಸಹನೀಯ ಸಿಟ್ಟು ಬರಿಸಿದರೆ, ಅರೆ ಕ್ಷಣದಲ್ಲಿ ಭಾವುಕ ಭಕ್ತಿ ಹರಿಸುತ್ತಿದ್ದ ಶ್ರೀ ಹರಿ.
ಹೀಗೆ ಅತಿಮಾನುಷ ಲೀಲೆ ತೋರತೊಡಗಿದ ಕೃಷ್ಣನ ಸುದ್ದಿ ಮಥುರೆಗೆ ತಲುಪುವುದು ನಿಸ್ಸಂದೇಹ ಎಂಬ ಭಯ ನಂದಗೋಪನಿಗೆ ಹೆಚ್ಚಾಯಿತು. ಇನ್ನು ಗೋಕುಲದಲ್ಲಿದ್ದರೆ ಆಪತ್ತು ಹತ್ತಿರವಾದೀತು. ಈಗಾಗಲೇ ಹಲವು ಆಪತ್ತು ರಾಕ್ಷಸರಿಂದಾಗಿದೆ. ಕೃಷ್ಣನ ಲೀಲೆ ಪ್ರಚಾರವಾಗಿ ಪ್ರಸಾರವಾಗುತ್ತಿದೆ. ಇಲ್ಲಿರುವುದು ಬೇಡ ಎಂದು ನಿರ್ಧರಿಸಿದ. ಯಮುನಾ ತೀರದ ಬೃಂದಾವನ ದನಗಳಿಗೆ ಬೇಕಾದ ಸಮೃದ್ದ ಹುಲ್ಲುಗಾವಲು ಪ್ರದೇಶ. ಅಲ್ಲಿಗೆ ಸ್ಥಳಾಂತರಗೊಳ್ಳುವುದೇ ಉತ್ತಮ ಎಂದು ತೀರ್ಮಾನಿಸಿ ಗೋಕುಲ ಬಿಟ್ಟು ಸಂಸಾರ ಪರಿವಾರ ಸಮೇತ ವರ್ಗಾವಣೆಗೊಂಡರು.
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರ್



















