ಭಾಗ – 69
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೬೯ ಮಹಾಭಾರತ
ದೇವಕಿಯ ಅಷ್ಟಮ ಗರ್ಭಕ್ಕೆ ತಿಂಗಳು ಎರಡು ಕಳೆದು ಮೂರಾಯಿತು. ಕಂಸನ ಮೃತ್ಯುಭಯವೂ ಇಮ್ಮಡಿಯಾಯ್ತು. ಸೆರೆಮನೆಯ ಸುತ್ತ ಎರಡೆರಡು ಕೋಟೆ, ಗೋಡೆ, ಛಾವಣಿ ಕಟ್ಟಿಸಿದ. ಸುತ್ತಲೂ ದಕ್ಷ ಕಟ್ಟಾಳುಗಳನ್ನೂ, ಸೇನೆಯನ್ನೂ ನಿಯೋಜಿಸಿದ. ಸ್ವತಃ ತಾನೇ ರಾಜನಾದರೂ ಕಾವಲು ಭಟನಂತಾಗಿ ಹೋದ. ಹೆಚ್ಚು ಹೊತ್ತು ನಿಲ್ಲಲೂ ಆಗದೆ ತತ್ತರಿಸಿ ಕುಸಿಯುತ್ತಲೇ ಹೋಗುತ್ತಿದ್ದ. ಕಾಲವು ತನ್ನ ಚಲನೆಯನ್ನು ಕ್ರಮಿಸುತ್ತಲೇ ಇತ್ತು. ಇತ್ತ ಕಂಸನ ತಲೆಯ ಮೇಲೇರಿ ಮೃತ್ಯು ನರ್ತಿಸಿದಂತಾಗತೊಡಗಿತು. ಎಲ್ಲರ ಮೇಲೂ ಸಂದೇಹ, ಯಾರ ಮೇಲೂ ವಿಶ್ವಾಸವಿಲ್ಲದೆ ಹುಚ್ಚನಂತಹ ವರ್ತನೆ ಆರಂಭಿಸಿದ. ಕ್ಷಣ ಕ್ಷಣಗಳೂ ಅತೀ ದೀರ್ಘ ಸಮಯದಂತೆ ಭಾಸವಾಗುತ್ತಿತ್ತು. “ಸಾಯುತ್ತೇನೆ ಸಾಯುತ್ತೇನೆ” ಎಂಬುವುದೇ ಧ್ಯಾನವಾಗಿ ಅತಿ ಘೋರ ಯಾತನೆ ಅನುಭವಿಸುತ್ತಿದ್ದ.
ದೇವಕಿಯ ಗರ್ಭ ಬೆಳೆಯುತ್ತಲೇ ಇತ್ತು. ನವಮಾಸ ತುಂಬುತ್ತಾ ಬರುತ್ತಿದೆ ಕ್ಷೀರಾರ್ಣವ ಶಯನ ಗರ್ಭಾಂಭುದಿಯೊಳಗೆ ಪವಡಿಸಿದ್ದ. ಲೀಲಾಮಾನುಷನಾಗಿ ತನ್ನ ತಾಯಿ ತಂದೆಯನ್ನೂ ಕಾಪಾಡುತ್ತಿದ್ದ. ಅದಕ್ಕೆ ಸಾಕ್ಷಿಯೇ ಎಂಬಂತೆ ಭ್ರಾಂತನಾಗಿ ಮಗು ಹುಟ್ಟುವವರೆಗೆ ಕಾಯುತ್ತಿದ್ದ ಕಂಸನ ವೇದನೆ – ಯಾತನೆ. ಗರ್ಭವನ್ನೇ ಅಥವಾ ಗರ್ಭಿಣಿಯನ್ನೇ ನಾಶ ಮಾಡುವ ಕ್ರೂರ ಮನಸ್ಸು ಕಂಸನಿಗೆ ಬಾರದೆ ಉಳಿಯಲು ಭಗವಂತನ ಲೀಲಾವಿನೋದವೇ ಕಾರಣವಾಗಿರಬಹುದು.
ದೂರ ದೂರ ದಿಗಂತದಿಂದ ಕರಿಮುಗಿಲುಗಳು ಕಂಸನ ಭಯದಂತೆ ಒಗ್ಗೂಡ ತೊಡಗಿದವು. ಮೃತ್ಯು ಭಯದ ಕತ್ತಲೆಯಂತೆ ಭೂಮಿಯ ಮೇಲೂ ಕಾರ್ಮೋಡದ ಕತ್ತಲೆ ಕವಿಯತೊಡಗಿತು. ಗಾಳಿಯೂ ಸಹಾಯಕನಾಗಿ ಆಕಾಶದೆಲ್ಲೆಡೆ ಚದುರಿದ ಮೋಡಗಳನ್ನೂ ಹಾರಿಸಿ ಒಂದಾಗಿಸುತ್ತಾ, ಮಹಾ ಯುದ್ದಕಾಲದಲ್ಲಿ ಸೈನ್ಯಗಳು ಬಂದು ಸೇರಿಕೊಳ್ಳುವಂತೆ ಕಾಣಿಸತೊಡಗಿತು. ಕಂಸನ ಎದೆ ಬಡಿತವೂ, ಮೇಘ ಸಂಘರ್ಷದಿಂದ ಉತ್ಪನ್ನವಾದ ಸಿಡಿಲು ಗುಡುಗುಗಳಂತೆ ಘಾತಿಸಲಾರಂಭಿಸಿದವು. ಮಳೆ ಸುರಿಯಲಾರಂಭಿಸಿತು. ಭೋರ್ಗರೆಯುವ ಮಳೆ. ಪ್ರತಿ ಕ್ಷಣ ಮೃತ್ಯು ಕಿಂಕರರು ಇಳಿದು ಬರುವಂತೆ ಧಾರೆ ಧಾರೆಯಾಗಿ ಇಳಿದು ಬಂತು ನೀರಿನ ಝರಿ. ನೆಲ ಕೆಸರಾಯಿತು. ಕೆರೆ ಕೊಳ್ಳ ಹಳ್ಳ ತುಂಬಿ ಹರಿದು ನದಿ ಸೇರಿ ದಡ ಮೀರಿತು. ನೆರೆಯಾಗಿ ಏರಿ ಬರತೊಡಗಿತು. ಹಗಲು ರಾತ್ರಿಯಂತೆ ಕತ್ತಲೆಯಾಗಿದೆ. ಹಾಗಾದರೆ ಇಂದಿನ ರಾತ್ರಿ ಹೇಗಿರಬಹುದು. ಕಂಸನ ಅರಮನೆಯೂ ಕಾರಾಗ್ರಹವೇ ಆಯಿತು. ಕಾರಣ ಹೊರಬರಲಾಗದ ರೀತಿ ಮಳೆ ನೆರೆ ಎಲ್ಲರನ್ನೂ ಬಂಧಿಸಿ ಬಿಟ್ಟಿತ್ತು.
ಕಂಸನ ದಾರ್ಷ್ಟ್ಯಕ್ಕೆ ತತ್ತರಿಸಿ ಭಗವಂತನ ಮೊರೆ ಹೋದ ಆರ್ತರ ಕಣ್ಣೀರಿನಂತೆ ಧಾರೆ ಧಾರೆಯಾಗಿ ಮಳೆ ಸುರಿಯುತ್ತಿತ್ತು. ಜಿಜ್ಞಾಸುಗಳ ತವಕದಂತೆ ಮಿಂಚು ಮಿಂಚುತ್ತಿತ್ತು. ಅರ್ಥಾರ್ಥಿಗಳ ಹೃದಯದ ಉದ್ವೇಗದಂತೆ ಗುಡುಗು ಗುಡುಗುತ್ತಿತ್ತು. ಆದರೆ ಭೂಮಿ ಮಾತ್ರ ನಿಶ್ಚಲ ಚಿತ್ತದ ಸುಜ್ಞಾನಿಯಂತೆ ಎಲ್ಲವನ್ನೂ ಸಹಿಸಿಕೊಂಡು ಇದ್ಯಾವುದೂ ತನಗಾಗಿ ಅಲ್ಲ ಎಂದು ಸಮಾಧಾನದಿಂದ ಅನುಭವಿಸುತ್ತಿತ್ತು. ಅಂದು ಶ್ರಾವಣ ಮಾಸದ ಬಹುಳ ಪಕ್ಷದ ಅಷ್ಟಮಿ ತಿಥಿಯ, ಬುಧವಾರ ದಿನ ನಡು ಇರುಳು ರೋಹಿಣಿ ನಕ್ಷತ್ರದ ಶುಭ ಮುಹೂರ್ತದಲ್ಲಿ ಅಮಿತ ತೇಜಃಪೂರ್ಣವಾದ ಅತಿಮಾನವ ಶಕ್ತಿ ತನ್ನ ಹೆತ್ತವರ ಬಂಧ ಮುಕ್ತಿಗಾಗಿ, ಕಂಸನ ಕ್ರೂರ ಪಾಶದ ನಾಶಕ್ಕಾಗಿ ವಸುದೇವ ದೇವಕಿಯರ ಪುತ್ರನಾಗಿ ಜನ್ಮತಾಳಿದ. ಅಶರೀರವಾಣಿ ನಿಜವಾಯಿತು. ಶ್ರೀಮನ್ನಾರಾಯಣನೇ ದೇವಕಿ ದೇವಿಯ ಅಷ್ಟಮ ಗರ್ಭಸಂಜಾತನಾಗಿ ಮಾನುಷ ರೂಪದಲ್ಲಿ ಜನಿಸಿದ.
ಚೆಂದಳಿರ ಮೃದು ಮೈಯು – ಗಗನ ನೀಲ ವರ್ಣದ ತನು ಕಾಂತಿಯಿಂದ ಹೊಳೆಯುತ್ತಿತ್ತು. ದಿವ್ಯ ಚೇತನಾತ್ಮಕ ಪೂರ್ಣ ತೇಜವು ಮುಖ ಪದ್ಮದಲ್ಲಿ ಬಿಂಬಿಸುತ್ತಿತ್ತು. ಅರಳಿದ ತಾವರೆಯ ಎಸಳಿನಂದದ ಕಂಗಳ ಕುಡಿ ನೋಟದಲ್ಲಿ ಕಾರುಣ್ಯದ ಒಲುಮೆಯ ಅಮೃತಕಾಂತಿಯಂತೆ ಮಿಣುಗುತ್ತಿತ್ತು. ರೂಪಗುಣಾತೀತನೂ, ನಿರಾಮಯನೂ ಆದ ಸರ್ವಾತ್ಮಕನು ತನ್ನ ಯೋಗಮಾಯಾಮಯ ಸಗುಣ ಸಾಕಾರವನ್ನಾಂತು ವಸುದೇವ ದೇವಕಿಯರ ನಂದನನಾಗಿ ಮಡಿಲ ಹಾಸಿಗೆಯಲ್ಲಿ ಹಸನ್ಮುಖನಾಗಿ ಪವಡಿಸಿದ್ದ. ಶಿಶು ರೂಪದಲ್ಲಿ ದರ್ಶನ ನೀಡಿ, ಲೀಲಾ ಮಾನುಷ ಶ್ರೀ ಹರಿ ಲೀಲೆಯ ಪ್ರದರ್ಶನ ಆರಂಭಿಸಿದನೋ ಎಂಬಂತೆ ಬಲಗಾಲ ಹೆಬ್ಬೆರಳನ್ನು ಎರಡೂ ಕೈಗಳಿಂದ ಎಳೆದು ಬಾಯಿಗಟ್ಟು ಚೀಪತೊಡಗಿದ.
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರ್



















