29.4 C
Udupi
Thursday, June 18, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 555

ಭರತೇಶ್ ಶೆಟ್ಟಿ, ಎಕ್ಕಾರು

ಸಂಚಿಕೆ ೫೫೫ ಮಹಾಭಾರತ

ಅರ್ಜುನನ ಕ್ರೋಧಾವೇಷಕ್ಕೆ ಸಮರ್ಪಕ ಕಾರಣವಿದೆ. ಭೀಷ್ಮ, ದ್ರೋಣ,ಅಶ್ವತ್ತಾಮ, ಕರ್ಣಾದಿಗಳಂತಹ ಮಹಾನ್ ಪ್ರತಾಪಿಗಳೆದುರು ಕಾದಾಡಿ ಪರಾಕ್ರಮಿ ಎಂದೆಣಿಸಿಕೊಂಡಿದ್ದ ಪಾರ್ಥನಿಗೆ ಈ ಅಶ್ವಮೇಧ ದಿಗ್ವಿಜಯ ಸವಾಲಾಗಿದೆ. ಮೊದಲು ಚಂಪಕಾವತಿಯ ಸುಧನ್ವನೂ, ಈಗ ಮಣಿಪುರದ ಬಾಲಕ ಬಬ್ರುವಾಹನ ಕಬ್ಬಿಣದ ಕಡಲೆಯಾಗಿ ಪರಿಣಮಿಸತೊಡಗಿದ್ದಾರೆ. ಬಾಣಪ್ರಯೊಗದಲ್ಲಿ, ಪರಿಣತೆಯಲ್ಲಿ, ಬಿಲ್ಗಾರತನದಲ್ಲಿ, ತಂತ್ರ, ಬಿನ್ನಾಣದಲ್ಲಿ , ಹೆಮ್ಮೆ, ಬಿಂಕದಲ್ಲಿ, ತಾಳ್ಮೆ,ತಾಳಿಕೆಯಲ್ಲಿ, ಹೆಚ್ಚಿನ ತ್ರಾಣದಲ್ಲಿ, ಜಯದಲ್ಲಿ, ಚಮತ್ಕೃತಿಯಲ್ಲಿ, ಶೌರ್ಯ, ಅದಟಿನಲ್ಲಿ, ವೀರತ್ವದಲ್ಲಿ ವೇಗ, ಭಾರಣೆಯಲ್ಲಿ, ಹಸ್ತಲಾಘವದಲ್ಲಿ, ಪ್ರಯೋಗ, ಸಂಧಾನದಲ್ಲಿ, ವರಸೆಯ ನೈಪುಣ್ಯದಲ್ಲಿ, ಪರಾಕ್ರಮದ ಹಠದಲ್ಲಿ ಈ ಬಬ್ರುವಾಹನ ಸಮದಂಡಿಯಾಗಿ ನಿಂತು ಮೀರಿಸಲಾಗದ ಕಲಿಯಾಗಿ ಒಮ್ಮಿಂದೊಮ್ಮೆಗೆ ಏರ ತೊಡಗಿದ್ದಾನೆ.

ಆತನ ಸೇನೆಯೂ ಅತಿ ಭಯಂಕರ ಉಲ್ಲಾಸದ ನಿರ್ಭೀತ ಯುದ್ಧ ನಿರತವಾಗಿದೆ. ಮಾವುಟಿಗರು ಮೇಲೆಬಿದ್ದು ಆನೆಯನ್ನು ನೂಕಿ ಭಟರನ್ನು ತಳಿಸುತ್ತಿದ್ದಾರೆ. ರಾವುತರು ಕುದುರೆಯನ್ನು ಚಮಕಾಯಿಸಿ ಓಡಿಸುತ್ತಿದ್ದಾರೆ. ರಣರಂಗದಲ್ಲಿ ಚಟುಲ-ಚುರುಕಾದ ಪಟುಭಟರು, ರಥಿಕರು ತಮ್ಮನಡೆಯಿಂದ ಯುದ್ಧದ ನಾಟ್ಯದಂತಿರುವ ನಡಿಗೆಯ ಶಬ್ದವನ್ನು ಕೇಳಿಸುತ್ತಿದ್ದಾರೆ. ಪೌರುಷದ ಪಂಥವನ್ನೇ ಮೆರೆಸುತ್ತಾ ಭ್ರಮೆಗೊಳಗಾಗುವಂತೆ ಮಾಡುತ್ತಿದ್ದಾರೆ. ಕಾಲುಭಟರು ಶತ್ರುಗಳನ್ನು ಬೀಳಿಸಿ, ಕತ್ರಿಸುತ್ತಾ ತುಳಿದೊಡುತ್ತಿದ್ದಾರೆ. ಆಯುಧಗಳ ಹೋರಾಟದಲ್ಲಿ ಖಣಿ ಕಟಿಲ ರಭಸದಿಂದ ಹೋರಾಡಿ ತಲೆಯನ್ನು ಕಡಿಯುತ್ತಿದ್ದಾರೆ. ಯಾಕಿಂತ ವಿಸ್ಮಯಗಳು ನನಗೆದುರಾಗಿವೆ. ಎಂತೆಂತಹ ಮಾಯಾ, ಸಮ್ಮೋಹನ ಯುದ್ಧಗಳನ್ನು ನಾನು ಈವರೆಗೆ ಮಾಡಿದ್ದೇನೆ. ಆದರೂ ಇಂದೇಕೆ ಈ ರೀತಿ ಪರಿಭವ ನನಗಾಗುತ್ತಿದೆ ಎಂದು ಅರ್ಜುನ ಕಂಗಾಲಾಗುವ ಸ್ಥಿತಿ ಎದುರಾದರೂ, ಸಾವರಿಸಿಕೊಂಡನು. ಶ್ರೀಕೃಷ್ಣಾ! ಎಂದು ಮನಸಾರೆ ಸ್ಮರಿಸಿ ರಕ್ತ ಬಿಸಿಯೇರಿಸಿಕೊಂಡು ಉಗ್ರಾವತಾರ ತಳೆದು ಅತಿವೇಗದ ಯುದ್ಧ ಮಾಡತೊಡಗಿದರೂ ಏನೂ ವ್ಯತ್ಯಾಸವಾಗುತ್ತಿಲ್ಲ.

“ಎಲಾ ಪಾರ್ಥಾ! ಕೌರವರ ಬಲದಲ್ಲಿ ಅಷ್ಟು ವೀರರ ಮೇಲೆ ಬಿಟ್ಟಂಥ ಬಾಣಗಳು ನನ್ನ ಮೇಲೆ ಸಾಗಲರಿಯದಾದವೇ? ಇಂದ್ರಕೀಲಕದಲ್ಲಿ ಸ್ವಾಮಿ ಪರಮೇಶ್ವರನನ್ನು ಕುರಿತು ಹನ್ನೆರಡು ವರುಷ ತಪಸ್ಸು ಮಾಡಿ, ಪಡೆದಂಥ ಪಾಶುಪತ ಬಾಣವನ್ನು ತೊಡುವಂಥವನಾಗು. ಈ ಸಾಮಾನ್ಯ ಬಾಣಗಳಿಂದೇನೂ ಆಗದು. ಅದೇ ಬಾಣವನ್ನು ತೊಡುವಂಥವನಾಗೋ ಮಹಾಮಹಿಮ ಅರ್ಜುನಾ” ಎಂದು ಮೂದಲಿಸುವಂತೆ ಬಬ್ರುವಾಹನ ಅಬ್ಬರಿಸಿದ.

“ಹೇ ಬಬ್ರುವಾಹನಾ! ಹುಚ್ಚು ಹಿಡಿದವನಂತೆ ಹೆಚ್ಚು ಹಾರಾಡಬೇಡ. ಪರಮೇಶ್ವರನಿಂದ ಪಡೆದಂಥ ಪಾಶುಪತಾಸ್ತ್ರವನ್ನೇ ತೊಡಬೇಕೇನೋ? ಆದರೂ ಚಿಂತೆ ಇಲ್ಲಾ ಅದೇ ಬಾಣವನ್ನು ತೊಡುತ್ತಾ ಇದ್ದೇನೆ. ಸೈರಿಸಿಕೊಳ್ಳಬಲ್ಲೆಯಾ ನೀನು? ಹೇ ಪೋರಾ! ತ್ರಿಯಾಂಬಕನ, ಉರಿಗಣ್ಣಿನಲ್ಲಿ ಹೊರಡುವಂಥ ಅಗ್ನಿಜ್ವಾಲೆಯ ಕಿಡಿಗಳನ್ನು ಉಗುಳುತ್ತಾ ಬರುವ ಈ ಪಾಶುಪತಾಸ್ತ್ರ ನಿನ್ನ ಶರೀರವನ್ನು ಸುಮ್ಮನೆ ಬಿಟ್ಟೀತೇ? ಅಂದು ಮನ್ಮಥನ ಶರೀರವನ್ನು ದಹಿಸಿ ಬೂದಿ ಮಾಡಿದಂತಹ ಬಾಧೆಯನ್ನು ನೀಡದೆ ಬಿಡದು. ಅಧಿಕ ಪ್ರಸಂಗಿಯಂತೆ ಏನೇನೋ ಬಡಬಡಿಸುತ್ತಿರುವೆ ಎಂದ ಮಾತ್ರಕ್ಕೆ ಮಹಾಸ್ತ್ರವನ್ನು ಪ್ರಯೋಗಿಸಲಾರೆ. ನಿನ್ನ ಅಲ್ಪ ಯೋಗ್ಯತೆಗೆ ಮಹಾದೇವನ ಮಹಾಶಸರವೇಕೆ? ಈಗ ನಾನು ಬಿಡುವ ಸಾಮಾನ್ಯ ಬಾಣಗಳನ್ನು ಖಂಡಿಸಿ ಮೊದಲು ನಿಲ್ಲುವಂಥವನಾಗು ಕುಲಹೇಡಿಯೇ” ಎಂದು ನಿಂದಾತ್ಮಕ ಸ್ವರದಲ್ಲಿ ಪ್ರತ್ಯುತ್ತರ ನೀಡಿದ ಅರ್ಜುನ.

“ಪಾರ್ಥ ಮಹಾಶಯನೇ, ನಿನ್ನ ಸಂಪೂರ್ಣ ವೀರಗಡಣವೇ ಸೋತು ಸತ್ತು ಬಿದ್ದರೂ ನಿನ್ನ ಕೊಬ್ಬು ಇನ್ನೂ ಕರಗಿಲ್ಲವೇ? ಹೇ ಮರುಳನೇ, ನನ್ನ ತಾಯಿಯಾದ ಚಿತ್ರಾಂಗದೆ ಪರಮ ಪತಿವ್ರತೆ ಎಂಬುವು ತಿಳಿಯದೇ ಜರಿದೆಯಾ? ಜಾರೆ ಎಂದೆಯಾ? ಆವಾಗಲೇ ನಿನ್ನ ಶಕ್ತಿ ಕುಂದಿ ಹೋಗಿಯಾಗಿದೆ. ಆ ಪಾತಕದ ಪರಿಣಾಮವೇ ನಿನ್ನ ಪ್ರಭಾವ ಕಳೆಗುಂದುತ್ತಾ ಸೋಲು ಸಂಭವಿಸುತ್ತಿದೆ. ಮಾತ್ರವಲ್ಲ ಕೈಗುಂದುತ್ತಾ ಇದೆ. ಹೇ ಮಹಿಮಾನ್ವಿತನೇ ಈಗಲೂ ಮತ್ತೂ ಮತ್ತೂ ಹೇಳುತ್ತೇನೆ ಕೇಳುವಂಥವನಾಗೋ ಅರ್ಜುನಾ… ಹಿಂದೆ ಕೌರವರನ್ನೆಲ್ಲಾ ಗೆದ್ದಿದ್ದೇನೆಂಬ ಅಹಂಕಾರದ ಗರ್ವ ನಿನ್ನ ತಲೆಗಡರಿದೆ. ಯಾರ ಬಲದಿಂದ ಗೆದ್ದಿರುವೆ ಎಂಬ ಸತ್ಯ ಮರೆತು ಮೆರೆಯುತ್ತಿರುವೆ. ಶ್ರೀ ಕೃಷ್ಣಮೂರ್ತಿಯ ಸಾರಥ್ಯದಿಂದ ಜಯಸಾಧನೆ ಸಾಧ್ಯವಾಗಿದೆ ಹೊರತು ಅದೂ ಅಸಾಧ್ಯವೇ ಆಗಿರುತ್ತಿತ್ತು. ಎಲವೋ ಅರ್ಜುನಾ! ನಿನ್ನ ಸ್ವಾಮಿಯಾದ ಶ್ರೀ ಕೃಷ್ಣಮೂರ್ತಿಯನ್ನು ಮನದಲ್ಲಿ ಧ್ಯಾನಿಸಿಕೊಂಡು, ಭಕ್ತಿಯಿಂದ ಪ್ರಾರ್ಥಿಸಿ ನೋಡು. ಆ ಮೇಲೆ ಯುದ್ಧಕ್ಕೆ ನಿಲ್ಲು. ಆಗ ಏನಾದರೂ ಆಗಿ ಹೋದೀತೇ ಹೊರತು ನೀನೊಬ್ಬನಿಂದ ಏನೂ ಸಾಗದು. ನೀನು ಬಾಗಿ ಬೀಳುವ ಬಾಳೆಯಂತಾಗಿರುವೆ. ಉರುಗೋಲು ಕೃಷ್ಣದೇವನಿಲ್ಲದೆ ನೇರ ನಿಲ್ಲಲಾರೆ ಎಂಬ ಸತ್ಯದ ಸತ್ವ ಅರಿತುಕೋ” ಎಂದು ಎಚ್ಚರಿಸಿದನು.

ಅರ್ಜುನ ಕೋಪ ವಿಕೋಪಕ್ಕೇರಿತು. “ಎಲವೋ ಹುಡುಗನೇ! ನಾಲಗೆ ಹೊರಳುತ್ತದೆ ಎಂದು ಮಾತನಾಡುತ್ತಿರುವೆಯಾ? ಇಲ್ಲ ಏನೇನೋ ಒದರಿದರೆ ನಾನು ಹೆದರಿ ಓಡುವೆ ಎಂದು ಗ್ರಹಿಸಿರುವೆಯಾ? ಅಂತಹ ದುರ್ಬಲನಲ್ಲ ಈ ಪಾರ್ಥ. ಯುದ್ಧವಿನ್ನೂ ಮುಗಿದಿಲ್ಲ. ಈವರೆಗೆ ತುಸು ಹೊತ್ತು ಕೈ ಮೇಲಾಗಿದೆ ಎಂದು ಅದೇ ಮಹತ್ಸಾಧನೆಯೆಂಬಂತೆ ಹದ್ದು ಮೀರಿ ವ್ಯವಹರಿಸದಿರು. ನನಗೆ ಗೆದ್ದೂ ಗೊತ್ತಿದೆ, ವಿಷಮ ಸ್ಥಿತಿಯಲ್ಲಿ ಸೋಲಾದಾಗ ಚಿನ್ಮಯ ಸಚ್ಚಿದಾನಂದ ಶ್ರೀಕೃಷ್ಣನ ಕರುಣೆಯಿಂದ ಗೆದ್ದೂ ಗೊತ್ತಿದೆ. ಭಕ್ತಿಯ ಪಾಠ ಪ್ರವಚನ ನಿನ್ನಿಂದ ತಿಳಿದು ಕಲಿಯುವ ದುಸ್ಥಿತಿ ಈ ವರೆಗೆ ಒದಗಿಲ್ಲ.” ಎಂದು ಘರ್ಜಿಸಿದನು.

“ಹೇ ಮಹಿಮಾನ್ವಿತನೇ! ಈ ಮೊದಲು ಆಗಿ ಹೋಗಿರುವ ಭಾರತ ಯುದ್ಧದಲ್ಲಿ ದ್ರೋಣ ಭೀಷ್ಮ, ಕರ್ಣ, ಕೌರವರು, ಸೈಂಧವರನ್ನು ಗೆದ್ದಿರುವೆ ಎಂದು ಭ್ರಮೆಗೊಳಗಾಗಿರುವೆಯಲ್ಲವೇ? ಅದರಲ್ಲಿ ನಿನ್ನ ಪರಾಕ್ರಮ ಏನು ಇಲ್ಲವೋ ಪುಣ್ಯಾತ್ಮಾ! ಹಾಗೆ ಭಾವಿಸಿದ್ದರೆ ನಿನ್ನಂತಹ ಅಧಮರು ಈ ಲೋಕದಲ್ಲಿ ಯಾರೂ ಇರಲಿಕ್ಕಿಲ್ಲ. ನೀನು ಬಹು ಪರಾಕ್ರಮಶಾಲಿಯೆಂತಲೂ, ಮೂರು ಲೋಕಕ್ಕೆ ಗಂಡನೆಂದೂ, ಈ ಭೂಮಿಯಲ್ಲಿ, ಏನೂ ತಿಳಿಯದ ಮೂರ್ಖ ಜನರು, ಆಡುತ್ತಿದ್ದಾರೆ. ಹಾಗಂದ ಮಾತ್ರಕ್ಕೆ ಅದೇ ಸತ್ಯವೆಂದೇನಲ್ಲ. ಶ್ರೀ ಕೃಷ್ಣನ ಸಹಾಯವಿಲ್ಲದೆ ಅದ್ಯಾವ ಜಯ ಪಡೆದಿರುವೆ ಹೇಳುವಂಥವನಾಗು ಮೂಢನೇ? ಆ ನಿನ್ನ ಭ್ರಮೆಯೇ ನಿಜವಾಗಿದ್ದರೆ ಪರಾಕ್ರಮ ನನಗೂ ತೋರಿಸು, ಎದುರಿಸಲು ಸಿದ್ಧನಾಗಿದ್ದೇನೆ” ಎಂದು ಹೇಳಿ ಶರ ಸಂಧಾನ ಮಾಡಿದನು.

ಪಾರ್ಥನಿಗೆ ಅಸಹನೀಯ ಕೋಪ ಮೈದಳೆದು ಅತ್ಯುಗ್ರನಾಗಿ ಯುದ್ಧ ಮುಂದುವರಿಸಿದನು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page