
ಕಾರ್ಕಳ, ಜು. 17: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಹಾಗೂ ಸಮಾಜದಲ್ಲಿ ಗೊಂದಲದ ವಾತಾವರಣ ಸೃಷ್ಟಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಬಜರಂಗದಳ ಕಾರ್ಕಳ ಆಗ್ರಹಿಸಿದೆ.
ಈ ಕುರಿತು ಪೊಲೀಸ್ ಇಲಾಖೆಗೆ ಸಲ್ಲಿಸಿರುವ ಮನವಿಯಲ್ಲಿ, ಜುಲೈ 16ರಂದು ಮಂಗಳೂರು ಜಿಲ್ಲೆಯ ಬಿ. ಸಿರೋಡ್ನಲ್ಲಿ ನಡೆದ ಯುವತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವ್ಯಕ್ತಿಗಳು ಯಾವುದೇ ಅಧಿಕೃತ ಮಾಹಿತಿ ಅಥವಾ ತನಿಖಾ ವರದಿಯ ಆಧಾರವಿಲ್ಲದೆ ಆರೋಪಿಯನ್ನು ಬಜರಂಗದಳದ ಸಕ್ರಿಯ ಕಾರ್ಯಕರ್ತ ಎಂದು ಬಿಂಬಿಸಿ ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಮನವಿಯ ಪ್ರಕಾರ, ಕಾರ್ಕಳದ ಹರ್ಷ ಕೆ. ಶೆಟ್ಟಿ ಎಂಬಾತ ಸಾಮಾಜಿಕ ಜಾಲತಾಣಗಳಲ್ಲಿ ಎಡಿಟ್ ಮಾಡಿದ ಚಿತ್ರಗಳು, ವಿಡಿಯೋಗಳು ಹಾಗೂ ಬರಹಗಳ ಮೂಲಕ ಪ್ರಕರಣವನ್ನು ಬಜರಂಗದಳದೊಂದಿಗೆ ಸಂಪರ್ಕಿಸುವ ಪ್ರಯತ್ನ ನಡೆಸಿದ್ದು, ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿ ಸಮಾಜದಲ್ಲಿ ವೈಮನಸ್ಸು ಮತ್ತು ಅಶಾಂತಿ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.ಹೀಗಾಗಿ, ಸುಳ್ಳು ಸುದ್ದಿ ಹಾಗೂ ಪ್ರಚೋದನಕಾರಿ ಮಾಹಿತಿಯನ್ನು ಪ್ರಸಾರ ಮಾಡುತ್ತಿರುವ ಎಲ್ಲರ ವಿರುದ್ಧ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಂಚಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಬಜರಂಗದಳ ಕಾರ್ಕಳ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.
ಈ ಮನವಿಗೆ ಬಜರಂಗದಳ ಕಾರ್ಕಳ ಸಂಯೋಜಕ ಮನೀಶ್ ನಿಟ್ಟೆ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಕಳ ಕಾರ್ಯದರ್ಶಿ ಪ್ರಸಾದ್ ನಿಟ್ಟೆ ಸಹಿ ಹಾಕಿದ್ದಾರೆ.
















































