ಭಾಗ – 554
ಭರತೇಶ ಶೆಟ್ಟಿ , ಎಕ್ಕಾರು

ಮಾಹಿಷ್ಮತಿಯ ಮಹಾರಾಣಿ ಜ್ವಾಲಾ ಸಂತೋಷದ ಪರಾಕಾಷ್ಟೆ ತಲುಪಿದ್ದಾಳೆ. ಉಲೂಪಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿತ್ತಾ ” ನನ್ನ ಬದುಕಿನ ಪರಮಾನಂದದ ದಿನವಿಂದು. ಕಾರಣವೇನು ಬಲ್ಲೆಯಾ? ತನ್ನದ್ದಾದ ಮಾಹಿಷ್ಮತಿ ಸಾಮ್ರಾಜ್ಯದ ಮಹಾರಾಜ ನೀಲಧ್ವಜ ಆತನ ಪತ್ನಿಯಾಗಿರುವ ನನ್ನ ಮಾತನ್ನೇ ಧಿಕ್ಕರಿಸಿ ಆ ಅರ್ಜುನನಿಗೆ ಶರಣಾಗಿ ಸ್ವಾಭಿಮಾನವನ್ನೇ ಬಲಿ ನೀಡಿದ್ದಾನೆ. ಪುರದ ಮಾನ ಕಾಯುವ ಯಜಮಾನನೇ ಹಾಗೆ ಮಾಡಿದರೆ ನಾನು ಬಿಡುವವಳೇ? ಈಗ ಅರ್ಜುನನೇ ನನ್ನ ತಂತ್ರಕ್ಕೆ ಬಲಿಪಶುವಾಗಿದ್ದಾನೆ. ಗಂಗೆ ಯಾರು? ಏನು? ಎಷ್ಟು? ಎಂಬ ಸತ್ಯ ಅರಿಯದ ಮೂಢಳು ನಾನಲ್ಲ. ನನ್ನ ಕಾರ್ಯ ಸಾಧನೆಗೆ ಬೇಕಾಗಿ ಅವಳನ್ನು ಕೆಣಕಿದೆ. ಪರಿಣಾಮ ಶಾಪಗ್ರಸ್ಥನಾಗಿ ಸಾಯಲಿರುವವನು ಆ ಅರ್ಜುನ. ಗಂಗೆಯ ಶಾಪದಂತೆ ಆ ಅರ್ಜುನನ್ನು ಕೊಲ್ಲುವ ಆತನ ಮಗನೆಲ್ಲಿದ್ದಾನೆ ಎಂದು ಮೊದಲು ಹುಡುಕಬೇಕು. ನಂತರ ಆ ಮಗನ ಕೈಯಿಂದಲೇ ಅರ್ಜುನನ ಮರಣವನ್ನು ಕಾಣಲು ಕಾಯಬೇಕು. ಅದು ನನ್ನ ಪಾಲಿಗೆ ಜೀವನಶ್ರೇಷ್ಠ ಕ್ಷಣವಾಗಲಿದೆ. ಅದಕ್ಕಾಗಿ ಅರ್ಜುನನ ಮಗನನ್ನು ಹುಡುಕುತ್ತಾ ಸಂತೋಷದಿಂದ ಹೊರಟವಳು ನಾನು. ನನ್ನ ಹಗೆ ತೀರಿಸಿ ಆ ಪಾರ್ಥನ ಹೊಗೆ ಕಾಣಲು ಕಾತರಿಸುತ್ತಿದ್ದೇನೆ” ಎಂದಳು.
ಉಲೂಪಿಗೆ ವಿಷಯವೆಲ್ಲಾ ಅರ್ಥವಾಯಿತು. ಅಶ್ವಮೇಧ ಯಾಗದ ಕುದುರೆ ಮಾಹಿಷ್ಮತಿಯ ಮೇಲೆ ದಿಗ್ವಿಜಯ ಸಾಧಿಸಿದುದರ ಪ್ರತಿಕಾರವೇ ಈ ಜ್ವಾಲಾಳ ನಡೆ. ಮುಂದೇನಾದರು ಕುದುರೆ ಮಣಿಪುರದ ಬಬ್ರುವಾಹನ ಅಥವಾ ನನ್ನ ಪುತ್ರ ಇರಾವಂತನಿಗೆ ಎದುರಾದರೆ!!! ಛೇ ಛೇ!! ಗಂಗೆಯ ಶಾಪದಂತೆ ನನ್ನ ಪತಿಯಾಗಿರುವ ಪಾರ್ಥ ಮಹಾಶಯ ಮಗನ ಕೈಯಿಂದಲೇ ಸಾಯುವ ಸ್ಥಿತಿ ಬಂದು ಹೋದೀತು. ಹಾಗಾಗ ಬಾರದು. ಈ ನೀಚ ಸ್ತ್ರೀ ಇನ್ನು ಬದುಕುಳಿಯಬಾರದು. ಇವಳ ಹಗೆಯ ಸಾಧನೆ ಆಗಬಾರದು. ಅಂದರೆ ಈಕೆ ಸಾಯಲೇ ಬೇಕು. ಹೀಗೆ ಯೋಚಿಸಿದಳು ಉಲೂಪಿ. ಉಲೂಪಿ ನಾಗರಾಜ ಕೌರವ್ಯನ ಮಗಳಲ್ಲವೇ ಆಕೆ ನಾಗಿಣಿ, ತನ್ನ ಸಖಿ ನಾಗ ಕನ್ನಿಕೆಯನ್ನು ಕರೆದು ಈ ದುರುಳೆ ಜ್ವಾಲಾಳ ಬೆನ್ನಟ್ಟಿ ಕಚ್ಚಿ ಸಾಯಿಸುವಂತೆ, ವಿಷ ಜ್ವಾಲೆಯಿಂದ ಸುಟ್ಟು ಕಮರಿ ಕರಟಿ ಹೋಗುವಂತೆ ಮಾಡು ಎಂಬ ಆಜ್ಞೆ ಮಾಡಿದಳು.
ಅಂತೆಯೇ ಉಲೂಪಿಯ ಸಖಿ ಸಂತೋಷದಿಂದ ಪಾರ್ಥ ಪುತ್ರನನ್ನು ಅರಸುತ್ತಾ ಹೊರಟಿದ್ದ ಜ್ವಾಲಾಳನ್ನು ಬೆಂಬತ್ತಿದಳು. ನಾಗಾಲೋಟದಲ್ಲಿ ಸಾಗಿ ಆಕೆಯನ್ನು ಘೋರ ವಿಷದಿಂದ ಕಚ್ಚಿದಳು. ಜ್ವಾಲಾಳಿಗೆ ವಾಸ್ತವ ಅರಿವಾಯಿತು. ಇದು ಸಾಮಾನ್ಯ ಸರ್ಪವಲ್ಲ, ನಾನಿನ್ನು ಬದುಕುಳಿಯಲಾರೆ. ಹಾಗಾದರೆ ನನ್ನ ಕಾರ್ಯ ಸಾಧನೆ ಹೇಗೆ? ಎಂದು ಯೋಚಿಸಿ ಕೂಡಲೇ ತೀರ್ಮಾನಕ್ಕೆ ಬಂದಳು. ಆಕೆಗಿದ್ದ ಸಂಕಲ್ಪ ಶಕ್ತಿಯನ್ನು ವಿನಿಯೋಗಿಸಿ ಸಾಯುವ ಮುನ್ನವೇ ಮರಣೋತ್ತರ ತಂತ್ರವನ್ನು ಯೋಜಿಸಿದಳು. ನಾನು ಸತ್ತರೆ ನನ್ನ ಶರೀರ ದಿವ್ಯ ಶರವಾಗಲಿ. ಆ ಶರ ಪಾರ್ಥ ಪುತ್ರನ ಬತ್ತಳಿಕೆ ಸೇರುವಂತಾಗಲಿ. ಎಂದು ಸಂಕಲ್ಪ ಮಾಡುತ್ತಾ ಪ್ರಾಣ ತ್ಯಾಗ ಮಾಡಿದಳು. ಸತ್ತ ಕೂಡಲೇ ಆಕೆಯ ಶರೀರ ದಹನಗೊಂಡು ದಿವ್ಯ ಬಾಣವಾಗಿ ರೂಪ ಪಡೆಯಿತು. ವ್ಯೋಮದಲ್ಲಿ ಹಾರುತ್ತಾ ಬಬ್ರುವಾಹನನ ಬತ್ತಳಿಕೆ ಸೇರಿತು.
ಹೀಗೆ ಪ್ರತಿಕಾರ ಪೂರಣೆಯ ಸಂಕಲ್ಪದೊಂದಿಗೆ ಮಡಿದ ಜ್ವಾಲಾಳ ಕಾಯ ಇನ್ನೂ ಉಳಿದಿದೆ. ಮಣಿಪುರದರಸು ಬಬ್ರುವಾಹನನ ಬತ್ತಳಿಕೆಯಲ್ಲಿ ಕುಣಿದಾಡುತ್ತಿದೆ. ಪಾರ್ಥನಿಗೂ ಪಾರ್ಥ ಪುತ್ರನಿಗೂ ಘನ ಘೋರ ಸಂಗ್ರಾಮ ಸಾಗುತ್ತಿದೆ.
ಬಬ್ರುವಾಹನನ ಚಮತ್ಕೃತಿಯ ಯುದ್ಧ ವಿಕ್ರಮದಿಂದ ಅರ್ಜುನನು ಕುಂಕುಮಾಭಿಷೇಕಕ್ಕೆ ಒಳಗಾದ ಮೂರ್ತಿಯಂತೆ ಕೆನ್ನೀರ ಓಕುಳಿಯಲ್ಲಿ ತೋಯ್ದು ಹೋಗಿದ್ದಾನೆ. ಬಬ್ರುವಾಹನನ ಸರಳುಗಳು ಸರಸರನೆ ಪಾರ್ಥನ ಶರೀರವನ್ನು ಹೊಕ್ಕು ಜಾಳಂದ್ರದಂತೆ ಕೊರೆದಿವೆ. ಜಾದಿನ ಗಿರಿಯಿಂದ ಇಳಿವ ಮಳೆ ನೀರಿನ ಝರಿಗಳಂತೆ ರಕ್ತಧಾರೆಗಳು ಚಿಮ್ಮಿ ಹರಿದಿಳಿಯುತ್ತಿವೆ. ಪಾರ್ಥನ ಸ್ಥಿತಿಯನ್ನು ನೋಡಿ ಬಬ್ರುವಾಹನ “ಎಲೈ ಅರ್ಜುನಾ! ನೀನು ಕಾಳಭೈರವ ಸ್ವರೂಪಿ ಪಿತಾಮಹ ಭೀಷ್ಮಾಚಾರ್ಯರ ಹತ್ಯೆ ಮಾಡಿದೆ, ದ್ರೋಣ, ಕರ್ಣರಂತಹ ಕ್ಷಾತ್ರ ಕುಲ ತಿಲಕರ ಸಾವಿಗೆ ಕಾರಣನಾದೆ. ಆದರೆ ಅದ್ಯಾವುದೂ ನಿನ್ನ ಏಕಾಂಗಿ ಸಾಹಸದಿಂದ ಸಾಧನೆಯಾದದ್ದಲ್ಲ ಎಂಬ ವಿಚಾರ ಸತ್ಯವಲ್ಲವೇ? ಶ್ರೀಕೃಷ್ಣನ ಅನುಗ್ರಹ ಇಲ್ಲದಿರುತ್ತಿದ್ದರೆ ಅರ್ಜುನ ಎಂಬವನ ಹೇಳ ಹೆಸರಿಲ್ಲದ ದಿನ ಯಾವತ್ತೋ ಆಗಿ ಹೋಗಿರುತ್ತಿತ್ತು. ಯಾವ ಯುದ್ಧವಾದರೂ, ಯಾರೇ ಕಾದಾಡಿ ಮಣಿದು ಮಡಿದರೂ ಪ್ರಯೋಜನವಾದದ್ದು ಮಾತ್ರ ನಿನಗೆ. ಇದೋ ಇಂದು ನಾನು ನಿನ್ನೆದುರಾಗಿ ನಿಂತಿದ್ದೇನೆ. ನೀನೇನೇ ತಂತ್ರ ಹೂಡಿದರೂ ನನ್ನನ್ನು ಮರುಳು ಮಾಡಿಸಲಾರೆ. ಎದ್ದು ಹೋರಾಡಿ ನನ್ನನ್ನು ಗೆಲ್ಲಲಾದೀತೇ ನಿನಗೆ? ಹಾಗೊಮ್ಮೆ ಗೆದ್ದರೆ ನೀನು ನಿಜ ವಿಕ್ರಮಿ ಎಂದು ಹೆಸರಿಟ್ಟು ಕರೆದು ಘೋಷಣೆ ಮಾಡಿಸುವೆ.
ಬಬ್ರುವಾಹನ ಧನುರ್ವಿದ್ಯಾ ಪ್ರದರ್ಶನ ಯಾವ ಮಟ್ಟಕ್ಕೆ ಉತ್ಕೃಷ್ಟವಾಗಿದೆ ಎಂದರೆ, ದಶದಿಕ್ಕುಗಳ ಪರಿಧಿಯನ್ನೇ ಸೀಳಿ ಹಾರಿದವು. ಭೂಮಿಗೆ ನಾಟಿ ಒತ್ತಿದವೋ? ಮೇಲಕ್ಕೆತ್ತುದಿಯೋ ಎಂದು ಸಂದೇಹ ಮಾಡುವಂತಿವೆ. ಇಷ್ಟೆಯೋ! ಹಾರಿಹೋದ ಸರಳುಗಳು ಸಾಗರವನ್ನೇ ಕಲಕಿದವು, ಸೂರ್ಯ ಮಂಡಲದಲ್ಲಿ ಅಲೆದಾಡುತ್ತಿವೆ. ಈಗೆ ಮೂರೂ ಲೋಕಗಳೂ ಬಬ್ರುವಾಹನ ಪರಾಕ್ರಮದಿಂದ ಬೆಕ್ಕಸ ಬೆರಗಾದವು.
ಇಷ್ಟಕ್ಕೇ ನಿಲ್ಲಲಿಲ್ಲ ವೀರ ಕುಮಾರ ಬಬ್ರುವಾಹನನ ಪೌರುಷ. ಅರ್ಜುನನ ಕಣ್ತಪ್ಪಿಸಿ ಹಾರಿದ ಶರಗಳು ಕುದುರೆಗಳ ವಾಘೆಯನ್ನು ಕತ್ತರಿಸಿದವು. ರಥ ಧ್ವಜವನ್ನೂ ಕತ್ತರಿಸಿದವು.
ಬಬ್ರುವಾಹನನ ಸರಳುಗಳು ರಥದ ಮೂತಿಯಲ್ಲಿ ಕುಳಿತಿದ್ದ ಸಾರಥಿಯ ಶಿರಚ್ಚೇಧನ ಮಾಡಿದವು.
ಅರ್ಜುನನೂ ಉಗ್ರ ಸ್ವರೂಪ ತಾಳಿದ್ದಾನೆ.

































