32.6 C
Udupi
Thursday, May 7, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 514

ಭರತೇಶ ಶೆಟ್ಟಿ, ಎಕ್ಕಾರು

ರಾಜ ಭಟರು ಎಲ್ಲೆಡೆ ಹುಡುಕುತ್ತಿದ್ದಾರೆ, ಅಲ್ಲಿ ಎಲ್ಲೂ ಸುಧನ್ವ ಕಾಣಿಸುತ್ತಿಲ್ಲ. ಎಲ್ಲೆಡೆ ಓಡಾಡಿದರೂ ಪತ್ತೆಯಿಲ್ಲ. ಯುವರಾಜ ನಾಪತ್ತೆಯಾದ ವಿಚಾರ ತಿಳಿಯುತ್ತಿದ್ದಂತೆ ಮಹಾರಾಜ ಹಂಸಧ್ವಜ ಕೋಪಗೊಂಡು ಕೆಂಡಾಮಂಡಲನಾದನು. “ಸಿಂಹದ ಮರಿ ಸಿಂಹವೇ ಆಗಬೇಕಿತ್ತು. ಅದು ಹೇಗೆ ನರಿಯಾಯಿತು? ನರ ನಾರಾಯಣರು ಯುದ್ದಕ್ಕೆ ಬಂದಿರುವ ಈ ಪರ್ವಕಾಲದಲ್ಲಿ ಪ್ರಾಣ ಭಯದಿಂದ ಹೆದರಿ ಅಡಗಿ ಕುಳಿತನೆ? ರಾತ್ರಿಯ ಜಾವದ ಸಮಯ ಜಾರಿದರೂ ಆತನ ಸುಳಿವಿಲ್ಲ. ಇಂತಹ ಹೇಡಿಯನ್ನು ಚಂಪಕಾವತಿಯ ಸೇನಾಧಿಪತಿಯಾಗಿ ನಾವು ನೇಮಿಸಿರುವುದೆ? ನನ್ನ ಮಗನೆಂಬ ಮಮಕಾರ ಈಗ ಉಳಿದಿಲ್ಲ. ರಾಜಾಜ್ಞೆಯನ್ನು ಮೀರಿದವರು ಯಾರಾದರೂ ಸರಿ ಶಿಕ್ಷಾರ್ಹರಾಗುತ್ತಾರೆ. ಈ ಕೂಡಲೆ ಆತನ ಇರವನ್ನು ಕಂಡುಹಿಡಿದು ಹೆಡೆ ಮುರಿ ಕಟ್ಟಿ ಎಳೆದು ತನ್ನಿ ಇದು ರಾಜಾಜ್ಞೆ. ಆತನಿಲ್ಲದಿದ್ದರೂ ನಾವು ಯುದ್ದ ಮಾಡುವವರು. ಆತನಿಗೆ ತಕ್ಕ ಶಾಸ್ತಿ ಮಾಡಿ ಬಳಿಕ ಯುದ್ಧದಲ್ಲಿ ತೊಡಗೋಣ” ಎಂದು ರೋಷಾವೇಶ ಭರಿತನಾಗಿ ಅಬ್ಬರಿಸಿದನು.

ಯುದ್ದಕ್ಕೆ ಸಕಲ ಸಿದ್ಧರಾಗಿದ್ದ ಸೈನಿಕರು ಈಗ ಸುಧನ್ವನನ್ನು ಅರಸುತ್ತಿದ್ದಾರೆ. ಮೂಲೆ ಮೂಲೆಗೂ ಸೈನಿಕರು ಓಡಾಡುತ್ತಾ ಹುಡುಕುತ್ತಿದ್ದಾರೆ. ಕೆಲವು ಪ್ರಾಜ್ಞರು ರಾಮಾಯಣ ಕಾಲದ ಕಥೆಯನ್ನು ಸ್ಮರಿಸಿ, ರಾಮನನ್ನು ಎದುರಿಸಲು ಸಿದ್ಧನಾದ ರಾವಣ ಸ್ವಂತ ಅಣ್ಣನಾಗಿದ್ದರೂ ದೇಶಪ್ರೇಮ ಮರೆತು ದೇವಭಕ್ತಿ ಅಧಿಕವೆಂದು ಬಗೆದು ರಾಮಪಕ್ಷ ಸೇರಿದ ವಿಭೀಷಣನಂತೆ ಸುಧನ್ವ ಸುದ್ದಿಯಿಲ್ಲದೆ ಪಾಂಡವರ ಪಕ್ಷದಲ್ಲಿ ಶ್ರೀಕೃಷ್ಣನಿದ್ದಾನೆ ಎಂದು ಪಕ್ಷಾಂತರಗೊಂಡಿರಬಹುದೆ? ಎಂದು ಸಂದೇಹ ವ್ಯಕ್ತ ಪಡಿಸಿ ನಾನಾ ವಿಧವಾಗಿ ಊಹಾಪೋಹಗಳಿಗೆ ಗರಿ ಪುಕ್ಕ ಸೇರಿಸಿ ಮಾತನಾಡತೊಡಗಿದರು.

ಅರಮನೆಯತ್ತ ಸುಧನ್ವನನ್ನು ಹುಡುಕುತ್ತಾ ಹೋದ ರಾಜಭಟರು ಪ್ರಭಾವತಿಯ ಅಂತಃಪುರದ ಬಾಗಿಲು ಬಡಿದಾಗ, ಹೊರಬಂದ ಸುಧನ್ವನನ್ನು ನೋಡಿ ವಿಸ್ಮಿತರಾದರು. ‘ರಾಜಾಜ್ಞೆಯಂತೆ ರಟ್ಟೆ ಬಿಗಿದು ಬಂಧಿಸಿ ತರಲು ಬಂದಿರುವವರು ನಾವು’ ಎಂದು ಹೇಳಿದಾಗ ಮರು ಮಾತಾಡದೆ ಸುಧನ್ವ ಬಂಧಿಸಿಕೊಂಡನು. ಯಾವುದೆ ಪ್ರತಿರೋಧ ತೋರದೆ ಬಂಧಿಯಾಗಿ ಮಹಾರಾಜರ ಮುಂದೆ ಬಂದು ನಿಂತನು.

ಕರೆ ತಂದ ರಾಜಭಟರು “ಮಹಾರಾಜಾ! ನಮ್ಮ ಯುವರಾಜ ಸುಧನ್ವ ಅವರ ಪತ್ನಿಯ ಅಂತಃಪುರದಲ್ಲಿದ್ದರು. ನಿಮ್ಮ ಆಜ್ಞೆಯಂತೆ ಕಟ್ಟಿ ಬಂಧಿಸಿ ತಂದಿದ್ದೇವೆ” ಎಂದು ಹೇಳಿ ಹಿಂದೆ ಸರಿದು ನಿಂತರು.

ಮಹಾರಾಜ ಹಂಸಧ್ವಜನಿಗೆ ಪ್ರಕರಣದ ವಾರ್ತೆ ಕೇಳಿ ಕೋಪ ಇನ್ನಷ್ಟು ಹೆಚ್ಚಾಯಿತು. “ಎಲೈ ಕುನ್ನಿಯೆ! ರಾಜ್ಯಕ್ಕೆ ಆಪತ್ತು ಒದಗಿರುವ ಈ ಕಾಲದಲ್ಲಿ ಕುಲಗೇಡಿ ಕೃತ್ಯವೆಸಗಲು ನಿನಗೆ ಮನಸ್ಸಾದರು ಹೇಗೆ ಬಂತು? ನಿಜ ಕ್ಷತ್ರಿಯನಾದವ ಸಮರೋತ್ಸಾಹದಿಂದ ಯುದ್ದದಲ್ಲಿ ಭಾಗಿಯಾಗಲು ಕಾತರಿಸುವ ಈ ಸಮಯ ನಿನಗೆ ನೀಚ ಬುದ್ದಿ ಹೇಗೆ ಮೂಡಿತು? ಅಧಮನಾಗಿ ಸತಿಗ್ರಹದಲ್ಲಿ ಉಳಿಯುವ ನಾಚಿಕೆಗೇಡಿನ ಕೆಲಸ ಯಾಕೆ ಮಾಡಿದೆ? ಯುದ್ಧಭಯವೆ? ಪ್ರಾಣದಾಸೆಯೆ? ಹೇಳು ಬೇಗ. ನನ್ನ ತಾಳ್ಮೆಯ ಕಟ್ಟೆ ಒಡೆದು ಹೋಗಿದೆ. ಏನು ಹೇಳಲಿದೆಯೆ ಬೇಗ ಉಸುರಿ ಬಿಡು” ಎಂದು ಅತ್ಯುಗ್ರನಾಗಿ ನುಡಿದನು.

“ಮಹಾರಾಜರಿಗೆ ಪ್ರಣಾಮಗಳು. ಸಾವಧಾನದಿಂದ ನನ್ನ ಮಾತುಗಳನ್ನು ಆಲಿಸಬೇಕು. ನಂತರ ನಿಮ್ಮ ತೀರ್ಮಾನ ಏನಿದೆಯೊ ಅದಕ್ಕೆ ನಾನು ಬದ್ದನು. ಯಾವ ಕಾಲಕ್ಕೂ, ಯಾವ ಕಾರಣಕ್ಕೂ ಧರ್ಮವನ್ನು ಮೀರಿ ವ್ಯವಹರಿಸುವವನು ನಾನಲ್ಲ. ನಿಶ್ಚಿತವಾಗಿರುವ ಯುದ್ಧಕ್ಕೆ ಬೇಕಾಗುವ ಸಕಲ ಸಿದ್ಧತೆಗಳನ್ನು ಸೇನಾಧಿಪತಿಯಾಗಿ ನಿರ್ವಹಿಸಿ ಮತ್ತೆ ಮತ್ತೆ ಪರಿಶೀಲಿಸಿ ಸೂಕ್ತ ನಿರ್ದೇಶನ ಮತ್ತು ತಂತ್ರಗಳನ್ನು ಸೇನೆಯೊಡನೆ ಸಮಾಲೋಚಿಸಿ, ತದನಂತರ ಮತ್ತೆ ಒಂದಾವರ್ತಿ ಎಲ್ಲವನ್ನೂ ಪರೀಕ್ಷಿಸಿ ನಮ್ಮ ಸೇನಾನಿವೇಶನದಲ್ಲಿ ನಾನಿದ್ದವನು. ತಕ್ಷಣ ಮಾತೆಯ ನೆನಪಾಗಿ ಆಕೆಗೆ ವಿಚಾರ ತಿಳಿಸಿ ಆಶೀರ್ವಾದ ಪಡೆಯಲು ತಡ ರಾತ್ರಿಯಾಗಿದ್ದರೂ ಹೊರಟು ಹೋದೆನು. ಆ ಸಮಯ ನನ್ನ ತಾಯಿ ಮತ್ತು ತಂಗಿಯನ್ನು ಕಂಡು ಅವರಿಂದ ಬೀಳ್ಕೊಟ್ಟು ಪತ್ನಿ ಪ್ರಭಾವತಿಯ ಬಳಿ ತೆರಳಿದೆ. ಆಕೆಗೂ ವಿಚಾರ ತಿಳಿಸಿ ಬರುವುದಷ್ಟು ನನ್ನ ಉದ್ದೇಶವಾಗಿತ್ತು. ಆದರೆ ಯುದ್ಧವಾರ್ತೆ ಮೊದಲೆ ತಿಳಿದಿದ್ದ ಪ್ರಭಾವತಿ ಸಮ್ಮಿಶ್ರ ಭಾವಪರವಶಳಾಗಿದ್ದಳು. ವೀರವನಿತೆಯಾಗಿ ಆಕೆಯೂ ಉತ್ಸಾಹ ಹೊಂದಿದ್ದಳು. ಆದರೆ ಒಂದು ವಿಚಾರದಲ್ಲಿ ಖಿನ್ನಮನಸ್ಕಳಾಗಿದ್ದಳು. ನಾಳೆಯ ಸೂರ್ಯೋದಯದಿಂದ ಸಾಗಲಿರುವ ಯುದ್ದದ ಪರಿಣಾಮ ಜಯ – ಅಪಜಯ – ಮರಣ ಕಲ್ಪನಾತೀತ ಸತ್ಯ. ಹಾಗಿರುವಾಗ ಒಂದು ವೇಳೆ ಸೋಲು ಸಂಭವಿಸಿ ನಾನು ಮೃತ್ಯುವಶನಾದರೆ ನನಗೆ ಮೋಕ್ಷಪ್ರಾಪ್ತವಾಗದು ಎಂಬ ಖೇದ ವ್ಯಕ್ತಪಡಿಸಿದಳು. ಕಾರಣ ಸದ್ಗತಿ ಮಾಡಬೇಕಾದ ಸಂತಾನ ನಮಗಿಲ್ಲ. ಋಣತ್ರಯಗಳಲ್ಲಿ ಪಿತೃಋಣ ಮುಕ್ತಿಗಾಗಿ ಸಂತಾನ ಹೊಂದುವಲ್ಲಿ ಋತುಸ್ನಾತೆಯಾಗಿದ್ದ ಆಕೆ ಋತುದಾನ ಬೇಡಿ ಮೋಕ್ಷದಾಯಕ ದಾರಿಯನ್ನು ಸುಗಮಗೊಳಿಸಿ ನಂತರ ಯುದ್ದೋನ್ಮುಖನಾಗುವಂತೆ ನನ್ನನ್ನು ಬೇಡಿಕೊಂಡಳು. ಬಹಳಷ್ಟು ಸಮಾಲೋಚನೆಗಳಾದ ಬಳಿಕ ಆಕೆಯ ವಿಚಾರ ನ್ಯಾಯ ಧರ್ಮ ಸಮ್ಮತವಾದುದು ಎಂದು ಅರಿತ ನಾನು ನಿಷ್ಕಾಮ ಚಿತ್ತದಿಂದ ಆಕೆ ಕೋರಿದ ದಾನವೀಯಲು ಅಲ್ಲಿ ಉಳಿಯಬೇಕಾಯಿತು. ಹಾಗೆಂದು ಅರುಣೋದಯಕ್ಕೆ ಮುಂಚಿತವಾಗಿ ನಮ್ಮ ಸೇನೆಯನ್ನು ಸೇರಿಕೊಳ್ಳುವ ಧೃಡ ಸಂಕಲ್ಪವನ್ನು ನಾನು ಹೊಂದಿದ್ದೆ. ಅಂಜುಬುರುಕನಾಗಿ ನಾನು ಅಡಗಿ ಕುಳಿತದ್ದಲ್ಲ. ಧರ್ಮ ಸಂಕಟಕ್ಕೆ ತುತ್ತಾಗಿ ನಿರ್ವಾಹವಿಲ್ಲದೆ ಅನಿವಾರ್ಯ ಸ್ಥಿತಿ ಒದಗಿದ ಕಾರಣ ಹಾಗೆ ಮಾಡಬೇಕಾಯಿತು. ಅದರಿಂದಾಗಿ ನಾನಿಲ್ಲಿ ಬಂದು ಸೇರುವಲ್ಲಿ ತಡವಾಯಿತು ಹೊರತು ನನಗೆ ಪ್ರಾಣದಾಸೆಯಾಗಲಿ, ಯುದ್ಧಭಯವಾಗಲಿ ಖಂಡಿತಾ ಇರಲಿಲ್ಲ. ಇದು ನಿಜ ಸಂಗತಿ, ಸತ್ಯ ವಚನಿಯಾಗಿ ನುಡಿದಿದ್ದೇನೆ” ಎಂದು ಸರ್ವ ವಿಚಾರವನ್ನು ಹೇಳಿ ನಿಂತನು.

ಹಂಸಧ್ವಜನಿಗೆ ಯಾಕೊ ಕೋಪದ ಪ್ರವಾಹದಲ್ಲಿ ಬುದ್ಧಿ ವಿವೇಕ ಕೊಚ್ಚಿ ಹೋಯಿತೊ ಏನೋ… “ಎಲೈ ಮರ್ಯಾದೆಗೆಟ್ಟವನೆ! ಪತ್ನಿಯೊಡನೆ ರತಿಕ್ರೀಡೆಯಾಡಿ ಬಂದು ಧರ್ಮಾಧರ್ಮದ ವಿವರಣೆ ನೀಡುತ್ತಿರುವೆಯಾ? ಕಾಮಕ್ಕೂ ಸಮಯ ಸಂದರ್ಭ ಎಂಬುವುದಿಲ್ಲವೆ? ದೇಶಕ್ಕೆ ಆಪತ್ಕಾಲ ಒದಗಿರುವಾಗ ನಿನಗೆ ಋಣಬಾಧೆಯ ಚಿಂತೆಯಾಯಿತೆ? ಶ್ರೀಕೃಷ್ಣನ ದರುಶನ ಭಾಗ್ಯದ ಸಾಧ್ಯತೆಯಿರುವ ಯುದ್ದಕ್ಕಿಂತ ಪತ್ನಿಯ ಕೋರಿಕೆಯೆ ಧರ್ಮಸಮ್ಮತವಾಯಿತೆ ನಿನಗೆ? ಒಂದು ವೇಳೆ ಹರಿದರ್ಶನ ಸಾಧ್ಯವಾದರೆ ಅದಕ್ಕಿಂತ ಶ್ರೇಷ್ಟವಾದ ಮುಕ್ತಿ ಈ ಜಗದಲ್ಲಿದೆಯೆ? ಕರ್ಮ ಬಾಹಿರನಾಗಿ ಉಳಿದು, ಸಂತಾನವಿರುವ ಯಾರಾದರೂ ಮೋಕ್ಷ ಪಡೆದಿದ್ದಾರೆಯೆ? ಕನಿಷ್ಟ ಜ್ಞಾನವೂ ಇಲ್ಲದೆ, ರಾಜಾಜ್ಞೆಯನ್ನೂ ಮೀರಿ ಪ್ರಾಪಂಚಿಕ ಸುಖ ಭೋಗಗಳಿಗೆ ಮಹತ್ವ ನೀಡಿದ ನಿನಗೆ ಧಿಕ್ಕಾರ. ಕುಕೃತ್ಯವೆಸಗಿದ ನಿನ್ನಿಂದಾಗಿ ಚಂಪಕಾವತಿ ತಲೆ ತಗ್ಗಿಸುವಂತಾಗಿದೆ. ಮಾತ್ರವಲ್ಲ ದೋಷಕ್ಕೂ ಗುರಿಯಾಗಿದೆ. ಯಾರಲ್ಲಿ ನಮ್ಮ ಕುಲ ಪುರೋಹಿತರನ್ನು ಬರಹೇಳಿ. ಈ ದೋಷಿಯಿಂದಾದ ಪಾತಕ ಸದೃಶ ಕಾರ್ಯದಿಂದಾದ ದೋಷಕ್ಕೆ ಪ್ರಾಯಶ್ಚಿತ್ತವೇನಾದರೂ ಇದೆಯೆ ಎಂದು ಕೇಳಬೇಕು” ಎಂದು ಆಜ್ಞೆ ಮಾಡಿದನು.

ಚಂಪಕಾವತಿಯ ಕುಲ ಪುರೋಹಿತರಾದ ಶಂಖ ಮತ್ತು ಲಿಖಿತರು ಧಾವಿಸಿ ಬಂದು “ಮಹಾರಾಜಾ ಪ್ರಣಾಮಗಳು” ಎಂದು ವಂದಿಸಿದರು. “ರಾಜೇಂದ್ರಾ, ಅವಸರದ ಕರೆಯಾಗಿದೆ. ನಮ್ಮಿಂದ ಏನಾಗಬೇಕಿತ್ತು. ಅಪ್ಪಣೆಯಾದರೆ ಪೂರೈಸುವ ಪ್ರಯತ್ನ ಮಾಡುತ್ತೇವೆ” ಎಂದು ಕೇಳಿಕೊಂಡರು.

ಹಂಸಧ್ವಜನು “ಪುರೋಹಿತರೇ, ನಾನು ಎಲ್ಲರಿಗೂ ಯುದ್ಧಕ್ಕೆ ಸಿದ್ಧರಾಗಿ ಬರುವಂತೆ ರಾಜಾಜ್ಞೆ ಹೊರಡಿಸಿದ್ದೆನು, ತಪ್ಪಿದವರನ್ನು ಕುದಿ‌ಯುವ ಎಣ್ಣೆಯ ಕೊಪ್ಪರಿಗೆಗೆ ಹಾಕಿಸುವ ಶಿಕ್ಷೆಯನ್ನೂ ಘೋಷಿಸಿದ್ದೆ. ಹೀಗಿದ್ದೂ ತನ್ನ ಮಗ ರಾಜಾಜ್ಞೆ ಮೀರಿ ಪತ್ನಿಗೆ ಋತುದಾನ ಮಾಡಲು ತೆರಳಿದ್ದಾನೆ” ಪೂರ್ಣ ವೃತ್ತಾಂತ ವಿವರಿಸಿ ಹೇಳಿ ಅದಕ್ಕೆ ಪರಿಹಾರ ಏನು ಎಂದು ಕೇಳಿಕೊಂಡನು‌.

ಪೂರ್ಣ ಸಂಗತಿಯನ್ನು ಆಲಿಸಿ ವಿಮರ್ಷಿಸಿದ ಕುಲ ಪುರೋಹಿತರಾದ ಶಂಖ ಮತ್ತು ಲಿಖಿತರು ಸಮಾಲೋಚಿಸತೊಡಗಿದರು. ಆ ಬಳಿಕ ” ರಾಜನ್! ನಾವಾಡುವ ನುಡಿ ನಿನಗೆ ರುಚಿಸುತ್ತದೊ ಇಲ್ಲವೋ ನಮಗೆ ತಿಳಿಯದು. ಆದರೆ ನ್ಯಾಯವೇನಿದೆ ಅದನ್ನೂ ಪ್ರಾಮಾಣಿಕವಾಗಿ ಹೇಳಬೇಕಾದುದು ನಮ್ಮ ಧರ್ಮ. ನೀನು ಪ್ರಭುವಾಗಿ ಹೊರಡಿಸಿದ ಆಜ್ಞೆಯನ್ನು ಮೀರಿದುದು ಸುಧನ್ವನ ಅಪರಾಧ. ಅಪರಾಧಿಗೆ ಶಿಕ್ಷೆ ನೀಡುವುದು ರಾಜನ ಕರ್ತವ್ಯ. ನೀನು ನುಡಿದಂತೆ ನಡೆಯಬೇಕಾದುದು ನ್ಯಾಯ. ಇಲ್ಲವಾದರೆ ಸತ್ಯ ಅಸತ್ಯವಾಗುತ್ತದೆ. ವಚನಭ್ರಷ್ಟತೆಯ ದೋಷಕ್ಕೆ ಗುರಿಯಾಗುವೆ. ಸತ್ಯವನ್ನು ಧಿಕ್ಕರಿಸಿದರೆ ದೇವತೆಗಳೂ ಮನ್ನಿಸಲಾರರು. ಸುಳ್ಳಾಡುವವರನ್ನು ಹೊತ್ತಿರುವ ಭೂಮಿ ತಾಯಿಯೂ ಮನ್ನಿಸಲಾರಳು. ಸರ್ವ ಸಂಪದಕ್ಕೆ ಅಧಿಷ್ಟಾತ್ರಿ ದೇವತೆಯಾದ ಲಕ್ಷ್ಮಿಯೂ ಅಂತಹ ನೀಚ ಬುದ್ಧಿಗೆ ಹೇಸಿ ತೊರೆದುಬಿಡುವಳು. ಮಾತ್ರವಲ್ಲ ಧರ್ಮಮೂರ್ತಿಯಾದ ಯಮನಾಲಯದಲ್ಲೂ ತಪ್ಪಿಗಾಗಿ ಕ್ರೂರ ದಂಡನೆಯಾಗುತ್ತದೆ. ಸ್ವರ್ಗ ಸುಖವೂ ಪ್ರಾಪ್ತವಾಗದು ಅಷ್ಟೇ ಅಲ್ಲ ಅರಸನಾಗಿ ಆಳಿಗೊಂದು ನ್ಯಾಯ, ತನಗೊಂದು ನ್ಯಾಯ ಮಾಡಿದ ದೊರೆ ಎಂಬ ಅಪವಾದವೂ ನಿನ್ನ ಮೇಲೆ ಹೊರಿಸಲ್ಪಡುತ್ತದೆ. ಹಾಗಾಗಿ ನ್ಯಾಯ ಮೀರದೆ, ಸ್ವಂತ ಮಗನೆಂದೂ ನೋಡದೆ, ಭೇದಭಾವ ಮಾಡದೆ ಆಜ್ಞೆ ಉಲ್ಲಂಘನೆ ಮಾಡಿದವನಿಗೆ ಈಗಾಗಲೆ ಘೋಷಿಸಿರುವಂತೆ ಕುದಿ ಎಣ್ಣೆಯ ಕೊಪ್ಪರಿಗೆಗೆ ಎಸೆದು ಶಿಕ್ಷೆ ನೀಡು. ಇದುವೆ ಸ್ಪಷ್ಟ ಪರಿಹಾರ” ಎಂದು ತೀರ್ಪು ನೀಡಿದರು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page