ಭಾಗ – 576
ಭರತೇಶ ಶೆಟ್ಟಿ,ಎಕ್ಕಾರು

ಮಯೂರಧ್ವಜ ಭರವಸೆ ನೀಡಿದ ಬಳಿಕ ವೃದ್ಧ ಬ್ರಾಹ್ಮಣ ಕೃಷ್ಣಶರ್ಮ ಸಿಂಹ ಇಟ್ಟಿರುವ ಬೇಡಿಕೆಯನ್ನು ವಿವರಿಸಿ ಹೇಳತೊಡಗಿದ “ಹೇ ವೃದ್ಧನೇ! ನಿನ್ನ ಮಗನನ್ನು ನಿನಗೆ ಬಿಟ್ಟು ಕೊಡಬಲ್ಲೆ, ಆದರೆ ಪ್ರತಿಯಾಗಿ ನನಗೆ ಮತ್ತೊಂದು ಅರ್ಧ ಶರೀರ ನೀಡಬೇಕು. ಅದೂ ಯಾರದ್ದೋ ನೀಡಿದರೆ ಆಗದು. ಈ ರಾಜ್ಯವನ್ನು ಆಳುತ್ತಿರುವವನು ಧರ್ಮಾತ್ಮನಾದ ಮಹಾರಾಜ ಮಯೂರಧ್ವಜ. ಆತನ ಶರೀರದ ಬಲಭಾಗದ ಅರ್ಧ ಶರೀರವನ್ನು ತಂದೊಪ್ಪಿಸಿದರೆ ನಿನ್ನ ಮಗನನ್ನು ಜೀವಂತವಾಗಿ ನಿನಗೊಪ್ಪಿಸುವೆ. ನೀನು ರಾಜನ ಅರ್ಧ ಶರೀರ ತಂದು ನೀಡುವವರೆಗೆ ನಿನ್ನ ಮಗನಿಗೇನೂ ಮಾಡುವುದಿಲ್ಲ ಎಂದು ಹೇಳಿದೆ. ಆ ಸಿಂಹದ ಮಾತು ಕೇಳಿ ನನಗೆ ದಿಕ್ಕೇ ತೋಚದಾಯಿತು. ನನ್ನ ಮಗನ ಪ್ರಾಣಕ್ಕೆ ಈ ದೇಶ ಆಳುವ ದೊರೆಯ ಜೀವ ಕೇಳುವುದು ಯಾವ ನ್ಯಾಯ? ಬೇಕಿದ್ದರೆ ನನ್ನನ್ನೇ ತಿಂದು ನನ್ನ ಮಗನನ್ನು ಬಿಟ್ಟು ಕೊಡು. ಆತನಿನ್ನೂ ಬದುಕಿ ಬಾಳಬೇಕಾದವನು. ನಾನಾದರೆ ಇಂದೋ ನಾಳೆಯೋ ಬಿದ್ದು ಹೋಗಬೇಕಾದ ಮುದಿ ಪ್ರಾಯದವನು” ಎಂದು ಬೇಡಿಕೊಂಡೆ. ಆಗ ಆ ಸಿಂಹ “ಇಲ್ಲಾ ನಿನ್ನ ಶರೀರವನ್ನು ಸ್ವೀಕರಿಸಲಾರೆ. ಮಾತ್ರವಲ್ಲ ಬೇರೆ ಯಾರ ಶರೀರವೂ ನನಗೆ ಸ್ವೀಕೃತವಲ್ಲ. ಈ ದೇಶದ ದೊರೆ ಮಯೂರಧ್ವಜ ಗೋವು, ಬ್ರಾಹ್ಮಣರ ಬಗ್ಗೆ ಅಪಾರವಾದ ಭಕ್ತಿಯನ್ನು ಹೊಂದಿದ್ದಾನೆ. ಯಾರು ಏನೇ ಬೇಡಿದರೂ ಇಲ್ಲ ಎಂದು ನಿರಾಕರಿಸದೆ ನೀಡುವಂತಹ ಮಹಾನ್ ದಾನಿಯೂ ಆಗಿದ್ದಾನೆ. ಅಂತಹ ಸತ್ಯಾತ್ಮನೂ, ಧರ್ಮಾತ್ಮನೂ ಆಗಿರುವ ರಾಜನಿರುವಾಗ ನಿನ್ನ ಮಗನ ಪ್ರಾಣದ ಬಗ್ಗೆ ಯೋಚಿಸಬೇಡ. ಹೋಗಿ ಕೇಳಿನೋಡು ಆತ ನೀಡಿದರೂ ನೀಡಬಹುದು. ಆದರೆ ಒಂದು ನಿಬಂಧನೆಯಿದೆ, ಏನೆಂದರೆ ನನಗೆ ದಾನವಾಗಿ ನೀಡುವ ಆತನ ಅರ್ಧಶರೀರವನ್ನು ಆತನ ಪತ್ನಿ ಮತ್ತು ಪುತ್ರರೇ ಸೀಳಿ ಭಾಗ ಮಾಡಿ ನೀಡಬೇಕು. ಹಾಗೆ ಸೀಳುವಾಗ ಪತ್ನಿ – ಪುತ್ರನಾಗಲಿ, ಅರಸನಾಗಲಿ ಒಂದು ತೊಟ್ಟು ಕಣ್ಣೀರು ಕೂಡ ಸುರಿಸದೆ ಸಂತೋಷದಿಂದಲೇ ದಾನ ನೀಡಬೇಕು. ನೀನು ತಡಮಾಡದೆ ಹೋಗಿ ಮಹಾರಾಜನಲ್ಲಿ ಬೇಡಿಕೋ. ನೀನು ಬೇಡಿದ ದಾನ ನಿನಗೆ ಸಿಗುತ್ತದೆ” ಎಂದು ಆ ಸಿಂಹ ಹೇಳಿದೆ. ಅದೇ ಕಾರಣದಿಂದ ಬಲವಂತವಾಗಿ ನಿನ್ನ ಬಳಿ ಬರುವಂತಾಯಿತು. ಬರುವಾಗಲೇ ನಿನ್ನನ್ನು ಕಂಡ ಕೂಡಲೆ ನೀನು ನಮಸ್ಕರಿಸದಿದ್ದರೂ ನಾನು ಹರಸಿ ಆಶೀರ್ವದಿಸಿದೆ.”
“ಹೇ ಮಹಾರಾಜನೇ, ಇದಿಷ್ಟೂ ಆಗಿರುವ ವಿಚಾರ. ಆದರೆ… ಆದರೆ… ಒಂದು ದೇಶ ಆಳುವ ಧರ್ಮಾತ್ಮನಾದ ಮಹಾರಾಜ ಇಡೀ ರಾಷ್ಟ್ರದ ಆಸ್ತಿ. ಒಳ್ಳೆಯವನಾದ ಒಬ್ಬ ಅರಸ ಇಲ್ಲವಾದರೆ ಇಡೀ ಸಾಮ್ರಾಜ್ಯದಲ್ಲೆ ಅರಾಜಕತೆ ಉಂಟಾದೀತು. ಅದರಲ್ಲೂ ನಿನ್ನಂತಹ ಸಜ್ಜನ, ಧರ್ಮಿಷ್ಠ, ನ್ಯಾಯಪರ, ಪ್ರಜಾಪರಿಪಾಲ ರಾಜ ದೇವದುರ್ಲಭವೇ ಸರಿ. ಕೇವಲ ಒಬ್ಬ ಬಡಬ್ರಾಹ್ಮಣನ ಮಗನ ಪ್ರಾಣಕ್ಕೆ ಪ್ರತಿಯಾಗಿ ನಿನ್ನಂತಹ ಮಹಾತ್ಮನ ಬಲಿದಾನ ಹೇಗೆ ಬೇಡಲಿ? ನಾನೋ ಆ ಮಗನ ಅಪ್ಪನಾಗಿ ಪುತ್ರ ವ್ಯಾಮೋಹದಿಂದ ತೀರಾ ಸ್ವಾರ್ಥಿಯಾಗಿ ಕೇಳಬಹುದು. ಆದರೆ ಈ ವಿಚಾರ ತಿಳಿದ ಜನರು, ಪ್ರಾಜ್ಞರು ಏನು ಹೇಳಿಯಾರು? ಛೇ ಆ ಸಿಂಹ ನನ್ನ ಮಗನ ಪ್ರಾಣವನ್ನು ಒತ್ತೆ ಹಿಡಿದು ಎಂತಹ ಲೋಕಾಪವಾದಕ್ಕೆ ನನ್ನನ್ನು ಗುರಿ ಮಾಡಿದೆ? ನನಗೂ ಹುಚ್ಚು ಹಿಡಿದಂತಾಗಿದೆ, ಒಂದೆಡೆ ಹೆತ್ತ ಮಗನ ಪ್ರಾಣ. ಮತ್ತೊಂದೆಡೆ ದೇವರಂತಹ ಮಹಾರಾಜ. ಕೇಳಬಾರದ್ದನ್ನು ಕೇಳಿ ನಿಮ್ಮನ್ನೂ ಧರ್ಮ ಸಂಕಟಕ್ಕೆ ಗುರಿ ಮಾಡಿದೆ ಎಂಬ ದುಃಖ ನನ್ನನ್ನು ಸುಡುತ್ತಿದೆ. ನಾನೇನು ಮಾಡಲಿ ದೇವರೇ! ಅಯ್ಯೋ… ವಿಧಿಯೇ! ಯಾಕೆ ಈ ರೀತಿ ಮಾಡಿಸುತ್ತಿರುವೆ?” ಎಂದು ಗೋಗರೆಯತೊಡಗಿದ ವೃದ್ಧ ಬ್ರಾಹ್ಮಣ.
ಮಯೂರಧ್ವಜ ತೀಕ್ಷ್ಣಮತಿಯೂ ಪ್ರಾಜ್ಞನೂ ಆದ ಅರಸ. ಆತನಿಗೆ ಮನಸ್ಸಿನಲ್ಲಿ ಬಹಳಷ್ಟು ಚರ್ಚಾಸ್ಪದ ವಿಚಾರಗಳು ಪುಟಿದೇಳತೊಡಗಿದವು. ಒಂದು ಕಾಡ ಮೃಗ ಬೇಟೆಯನ್ನು ಹಿಡಿದ ಮೇಲೆ ತಿನ್ನುವುದು ಅದರ ಧರ್ಮ. ಅದು ಯಾರ ಅಪ್ಪಣೆಗೂ ಕಾಯಲಾರದು. ಅದರ ಮೇಲೆ ಈ ಸಿಂಹ ಮಾತನ್ನೂ ಆಡುತ್ತಿದೆಯಂತೆ! ನನ್ನ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಂಡಿದೆಯಂತೆ! ನನ್ನ ಅರ್ಧ ಶರೀರವನ್ನು ಬೇಡಿದೆಯಂತೆ! ಅದೂ ಪತ್ನಿ ಪುತ್ರರೇ ಕೈಯಾರೆ ಸೀಳಿ ಅರ್ಧ ಭಾಗ ಮಾಡಿ ನೀಡ ಬೇಕಂತೆ. ನಾವು ಮೂವರಲ್ಲಿ ಯಾರೂ ಒಂದು ತೊಟ್ಟು ಕಣ್ಣೀರನ್ನೂ ಸುರಿಸಬಾರದಂತೆ. ಅಂದರೆ ಇದು ಯಾವುದೋ ಒಂದು ಅಮಾನುಷ ಶಕ್ತಿಯ ಕೆಲಸವಲ್ಲದೆ ಬೇರೇನೂ ಆಗಿರಲು ಸಾಧ್ಯವಿಲ್ಲ. ದೇವರು ಸ್ವಯಂ ಸತ್ವ ಪರೀಕ್ಷೆಗೆ ಮುಂದಾಗಿರಬಹುದೇ? ನನ್ನ ಜೊತೆ ನನ್ನ ಪತ್ನಿ ಹಾಗು ಪುತ್ರನನ್ನೂ ಪರೀಕ್ಷೆಗೆ ಗುರಿಪಡಿಸಿ ಏನು ಎಷ್ಟು ಎಂದು ತಿಳಿಯುವ ಕಾರ್ಯಕ್ಕೆ ಮನ ಮಾಡಿರಬಹುದೇ? ಏನೇ ಇರಲಿ ನನ್ನ ಕಲ್ಪನೆ ನಿಜವಾಗಿದ್ದರೆ ದೇವರಿಗೆ ಪ್ರೀತಿಯಾಗಲಿ, ನಾನು ರಾಜನಾಗಿ ಮೊದಲು ನನ್ನ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ಮಾಡುತ್ತೇನೆ. ಧರ್ಮದ ದಾರಿಯಲ್ಲೇ ನಡೆಯುತ್ತೇನೆ. ದೇವರು ನಂಬಿದವರನ್ನು ಎಂದೂ ಕೈ ಬಿಡಲಾರ ಎಂದು ವಿಚಾರ ಮಾಡಿ ಮಹತ್ತರವಾದ ತೀರ್ಮಾನಕ್ಕೆ ಬಂದನು.
“ಪೂಜ್ಯ ಬ್ರಾಹ್ಮಣೋತ್ತಮರೇ! ದುಃಖಿಸಬೇಡಿ. ನಮ್ಮ ರಾಜ್ಯಕ್ಕೆ ಯಾರ ಕಣ್ಣೀರೂ ಶುಭಪ್ರದವಲ್ಲ. ಅದರಲ್ಲೂ ಪೂಜನೀಯರಾದ ಬ್ರಾಹ್ಮಣರು ತಾವು, ನಮ್ಮ ಯಾಗ ಶಾಲೆಗೆ ಬಂದು ಈ ರೀತಿ ಕಣ್ಣೀರ್ಗರೆಯಬಾರದು. ಆರ್ತರಾಗಿ ಬಂದವರನ್ನು ರಕ್ಷಿಸಬೇಕಾದುದು ಕ್ಷತ್ರಿಯರಾದ ನಮಗೆ ಪರಮ ಧರ್ಮವೂ ಕರ್ತವ್ಯವೂ ಆಗಿದೆ. ಬ್ರಾಹ್ಮಣರನ್ನು ರಕ್ಷಿಸಲೇಬೇಕಾದುದು ರಾಜಧರ್ಮವೂ ಆಗಿದೆ. ಹಾಗೆಯೇ ಪರೋಪಕಾರ ಮಾಡಬೇಕಾದುದು ಮಾನವತಾ ಧರ್ಮ. ಧರ್ಮ ಕಾರ್ಯಕ್ಕಾಗಿ ಸಾವು ಅಥವಾ ನೋವನ್ನು ಪರಿಗಣಿಸಲಾಗದು. ನನ್ನ ಅದೃಷ್ಟ ಆ ಸಿಂಹ ಸ್ಪಷ್ಟವಾಗಿ ನನ್ನ ದೇಹವನ್ನೇ ಕೇಳಿರುವುದರಿಂದ ನನಗೆ ಒಳಿತೇ ಆಯಿತು. ಬದಲಾಗಿ ಯಾರದ್ದಾದರು ಪ್ರಜೆಗಳ ಶರೀರ ಕೇಳಿದ್ದರೆ ನನಗೆ ಬಹಳ ಸಂಕಟವಾಗುತ್ತಿತ್ತು. ನೀವು ನಿಮ್ಮ ಮಗನನ್ನು ಕ್ಷೇಮವಾಗಿ ಪಡೆಯುವಲ್ಲಿ ಬೇಕಾದ ನನ್ನ ಶರೀರಾರ್ಧ ಭಾಗವನ್ನು ಸಂತೋಷದಿಂದ ನೀಡುತ್ತೇನೆ. ನೀವು ಯಾವುದೇ ರೀತಿಯ ಚಿಂತೆ, ವ್ಯಥೆ, ಅನುಮಾನ ಪಡದಿರಿ” ಎಂದು ಧೈರ್ಯದ ಮಾತನ್ನು ಹೇಳಿದನು.











































