28.9 C
Udupi
Monday, May 4, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 68

ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೬೮ ಮಹಾಭಾರತ

ನಂದಗೋಕುಲದಲ್ಲಿ ವಸುದೇವನಿಂದ ದೇವಕಿಯಲ್ಲಿ ಉದಿಸಿದ ಏಳನೆಯ ಗರ್ಭ ರೋಹಿಣಿಯ ಉದರಕ್ಕೆ ಸಂಕ್ರಮಿಸಿ ಜನ್ಮ ಪಡೆದ ಮಗುವಾದ ಕಾರಣ “ಸಂಕರ್ಷಣ”ವಾಯಿತು. ಈ ಮಗು ಜನ್ಮ ಪಡೆದ ವಿಚಾರವಾಗಲಿ, ಜಾತ ಕರ್ಮಾದಿ ವಿಧಿ ಪೂರೈಸಿ ನಾಮಕರಣ ಮಾಡುವುದನ್ನಾಗಲಿ ಮಾಡಲು ಮುಂದುವರಿದರೆ ಮಗು ಹುಟ್ಟಿದ ವಿಷಯ ಕಂಸನಿಗೆ ತಿಳಿಯುತ್ತದೆ. ಪರಿಣಾಮ ಶಿಶು ಹತ್ಯೆಯಾಗುವ ಸಾಧ್ಯತೆಯನ್ನು ಪರಿಕಲ್ಪಿಸಿದ ನಂದಗೋಪ ಮಗುವಿಗೆ ಹೆಸರಿಡದೇ ಸಾಕ ತೊಡಗಿದ. ತನ್ನ ದನದ ಹಟ್ಟಿಯಲ್ಲೇ ಗುಪ್ತ ಕೊಠಡಿಯ ವ್ಯವಸ್ಥೆ ಮಾಡಿ ಯಾರಿಗೂ ತಿಳಿಯದ ಹಾಗೆ ರೋಹಿಣಿ ಹಾಗು ಮಗುವನ್ನು ಪಾಲಿಸತೊಡಗಿದ.

ಇತ್ತ ದೇವಕಿ ವಸುದೇವರು ರೋಹಿಣಿ ಮಗುವಿಗೆ ಜನ್ಮವಿತ್ತಿದ್ದಾಳೆ ಎಂಬ ಸೂಚನೆಯಿಂದ ಸಂತೋಷಗೊಂಡಿದ್ದರೂ, ಕಂಸನ ಸಾಮೂಹಿಕ ಶಿಶು ಹತ್ಯಾಕಾಂಡಕ್ಕೆ ಈ ಮಗು ಬಲಿಯಾದೀತೆ? ಎಂಬ ಆತಂಕದಿಂದ ಬದುಕುತ್ತಿದ್ದರು.

ಏಕೆಂದರೆ ಈವರೆಗೆ ಅವರು ಹೆತ್ತ ಆರು ಮಕ್ಕಳು ಕಂಸನಿಂದ ಕೊಲ್ಲಲ್ಪಟ್ಟಿದ್ದರು. ಆದರೆ ಏಳನೆಯ ಮಗು ಸುಕ್ಷೇಮ ಎಂದೇ ಹೇಳಬಹುದು. ಏಕೆಂದರೆ ಕಂಸನಿಂದ ಹತರಾದ ಈ ಆರು ಮಕ್ಕಳ ಹತ್ಯೆಗೂ ಹಿನ್ನೆಲೆ ಕಥೆಯಿದೆ. ಹಿಂದೆ ಸ್ವಾಯಂಬುವ ಮನ್ವಂತರ ದಲ್ಲಿ ನಡೆದ ಕಥೆ. ಮರೀಚಿ ಮಹರ್ಷಿ ಗೆ ಆರು ಜನ ಗಂಡು ಮಕ್ಕಳಿದ್ದರು. ಆ ಮಕ್ಕಳು ಒಮ್ಮೆ ತೀರಾ ಕೃಶನಾದ ಗಂಧರ್ವ ಮುನಿಯೊಬ್ಬನೊಂದಿಗೆ ಯಾವುದೋ ಕಾರಣಕ್ಕೆ ಜಗಳವಾಡುತ್ತಾರೆ. ಅತಿ ಕೃಶಾಂಗನಾದ ಆ ಗಂಧರ್ವ ಮುನಿಯ ವ್ಯವಹಾರ ಮರೀಚಿ ಮಹರ್ಷಿಯ ಆರು ಮಕ್ಕಳಿಗೂ ಹಾಸ್ಯವಾಗಿ ಕಾಣುತ್ತದೆ. ಅವರು ಮುಂದುವರಿದು ಅಪಹಾಸ್ಯ ಮಾಡುತ್ತಾರೆ. ಇದರಿಂದ ಕ್ರುದ್ಧನಾದ ಗಂಧರ್ವ ಮುನಿ, ಅಸುರೀ ಪ್ರವೃತ್ತಿ ಪ್ರದರ್ಶಿಸಿ ಮುನಿಗಪಮಾನಗೈದ ಆ ಆರೂ ಮಕ್ಕಳನ್ನು ರಾಕ್ಷಸರರಾಗಿ ಹುಟ್ಟುವಂತೆ ಶಪಿಸುತ್ತಾನೆ. ಶಾಪ ವಾಕ್ಯದಂತೆ ಕಾಲನೇಮಿ ಎಂಬ ರಾಕ್ಷಸನ ಮಕ್ಕಳಾಗಿ ಹುಟ್ಟು ಪಡೆಯುತ್ತಾರೆ ಈ ಆರು ಮಕ್ಕಳು. ಬ್ರಹ್ಮನ ಕುರಿತಾಗಿ ಸುದೀರ್ಘ ತಪಸ್ಸನ್ನು ಮಾಡಿ ಅವಧ್ಯರಾಗುವ ವರ ಬೇಡಿ ಪಡೆಯುತ್ತಾರೆ. ರಾಕ್ಷಸ ಕಾಲನೇಮಿ ಆದಿ ದೈತ್ಯ ಹಿರಣ್ಯ ಕಶ್ಯಪನ ಕುಲ ಸಂಬಂಧಿ. ಆ ಸಂದರ್ಭ ತ್ರಿಲೋಕ ವಿಕ್ರಮ ಮೆರೆದು – ಸ್ವಾಧೀನಗೈದು ಸ್ವಯಂ ತಾನೇ ದೇವರು ಎಂಬಂತೆ ವರ್ತಿಸುತ್ತಿದ್ದ ಹಿರಣ್ಯ ಕಶ್ಯಪ. ಹೀಗಿರಲು ಕಾಲನೇಮಿಯ ಮಕ್ಕಳು ದೇವರಾಗಿರುವ ನನ್ನ ಕುರಿತು ತಪಸ್ಸು ಮಾಡದೆ (ಆತನ ಭಾವನೆ – ಆತ ದೇವರಲ್ಲ) ಬ್ರಹ್ಮದೇವನ ಕುರಿತು ತಪಗೈದ ಕಾರಣ ಕೋಪಗೊಂಡನು. ಆ ಆರೂ ಮಕ್ಕಳಿಗೆ ತಂದೆಯಿಂದಲೇ ಮರಣ ಬರಲಿ ಎಂದು ಶಪಿಸಿ ಬಿಟ್ಟನು.

ಜಗನ್ನಿಯಾಮಕ ಶ್ರೀಹರಿಯ ಪ್ರೇರಣೆಯಂತೆ ಯೋಗಮಾಯೆ ಈ ಆರೂ ಮಕ್ಕಳನ್ನು ಯೋಗ ನಿದ್ರೆಗೆ ಒಳಪಡಿಸಿದಳು. ಆರೂ ಮಕ್ಕಳ ಪ್ರಾಣವನ್ನು ತನ್ನ ವಶದಲ್ಲಿರಿಸಿದಳು. ಹೀಗೆ ಮಾಡಲು ಕಾರಣ ಬ್ರಹ್ಮನಿತ್ತ ವರದ ಪಾಲನೆ.

ಕಾಲಾಂತರದಲ್ಲಿ ಹಿರಣ್ಯ ಕಶ್ಯಪ ಹಾಗು ಕಾಲನೇಮಿಯ ವಧೆ ಪಾಲನಾಕರ್ತೃ ವಿಷ್ಣುವಿನಿಂದ ಆಗುತ್ತದೆ. ರಾಕ್ಷಸ ಕಾಲನೇಮಿ ವಧಾಕಾಲದಲ್ಲಿ ಪಟ್ಟ ಅಪೇಕ್ಷೆ (ಶಪಥ) ಮತ್ತೆ ಜನ್ಮವೆತ್ತಿ ವಿಷ್ಣುವಿನ ಹಗೆಯಾಗಿ ಹುಟ್ಟಿ ಬರುವೆನೆಂದು! ಯಥಾ ಪ್ರಕಾರ ಮರಣ ಕಾಲದ ಸಂಕಲ್ಪದಂತೆ ಕಂಸನಾಗಿ ಹುಟ್ಟಿದ.

ಕಾಲನೇಮಿಯ ಮಕ್ಕಳ ಪ್ರಾಣ ಯೋಗ ಮಾಯೆಯ ವಶದಲ್ಲಿದ್ದು, ಒಂದೊಂದೇ ಪ್ರಾಣ ದೇವಕಿಯ ಗರ್ಭ ಮುಖೇನ ಹುಟ್ಟು ಪಡೆದವು. ಕಾಲನೇಮಿಯೇ ಕಂಸನಾಗಿ ಆರೂ ಮಕ್ಕಳನ್ನು ವಧಿಸಿ ಹಿರಣ್ಯ ಕಶ್ಯಪನ ಶಾಪವೂ ನಿಜವಾಯಿತು.

ಮರೀಚಿಯ ಮಕ್ಕಳೂ ಗಂಧರ್ವ ಮುನಿಯ ಶಾಪದಂತೆ ಅಸುರರಾಗಿ ಕಾಲನೇಮಿ ಪುತ್ರರಾಗಿ ಹುಟ್ಟಿ ಶಾಪ ವಿಮೋಚನೆಯಾದರು.

ಹೀಗೆ, ಶಾಪಗ್ರಸ್ಥ ಮರೀಚಿ ಮಹರ್ಷಿಯ ಮಕ್ಕಳು ಸಾಯಲೆಂದೇ ಹುಟ್ಟಿದವರು. ಆದರೆ ಏಳನೇ ಮಗುವಿಗೇನೂ ಶಾಪವಿಲ್ಲವಲ್ಲ!. ಹಾಗಾಗಿ ಕಂಸ ಹುಡುಕಿದರೂ ಸಿಗದೆ ಬದುಕುಳಿದು ಬೆಳೆಯುತ್ತಿತ್ತು.

ಸೆರೆವಾಸದಲ್ಲಿದ್ದ ದೇವಕಿ – ವಸುದೇವರಿಗೆ ಪ್ರಾಕೃತಿಕ ಶುಭ ಸೂಚಕ ಶಕುನಗಳು ಗೋಚರಿಸಲ್ಪಡುತ್ತಿದ್ದವು. ಅದನ್ನು ಆಧರಿಸಿ ಅವರು ನಮ್ಮ ಮಗು ಹೇಗೋ ಬದುಕಿ ಬೆಳೆಯುತ್ತಿದೆ ಎಂಬ ನಂಬಿಕೆ ತಳೆದರು.

ಇತ್ತ ಕಂಸನಿಗೆ ವಿಪರೀತ ಆತಂಕ, ಮರಣ ಭಯ ಆವರಿಸಿ ಮತಿ ವಿಭ್ರಮಿಸಲು ತೊಡಗಿದೆ. ಏನು ಮಾಡ ಹೊರಟರೂ ಮಾಡಲಾಗುತ್ತಿಲ್ಲ. ಯೋಚಿಸ ತೊಡಗಿದರೆ ತೀರ್ಮಾನವಾಗುತ್ತಿಲ್ಲ. ಒಮ್ಮೆ ಆಯಿತು ಎಂದರೆ ಮತ್ತೆ ಏಕೆ ಎಂಬಂತೆ ಅವನೇ ಪ್ರಶ್ನಿಸುವ ಬದುಕು ಆತನದು. ಒಟ್ಟು ದೇವಕಿಯ ಎಂಟನೆಯ ಗರ್ಭ ಸಂಜಾತ ಅಶರೀರವಾಣಿಯ ವಾಕ್ಯದಂತೆ ಹುಟ್ಟಿದರೆ ಎನಗೆ ಮೃತ್ಯುಪ್ರಾಯನಾಗುತ್ತಾನೆ. ಹಾಗಾಗಿ ಅರೆಗಳಿಗೆಗೊಮ್ಮೆ ತಾನೇ ಬಂದು ವಸುದೇವ ದೇವಕಿಯರನ್ನು ನೋಡಿ ಹೋಗುತ್ತಿದ್ದ. ಬಿಗಿದ ಸಂಕೋಲೆ ಪರೀಕ್ಷಿಸುತ್ತಿದ್ದ. ಹೆಚ್ಚುವರಿ ಕಾವಲು ಭಟರನ್ನು ಮತ್ತೆ ಮತ್ತೆ ಕಟ್ಟಪ್ಪಣೆ ನೀಡುತ್ತಾ ಕಾವಲಿರಿಸಿದ್ದ.

ಘಟಿಸಬೇಕಾದದ್ದು ಆಗಲೇ ಬೇಕಲ್ಲವೇ? ಕಾಲದ ಚಲನೆ ಯಾರನ್ನೂ ಕೇಳಿ ಸಾಗುವುದೇ? ತಡೆಯಲಾದೀತೇ? ನೋಡ ನೋಡುತ್ತಿದ್ದಂತೆ ದೇವಕಿಯಲ್ಲೇನೋ ಹೊಸ ಚೈತನ್ಯ, ಮುಖದಲ್ಲಿ ಕಳೆ, ಶಾರೀರಿಕ ಬದಲಾವಣೆ ಗೋಚರಿಸುತ್ತಿದೆ. ಹೊಳಪು ಹೊಳೆಯುತ್ತಿದೆ. ಅಂಗಾಂಗಗಳಲ್ಲಿ ಸುಲಕ್ಷಣಗಳೂ, ಮುಖದಲ್ಲಿ ಕಾಂತಿ, ದಿವ್ಯ ತೇಜಸ್ಸೂ ಮಿಂಚುತ್ತಿದೆ. ಹೌದು ದೇವಕಿಗೆ “ಎಂಟನೆಯ ಗರ್ಭ” ಧಾರಣೆಯಾದ ಫಲಶ್ರುತಿಯ ಪರಿಣಾಮವಿದು. ಬೆಳವಣಿಗೆ ತಿಳಿದ ವಸುದೇವ ದೇವಕಿ ಭಯಭೀತರಾದರು. ಕಂಸನ ಕ್ರೌರ್ಯಕ್ಕೆ ಅಂಜತೊಡಗಿದರು. ತಕ್ಷಣ ಶ್ರೀ ಹರಿಯೇ ಹುಟ್ಟಿ ಬರಲಿರುವನಲ್ಲಾ! ಭಯವೇಕೆ? ಎಂದು ಪರಸ್ಪರ ಸಂತೈಸಿ ಹರಿಧ್ಯಾನ ನಿರತರಾದರು. ಆರ್ತರಾಗಿ ಭಗವಂತನ ಮುಂದೆ ಭಯ ದುಃಖವನ್ನೇ ಅರ್ಪಿಸುತ್ತಾ ಭಜಿಸತೊಡಗಿದರು. ಭಕ್ತರ ಬವಣೆ ನಿವಾರಿಸುವ ಭವ ಭಯಹರ ತನ್ನ ನಿವಾಸದ ಅಂತರಂಗ ಶುದ್ಧೀಕರಿಸದೆ ಉಳಿಯುವನೆ. ವಸುದೇವ ದೇವಕಿಯರ ಮನಕ್ಕೆ ಅಭಯ ಪ್ರದನಾದ. ದೇವಕಿಯ ಗರ್ಭಾಂಬುಧಿಯಲ್ಲಿ ವೈಕುಂಠವಾಸ ಜಗನ್ನಿಯಾಮಕ ಶ್ರೀಹರಿ ಪವಡಿಸಿದ. ಇದರ ಚಮತ್ಕೃತಿಯೋ ಎಂಬಂತೆ ಒಳಗಿಂದೊಳಗೇ ಅವರಿಗೆ ಅಂತಃಸತ್ವ ವರ್ಧಿಸಿ ಸಂತೋಷ, ನೆಮ್ಮದಿ, ಮನಶಾಂತಿ, ನಿರ್ಭಯತ್ವ ಪ್ರಾಪ್ತಿಯಾಗತೊಡಗಿತು.

ಮುಂದುವರಿಯುವುದು….

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page