27.7 C
Udupi
Friday, May 1, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ -36

ಭರತೇಶ್ ಶೆಟ್ಟಿ, ಎಕ್ಕಾರ್

ಹೀಗೆ ದಿನಗಳ ಸಾಗುತ್ತಿರಲು ಹಸ್ತಿನಾವತಿಯ ಅರಸು ಕುವರ ದೇವವೃತನಿಗೆ ದಿಗ್ವಿಜಯ ಮಾಡುವ ಮನಸ್ಸಾಯಿತು. ತಂದೆಯ ಒಪ್ಪಿಗೆ, ಆಶೀರ್ವಾದ ಪಡೆದು ಸೈನ್ಯ ಸಮೇತ ಹೊರಟನು. ಸಾಹಸಿಗಳಾಗಿ ಎದುರಿಸಿದ ರಾಜರು ದೇವವೃತನ ರಣ ಕೌಶಲಕ್ಕೆ ಸೋತರೆ, ಸಜ್ಜನರು ಅಭಿಮಾನದಿಂದ ಎದುರುಗೊಂಡರು. ಹೀಗೆ ಬಾಹುಬಲದಿಂದ ಭೂ ಮಂಡಲವನ್ನೂ, ಧರ್ಮ ಬುದ್ಧಿಯಿಂದ ಸಜ್ಜನರನ್ನೂ ಗೆದ್ದು ಮರಳಿ ದೇವವೃತ ಹಸ್ತಿನಾವತಿಗೆ ಬರುತ್ತಾನೆ. ತಂದೆ ಶಂತನು ಮಹಾರಾಜನ ಆನಂದ ಅತುಲ್ಯವಾಯಿತು. ತಡಮಾಡದೆ ಮಗನಿಗೆ ಯುವರಾಜ ಪದವಿಯಿತ್ತು ವಿಜ್ರಂಭಣೆಯಿಂದ ಪಟ್ಟಾಭಿಷೇಕ ಮಾಡಿಸಿದರು.

ಹೀಗೆ ದಿನಗಳು ಸಾಗುತ್ತಿರಲು ಶಂತನು ಚಕ್ರವರ್ತಿ ಒಂದು ದಿನ ಮೃಗ ಬೇಟೆಗಾಗಿ ಬಂದವನು ಯಮುನಾ ತೀರದಲ್ಲಿ ಅಪೂರ್ವವಾದ ಪರಿಮಳವನ್ನು ಆಗ್ರಾಣಿಸಿದ. ಎಲ್ಲಿಂದ ಎಂದು ಮೂಲ ಶೋಧಿಸಿದರೆ ಅಲ್ಲೇ ನದೀ ದಂಡೆಯಲ್ಲಿ ಓರ್ವ ದೋಣಿ ನಡೆಸುವ ಕನ್ಯೆ, ಆಕೆಯ ಶರೀರ ಈ ಪರಿಮಳ ಸೂಸುತ್ತಿದೆ. ರೂಪರಾಶಿಯ ಲಾವಣ್ಯವತಿ ಚೆಲುವೆ. ನೋಡಿ ಮನಸೋತ ರಾಜ ಶಂತನು ಪರಿಚಯ ಕೇಳಿದ. ಆಕೆ ಅಂಬಿಗ ದಾಶರಾಜನ ಮಗಳು ಸತ್ಯವತಿ ಎಂದು ತಿಳಿಸಿದಳು. ರಾಜ ಮುಂದುವರಿಸಿ ತನ್ನ ಮನದಾಸೆ ಕೇಳಿದ “ನನ್ನೊಂದಿಗೆ ಅರಮನೆಗೆ ಬರುತ್ತೀಯಾ?” ಅವಳೂ ಜವಾಬ್ದಾರಿಯುತಳಾಗಿ “ನನ್ನ ತಂದೆ ಮದುವೆ ಮಾಡಿಸಿ ಕಳುಹಿಸಿದರೆ ಬರುವೆ” ಎಂದು ಹೇಳಿ ತುಸು ನಾಚಿಕೆಯಿಂದ ಹೊರಟಳು.

ಚಕ್ರವರ್ತಿ ಅನಿಯಂತ್ರಿತ ಮನಸಿನ ಸಾರಥ್ಯದ ರಥವೇರಿದನೋ ಎಂಬಂತೆ, ದಾಶರಾಜನ ಮನೆ ತಲುಪಿದ. ತನ್ನ ಮನದ ವಿಚಾರ ನೇರವಾಗಿ ಹೇಳಿದ. ದಾಶರಾಜ ಚಿಂತೆಗೊಳಗಾದ. ವಿನಮ್ರನಾಗಿ ಮಗಳ ತಂದೆಯಾಗಿ ತನ್ನ ಆಸೆ ಹೇಳಲು ಅನುಮತಿ ಕೇಳಿದ. ಒಪ್ಪಿದ ಚಕ್ರವರ್ತಿ. ಮಹಾರಾಜರೇ, ತಾವು ಸಾಮ್ರಾಟರು, ಆಜ್ಞೆ ಮಾಡಿದರೆ ಪಾಲಿಸಲೇ ಬೇಕಾದ ಕರ್ತವ್ಯ ನಮ್ಮದು. ಹಾಗೆ ಮಾಡದೆ, ನೀವು ಧರ್ಮಾತ್ಮರಾಗಿ ನನ್ನಲ್ಲಿ ಕೇಳುವಷ್ಟು ಸಜ್ಜನಿಕೆ ತೋರಿದ್ದೀರಿ. ಆದರೆ ದಾರ್ಶನಿಕರೊಬ್ಬರು ಸತ್ಯವತಿಯ ಯೋಗ ಭಾಗ್ಯ ವಿಮರ್ಶಿಸಿ ಈಕೆಗೆ ರಾಜಮಾತೆಯಾಗುವ, ಮಕ್ಕಳು ಚಕ್ರವರ್ತಿಗಳಾಗುವ ಸೌಭಾಗ್ಯವಿದೆಯೆಂದು ಹೇಳಿ ಆಶೀರ್ವದಿಸಿದ್ದಾರೆ. ಆದರೆ, ರಾಜಾ ನಿಮ್ಮ ಮಗ ಈಗಾಗಲೆ ಇಂದ್ರನಂತೆ ಪ್ರಭಾವಿಯಾಗಿದ್ದು ಯುವರಾಜನೂ ಆಗಿರುವರಲ್ಲವೇ…? ಮುಂದೆ ನೀವು ನನ್ನ ಮಗಳನ್ನು ವರಿಸಿದರೆ, ನನ್ನ ಮಗಳ ಮಕ್ಕಳು ಚಕ್ರವರ್ತಿಗಳಾಗುವುದು ಅಸಾಧ್ಯವಲ್ಲವೇ ? ಆದ ಕಾರಣ ಮಹಾರಾಜರಾದ ತಾವೇ ನಮ್ಮ ರಕ್ಷಕರು. ನನ್ನ ಮಗಳಿಗೆ ಸೂಕ್ತ ವರನನ್ನು ಹುಡುಕಿ ಮದುವೆ ಮಾಡಲು ಅನುಮತಿ ಕರುಣಿಸಬೇಕು” ಎಂದು ತನ್ನ ಆಶೆ ಹೇಳಿ ಬೇಡಿದನು. ಸಜ್ಜನ ಧರ್ಮನಿಷ್ಠ ರಾಜ ಆತನ ವಿನಂತಿ ಮನ್ನಿಸಿ ಅದರ ಅಂತರಾರ್ಥ ಅರಿತು ಮರು ಮಾತಾಡದೆ ಸಮ್ಮತಿ ಸೂಚಿಸಿ ಅರಮನೆ ಸೇರಿದ.

ಅರಮನೆ ಸೆರೆಮನೆಯಂತೆ ಭಾಸವಾಯಿತು. ಏಕಾಂತ ಬೇಕೆಂದು ಶಯನಾಗೃಹ ಸೇರಿ ವಿಶ್ರಾಂತನಾದ ಚಕ್ರವರ್ತಿ. ದೇವವೃತ ತಂದೆಯ ಏಕಾಂತವಾಸ ತಿಳಿದು ಯಾಕೆ, ಏನಾಗಿದೆ ಎಂದು ವಿಚಾರಿಸಿದ. ಏನಿಲ್ಲ ವಿಶ್ರಾಂತಿ ಬೇಕು ಮನಸ್ಸಿಗೆ ಎಂದಷ್ಟೇ ಹೇಳಿ ಯುವರಾಜನನ್ನು ಹೊರ ಕಳುಹಿಸುತ್ತಾನೆ ಶಂತನು ಮಹಾರಾಜ. ತಂದೆಯ ಮನದಲ್ಲೇನೋ ದುಗುಡವಿದೆಯೆಂದು ಕಂಡು ಅರ್ಥೈಸಿದ ದೇವವೃತ ಅದರ ಕಾರಣ ಹುಡುಕಲು ಅನ್ವೇಷಣೆಗೆ ಮುಂದಾದ. ಪ್ರಾಜ್ಞ ಮಂತ್ರಿಗಳು ವಿಚಾರವಾಹಕರ ಮುಖೇನ ತಿಳಿದ ಸತ್ಯವತಿಯ ಪ್ರಕರಣ ದೇವವೃತನಿಗೆ ಗೊತ್ತಾಯಿತು.

ನೇರವಾಗಿ ದಾಶರಾಜನ ಬಳಿ ಅಪ್ಪನಿಗೆ ಹೆಣ್ಣು ಕೇಳಲು ಬಂದ ದೇವವೃತ. ದಾಶರಾಜ ವಿನಯ ಭಯಭಾವ ಮಿಶ್ರಿತನಾಗಿ “ಯುವರಾಜರೇ ನಿಮ್ಮ ಪರಾಕ್ರಮಕ್ಕೆ ಜಗತ್ತೇ ನಡುಗುತ್ತದೆ. ಆದರೂ ಧರ್ಮಯುಕ್ತ ಮಾರ್ಗದಲ್ಲಿ ನೀವು ಬಂದಿದ್ದೀರಿ. ನಿಮ್ಮವರಾದ ನಾಲ್ಕೂ ವರ್ಣದವರನ್ನೂ ಜತೆಗೂಡಿಸಿ ಹೆಣ್ಣು ಕೇಳಲು ಬಂದಿದ್ದೀರಿ. ತಾವು ಧರ್ಮಾತ್ಮರೂ, ದಯಾಳುಗಳೂ ಆಗಿದ್ದೀರಿ. ಆದ ಕಾರಣ ಒಬ್ಬ ಹೆಣ್ಣಿನ ತಂದೆಯಾಗಿ ಮಗಳ ಭವಿಷ್ಯದ ಕುರಿತು ಯೋಚಿಸಿ ನನ್ನ ಮನದಾಸೆ ಹೇಳಲು ತಮ್ಮಲ್ಲಿ ಅನುಮತಿ ಕೇಳುತ್ತಿದ್ದೇನೆ.. ಎಂದು ವಿನಂತಿಸಿದ. ದೇವವೃತ ಮುಕ್ತವಾಗಿ ಹೇಳಬಹುದು ಎಂದು ಅನುಮತಿಯಿತ್ತ. ದಾಶರಾಜ ಮುಂದುವರಿಸಿದ, “ಕನ್ಯಾಶುಲ್ಕ ಕೇಳುವುದು ನಮ್ಮ ಸಂಪ್ರದಾಯ” ಎಂದು ತನ್ನ ಹೆಬ್ಬಯಕೆಯನ್ನು ಹೇಳಿದ.
ದೇವವೃತ ಯಾವುದೇ ಹಿಂಜರಿಕೆಯಿಲ್ಲದೆ ಕೇಳಬಹುದು ಎಂದು ಸೂರ್ಯನನ್ನು ನೋಡಿ ಪ್ರಮಾಣವಾಕ್ಯದಂತೆ ನಿಷ್ಕಲ್ಮಷ ಹೃದಯದಿಂದ ನಡೆಸಿಕೊಡುತ್ತೇನೆ ಎಂದು ಸಮ್ಮತಿಸಿದ. ಈಗಾಗಲೇ ನೀವು ಯುವರಾಜನಾಗಿ ಇರುವುದರಿಂದ, ಚಕ್ರವರ್ತಿಗಳು ನನ್ನ ಮಗಳನ್ನು ವರಿಸಿದರೆ, ಅವಳಿಗೆ, ಅವಳ ಮಕ್ಕಳಿಗೆ ಏನುಂಟು? ರಾಜ್ಯ ಸಿಕ್ಕೀತೇ? ಎಂದು ವಿನಮ್ರನಾಗಿ ಯುವರಾಜನಲ್ಲಿ ಕ್ಷಮೆ ಕೇಳಿ ತಂದೆಯಾಗಿ ತನ್ನ ಆಸೆ ಹೇಳಿಕೊಂಡ ದಾಶರಾಜ. ದೇವವೃತ ತಾನು ಯುವರಾಜ ಪದವಿ ತ್ಯಾಗ ಮಾಡುವುದಾಗಿಯೂ, ಸತ್ಯವತಿ ಅಮ್ಮ ಮಹಾರಾಣಿಯಾಗಿ ಅವರ ಮಗನೇ ಯುವರಾಜನಾಗಲಿ ಎಂದು ವಾಗ್ದಾನ ನೀಡಿದ ದೇವವೃತ. ಎಂತಹ ಉದಾರ ಮನಸ್ಸು.

ಈ ಮಾತುಗಳನ್ನು ಕೇಳಿ ದಾಶರಾಜ ಯುವರಾಜನ ನಿಸ್ವಾರ್ಥ ಔದಾರ್ಯತೆ ಕಂಡು ಒಮ್ಮೆಗೆ ಸ್ತಂಭೀಭೂತನಾದ. ಆದರೂ ಯೋಚಿಸಿ ಕೇಳಿದ, ಈಗ ನೀವು ಹೇಳುವುದು ಸರಿ, ಭವಿಷ್ಯತ್ತಿನಲ್ಲಿ ನಿಮ್ಮ ಮಕ್ಕಳು ದಾಯಾದಿ ಕಲಹ ಸೃಷ್ಟಿಸಿ ಅತಿಕ್ರಮಿಸಿದರೆ? ಈ ಮಾತು ಕೇಳಿದ ದೇವವೃತ ಯೋಚನಾಮಗ್ನನಾದ‌. ದಾಶರಾಜನ ಬಳಿ ಬಂದು, ಅಯ್ಯಾ ನೀವು ಹಿರಿಯರು. ಚತುರ್ವರ್ಣದವರೂ ಜೊತೆಗಿದ್ದಾರೆ. ಇವರ ಸಮ್ಮುಖದಲ್ಲಿ ಘೋಷಣೆ ಮಾಡುತ್ತೇನೆ. ನಿಮ್ಮ ಮಗಳು ನನಗೆ ಮಾತೆ‌ ಸಮಾನರು, ಅವರೂ ಬರಲಿ. ಕರೆಸುವಿರಾ ಎಂದು ವಿನಂತಿಸಿದ. ಹಾಗೆ ಬಂದಂತಹ ಸತ್ಯವತಿಗೆ ಪ್ರಣಾಮ ಸಲ್ಲಿಸಿ ಅವರೆಲ್ಲರ ಸಮ್ಮುಖದಲ್ಲಿ ತನ್ನ ಧೃಡ ನಿರ್ಧಾರವನ್ನು ಪ್ರಕಟಿಸಿದ.

“ನಿಮ್ಮೆಲ್ಲರ ಮುಂದೆ ಬದ್ದ ಪ್ರತಿಜ್ಞನಾಗಿ ನಾನು ಆಡುತ್ತಿರುವ ಮಾತುಗಳನ್ನು ಕೇಳಿ, ಚಂದ್ರವಂಶೀಯ ಹಸ್ತಿನಾವತಿಯ ಚಕ್ರವರ್ತಿ ಶಂತನು ಹಾಗೂ ಪರಮ ಪಾವನೆ ಗಂಗಾದೇವಿಯ ಪುತ್ರ ದೇವವೃತನಾದ ನನ್ನ ಪ್ರತಿಜ್ಞೆಯನ್ನು ಕೇಳಿರಿ.. ನನ್ನ ತಂದೆಯ ಹಿರಿಯ ಮಗನೂ, ಹಸ್ತಿನಾವತಿಯ ಯುವರಾಜನೂ ಆಗಿರುವ ನಾನು ಈ ಮುಹೂರ್ತದಿಂದಲೇ ನನಗೆ ಸಂಪ್ರಾಪ್ತವಾಗುವ ನಮ್ಮ ಸಾಮ್ರಾಜ್ಯದ ಪೂರ್ಣಾಧಿಕಾರವನ್ನು ಮುಂದೆ ನನ್ನ ತಂದೆಯನ್ನು ವಿವಾಹವಾಗಿ ಹಸ್ತಿನಾವತಿಯ ಸಾಮ್ರಾಜ್ಞಿಯಾಗಿ ಬರುವ ಸತ್ಯವತಿ ದೇವಿಯವರಲ್ಲಿ ಹುಟ್ಟುವ ಸಂತತಿಗೆ ಸಲ್ಲುವಂತೆ ಆತ್ಮ ಸಂತೋಷಪೂರ್ವಕವಾಗಿ ತ್ಯಾಗ ಮಾಡುತ್ತೇನೆ. ಇಂದಿನಿಂದ ಅಧಿಕಾರವನ್ನೂ, ಮೈಥುನವನ್ನೂ ವಿವರ್ಜಿಸುತ್ತೇನೆ. ಇನ್ನು ಮುಂದೆ ಜಗತ್ತಿನ ಎಲ್ಲಾ ಸ್ತ್ರೀಯರೂ ನನಗೆ ಗಂಗಾದೇವಿಯಂತೆ ಮಾತೃ ಸಮಾನರು. ಅಖಂಡವಾದ ಬ್ರಹ್ಮಚರ್ಯದಲ್ಲೇ ಇದ್ದು, ಅಧಿಕಾರಕ್ಕೆ ಆಸೆ ಪಡದೆ – ಸಿಂಹಾಸನ ಏರದೆ, ಹಸ್ತಿನಾವತಿಯ ಸಿಂಹಾಸನದ ರಕ್ಷಣೆಗಾಗಿ ಬದುಕುತ್ತೇನೆ. ನನ್ನ ಈ ಮಾತುಗಳನ್ನು ಮಾತೆ ಗಂಗಾದೇವಿ, ತಂದೆ ಶಂತನು ಚಕ್ರವರ್ತಿಯ ಪಾದದ ಆಣೆಯಾಗಿ ನಡೆಸಿಕೊಡುತ್ತೇನೆ. ಅಖಂಡವಾದ ನಮ್ಮ ಸಾಮ್ರಾಜ್ಯವು ದಾಶರಾಜನ ಮಗಳ ಸಂತತಿಗೆ ಒಪ್ಪಿಸಿಕೊಡುವ ಕನ್ಯಾ ಶುಲ್ಕ

ಇಂತಹ ನಿಷ್ಟ ಪ್ರತಿಜ್ಞಾವಾಕ್ಯ ಘೋಷಣೆಯಾದಾಗ ಹನಿ ಹನಿ ಸಿಂಚನವೂ, ಪುಷ್ಪ ವೃಷ್ಟಿಯೂ ಆಗಿ ಅಂಬರ ಪಥದಲ್ಲಿ ದೇವತೆಗಳು ಕಾಣಿಸಿಕೊಂಡು ” ಭಲೇ” “ಭಲೇ” ದೇವವೃತನೇ! ಭೀಷಣವಾದ ಪ್ರತಿಜ್ಞೆಯನ್ನು ಮಾಡಿ ನೀನು ಪಿತೃ ಸಂತುಷ್ಟಿಯನ್ನು ಹೆಚ್ಚಿಸಿದೆ. ಸಕಲ ಶ್ರೇಯಸ್ಸಿಗೂ ಪಾತ್ರನಾದೆ. ಮುಂದೆ ನೀನು ಭೀಷ್ಮ ನೆಂದೇ ಪ್ರಖ್ಯಾತನಾಗು ಎಂದು ಹರಸಿದರು. ಈ ದೇವೋಕ್ತಿ ಆಲಿಸಿ ಭೀಷ್ಮನಿಗೂ ಧನ್ಯತಾಭಾವ ಮೂಡಿತು.

ಮುಂದುವರಿಯುವುದು….

✍🏻ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page