33.1 C
Udupi
Sunday, May 10, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 517

ಭರತೇಶ ಶೆಟ್ಟಿ,ಎಕ್ಕಾರು

ಸಂಚಿಕೆ ೫೨೭ ಮಹಾಭಾರತ

ಏನಿದು ಪರಮಾಶ್ಚರ್ಯ? ಹರಿಭಕ್ತಿಯ ಶಕ್ತಿ ದೇವನಲ್ಲಿ ಮಾತ್ರ ಅಲ್ಲ ಹರಿ ಭಕ್ತನಲ್ಲೂ ಸ್ಥಾಪಿತವಾಗುತ್ತದೆಯೆ? ಊಹನಾತೀತವಾಗಿದೆ ದೃಶ್ಯ…ಕೊತ ಕೊತ ಕುದಿಯುವ ತೈಲ ಕಟಾಹಕ್ಕೆ ಹಾರಿದ ಪುರೋಹಿತರು ಭಕ್ತ ಸುಧನ್ವನೊಡನೆ ಮಹದಾನಂದದಿಂದ ಇದ್ದಾರೆ. ಕುದಿಯುವ ಎಣ್ಣೆ ಕೊಪ್ಪರಿಗೆಯಲ್ಲಿ ಪುರೋಹಿತರು ಸುಧನ್ವನ ಜೊತೆ ಯಾವುದೆ ಸಂಕಷ್ಟಕ್ಕೀಡಾಗದೆ ಆರಾಮವಾಗಿ ಇರುವುದನ್ನು ಕಂಡ ರಾಜ ಭಟರು ಮತ್ತು ಮಂತ್ರಿಗಳು ಆಶ್ಚರ್ಯಕ್ಕೊಳಗಾದರು. ಮಹಾರಾಜನಿಗೂ ಮಹದಾನಂದವಾಗುತ್ತಿದೆ. “ಹೇ ಕಾರುಣ್ಯಮೂರ್ತಿ, ಕರುಣಾನಿಧಿ, ಭಕ್ತರದಾಸ, ವಿಠಲ, ಗೋಪಾಲ, ಮುಕುಂದ, ಗೋವಿಂದ, ಕೃಪಾಕರ, ಕರುಣಾಕರ ಧನ್ಯನಾದೆ, ಕೃತಾರ್ಥನಾದೆ, ನನ್ನ ಜನ್ಮ ಪಾವನವಾಯಿತು. ನಿನ್ನ ಕರುಣೆ ನನ್ನ ಮಗನ ಮೇಲೆ ಬೀರಿದೆ ಎಂದಾದರೆ ನನಗಿನ್ನು ಏನೂ ಬೇಕಾಗಿಲ್ಲ. ದೇವಾ ನಿನ್ನ ಋಣ ನಾನು ಹೇಗೆ ತೀರಿಸಲಿ” ಎಂದು ಭಾವುಕನಾಗಿ ಆನಂದಭಾಷ್ಪ ಸುರಿಸಿದನು.

ಮಂತ್ರಿಗಳನ್ನೂ, ರಾಜಭಟರನ್ನೂ ಕರೆದು “ಕೂಡಲೇ ಸುಧನ್ವನನ್ನೂ, ಪುರೋಹಿತರನ್ನೂ ತೈಲಕಟಾಹದಿಂದ ಹೊರತೆಗೆಸಿರಿ.” ಎಂದು ಅಪ್ಪಣೆ ಮಾಡಿದನು.

ಪ್ರಜ್ವಲಿಸುವ ಅಗ್ನಿಯ ಮೇಲಿರುವ ತೈಲಕಟಾಹದಿಂದ ಸುಧನ್ವ ಈಜು ಕೊಳದಲ್ಲಿ ಜಲಕ್ರೀಡೆಯಾಡಿ ಮೇಲೆದ್ದು ಬಂದವನಂತೆ ನಿಂತು ಪುರೋಹಿತರನ್ನು ಮೇಲೆತ್ತಿ ದಂಡೆ ದಾಟಿಸಿ ಹೊರ ಕಳುಹಿಸಿದನು. ಆತ ಮೊದಲು ಹೊರ ಬಂದರೆ ಪುರೋಹಿತರು ಸುಡು ಎಣ್ಣೆಯಲ್ಲಿ ಕರಟಿ ಹೋಗುವ ಸಂಭವವಿತ್ತು. ಬಳಿಕ ತಾನೂ ಮೇಲೆದ್ದು ಹೊರ ಬಂದನು.

ಹಂಸಧ್ವಜ ಮಗನನ್ನು ನೋಡಿ “ಮಗನೇ! ದೇವಕಿ ನಂದನ ಶ್ರೀಕೃಷ್ಣ ನಿನ್ನ ಧರ್ಮಪಾಲನೆಯನ್ನು ಮೆಚ್ಚಿ ರಕ್ಷಿಸಿದ್ದಾನೆ. ನಿನ್ನನ್ನು ಎಳೆಗೂಸು ಇರುವಲ್ಲಿಂದ ಈ ತನಕ ಸಾಕಿ ಸಲಹಿದ ಅಪ್ಪನಾಗಿದ್ದೂ, ನಿನ್ನಲ್ಲಿ ದೋಷ ಆರೋಪಿಸಿದೆ. ನಿಜ ಧರ್ಮ ಅರಿಯುವಲ್ಲಿ ಅಸಮರ್ಥನಾಗಿ ಹೋದೆ. ನನಗೆ ದುರ್ಬೋಧನೆಯಿತ್ತು ನಿನ್ನನ್ನು ಪೀಡಿಸಲು ಯತ್ನಿಸಿದ ಪುರೋಹಿತರು ಸ್ವಯಂ ದಂಡನೆಗೊಳಗಾದರು. ಎಷ್ಟೇ ಜ್ಞಾನ, ವಿದ್ವತ್ತು ಇದ್ದರೂ ಪ್ರೀತಿ, ನೀತಿ, ಸಹಿಷ್ಣುತೆ, ದಯೆ ಮರೆತರೆ ಅಂತಹವರನ್ನು ದೇವರು ಮೆಚ್ಚಿ ಸ್ವೀಕರಿಸಲಾರನು. ಭಗವಂತನಿಗೆ ಬೇಕಾದುದು ನಿಷ್ಕಲ್ಮಶ ಭಕ್ತಿ, ಧರ್ಮಯುಕ್ತ ನಡತೆಯೆ ಹೊರತು, ಆಡಂಬರದ ಪಾಂಡಿತ್ಯವೂ ಅಲ್ಲ, ತೋರಿಕೆಯ ನೀತಿಯೂ ಅಲ್ಲ. ಭಗವತ್ಪ್ರೀತಿ ಸಂಪಾದನೆಗೆ ನಿರ್ಮಲ, ನಿಷ್ಕಲ್ಮಶವಾದ ಭಕ್ತಿ, ಸಮರ್ಪಣಾ ಭಾವ, ಕರ್ಮಶುದ್ಧಿ ಮತ್ತು ಧರ್ಮಬುದ್ಧಿ ಇಷ್ಟೇ ಸಾಕು. ಹೊರತು ಸಿರಿವಂತಿಕೆಯಿಂದ ಭಗವಂತನನ್ನು ಖರೀದಿಸಲೂ ಆಗದು, ಮಡಿವಂತಿಕೆಯಿಂದ ಮೆಚ್ಚಿಸಲೂ ಆಗದು. ಆತನಿಗೆ ಬೇಕಾದುದು ಸುಸ್ಥಿರವೂ ಅಚಲವೂ ಆದ ಅಂತರಂಗದ ಭಕ್ತಿ ಮತ್ತು ಪ್ರಾಮಾಣಿಕ ನಡೆ ಮಾತ್ರ ಸುಧನ್ವ ಇಂದು ಪ್ರತ್ಯಕ್ಷ ನಿದರ್ಶನವಾಗಿ ಅದನ್ನು ನಮ್ಮ ಕಣ್ಮುಂದೆ ಸ್ಪಷ್ಟ ಪಡಿಸಿದ್ದಾನೆ. ಸುಧನ್ವಾ ನಿನ್ನಿಂದಾಗಿ ಚಂಪಕಾವತಿಯೆ ಪಾವನವಾಯಿತು. ನಿನ್ನ ಧೃಡತೆಯಿಂದಾಗಿ ನಿನಗೆ ಪಿತನಾದ ನಾನೂ ನ್ಯಾಯಪರ, ನಿಷ್ಪಕ್ಷಪಾತಿ ಎಂದು ಲೋಕ ತಿಳಿಯುವಂತಾಯಿತು.” ಎಂದು ಮಹದಾನಂದದಿಂದ ನುಡಿದನು.

“ಯಾರಲ್ಲಿ ಬನ್ನಿ ತೈಲತಪ್ತವಾಗಿರುವ ಸುಧನ್ವನ ಸುಕೋಮಲ ಶರೀರಕ್ಕೆ ಪನ್ನೀರ ಸ್ನಾನ ಮಾಡಿಸಿ. ಸುರುಚಿರಾಂಬರದ ಅಲಂಕಾರದಿಂದ ಅಣಿಗೊಳಿಸಿ ಕರೆತನ್ನಿ” ಎಂದು ಆದೇಶ ನೀಡಿದನು.

ಅಂತೆಯೆ ಸನ್ನದ್ಧನಾಗಿ ಬಂದ ಭಕ್ತ ಸುಧನ್ವ ಈಗ ವೀರ ಸುಧನ್ವನಾಗಿ ಕಂಗೊಳಿಸುತ್ತಿದ್ದಾನೆ. ಎದೆಗಟ್ಟು, ತೋಳುಗಳಿಗೆ ಬಿಗಿದ ಲೋಹಕವಚ, ಶಿರಸ್ತ್ರಾಣ, ಸುತ್ತಿದ ಜಟ್ಟಿ ಚಲ್ಲಣ, ಧಾರಣೆ ಮಾಡಿರುವ ಕಸ್ತೂರಿ ತಿಲಕ, ಭುಜಕ್ಕೆ ಬಿಗಿದ ಬತ್ತಳಿಕೆ, ನಡುವಲ್ಲಿ ಕಠಾರಿ, ಸಿಲುಕಿಸಿದ ಕಿರುಗತ್ತಿ, ಕೈಯಲ್ಲಿ ಧನುಸ್ಸು. ಆಹಾ ಧನುರ್ಧರನಾಗಿ ಶೋಭಿಸುತ್ತಿರುವ ಸುಧನ್ವನನ್ನು ನೋಡಲು ಕಂಗಳೆರಡು ಸಾಲದು. ಸೂರ್ಯೋದಯವಾಗುತ್ತಿದೆ. ಮಹಾರಾಜ ಹಂಸಧ್ವಜನ ಬಳಿ ಬಂದು ಪ್ರಣಾಮಗಳನ್ನು ಸಲ್ಲಿಸಿ ರಣಾಂಗಣಕ್ಕೆ ಹೋಗಲು ಅನುಮತಿ ಬೇಡಿದನು.

“ಮಗನೇ! ನನ್ನ ಕೂಸು ನೀನು. ಸಂಬಂಧದಲ್ಲಿ ಪಿತನಾಗಿ ಹರಸುವ ಯೋಗ ನನಗೆ. ಯೋಗ್ಯತೆಯಿಂದ ಭಗವದ್ಭಕ್ತನಾಗಿ ನಾವೆಲ್ಲ ಹೆಮ್ಮೆ ಪಡುವ ತೆರದಲ್ಲಿ ಶ್ರೀಹರಿಯ ರಕ್ಷೆಯಲ್ಲಿ ಯಾವ ಆಪತ್ತನ್ನೂ ಮೀರಿ ಎದುರಿಸಬಲ್ಲೆ ಎಂದು ತೋರಿಸಿರುವೆ. ಕಂದಾ! ನಿನ್ನ ಹೆತ್ತೊಡಲು ಧನ್ಯತೆಯನ್ನು ಹೊಂದಿದೆ ಮಗನೇ.. ಇದೋ ಬಂಗಾರದ ಬಟ್ಟಲಲ್ಲಿ ಧುರವೀಳ್ಯ ನೀಡುತ್ತಿದ್ದೇನೆ. ರಣಾಂಗಣದಲ್ಲಿ ಅರ್ಜುನ ಎದುರಾಗಿ ಬರಲಿ, ಅಳುಕದಿರು. ನಮ್ಮ ವಂಶದ ಕೀರ್ತಿಪತಾಕೆಯ ಗೌರವ ಉಳಿಸು. ಕ್ಷಣ ಭಂಗುರವಾದ ಈ ದೇಹದ ಮೇಲೆ ಆಸೆ ತೊರೆದು ಹೋರಾಡು. ಸಂಗರದಲ್ಲಿ ನಿನಗೆ ಜಯವಾಗಲಿ. ಸಮರ ಭಯಂಕರನೆಂಬ ನೆಗಳ್ತೆಗೆ ಪಾತ್ರನಾದ ಅರ್ಜುನನ್ನೂ ಗೆದ್ದು ಬಾ ಮಗಾ” ಎಂದು ಹರಸಿ ಶ್ರೀಕೃಷ್ಣನನ್ನು ಮನಸಾರೆ ಸ್ಮರಿಸಿ ಆಶೀರ್ವದಿಸಿದನು.

ಸುಧನ್ವ ತನ್ನ ತಂದೆ ಹಂಸಧ್ವಜನ ಅಪ್ಪಣೆ ಪಡೆದು ಸೇನಾ ಸಹಿತನಾಗಿ ರಣಾಂಗಣದತ್ತ ಮುಖಮಾಡಿದನು. ಸೂರ್ಯೋದಯದ ಸಮಯ. ಅತ್ತ ಪಾಂಡವರ ಸೈನ್ಯವೂ ಅರ್ಜುನನ ನಾಯಕತ್ವದಲ್ಲಿ ಸಿದ್ಧವಾಗಿ ನಿಂತಿದೆ.

ಮುಂದುವರಿಯುವುದು

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page