ಭಾಗ – 575
ಭರತೇಶ ಶೆಟ್ಟಿ, ಎಕ್ಕಾರು

ಇತ್ತ ಮಯೂರಧ್ವಜ ಯಾಗಶಾಲೆಯಿಂದ ಹೊರಡುವ ಮೊದಲು ಇರುವ ವಿಪ್ರರಿಗೆ ದಾನ ಧರ್ಮಗಳನ್ನು ನೀಡುತ್ತಾ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾನೆ. ದಾನ ಧರ್ಮಗಳನ್ನು ನೀಡಿ ನಂತರ ತನ್ನ ದೇವರು ಕೃಷ್ಣನನ್ನು ಕಾಣಲು ಹೊರಡುವ ಆತುರದಲ್ಲಿದ್ದಾನೆ.
ಹೀಗಿರಲು ಅತ್ತ ರಣರಂಗದಿಂದ ಶ್ರೀಕೃಷ್ಣ ಪರಮಾತ್ಮನೇ ಅರ್ಜುನನ ಜೊತೆ ಮಯೂರಧ್ವಜನ ಪಟ್ಟಣದತ್ತ ಹೊರಟು ಬರತೊಡಗಿದನು. ಮಯೂರಧ್ವಜನ ರತ್ನಪುರದ ಸಮೃದ್ಧ ಸಿರಿ ಸೊಬಗನ್ನು ಸವಿಯುತ್ತಾ ಕೃಷ್ಣಾರ್ಜುನರು ಗುರು ಶಿಷ್ಯರಂತೆ ಬ್ರಾಹ್ಮಣ ವೇಷದಲ್ಲಿ ನಗರ ಪ್ರವೇಶ ಮಾಡಿ ನೇರವಾಗಿ ಯಾಗಶಾಲೆಯತ್ತ ಬಂದು ಸೇರಿದರು. ಮಯೂರಧ್ವಜ ವಿಪ್ರರಿಗೆ ದಾನಗಳನ್ನು ನೀಡುವುದರಲ್ಲಿ ವ್ಯಸ್ಥನಾಗಿದ್ದಾನೆ. ಮಹಾರಾಜ ಮಯೂರಧ್ವಜನನ್ನು ನೋಡಿ ಬಂದಂತಹ ಗುರುಶಿಷ್ಯರು “ಮಹಾರಾಜನಿಗೆ ಸುಖವಾಗಲಿ, ಶುಭವಾಗಲಿ” ಎಂದು ಆಶೀರ್ವಾದ ಮಾಡಿದರು.
ಮಯೂರಧ್ವಜ ತಿರುಗಿ ನೋಡಿದರೆ ಓರ್ವ ವೃದ್ಧ ಬ್ರಾಹ್ಮಣ, ಜೊತೆಗೊಬ್ಬ ತರುಣ ವಿಪ್ರನಿದ್ದಾನೆ. ನೋಡುವಾಗ ತಂದೆ ಮಗನೋ ಅಥವಾ ಗುರು ಶಿಷ್ಯರೋ ಎಂಬಂತೆ ಕಾಣಿಸುತ್ತಿದ್ದಾರೆ. ಪರಿಚಿತ ಮುಖಗಳಲ್ಲ – ಈ ಇಬ್ಬರನ್ನು ಈವರೆಗೆ ನೋಡಿದ ಹಾಗಿಲ್ಲ. ಅಂದರೆ ಪರವೂರಿನಿಂದ ಬಂದವರು ಇರಬಹುದೇ? ಹೀಗೆ ತರ್ಕಿಸತೊಡಗಿದ. ಆದರೂ ಬಂದವರು ವಿಪ್ರರು, ಮೇಲಾಗಿ ವೃದ್ಧರು ಔಪಚಾರಿಕವಾಗಿ ಅವರಿಗೆ ಉಚಿತಾಸನ ನೀಡಿ ಕುಳ್ಳಿರಿಸಿದನು. ಈಗ ಮಯೂರಧ್ವಜನಿಗೊಂದು ಗೊಂದಲ ಉಂಟಾಯಿತು, ಬ್ರಾಹ್ಮಣರಾದವರು ಅವರಿಗೆ ವಂದಿಸಿ ನಮಸ್ಕರಿಸದೆ ಯಾರಿಗೂ ಆಶೀರ್ವಾದ ಮಾಡುವ ಕ್ರಮವಿಲ್ಲ. ಆದರೆ ಇವರು ನಾನು ನಮಸ್ಕರಿಸದೆಯೇ ಆಶೀರ್ವದಿಸಿದರಲ್ಲ. ಯಾಕೆ ಈ ರೀತಿ ಮಾಡಿದ್ದಾರೆ? ಎಂಬ ಕಳವಳ ಉಂಟಾಯಿತು. ಸಂದೇಹ ಬೇಡ ಅವರಲ್ಲೇ ಕೇಳಿ ಪರಿಹರಿಸಿಕೊಳ್ಳೋಣ ಎಂದು ತೀರ್ಮಾನಿಸಿ ಅವರನ್ನೇ ಪ್ರಶ್ನೆ ಮಾಡಲು ಮುಂದಾದ. “ಸ್ವಾಮೀ ನೀವೀರ್ವರೂ ಮಹಾತ್ಮರಂತೆ ಕಾಣಿಸುತ್ತಿದ್ದೀರಿ. ನಿಮ್ಮ ಮುಖದ ವರ್ಚಸ್ಸು ತೇಜಸ್ಸು ನೋಡುವಾಗಲೇ ಆ ರೀತಿಯ ಭಾವನೆ ಮೂಡುತ್ತಿದೆ. ಆದರೆ ನಾನು ನಿಮ್ಮನ್ನು ಇಂದಿನವರೆಗೆ ಎಲ್ಲೂ ನೋಡಿದ ಮುಖ ಪರಿಚಯದ ನೆನಪಾಗುತ್ತಿಲ್ಲ. ಹಾಗಾಗಿ ನೀವು ಯಾವ ಊರಿನವರು? ತಿಳಿಸಬಹುದೇ! ಇನ್ನೂ ಒಂದು ಜಿಜ್ಞಾಸೆ ಮನದಲ್ಲಿ ಮೂಡಿದೆ ಏನೆಂದರೆ ನಾನು ಕ್ಷತ್ರಿಯ ಕುಲದವನು, ಮೊದಲಾಗಿ ವರ್ಣೋತ್ತಮರೂ, ಬ್ರಾಹ್ಮಣರೂ ಆದ ನಿಮಗೆ ನಾನೇ ವಂದಿಸಬೇಕು. ಹಾಗೆ ನಾನು ವಂದಿಸಿದ ನಂತರ ನೀವು ಆಶೀರ್ವದಿಸಬೇಕಿತ್ತು. ಹಾಗಾಗದೆ ನಾನು ನಿಮಗೆ ನಮಸ್ಕರಿಸುವ ಮೊದಲೇ ನೀವು ಹರಸಿ ಆಶೀರ್ವಾದ ನೀಡಿದ್ದೀರಿ. ನನಗೇಕೋ ಗೊಂದಲವಾಯಿತು ಹಿರಿಯರಾದ ವಿಪ್ರರು ಮಾಡಬಾರದ್ದನ್ನು ಮಾಡಿದರೋ ಎಂಬ ಹಾಗೆ. ದ್ವಿಜೋತ್ತಮರೇ ನಾನು ಈ ರೀತಿ ಕೇಳಿದೆ ಎಂದು ಅನ್ಯಥಾ ಭಾವಿಸಬಾರದು” ಎಂದು ವಿನಮ್ರತೆಯಿಂದ ಕೇಳಿದನು.
ಆಗ ಆ ವೃದ್ಧ ಬ್ರಾಹ್ಮಣ “ರಾಜನೇ! ನಿನ್ನ ತರ್ಕ ಸಾಧುವೇ ಆಗಿದೆ. ನಮಸ್ಕಾರ ಸ್ವೀಕರಿಸುವುದು ಮತ್ತು ನಂತರ ಆಶೀರ್ವಾದ ನೀಡುವುದು ಸಂಸ್ಕಾರ. ಆದರೆ ಆಪತ್ಕಾಲದಲ್ಲಿ ವಂದಿಸದಿದ್ದರೂ ಆಶೀರ್ವಾದ ಮಾಡಿದರೆ ಶಾಸ್ತ್ರ ದೋಷವಾಗದು” ಎಂದು ಹೇಳಿದರು.
ಆಗ ಮಯೂರಧ್ವಜನಿಗೆ ಆ ವೃದ್ಧ ಬ್ರಾಹ್ಮಣನ ಮಾತು ಒಗಟಿನಂತಾಯಿತು. ಒಂದೂ ಅರ್ಥವಾಗಲಿಲ್ಲ. “ಬ್ರಾಹ್ಮಣೋತ್ತಮರೇ! ಆಪತ್ಕಾಲವೇ? ಯಾರಿಗೆ? ಎಲ್ಲಿ? ಹೇಗೆ? ಅಂತಹ ಆಪತ್ತು ಒಂದು ವೇಳೆ ನಿಮ್ಮ ಅವಗಾಹನೆಗೆ ಬಂದಿದ್ದರೆ, ಪರಿಹಾರವೇನೆಂದು ಸೂಚಿಸಿದರೆ ತಕ್ಷಣ ಅದಕ್ಕೆ ವ್ಯವಸ್ಥೆ ಮಾಡಿಸುತ್ತೇನೆ. ಏನೆಂದು ವಿವರವಾಗಿ ತಿಳಿಸಬಹುದೇ?” ಎಂದು ಕೇಳಿದನು.
ಆಗ ಆ ವೃದ್ಧ ಬ್ರಾಹ್ಮಣ ಕಣ್ಣೀರಿಡುತ್ತಾ ತನ್ನ ಕಥೆ ಹೇಳ ತೊಡಗಿದ “ಮಹಾರಾಜನೇ, ಸಂಕಷ್ಟಕ್ಕೊಳಗಾಗಿರುವ ಈ ವೃದ್ಧನ ಸಮಸ್ಯೆಯನ್ನು ಕೇಳಿರುವುದಕ್ಕೆ ಧನ್ಯನಾಗಿರುವೆ. ನಾನು ಈ ದೇಶದವನಲ್ಲ. ದೂರದ ಧರ್ಮಪುರ ಎಂಬ ದೇಶದವನು. ನನ್ನ ಹೆಸರು ಕೃಷ್ಣಶರ್ಮ ಎಂಬುವುದಾಗಿ. ಸಂಸಾರಸ್ಥನಾಗಿರುವ ನನಗೊಬ್ಬ ಮಗನಿದ್ದಾನೆ. ಪ್ರಾಯಪ್ರಬುದ್ಧನಾದ ಆತನಿಗೆ ವಿವಾಹ ಸಂಸ್ಕಾರ ಮಾಡಿಸುವುದು ನನ್ನ ಕರ್ತವ್ಯವಲ್ಲವೇ? ಹಾಗಾಗಿ ಇಲ್ಲೇ ಸಮೀಪದ ಸತ್ಯಶೀಲ ಎಂಬ ವಿಪ್ರೋತ್ತಮನ ಮಗಳನ್ನು ನೆಂಟಸ್ಥಿಕೆಯಾಗಿ ಕೇಳುವುದಕ್ಕೆ ನನ್ನ ಮಗನನ್ನೂ ಜೊತೆಗಿರುವ ಈ ಶಿಷ್ಯನನ್ನೂ ಕರೆದುಕೊಂಡು ಇತ್ತ ಬಂದೆನು. ಹಾಗೆ ಬರ ಬರುತ್ತಾ ಈ ಊರಿನ ಹೊರಗೆ ಕಾಡಿನ ದಾರಿಯಾಗಿ ಸಾಗುತ್ತಿರುವಾಗ ಒಂದು ಸಿಂಹ ನಮಗೆದುರಾಯಿತು. ನೋಡುತ್ತಿದ್ದಂತೆಯೇ ನಮ್ಮ ಮೇಲೆ ಆಕ್ರಮಣ ಮಾಡಿದ ಸಿಂಹ ನನ್ನ ಮಗನನ್ನು ಹಿಡಿದೇ ಬಿಟ್ಟಿತು. ಕಾಡ ಮೃಗವಾದರೂ, ನಮ್ಮ ಮಾತು, ಭಾಷೆ ಅದಕ್ಕೆ ಬರುತ್ತದೋ ಇಲ್ಲವೋ! ಆದರೂ ನಾನೂ ಕೂಗಿ ನನ್ನ ಮಗನನ್ನು ಕೊಲ್ಲಬೇಡ ಮೃಗರಾಜನೇ. ನನಗೊಬ್ಬನೇ ಮಗನಿರುವುದು. ಆತನನ್ನು ಬಿಟ್ಟು ಬಿಡು” ಎಂದು ಗೋಗರೆದು ಬೇಡಿಕೊಂಡೆ. ವಿಸ್ಮಯವೆಂದರೆ ಕಾಡು ಪ್ರಾಣಿಯಾದ ಸಿಂಹಕ್ಕೆ ಮಾತು ಬರುತ್ತಿದ್ದು, ನನಗೂ ವಿಚಿತ್ರವಾಯಿತು. ಆ ಸಿಂಹ ನನ್ನ ಮಗನನ್ನು ಬಿಟ್ಟು ಕೊಡಬೇಕಾದರೆ, ಆತನ ಪ್ರಾಣದ ಬದಲಾಗಿ ಏನು ಕೇಳಿದೆಯೋ ಅದೇ ಈಗ ನನ್ನ ಸಂಕಟದ ಕಾರಣವಾಗಿದೆ” ಎಂದು ಹೇಳುತ್ತಾ ಅಳತೊಡಗಿದ.
ಮಹಾರಾಜ ಮಯೂರಧ್ವಜ ಸಂತೈಸುತ್ತಾ “ವಿಪ್ರೋತ್ತಮರೇ ದುಃಖಿಸಬೇಡಿ. ಆ ಸಿಂಹದ ಬೇಡಿಕೆ ಏನಿದೆ ತಿಳಿಯಪಡಿಸಿ. ಪರಿಹರಿಸುವ ಪ್ರಯತ್ನ ಮಾಡೋಣ” ಎಂದು ವಾಗ್ದಾನ ನೀಡಿದ.











































