ಭಾಗ -50
ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೫೦ ಮಹಾಭಾರತ
ಪಾಂಡು ನಿರಂತರ ನಿಯೋಗ ಮುಖೇನ ಸಂತಾನಾಪೇಕ್ಷೆಯ ಒತ್ತಾಯ ಮಾಡುತ್ತಲೇ ಬಂದ. ಕುಂತಿಯು ತನ್ನ ಜೀವನದಲ್ಲಿ ದೂರ್ವಾಸರ ಕೃಪೆಯಿಂದ ಉಪದೇಶ ರೂಪದಲ್ಲಿ ಪಡೆದ ಸಂಕಲ್ಪಿತ ದೇವರ ಮುಖೇನ ಸಂತಾನ ಪಡೆಯುವ ಬೀಜ ಮಂತ್ರದ ವಿಚಾರ ನಿವೇದಿಸಿಕೊಂಡಳು. ಆದರೆ ತಾನು ಬಾಲಿಶ ವರ್ತನೆಯಿಂದ ಹಡೆದ ಕರ್ಣನ ಸಂಗತಿ ಗೌಪ್ಯವಾಗಿ ಉಳಿಸಿದಳು. ದೇವತೆಗಳ ಅನುಗ್ರಹದಿಂದ ಸಂತಾನ ಪಡೆಯಬಹುದಾದ ಸತ್ಯ ತಿಳಿದು ಬಹು ಸಂತಸಗೊಂಡನು ಪಾಂಡು. ಹಾಗೆಯೇ ಜಗತ್ತಿಗೆ ಮುಖ್ಯವಾದುದು ಧರ್ಮ. ಆದ್ದರಿಂದ ಧರ್ಮರಾಜನಾದ ಯಮಧರ್ಮನನ್ನೇ ಸಂಸ್ತುತಿಸಿ ಸಂತಾನ ಪಡೆಯೋಣ ಎಂದು ಕುಂತಿಗೆ ಸಲಹೆ ನೀಡಿದ.
ಅದರಂತೆ ಶುಭ ಮುಹೂರ್ತದಲ್ಲಿ ತನ್ನ ಪತಿಯ ಪಾದಗಳಿಗೆ ವಂದಿಸಿ, ಸ್ನಾನ ಮಾಡಿ ಶುಚಿರ್ಭೂತಳಾಗಿ ಯಮಧರ್ಮನನ್ನು ಕುರಿತು ಮಂತ್ರೋಚ್ಚಾರವನ್ನು ಮಾಡಿ ಪ್ರಾರ್ಥಿಸಿದಳು. ಧರ್ಮಾತ್ಮನಾದ, ಧರ್ಮದ ಪ್ರತಿರೂಪ ಧರ್ಮಮೂರ್ತಿಯಾದ ಮಗ ಬೇಕೆಂದು ಸಂಕಲ್ಪ ಮಾಡಿದಳು. ಮಂತ್ರಾಧೀನನಾಗಿ ಆವಾಹಿಸಲ್ಪಟ್ಟ ಯಮಧರ್ಮನು ಹಾಗೆಯೇ ಅನುಗ್ರಹಿಸಿದನು. ಚೈತ್ರಮಾಸದ ಕೃಷ್ಣಪಕ್ಷದ ತದಿಗೆಯ ಗುರುವಾರದಂದು ಶುಭ ಮುಹೂರ್ತದಲ್ಲಿ ಕುಂತಿ ದೇವಿಯ ಗರ್ಭ ಸಂಜಾತನಾಗಿ ಗಂಡು ಮಗುವೊಂದು ಜನಿಸಿತು. ಸಕಾಲದಲ್ಲಿ ಜಾತಕರ್ಮಾದಿ ವಿಧಿ ಪೂರೈಸಿದ ಋಷಿ ಮುನಿಗಳು “ಧರ್ಮವೇ ನಿಮಗೆ ಪುತ್ರನಾಗಿ ಬಂದಿದ್ದಾನೆ. ಮುಂದೆ ಧರ್ಮ ಸಂಸ್ಥಾಪನೆ ಮಾಡಿ ಚಕ್ರವರ್ತಿಯಾಗಿ ಧರಿತ್ರಿಯನ್ನು ಪಾಲಿಸುತ್ತಾನೆ. ಸ್ಥಿತಪ್ರಜ್ಞನಾದ ಈತ ಜೀವನ ಎಂಬ ಯುದ್ಧ ಅಥವಾ ಸಂಘರ್ಷದಲ್ಲಿ ವಿಚಲಿತನಾಗದೆ ಸ್ಥಿರವಾಗಿ ನಿಂತು ವಿವೇಚಿಸಬಲ್ಲವನಾಗುತ್ತಾನೆ.” ಎಂದು ವಿಶ್ಲೇಷಿಸಿ ಯುಧಿಷ್ಠಿರ ಎಂದು ನಾಮಧೇಯ ಸೂಚಿಸಿದರು. ಪರಮಸಂತೋಷಗೊಂಡ ಹೆತ್ತವರು “ಧರ್ಮರಾಜ” ನಾಗಿ ಜನಿಸಿದ ಮಗುವಿನ ಬಗ್ಗೆ ಬಹಳಷ್ಟು ಸಂಭ್ರಮ ಭಾವ ತಳೆದರು.
ಅತ್ತ ಹಸ್ತಿನಾವತಿಯಲ್ಲಿ ಭೀಷ್ಮರು ಪಾಂಡುವಿನ ವಿಚಾರ ಬೇಹಿನಚರರಿಂದ ಸಂಗ್ರಹಿಸುತ್ತಿದ್ದರು. ಕುಂತಿ ಪಾಂಡುವಿಗೆ ಮಗು ಜನಿಸಿದ ವಿಚಾರ ಮೊದಲು ಭೀಷ್ಮರಿಗೆ, ನಂತರ ವಿದುರ, ಧೃತರಾಷ್ಟ್ರ, ಗಾಂಧಾರಿಗೂ ತಿಳಿಯಿತು. ಗಂಡು ಮಗು ಕುಂತಿಗೆ ಹುಟ್ಟಿದ ಸುದ್ದಿ ಕೇಳಿ ಕೆರಳಿದ ಗಾಂಧಾರಿ ಹೆರಿಗೆಯಾಗದ ತನ್ನ ಹೊಟ್ಟೆಗೆ ಹೊಡೆದು ಹಿಸುಕಿಕೊಂಡಳು. ಪರಿಣಾಮ ಆಕೆಯ ಗರ್ಭಪಿಂಡ ಘಾತಿಸಿಕೊಂಡು ಪಾತವಾಗಿ ಮಾಂಸದ ಮುದ್ದೆಯ ರೂಪದಲ್ಲಿ ಹೊರಬಿತ್ತು. ನೆತ್ತರ ಮಾಂಸದ ಮುದ್ದೆಯನ್ನು ಎಸೆಯುವಂತೆ ದಾಸಿಯರಿಗೆ ಆಜ್ಞಾಪಿಸಿದಳು. ದಿವ್ಯಜ್ಞಾನದಿಂದ ಈ ವೃತ್ತಾಂತ ತಿಳಿದ ವ್ಯಾಸರು ತಕ್ಷಣ ಪ್ರಕಟರಾದರು. ಗಾಂಧಾರಿಯನ್ನು ಪಾಪಕೃತ್ಯಕ್ಕಾಗಿ ಜರೆದು, ದೇವರು ಕೊಟ್ಟರೂ ಸುಖ ಸಂತಾನ ಪಡೆಯುವ ಭಾಗ್ಯ ಕಳೆದುಕೊಂಡೆ ನೀನು. ನಿನ್ನ ಹಠ, ಅಸೂಯೆ, ಆಕ್ರೋಶ, ಮತ್ಸರದ ವರ್ತನೆ ನಿನ್ನ ಮಕ್ಕಳಿಗೂ ಪ್ರಾಪ್ತಿಸಿಬಿಟ್ಟಿತಲ್ಲಾ ಎಲಾ ಪಾಪಿಣಿಯೇ! ಎಂದು ಕ್ರುದ್ಧರಾಗಿ ಉದ್ಘಾರದಿಂದ ಹೇಳಿದರು. ನಿನ್ನ ಪ್ರಾರಬ್ಧಕ್ಕೆ ಯಾರು ಏನು ಮಾಡಲು ಸಾಧ್ಯ ಎಂದು, ಭೀಷ್ಮ- ವಿದುರರನ್ನು ಕರೆದು ಮಾಂಸದ ಮುದ್ದೆಯನ್ನು ಶುದ್ಧೀಕರಿಸಿದರು. ಹೆಬ್ಬೆಟ್ಟಿನ ಗಾತ್ರದ ನೂರ ಒಂದು ತುಂಡುಗಳು ಗೋಚರಿಸಿದವು. ಭಗವಾನ್ ವ್ಯಾಸರು ಅವುಗಳನ್ನು ಬೇರೆ ಬೇರೆ ತುಪ್ಪದ ಪಾತ್ರೆಗಳಲ್ಲಿಟ್ಟು ಮಂತ್ರ ರಕ್ಷೆ ಕೊಟ್ಟರು. ಅನಾಹುತವಾದರೂ ವ್ಯಾಸರ ಉಪಸ್ಥಿತಿ, ಅನುಗ್ರಹದಿಂದ ರಕ್ಷಿಸಲ್ಪಟ್ಟದ್ದಕ್ಕೆ ಎಲ್ಲರು ಸಮಾಧಾನ ಪಟ್ಟರು.
ಇತ್ತ ಪಾಂಡು ಧರ್ಮರಾಜನನ್ನು ಆಡಿಸುತ್ತಾ ಕುಂತಿಯನ್ನು ಕರೆದು ಈತನೇನೋ ಧರ್ಮಿಷ್ಟ. ಧರ್ಮದ ರಕ್ಷಣೆಗೆ ಬಲವೂ ಬೇಕು. ಆದುದರಿಂದ ಬಲಾಢ್ಯನಾದ ಇನ್ನೋರ್ವ ಮಗ ಬೇಕು ಎಂದನು. ಕುಂತಿ ಯಥೋಚಿತ ಧರ್ಮ ಪಾಲಿಸಿ, ವಾಯುದೇವನನ್ನು ಪ್ರಾರ್ಥಿಸಿದಳು. ಧರ್ಮ ಮಾತ್ರ ಇದ್ದರೆ ಸಾಕಾಗದು, ರಕ್ಷಣೆಗೆ ಬಲವೂ ಬೇಕೆಂಬ ಸಂಕಲ್ಪದಿಂದ ದೀಕ್ಷಿತಳಾಗಿ ಬೀಜಮಂತ್ರವನ್ನು ಅಭಿಮಂತ್ರಿಸಿದಳು. ಅಂತೆಯೇ ಪ್ರಭಂಜನನು ಪ್ರಕಟನಾಗಿ ಅನುಗ್ರಹಿಸಿದನು. ಗರ್ಭ ಧರಿಸಿದ ಕುಂತಿ ಮಾಘಮಾಸ ಶುಕ್ಲ ಪಕ್ಷ ನವಮಿಯ ಮಧ್ಯಾಹ್ನ ಕೃತ್ತಿಕಾ ನಕ್ಷತ್ರದ ಸುಮೂಹೂರ್ತದಲ್ಲಿ ದಷ್ಟ ಪುಷ್ಟವಾಗಿದ್ದ ಮಗುವಿಗೆ ಜನ್ಮ ನೀಡಿದಳು. ವಿಧಿಯನ್ನನುಸರಿಸಿ ಮಗುವಿಗೆ “ಭೀಮ” ಎಂದು ಹೆಸರಿಟ್ಟರು.
ಅತ್ತ ಹಸ್ತಿನೆಯಲ್ಲಿ, ಭೀಮನು ಹುಟ್ಟಿದ ದಿನವೇ ಮಧ್ಯರಾತ್ರಿ ಘೃತಭಾಂಡವೊಂದು ಒಡೆದು ಗಂಡು ಮಗುವೊಂದು ಆವಿರ್ಭವಿಸಿತು. ಒಂದೇ ಸಮನೆ ನರಿಗಳು, ಕಾಗೆಗಳು ಅಶುಭ ಶಕುನ ಸೂಚಕವಾಗಿ ಕೂಗಿದವು. ಈ ರೀತಿಯ ನರಿ ಕಾಗೆಗಳ ಕೂಗಿಗೆ ಕೌ ಎಂದೂ ಅವುಗಳ ಧ್ವನಿಯ ಸ್ವರಕ್ಕೆ ರವ ಎಂದೂ ಹೇಳಬಹುದು. ಪ್ರಳಯರೂಪಿನ ಗುಡುಗು, ಬಿರುಗಾಳಿಗೆ ಸುತ್ತಲೂ ಅಲ್ಲೋಲ ಕಲ್ಲೋಲವಾಗುವ ಮೂಲಕ ವಿಕೃತಿಯನ್ನೂ, ವಿನಾಶವನ್ನೂ ಪ್ರಕೃತಿಯೂ ಸೂಚಿಸಿತು. ವಿಶ್ಲೇಷಿಸಿದ ವಿದುರ, ಕೃಪಾಚಾರ್ಯರು ಈ ಮಗು ವಂಶನಾಶಕ ವಿಕೃತನಾಗಿ ಬೆಳೆಯುವ ಸಕಲ ಸೂಚನೆಯನ್ನು ಅನುಭವಿಸುತ್ತಿದ್ದೇವೆ. ಗ್ರಹಗತಿಯೂ ವಿಧ್ವಂಸಕ ಕೃತಿಯನ್ನು ಪ್ರತಿಬಿಂಬಿಸುತ್ತಿವೆ. ಹಾಗಾಗಿ ವ್ಯಾಮೋಹ ತೊರೆದು ಈ ಪಿಂಡವನ್ನು ನಿರ್ಮೂಲನೆ ಮಾಡಿದರೆ ಲೋಕಕ್ಕೆ ಕ್ಷೇಮ ಎಂಬ ವಿಚಾರ ಮಂಡಿಸಿದರು. ಆದರೆ ಗಾಂಧಾರಿ ಧೃತರಾಷ್ಟ್ರರ ಪುತ್ರೋತ್ಸವ ವಾತ್ಸಲ್ಯ ಈ ನಡೆಯನ್ನು ತಡೆಯಿತು. ಹೀಗೆ ತಿಂಗಳೊಳಗೆ ಎಲ್ಲಾ ತುಪ್ಪಭಾಂಡದಿಂದ ಒಟ್ಟಾಗಿ ನೂರು ಗಂಡು ಮಕ್ಕಳೂ ಒಂದು ಹೆಣ್ಣು ಮಗುವೂ ಜನಿಸಿತು. ಜನ್ಮಕಾಲದಲ್ಲಾದ ಶಕುನ ಸೂಚಕವಾಗಿ, ಮೊದಲು ಹುಟ್ಟಿದ ಮಗುವಿಗೆ ಕೌರವ ಎಂಬ ಅನ್ವರ್ಥ ನಾಮವಾಗಿ ಹುಟ್ಟಿನಿಂದಲೇ ಬಂತು. ಆ ಮಗುವಿಗೆ ಸುಯೋಧನ ಎಂದು ಹೆಸರಿಟ್ಟರು. ಕ್ರಮವಾಗಿ ನಂತರ ಹುಟ್ಟಿದ ಗಂಡು ಮಕ್ಕಳಿಗೆ ದುಶ್ಯಾಶನ, ವಿಕರ್ಣ ಆದಿ ನಾಮಕರಣಗಳನ್ನು ಮಾಡಿದರು. ಹೆಣ್ಣು ಮಗುವಿಗೆ ದುಶ್ಯಲೆ ಎಂದು ಹೆಸರನ್ನಿಟ್ಟರು. ಕುರುವಿನ ಪೀಳಿಗೆಯೆಂದೋ ಇಲ್ಲ ಹಿರಿಯ ಮಗ ಕೌರವದೊಂದಿಗೆ ಜನಿಸಿದ ಕಾರಣವೋ ಏನೋ, ಸಹೋದರರೂ ಸೇರಿ ಸಮಷ್ಟಿಯಾಗಿ ಮಕ್ಕಳ ಬಳಗ ಕೌರವರೆಂದೇ ಕರೆಯಲ್ಪಟ್ಟರು. ಧೃತರಾಷ್ಟ್ರನ ವಿಲಾಸಿನಿಯೋರ್ವಳು ಒಂದು ಗಂಡು ಮಗುವಿಗೆ ಜನ್ಮ ನೀಡಿದಳು. (ಧೃತರಾಷ್ಟ್ರನಿಗೆ ದಾಸಿಯಲ್ಲಿ ಜನಿಸಿದ ಮಗು) ಆ ಮಗುವಿಗೆ “ಯುಯುತ್ಸು” ಎಂದು ನಾಮಕರಣ ಮಾಡಿದರು. ಹಸ್ತಿನೆಯಲ್ಲಿ ಸಂಭ್ರಮ, ಸಡಗರ ಪುತ್ರೋತ್ಸವ. ಶಕುನಿ ಮಾವನಾಗಿ ಬಿಡುವಿಲ್ಲದಿದ್ದರೂ ಅತಿ ಉಲ್ಲಾಸಿತನಾಗಿದ್ದನು.
ಹೀಗಿರಲು ಇತ್ತ ಶತಶೃಂಗದ ಆಶ್ರಮದಲ್ಲಿ ಪಾಂಡು ಭೀಮನನ್ನು ಆಡಿಸುತ್ತಿರಬೇಕಾದರೆ ತೊಡೆಯ ಮೇಲಿಂದ ಜಾರಿದ ಮಗು ಗಜಗಾತ್ರದ ಸೋಮನಾಥ ಶಿಲೆಯ ಮೇಲೆ ದೊಪ್ಪನೆ ಬಿದ್ದಿತು. ಕುಂತಿ ಶರವೇಗದಲ್ಲಿ ಓಡಿ, ಜಾರಿ ಎದ್ದು ಬಿದ್ದು ಮಗುವನ್ನೆತ್ತಿ ನೋಡಿದರೆ ಮಗು ಕಿಲಕಿಲ ನಗುತ್ತಿದೆ. ಬಂಡೆ ನೂರಾರು ಬಿರುಕು ಬಿಟ್ಟಿದೆ. ಋಷಿಗಳು ಬಂದು ಸಂತೈಸಿ ಈ ಘಟನೆ ಶುಭ ಸೂಚಕ. ಮಗುವಿನ ಪರಾಕ್ರಮ ಸಾಮರ್ಥ್ಯದ ದೃಷ್ಟಾಂತ. ಮುಂದೆ ಕಾಲಗರ್ಭದಲ್ಲಿ ಅಡಗಿದ ಸತ್ಯ ನಿಮಗೆ ತಿಳಿಯಲಿದೆ ಎಂದು ಸೂಚ್ಯವಾಗಿ ಹೇಳಿದರು.
ಪಾಂಡು ಎರಡು ಮಕ್ಕಳಾದರೂ, ಮತ್ತೆ ಮಗುವನ್ನು ಬಯಸಿದ. ಧರ್ಮ ಒಂದೆಡೆ ಬಲ ಒಂದೆಡೆಯಾದರೆ ಸಮನ್ವಯತೆ ಕಷ್ಟ. ಹಾಗಾಗಿ ಧರ್ಮವೂ ಮಹಾಬಲವೂ ಒಟ್ಟಾಗಿರುವ ವಿಶೇಷ ಪುತ್ರನನ್ನು ಪಡೆ ಎಂದು ಕುಂತಿಗೆ ಹೇಳಿದ.
ಶುಚಿರ್ಭೂತೆ – ವಿಧಿವತ್ತಾಗಿ ದೇವರಾಜ ಇಂದ್ರನನ್ನು ಸಂಪ್ರಾರ್ಥಿಸಿದಳು. ಮಂತ್ರಮುಖದಿಂದ ಮಹೇಂದ್ರ ಆಗಮಿಸಿ ಪೂರ್ಣಾನುಗ್ರಹವನ್ನಿತ್ತನು. ಕುಂತಿಯ ಗರ್ಭದಲ್ಲಿ ಬೆಳೆದ ಮಗು ಫಾಲ್ಗುಣ ಮಾಸ ಶುದ್ದ ಪೌರ್ಣಮಿ ಉತ್ತರಾ ನಕ್ಷತ್ರದಲ್ಲಿ ಕಾಂತಿಯುಕ್ತ ಮಗುವಿಗೆ ಜನ್ಮ ನೀಡಿದಳು. ಶುಭ ಲಕ್ಷಣ ಸೂಚಕ ಶಕುನಗಳು ಪ್ರಕಟವಾದವು. ಋಷಿ ಮುನಿಗಳು ಮಗುವಿನ ಮುಖ ದರ್ಶನ, ಜನ್ಮಜಾತ ಕುಂಡಲಿ ಗಣಿತ ಮನನ ಮಾಡಿ ಮಗುವಿಗೆ “ಅರ್ಜುನ” ಎಂದು ಹೆಸರಿಟ್ಟು ಕರೆದರು.
ಕುಂತಿಯ ಮೂಲ ಹೆಸರು ಪೃಥಾ ದೇವಿ. ಆಕೆ ಅರ್ಜುನನ್ನು ಹೆತ್ತು ಸಂತುಷ್ಟಳಾದ ಕಾರಣ ಆ ಭಾವ ಒದಗಿಸಿದ ಮಗ ಪಾರ್ಥ ನೆಂದೂ ಪ್ರಸಿದ್ದನಾದ.
ಒಂದು ವರ್ಷದ ಬಳಿಕ ಪಾಂಡು ಮತ್ತೆ ಕುಂತಿಯಲ್ಲಿ ಮಗುವನ್ನು ಬಯಸಿದಾಗ ತಾನು ಸಂತಾನ ವಿಚಾರದಲ್ಲಿ ಸಂತೃಪ್ತಿ ಪಡೆದಿದ್ದೇನೆ ಎಂದಳು. ಪಾಂಡು ಕುಂತಿ ಸಮಾಲೋಚಿಸಿ ಉಳಿದಿರುವ ಕೊನೆಯ ಒಂದು ಬಾರಿಯ ಮಂತ್ರ ಪ್ರಯೋಗ ಮಾದ್ರಿಯಿಂದಾಗಲಿ. ಅವಳಿಗೂ ತಾಯಿಯಾಗುವ ಭಾಗ್ಯ ಪ್ರಾಪ್ತವಾಗಲಿ ಎಂದು ತೀರ್ಮಾನಿಸಿದರು. ಆಕೆಗೂ ಸುಮೂಹೂರ್ತದಲ್ಲಿ ಕುಂತಿ ದೂರ್ವಾಸರನ್ನು ಸ್ಮರಿಸಿ ಉಪದೇಶ ಮಾಡಿದಳು. ಕೊನೆಯದಾಗಿ ಒಂದು ಬಾರಿ ಮಾತ್ರ ಈ ಮಂತ್ರ ಬಳಸಲು ಅವಕಾಶವಿದೆ ಎಂದು ಕುಂತಿಯ ನಿರ್ದೇಶನದಂತೆ ಶುಭದಿನ ಶುಭಗಳಿಗೆಯಲ್ಲಿ ಯುಗ್ಮ ದೇವತೆಗಳಾದ ಅಶ್ವಿನಿ ದೇವತೆಗಳನ್ನು ಮಾದ್ರಿ ಪ್ರಾರ್ಥಿಸಿದಳು. ಮೈದೋರಿದ ಸೂರ್ಯ ಪುತ್ರರಾದ ಸೋದರರಿಬ್ಬರೂ ಅನುಗ್ರಹಿಸಿದ ಪರಿಣಾಮ ನವ ಮಾಸ ಗರ್ಭಧಾರಣೆ ಮಾಡಿ ವೈಶಾಖ ಮಾಸದ ಬಹುಳ ಚತುರ್ದಶಿ ಯ ಶುಕ್ರವಾರದಂದು ಮೃಗಶಿರಾ ನಕ್ಷತ್ರದ ಪ್ರಥಮ ಚರಣದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದಳು. ಮಕ್ಕಳಿಗೆ “ನಕುಲ” ಮತ್ತು “ಸಹದೇವ” ಎಂದು ಹೆಸರನ್ನಿಟ್ಟರು.
ಮುಂದುವರಿಯುವುದು….