31 C
Udupi
Sunday, May 3, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 272

ಭರತೇಶ ಶೆಟ್ಟಿ , ಎಕ್ಕಾರ್

ಶ್ರೀ ಕೃಷ್ಣನ ಜೊತೆ ಪಾಂಡವರ ಹಿತೈಷಿಗಳಾದ ದ್ರುಪದ, ದೃಷ್ಟದ್ಯುಮ್ನ, ವಿರಾಟ, ಉತ್ತರಕುಮಾರ, ಅಭಿಮನ್ಯು, ಶಂಖ, ಶ್ವೇತ, ಶಿಖಂಡಿ, ಬಲರಾಮ, ಸಾಂಬ, ಸಾತ್ಯಕಿ, ಪ್ರದ್ಯುಮ್ನ ಮೊದಲಾಗಿ ಬಹಳಷ್ಟು ಮಂದಿ ಇದ್ದಾರೆ. ಅಭಿಮನ್ಯು ಮತ್ತು ಉತ್ತರೆಯ ವಿವಾಹ ಸಮಾರಂಭ ಕಳೆದು ಸಂತೋಷದಿಂದಿದ್ದಾರೆ. ತಮ್ಮವರೊಡನೆ ಕುಶಲೋಪರಿ ವಿಚಾರ ವಿನಿಮಯದಲ್ಲಿ ತೊಡಗಿದ್ದಾರೆ.

ಹೀಗಿರಲು ಸಮಾಹಿತರ ಮುಂದೆ ಶ್ರೀಕೃಷ್ಣ ತನ್ನ ಮನದ ಅಭಿಪ್ರಾಯ ಪ್ರಕಟಿಸಿದ “ಹಿರಿಯರೂ, ಬಂಧುಗಳೂ, ಸ್ವಜನ ಬಾಂಧವರೂ ಎಲ್ಲರೂ ಇಲ್ಲಿದ್ದೇವೆ. ಪಾಂಡವರ ಬದುಕಿನ ಆಗು ಹೋಗುಗಳು ನಮಗೆ ತಿಳಿದಿದೆ. ರಾಜಸೂಯ ಯಾಗದ ಮುಖೇನ ಚಕ್ರವರ್ತಿಯಾದ ಧರ್ಮರಾಯನ ಸಾಮ್ರಾಜ್ಯ – ಸಂಪದವನ್ನೆಲ್ಲಾ ದ್ಯೂತದ ಮುಖೇನ ಶಕುನಿಯ ತಂತ್ರಗಾರಿಕೆಯಲ್ಲಿ ಕೌರವ ವಶಪಡಿಸಿದ್ದಾನೆ. ಪಾಂಡವರು ಸುದೀರ್ಘ ವನವಾಸ – ಅಜ್ಞಾತವಾಸ ಪೂರೈಸಿ ಈಗ ಕಲ್ಯಾಣ ಕಾರ್ಯವೊಂದನ್ನು ನಡೆಸಿ ನಮ್ಮ ಜೊತೆ ಇದ್ದಾರೆ. ಇವರ ಮುಂದಣ ಭವಿಷ್ಯ ಏನು? ಧರ್ಮಯುಕ್ತವಾಗಿ ಬದುಕುತ್ತಿರುವ ಅವರ ನಾಳೆಯ ದಿನಗಳೂ ಅದೇ ದಾರಿಯಲ್ಲಿ ಸಾಗಬೇಕು. ಹಿತೈಷಿಗಳಾದ ನಾವೆಲ್ಲರೂ ತರ್ಕಿಸಿ ಈ ಬಗೆಯಲ್ಲಿ ಆಲೋಚಿಸಬೇಕಾಗಿದೆ. ಕೌರವ ಹಠವಾದಿ, ಸ್ವಾರ್ಥಿ, ಅಸಹನೀಯ ಅಪರಾಧಗಳನ್ನು ಗೈದರೂ ಸೋದರ ಬಂಧುತ್ವದ ಕಾರಣದಿಂದ ದಾಯಾದಿ ಕಲಹಕ್ಕೆ ಪಾಂಡವರು ಮನಮಾಡದೆ ಸಹಿಸಿಕೊಂಡಿದ್ದಾರೆ. ಪಾಂಡುಪುತ್ರರ ಸಾಮ್ರಾಜ್ಯ ದುರ್ಯೋಧನನ ಸ್ವಾಧೀನದಲ್ಲಿದೆ. ಹಾಗೆಂದು ಧೃತರಾಷ್ಟ್ರ ಪುತ್ರರೂ ನಮಗೆ ಬಂಧುಗಳು. ಎರಡು ವಿಭಾಗಕ್ಕೂ ಹಿತವಾಗುವಂತೆ ನ್ಯಾಯ – ಧರ್ಮ ಸಮ್ಮತವಾಗಿ, ಲೋಕ ಹಿತವನ್ನೂ ಗಮನದಲ್ಲಿಟ್ಟು ಯೋಚಿಸಿ ತೀರ್ಮಾನ ಕೈಗೊಳ್ಳಬೇಕು. ನಿಮ್ಮ ಸಲಹೆ ಸೂಚನೆಗಳಿದ್ದರೆ ಹೇಳಿ” ಎಂದು ವಿಚಾರ ಪ್ರಸ್ತಾಪ ಮಾಡಿದನು.

ಬಲರಾಮನು ಆರಂಭಿಸಿ “ನಮಗೆ ಕೌರವ – ಪಾಂಡವ ಎಂಬ ಭೇದ ಕಲ್ಪಿಸಲಾಗದು. ಇಬ್ಭಾಗವಾಗಿರುವ ಎರಡೂ ಪಕ್ಷಗಳೂ ನಮಗೆ ಬಂಧುಗಳೆ ಆಗಿದ್ದಾರೆ. ಸುಭದ್ರೆಯನ್ನು ಅರ್ಜುನನಿಗಿತ್ತು ವಿವಾಹ ಮಾಡಿಸಿದ್ದೇವೆ. ಹಾಗೆಯೆ, ದುರ್ಯೋಧನನ ಮಗಳು ‘ಲಕ್ಷಣೆ’ಯನ್ನು ಕೃಷ್ಣನ ಪುತ್ರ ಸಾಂಬನಿಗೆ ತಂದು ಸೊಸೆಯಾಗಿ ಸ್ವೀಕರಿಸಿ ಸಂಬಂಧ ಬೆಳೆಸಿದ್ದೇವೆ. ಮೇಲಾಗಿ ದುರ್ಯೋಧನ ಮತ್ತು ಭೀಮಸೇನ ಇಬ್ಬರಿಗೂ ಗುರುವಾಗಿ ನಾನು ಗದಾಯುದ್ಧ ಕಲಿಸಿ ಕೊಟ್ಟಿದ್ದೇನೆ. ಹಾಗಾಗಿ ಸಮಾನವಾದ ಎರಡು ಭಾಗಗಳಾಗಿ ವಿಭಜನೆಗೊಂಡು ವೈರತ್ವ ಬೆಳೆಸುತ್ತಿರುವ ಸೋದರರನ್ನು ದಾಯಾದಿಗಳಾಗಲು ಬಿಡದೆ ಸೌಹಾರ್ದತೆಯಿಂದ ಒಂದುಗೂಡಿಸುವ ಪ್ರಯತ್ನ ನಮ್ಮಿಂದಾಗಬೇಕು. ಈ ಕಾರ್ಯಕ್ಕೆ ತೊಡಗುವ ಮೊದಲು ಇಂದಿನವರೆಗೆ ಏನೇನು ಆಗಿದೆಯೊ ಅದನ್ನೇ ವಿಮರ್ಷೆ ಮಾಡುವುದನ್ನು ಬಿಟ್ಟು ನಾಳೆಯ ಸುಂದರ ಭವಿಷ್ಯದ ನಿರೀಕ್ಷೆಯಿಂದ ತೊಡಗಬೇಕು.” ಎಂದು ತನ್ನ ವಾದ ಮಂಡಿಸಿದನು.

ಬಲರಾಮನ ಮಾತು ಕೇಳಿದ ಸಾತ್ಯಕಿ “ನಾವು ಸೇರಿದವರು ಪಾಂಡವರ ಹಿತೈಷಿಗಳಾಗಿ ಬಂದವರು. ನಮ್ಮ ಉದ್ದೇಶವೂ ನಮ್ಮಿಂದ ಪಾಂಡವರಿಗೆ ಉಪಕಾರವಾಗಲಿ ಎಂದೇ ಇದೆ. ಧರ್ಮಪಥದಲ್ಲಿ ಸಾಗುತ್ತಾ, ಸರ್ವ ಕಷ್ಟಗಳನ್ನು ಸಹಿಷ್ಣುತೆಯಿಂದ ಅನುಭವಿಸುತ್ತಾ ಬದುಕುತ್ತಿರುವ ಪಾಂಡವರಿಗೆ ಅನ್ಯಾಯ ಮಾಡಿದವರು ಅಕ್ಷಮ್ಯರು ಆಗಿದ್ದಾರೆ. ಅಂತಹ ಅಧರ್ಮಿಗಳು ಸಾಮ, ದಾನ ಭೇದಗಳಿಗೆ ಬಗ್ಗದೆ ಉಳಿದರೆ, ಅವರ ವಿರುದ್ಧ ದಂಡ ಪ್ರಯೋಗದ ಪ್ರತಿಕಾರ ಅಂತಿಮವಾಗಿ ಉಳಿಯುವ ಮಾರ್ಗವಾಗುತ್ತದೆ. ಅಂತಹ ಸಂದರ್ಭ ಯುಕ್ತವಾದ ಧರ್ಮಯುದ್ಧ ಮಾಡುವುದಾದರೆ ನಮ್ಮ ಸಂಪೂರ್ಣ ಬೆಂಬಲವಿದೆ” ಎಂದನು.

ವಿರಾಟನು “ಶ್ರೀ ಕೃಷ್ಣ, ನಿನಗೆ ತಿಳಿಯದ ಸತ್ಯ ಈ ಜಗದಲ್ಲಿದೆಯೆ? ನಮ್ಮಲ್ಲಿ ಕೇಳಿ ತೀರ್ಮಾನಿಸುವ ಬದಲಾಗಿ, ಯಾವುದು ಸರಿಯೊ, ಯಾವುದರಿಂದ ಲೋಕಕ್ಕೆ ಒಳಿತಾಗುವುದೊ ಅಂತಹ ನ್ಯಾಯ ಮಾರ್ಗವನ್ನು ನೀನೇ ಸೂಚಿಸು. ನಾವು ಶಿರಸಾ ವಹಿಸಿ ಹಾಗೆಯೆ ಪಾಲಿಸುವವರಿದ್ದೇವೆ” ಎಂದು ಕೃಷ್ಣನತ್ತ ನೋಡಿ ಕೈಮುಗಿದು ನಿಂತನು.

ಎಲ್ಲರ ಅಭಿಪ್ರಾಯ ಕೇಳುತ್ತಿದ್ದ ದ್ರುಪದ “ಸಾತ್ಯಕಿ ಹೇಳಿದ ವಿಚಾರ ಸರಿಯಾಗಿ ಇದೆ. ಧರ್ಮಿಷ್ಟರಿಗೆ ಬಾಧೆ ನೀಡಿದವರು ಅಕ್ಷಮ್ಯರು. ಆದರೆ ಯುದ್ದಕ್ಕೆ ತೊಡಗುವಲ್ಲಿ ನಮಗೇನೂ ಭಯವಿಲ್ಲ. ಒಂದು ವೇಳೆ ಯುದ್ಧವಾದರೆ, ಮಿತ್ರ ದೇಶಗಳ ಸೇನೆಗಳೂ ಇತ್ತಂಡವಾಗಿ ರಣದಲ್ಲಿ ಸೇರಿ ಸಮಗ್ರ ಮಾರಣ ಹೋಮವಾಗುತ್ತದೆ. ಅಂತಹ ಸರ್ವನಾಶಕ್ಕೆ ನಾವು ಕಾರಣ ಆಗಬಾರದು ಎಂದು ಪಾಂಡವರು ಸಕಲ ಸಂಪದ, ಸಾಮ್ರಾಜ್ಯವನ್ನು ಕೌರವನಿಗೆ ಸಮರ್ಪಿಸಿ, ತಪೋವನ ಸೇರಿ ತಪವನ್ನಾಚರಿಸಲು ತೊಡಗಿದರೂ, ಆ ದುರ್ಯೋಧನನಿಗೆ ಸಮಾಧಾನವಾಗದೆ ಅಲ್ಲಿಗೂ ಬಂದು ತೊಂದರೆ ನೀಡದಿರಲಾರ. ಹಾಗಾಗಿ ಪಾಂಡವರು ಯುದ್ದ ಬೇಡವೆಂದು ಬಯಸಿದರೂ, ಅದು ಅವರನ್ನು ಬೆಂಬಿಡದೆ ಬರುವುದು ಸಂಭವನೀಯ. ಅತಿಬಲರೂ, ಪ್ರಾಜ್ಞರೂ, ಹಿರಿಯರೂ, ಸರ್ವ ಸಮರ್ಥರೂ ಆದ ಭೀಷ್ಮಾಚಾರ್ಯರಿಗೆ ನಿಯಂತ್ರಿಸಲಾಗದೆ ಬೆಳೆದ ಕೌರವ ಅಂಕೆ ಮೀರಿದ್ದಾನೆ. ಆದರೂ ಬಲರಾಮರು ತರ್ಕಿಸಿದಂತೆ ಗತ ದಿನಗಳನ್ನು ಗಮನಿಸದೆ, ಮುಂದಿನ ಯೋಗಕ್ಷೇಮಕ್ಕಾಗಿ ಒಂದು ಸುಸೂತ್ರದ ಒಪ್ಪಂದ ಮಾಡಿಸಿ, ಸಾಮ್ರಾಜ್ಯವನ್ನು ವಿಭಾಗ ಮಾಡಿ ಪಾಂಡವ ಕೌರವ ಈ ಇಬ್ಬರೂ ಹಂಚಿಕೊಳ್ಳಲು ಒಮ್ಮತದಿಂದ ಒಡಂಬಡುವುದಾದರೆ ಸೌಖ್ಯವಾದೀತು. ಅದಕ್ಕಾಗಿ ಪ್ರಭಾವಿ, ಜ್ಞಾನ ಸಂಪನ್ನ, ದಕ್ಷತೆಯುಳ್ಳ ಓರ್ವ ಸಮರ್ಥನನ್ನು ಕಳುಹಿಸಿ, ಹಸ್ತಿನಾವತಿಗೆ ವಿಚಾರ ಮುಟ್ಟಿಸಿ ಅಭಿಪ್ರಾಯ ಕೇಳಬೇಕು. ಒಪ್ಪಿದರೆ ಎಲ್ಲರಿಗೂ ಕ್ಷೇಮವಾದೀತು” ಎಂದು ನುಡಿದನು.

ದ್ರುಪದನ ಮಾತು ಎಲ್ಲರಿಗೂ ಸರಿಯೆಂದು ಕಂಡಿತು. ಆಗ ದೃಷ್ಟದ್ಯುಮ್ನ “ನಮ್ಮ ಧರ್ಮವೂ – ಕರ್ತವ್ಯವೂ ಆಗಿ ಓರ್ವ ಪ್ರಮುಖನನ್ನು ಕಳುಹಿಸಿ ಪ್ರಯತ್ನಿಸೋಣ. ಹಾಗೆಂದು ಕೌರವ ಈ ಸಲಹೆಗೆ ಒಪ್ಪುತ್ತಾನೆ ಎಂಬ ಕನಿಷ್ಟ ಭ್ರಮೆಯೂ ನನಗಿಲ್ಲ. ಆದರೂ ಧರ್ಮವೆ ಆಗಿರುವ ಈ ನಡೆಯಲ್ಲಿ ಸಾಗಬೇಕಾದದ್ದು ಒಳ್ಳೆಯದೆ ಆಗಿದೆ. ಈ ಕೆಲಸದಲ್ಲಿ ಮುಂದುವರಿಯುವ ನಾವು ಮೈಮರೆತು ಕುಳಿತುಕೊಳ್ಳುವ ಹಾಗಿಲ್ಲ. ಕಾಲಹರಣಕ್ಕೆ ಇದು ಸಮಯವಲ್ಲ. ನನ್ನ ಸಲಹೆ ಏನಂದರೆ, ಸೈನ್ಯ ಸಂಗ್ರಹ ಮತ್ತು ಮೈತ್ರಿಗಾಗಿ ನಮ್ಮ ಮಿತ್ರದೇಶಗಳೊಡನೆ ಸಂಪರ್ಕ ಸಾಧಿಸಿ ನಮ್ಮ ಪಕ್ಷವನ್ನು ಬಲವರ್ಧನೆಗೊಳಿಸಬೇಕು. ಕ್ಷತ್ರೀಯರ ಬಳಿ ಯಾರು ಮೊದಲು ಸಂಧಿಸಿ ಸಹಾಯ ಕೇಳುತ್ತಾರೋ ಅವರಿಗೆ ಆಯಿತು ಎಂದು ಒಪ್ಪಿಕೊಳ್ಳುವ ಗುಣವಿದೆ. ನಾವೇನಾದರೂ ಸುಮ್ಮನುಳಿದರೆ ಕೌರವ ಈ ಕಾರ್ಯದಲ್ಲಿ ಮುಂದುವರಿದು ನಮ್ಮ ಇದಿರಾಗಿ ಅತಿ ಬಲ ಸೇನೆ ಸಜ್ಜುಗೊಳಿಸುತ್ತಾನೆ. ಸಂಧಿಯ ಕಾರ್ಯ ಯಶಸ್ಸನ್ನು ಕಂಡರೆ ಮೈತ್ರಿಗೆ ದೋಷವಿಲ್ಲ. ಒಂದು ಪಕ್ಷ ತಿರಸ್ಕೃತವಾದರೆ ಆಗ ಈ ಮೈತ್ರಿ ಅನಿವಾರ್ಯವಾಗುತ್ತದೆ. ಹಾಗಾಗಿ ಈಗಿಂದಲೆ ನಮ್ಮ ಪಕ್ಷದಿಂದ ಎಲ್ಲಾ ಮಿತ್ರದೇಶಗಳ ರಾಜರ ಸಂಪರ್ಕ ಆರಂಭಗೊಳಿಸುವುದು ಉತ್ತಮ” ಎಂದು ದೂರದೃಷ್ಟಿಯ ಯೋಚನೆಯ ಯೋಜನೆ ಮಂಡಿಸಿದನು.

ಎಲ್ಲ ಸ್ವಜನ ಬಂಧುಗಳ ನಿಲುವನ್ನು ಅರ್ಥೈಸಿಕೊಂಡು ಶ್ರೀ ಕೃಷ್ಣ, ಹಿರಿಯನೂ ಪ್ರಾಜ್ಞನೂ ಆಗಿರುವ ದ್ರುಪದರಾಜನನ್ನು ಕರೆದು “ಮಹಾರಾಜ! ನೀನು ನಿನ್ನ ಮಗಳಾದ ದ್ರೌಪದಿಯನ್ನು ಪಾಂಡವರಿಗಿತ್ತು ಕನ್ಯಾದಾನ ಮಾಡಿದ ಪಿತ. ಹಿತಚಿಂತಕನೂ ಹೌದು. ಜವಾಬ್ದಾರಿಯುತ ಈ ಸಂಧಾನ ವ್ಯವಸ್ಥೆಯ ಸಿದ್ಧತೆ ನೀನು ಮಾಡಬೇಕು. ಉತ್ತಮ ಜ್ಞಾನವುಳ್ಳವರನ್ನು ನೇಮಿಸಿ ಈ ಮಹತ್ಕಾರ್ಯವನ್ನು ಸಾಂಗವಾಗಿ ನೆರವೇರಿಸುವ ಪ್ರಯತ್ನ ನಿನ್ನದಾಗಲಿ. ಕೌರವ ಪಾಂಡವ – ಈರ್ವರೂ ನಮಗೆ ಬೇಕಾಗಿರುವ ಬಂಧುಗಳಾಗಿದ್ದಾರೆ. ಪುರುಷ ಪ್ರಯತ್ನವಾಗಿ ಸಂಭಾವ್ಯ ಸರ್ವನಾಶವನ್ನು ತಡೆಯುವ ಪ್ರಯತ್ನ ಮಾಡೋಣ. ಮತ್ತೆ ದೈವ ಸಂಕಲ್ಪ ಏನಿದೆಯೋ ಅದು ಆಗಲಿದೆ. ಈ ಪ್ರಯತ್ನದ ಪರಿಣಾಮ ಏನಾಗುವುದೋ ನಮಗೂ ತಿಳಿಸಿ” ಎಂದು ತನ್ನ ತೀರ್ಮಾನ ತಿಳಿಸಿದನು.

ದ್ರುಪದನು ಹಾಗೆಯೆ ಆಗಲಿ ಎಂದು ಒಪ್ಪಿ, ತನ್ನ ಆಸ್ಥಾನದ ರಾಜ ಪುರೋಹಿತನೂ, ಪರಮ ಜ್ಞಾನಿಯೂ ಆಗಿರುವ ‘ಶತಾನಂದ’ ರನ್ನು ಈ ಸಂಧಿಕಾರ್ಯಕ್ಕೆ ನಿಯೋಜಿಸಿ ಹಸ್ತಿನಾವತಿಗೆ ಕಳುಹಿಸುವ ವ್ಯವಸ್ಥೆ ಮಾಡಿದನು.

ಉಪಪ್ಲಾವ್ಯದಲ್ಲಿ ಅಭಿಮನ್ಯು ಉತ್ತರೆಯ ಕಲ್ಯಾಣಕ್ಕೆ ಬಂದು ಸೇರಿದ್ದವರೆಲ್ಲಾ ತಮ್ಮ ತಮ್ಮ ದೇಶಗಳಿಗೆ ಹೊರಟರು. ದ್ರುಪದ ಮತ್ತು ವಿರಾಟ ಪಾಂಡವರ ಜೊತೆಯಲ್ಲಿ ಮುಂದಿನ ಯೋಜನೆ ವ್ಯವಸ್ಥೆಗಾಗಿ ಉಳಿದುಕೊಂಡರು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page