ಭಾಗ – 584
ಭರತೇಶ ಶೆಟ್ಟಿ,ಎಕ್ಕಾರು

ಮಯೂರಧ್ವಜನ ಸಾಮ್ರಾಜ್ಯ ರತ್ನಪುರದಿಂದ ಬಂಧಮುಕ್ತವಾಗಿ ಹೊರಟ ಎರಡೂ ಯಾಗ ತುರಗಗಳು ಮುಕ್ತವಾಗಿ ತಿರುಗಾಡುತ್ತಾ, ಸ್ವಚ್ಚಂದವಾಗಿ ಮೇಯುತ್ತಾ ಮುಂದೊತ್ತಿ ಹೋಗುತ್ತಿವೆ. ಶ್ರೀಕೃಷ್ಣ ಪರಮಾತ್ಮ ಮರಳಿ ಹಸ್ತಿನಾವತಿಗೋ ಇಲ್ಲ ತನ್ನದ್ದಾದ ದ್ವಾರಕೆಗೋ ಹಿಂದಿರುಗದೇ ಅಶ್ವಮೇಧ ದಿಗ್ವಿಜಯಕ್ಕಾಗಿ ಅರ್ಜುನನ ಜೊತೆಯಾಗಿಯೇ ಮುಂದುವರಿದಿದ್ದಾನೆ. ಪಾರ್ಥನ ರಥದ ಸಾರಥಿಯಾಗಿ ಮುನ್ನಡೆಸುತ್ತಿರುವಾಗ ಅರ್ಜುನನಿಗೂ ಮನದಲ್ಲಿ ಏನೋ ಯೋಚನೆ ಹಾದು ಹೋಯಿತು. ಮುಂದೆ ಯಾವುದೋ ಪ್ರಬಲ ರಾಷ್ಟ್ರವಿರಬೇಕು. ಅಲ್ಲೂ ಏನಾದರು ವೈಶಿಷ್ಟ್ಯವಿರಬೇಕು. ಹಾಗೇನೂ ಇಲ್ಲದೆ ಹೋಗಿದ್ದರೆ ಮಾಧವ ನಮ್ಮೊಡನೆ ಬರುತ್ತಿರಲಿಲ್ಲ. ಈಗ ಪಾಂಡವ ಪಕ್ಷ ಮತ್ತಷ್ಟು ಪ್ರಬಲವಾಗಿದೆ. ಅನುಸಾಲ್ವನ ರಾಕ್ಷಸ ಸೇನೆ, ಭದ್ರಾವತಿಯ ಯವನಾಶ್ವ, ಮಾಹಿಷ್ಮತಿಯ ನೀಲಧ್ವಜ, ಚಂಪಕಾವತಿಯ ಸುಧನ್ವನ ತಂದೆ ಹಂಸಧ್ವಜ, ಮಣಿಪುರದ ಬಬ್ರುವಾಹನ, ಈಗ ರತ್ನಪುರದ ತಾಮ್ರಧ್ವಜನೊಡನೆ ಸೇನೆಯೂ ಸೇರಿ ಪಾಂಡವಾಶ್ವಮೇಧ ಸೇನಾ ಸಾಗರದೊಂದಿಗೆ ಸಾಗುತ್ತಿದೆ.
ಹೀಗೆ ಮುಂದೆ ಮುಂದೆ ಹೋಗುತ್ತಾ ಕುದುರೆಗಳು ಸಾರಸ್ವತವೆಂಬ ನಗರವನ್ನು ಪ್ರವೇಶಿಸಿದವು. ಪಾಂಡವರ ಸೈನ್ಯವೂ ಅನುಸರಿಸಿ ಬರುತ್ತಿದೆ. ಸಾರಸ್ವತ ನಗರದ ಗಡಿ ಪ್ರದೇಶಕ್ಕೆ ಬರುತ್ತಿದ್ದಂತೆ ಶ್ರೀಕೃಷ್ಣ ಪರಮಾತ್ಮ ಸೇನೆಗೆ ಇಲ್ಲೇ ನಿಲ್ಲಬೇಕು. ಮುಂದುವರಿಯುವುದು ಬೇಡ ಎಂಬ ಸೂಚನೆ ನೀಡಿದ. ಅಂತೆಯೇ ತುರಗಾಧ್ವರದ ಅಶ್ವಗಳೆರಡೂ ಆಡುತ್ತಾ, ಕುಪ್ಪಳಿಸುತ್ತಾ, ಓಡುತ್ತಾ ಸಾರಸ್ವತ ನಗರ ಪ್ರವೇಶ ಮಾಡಿದರೆ, ಪಾಂಡವರ ಸೇನೆ ಪುರದ ಹೊರಭಾಗದಲ್ಲೇ ಬೀಡು ಬಿಟ್ಟು ವಿಶ್ರಾಂತವಾಯಿತು.
ಸಾರಸ್ವತ ನಗರ ಬಹಳ ವೈಶಿಷ್ಟ್ಯಪೂರ್ಣವಾದ ನಗರ. ಈ ಸಾರಸ್ವತ ಪುರದಲ್ಲಿ ಪೂರ್ತಿ ನಾಲ್ಕು ಪಾದಗಳಿಂದಲೂ ಧರ್ಮವು ಹೆಜ್ಜೆ ಇಡುತ್ತಿದೆ ಎಂದೇ ಹೇಳಬಹುದು. ಮರೆತಾಗಲೀ, ಕನಸಿನಲ್ಲಾಗಲಿ, ಪಾಪ ಕೃತ್ಯಕ್ಕೆ ತೊಡಗುವ ಪ್ರಜೆಗಳು ಈ ರಾಜ್ಯದಲ್ಲಿಲ್ಲ. ಪುರುಷ – ಸ್ತ್ರೀಸಮೂಹದಲ್ಲಾಗಲಿ, ಅಬಾಲ ವೃದ್ಧರವರೆಗೆ ಯಾರಿಗೂ ರೋಗರುಜಿನಗಳ ಬಾಧೆಯಿಲ್ಲ. ಯಾರೂ ದುಃಖ, ಶೋಕ, ಸಂತಾಪದಿಂದ ಮರುಗುವವರೇ ಇಲ್ಲಿಲ್ಲ. ಇಂತಹ ಸಮೃದ್ಧ, ಸತ್ವಪೂರ್ಣವಾದ ಸಾಮ್ರಾಜ್ಯವನ್ನು ಕಟ್ಟಿ ಆಳುತ್ತಿರುವವನು ಧರ್ಮಾತ್ಮನೂ ಹರಿಭಕ್ತನೂ ಆದ “ವೀರವರ್ಮ” ಎಂಬ ಪರಾಕ್ರಮಿಯೂ, ಸದ್ಧರ್ಮ ನಿರತನೂ, ಬಲಾಢ್ಯನೂ, ನ್ಯಾಯ ನಿಷ್ಠುರನೂ ಎಲ್ಲಕ್ಕಿಂತ ಮಿಗಿಲಾಗಿ ದೈವಭಕ್ತನೂ ಆದವನು. ಮಹಾರಾಜ ವೀರವರ್ಮನದು ತುಂಬು ಸಂಸಾರ. ಆತನಿಗೆ ಐವರು ಗಂಡು ಮಕ್ಕಳು ಓರ್ವಾಕೆ ಮಗಳು ದಾಂಪತ್ಯದ ಫಲ ಸ್ವರೂಪವಾಗಿ ಮನೆ ತುಂಬಿದ್ದಾರೆ. ಗಂಡು ಮಕ್ಕಳು ಸುಲಭ, ಸುಫಾಲ, ಕುವಲ, ನೀಲ ಮತ್ತು ಸರಳ. ಹಾಗು ಮಗಳು ಮಾಲಿನಿ. ವೀರವರ್ಮನ ಗಂಡು ಮಕ್ಕಳೂ ಒಬ್ಬರಿಗಿಂತ ಒಬ್ಬರು ನಿಷ್ಠಾವಂತರೂ, ಪರಿಶ್ರಮಿಗಳೂ, ವಿದ್ಯಾವಂತರೂ, ಶಸ್ತ್ರ ಶಾಸ್ತ್ರ ಪಾರಂಗತರೂ ಜನಾನುರಾಗಿಗಳೂ ಆಗಿ ತಂದೆಯ ಆಡಳಿತ ವ್ಯವಸ್ಥೆಗೆ ಪೂರಕರಾಗಿದ್ದು ಬಲವರ್ಧನೆಗೊಳಿಸಿದ್ದಾರೆ. ಗಂಡು ಮಕ್ಕಳನ್ನು ಮೀರಿಸುವ ಸಾಧನೆ ಮಾಡಿದವಳು ವೀರವರ್ಮನ ಮಗಳು ಮಾಲಿನಿ. ದೈವ ಭಕ್ತಳೂ, ಸದಾ ದೇವತಾ ಪ್ರಾರ್ಥನೆ, ಶಾಸ್ತ್ರ ಅಧ್ಯಯನಾದಿಗಳಲ್ಲೇ ನಿರತಳಾಗಿ ಬೆಳೆದ ಸಂಸ್ಕಾರ ಬಲವೇ ಆಕೆಯ ಜೀವನವನ್ನು ರೂಪಿಸಿದೆ. ಇನ್ನೂ ಒಂದು ಸೂಕ್ಷ್ಮ ವಿಚಾರವೆಂದರೆ ವೀರವರ್ಮ ಶ್ರೀಹರಿಯ ಪರಮ ಭಕ್ತನೇ ಹೌದು. ಆದರೂ ಧರ್ಮಮೂರ್ತಿ ಯಮಧರ್ಮರಾಜನ ಮಹತ್ತರವಾದ ಅಭಿಮಾನಿಯೂ ಆರಾಧಕನೂ ಆಗಿದ್ದ. ಈ ಕಾರಣದಿಂದಲೋ ಏನೋ ಯಮನರಾಜನ ಪತ್ನಿ ಊರ್ಮಿಳಾ (ಶ್ಯಾಮಲಾ ಎಂಬ ಹೆಸರೂ ಇದೆ) ದೇವಿಯ ಅನುಗ್ರಹದಿಂದ ಆಕೆಯ ಅಂಶ ಸಂಭೂತಳಾಗಿಯೇ ಜನಿಸಿದವಳು ಈ ಮಾಲಿನಿ. ಪ್ರಾಯ ಪ್ರಬುದ್ಧಳಾಗುತ್ತಾ ಬಂದಂತೆ ಯಮರಾಜನ ಬಗ್ಗೆ ಅಪಾರ ಒಲವು, ಭಕ್ತಿಯನ್ನು ಮೈಗೂಡಿಸಿಕೊಂಡು ಬೆಳೆದಳು. ಮುಂದೆ ಧ್ಯಾನಸ್ಥಳಾಗಿ ಕುಳಿತು ಯಮಧರ್ಮರಾಜನ ಕುರಿತಾಗಿ ನಿರಂತರ ತಪಸ್ಸನ್ನೇ ಆಚರಿಸತೊಡಗಿದಳು. ಹೀಗೆ ತೊಡಗಿದ ಆಕೆ ಕಠಿಣ ತಪಸ್ಸಿಗೆ ತೊಡಗಿ ಯಮರಾಜನನ್ನು ಸಾಕ್ಷಾತ್ಕರಿಸಿಕೊಂಡಳು. ಒಲಿದು ಬಂದ ಯಮಧರ್ಮನಲ್ಲಿ ನೀನೇ ನನ್ನನ್ನು ವರಿಸಬೇಕೆಂದು ಬೇಡಿಕೊಂಡು ಆತನ ಪತ್ನಿಯೇ ಆದಳು. ಅಂದಿನಿಂದ ಸಾರಸ್ವತ ಪುರದಲ್ಲಿ ಯಮರಾಜನು ಅಳಿಯನಾಗಿ ಆಂಶಿಕ ರೂಪದಲ್ಲಿ ಸ್ಥಿತನಾದನು. ಮಾತ್ರವಲ್ಲ ಪುರದ ರಕ್ಷಣೆಯ ಅಭಯದಾನವನ್ನೂ ಅನುಗ್ರಹಿಸಿದನು. ಹೀಗೆ ಧರ್ಮಮೂರ್ತಿಯೇ ಸ್ಥಿತನಾಗಿರುವ ಪುರದಲ್ಲಿ ಅಧರ್ಮಕ್ಕೆ ಅವಕಾಶವಿದ್ದೀತೆ? ಪ್ರಜಾಜನರೂ ಧರ್ಮಾತ್ಮರೇ ಆಗಿ ಚೋರ, ವಂಚಕ, ಕಪಟ, ಸುಲಿಗೆ, ದರೋಡೆ ಇತ್ಯಾದಿ ಯಾವುದರ ಪರಿಚಯವೂ ಇಲ್ಲದೆ ನೆಮ್ಮದಿಯ ಕ್ಷೇತ್ರವಾಗಿ ಹೋಗಿದೆ.
ಇಂತಹ ಸಮೃದ್ಧ ನಗರಿಗೆ ಅಶ್ವಮೇಧದ ತುರಗಗಳೆರಡು ಬಂದ ವಿಚಾರ ಚಾರಕರಿಂದ ಅರಸನಿಗೆ ತಿಳಿಯಿತು. ತನ್ನ ಗಂಡು ಮಕ್ಕಳನ್ನು ವಿಚಾರಣೆಗಾಗಿ ಕಳುಹಿಸಿದ. ತುರಗಗಳ ಹಣೆಯ ತಿಲಕ ತೆರೆದು ಓಲೆ ಓದಿದಾಗ ಪೂರ್ಣ ವಿಚಾರ ತಿಳಿಯಿತು. ಗೂಢಾಚಾರರನ್ನಟ್ಟಿ ವಿಚಾರ ಸಂಗ್ರಹಿಸಿದಾಗ ಕೃಷ್ಣಾರ್ಜುನರೇ ನೇತಾರರಾಗಿ ಅಮಿತವಾದ ಸೇನಾಬಲದೊಂದಿಗೆ ಹೊರಭಾಗದಲ್ಲಿ ಬೀಡು ಬಿಟ್ಟಿರುವ ಸಂಗತಿಯೂ ತಿಳಿಯಿತು. ಕ್ಷತ್ರಿಯನಾಗಿ ಕ್ಷಾತ್ರಧರ್ಮ ಪಾಲನೆಯೇ ನಮಗೆ ಭೂಷಣವೆಂದು ಎರಡೂ ಕುದುರೆಗಳನ್ನು ಬಂಧಿಸಿದ. ಯುದ್ಧಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೇನಾಪತಿಗೂ ತನ್ನ ಮಕ್ಕಳಿಗೂ ಆಜ್ಞೆ ಮಾಡಿದ.
















































