28.2 C
Udupi
Thursday, April 30, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 22

ಭರತೇಶ್ ಶೆಟ್ಟಿ, ಎಕ್ಕರ್

ಈವರೆಗಿನ ಪುಣ್ಯ ಕಥಾಯಾನದಲ್ಲಿ – ಪ್ರಸ್ತಾವನ ಪರ್ವ ಹಾಗೂ ಪುರಾಣ ಪರ್ವದ ಕಥನಗಳನ್ನು ಸಂಕ್ಷಿಪ್ತವಾಗಿ ತಿಳಿಯುತ್ತಾ ಇನ್ನು ವಂಶಾವತರಣ ಪರ್ವಕ್ಕೆ ಸಾಗುತ್ತಿದ್ದೇವೆ. ಈ ತನಕ ನಾವು ಮನನ ಮಾಡಿದ ಕಥಾ ವಿಚಾರಗಳಲ್ಲಿ ನಮ್ಮ ಮನಸ್ಸಿಗೆ ಕೆಲವೊಂದು ಗೊಂದಲಗಳಾಗಿರಬಹುದು. ಉದಾಹರಣೆಗೆ ಗುರುಪತ್ನಿಯೊಡನೆ ಚಂದ್ರ ವ್ಯವಹರಿಸಿದ ರೀತಿ ಧರ್ಮವೇ? ಎಂಬ ಜಿಜ್ಞಾಸೆ ಬಂದಿರಬಹುದು. ತಪ್ಪು ಕೆಲಸಗಳನ್ನು ಅವರಾದರೂ ಮಾಡಲೇಬಾರದು. ಆದರೆ ಅವರು ಪುಣ್ಯಜೀವಿಗಳು. ಕಾರಣಾಂತರಗಳಿಂದ ಯುಗಧರ್ಮದ ಅನಿವಾರ್ಯತೆಗೆ ಆ ಮಹಾಶಕ್ತಿಗಳಿಂದ ದಿವ್ಯ ಚೇತನ ಸೃಷ್ಟಿಯಾಗಬೇಕಾದದ್ದು ಕಾರ್ಯಕಾರಣವೂ ಆಗಿ ಅನಿವಾರ್ಯವಾಗಿತ್ತು. ಹಾಗೂ ಅವರಿಂದ ಒಂದೊಮ್ಮೆಗೆ ಪಾಪ ಕಾರ್ಯ ಎಸಗಲ್ಪಟ್ಟರೂ ಅದ್ಬುತವಾದ ತಪಃ ಶಕ್ತಿಯಿಂದ ಜೀರ್ಣಿಸಿಕೊಂಡು ಪಾವನರಾಗುತ್ತಿದ್ದ ಕಾಲದಲ್ಲಿ ನಡೆದ ಘಟನೆಗಳನ್ನು ಇಂದಿನ ಈ ಸ್ಥಿತಿಯಲ್ಲಿ ತರ್ಕಿಸಲು, ಅನುಸರಿಸಲು ಸಾಧ್ಯವಾಗದು. ಯಾಕೆಂದರೆ ಜೀವನ ಪರ್ಯಂತ ತಪಸ್ಸನಾಚರಿಸಿ ಪಾಪ ವಿಮೋಚನೆ ಮಾಡಿಕೊಳ್ಳುವುದು ತುಸು ಕಷ್ಟಸಾಧ್ಯ. ಅದೇ ಕಾರಣದಿಂದ ಪಾಪ ರಹಿತ ಬಾಳು ಬದುಕಲು ಧರ್ಮದ ಕಟ್ಟುಪಾಡುಗಳೂ ಬಿಗಿಯಾಗುತ್ತಾ ಬರಬೇಕಾಯಿತು. ದೇವತೆಗಳು ವಿಹರಿಸುವುದು ಭೋಗ ಭೂಮಿಯಲ್ಲಿ. ಕರ್ಮ ಭೂಮಿಯಲ್ಲಿ ಅಲ್ಲ. ಯಥೇಚ್ಚ ಪುಣ್ಯ ಸಂಚಯದಿಂದ ಮಾತ್ರ ಆ ಯೋಗ ಪುಣ್ಯ ವಿನಿಯೋಗವಾಗುವರೆಗೆ ದೊರಕೀತೇ ಹೊರತು ಅನ್ಯತಾ ಸಾಧ್ಯವಿಲ್ಲ. ಅಣಿಮಾಂಡವ್ಯ ಮುನಿಗಳಿಂದ ಶಾಪಗ್ರಸ್ಥನಾದ ಯಮನ ಅಂಶವೇ ಮುಂದೆ ವಿದುರನಾಗಿಯೂ, ವಸಿಷ್ಟರಿಂದ ಶಪಿಸಲ್ಪಟ್ಟ ವಸುಗಳು ಗಂಗೆಯ ಮಕ್ಕಳಾಗಿಯೂ ಜನಿಸಲಿದ್ದಾರೆ. ಕೊನೆಯ ಮಗನೇ ಭೀಷ್ಮಾಚಾರ್ಯ.

ಹೀಗಿರಲು ಚಂದ್ರನ ವಂಶವೂ ವೃದ್ದಿಯಾಗಲಾರಂಭಿಸಿತು. ವೈವಸ್ವತ ಮನುವಿಗೆ “ಇಲಾ” ಎಂಬ ಹೆಸರಿನ ಮಗಳಿದ್ದಳು. ಹೆಣ್ಣಾಗಿ ಜನಿಸಿದ್ದರೂ ವಸಿಷ್ಟರ ಅನುಗ್ರಹದಿಂದ ಪುರುಷತ್ವ ಪಡೆದು ಪುರುಷನಾಗಿ ‘ಸುದ್ಯುಮ್ನ’ ನೆಂಬ ಹೆಸರಿನಿಂದ ರಾಜ್ಯವಾಳುತ್ತಿದ್ದನು. ಒಮ್ಮೆ ಸುದ್ಯುಮ್ನ ಬೇಟೆಗೆ ಹೋಗಿದ್ದಾಗ ‘ಶರವಣ’ ಎಂಬ ಅರಣ್ಯ ಪ್ರದೇಶವನ್ನು ಪ್ರವೇಶಿಸಿದನು. ಆ ಸ್ಥಳದ ಮಹಿಮೆ ಏನೆಂದರೆ ಅದು ಶಿವ ಪಾರ್ವತಿಯರ ಕ್ರೀಡಾವನವಾಗಿತ್ತು. ಒಮ್ಮೆ ಶಿವಶಿವೆಯರು ಜೊತೆಯಾಗಿದ್ದಾಗ ಯಾರೋ ಪುರುಷ ಆ ವನ ಪ್ರವೇಶ ಮಾಡಿದನಂತೆ, ಆಗ ಪಾರ್ವತಿ ದೇವಿಗಾದ ರಸಭಂಗ ಕೋಪಕ್ಕೆ ಹೇತುವಾಯಿತು. ಪರಿಣಾಮ ಆಕೆ “ಈ ವನ ಪ್ರವೇಶ ಮಾಡುವ ಯಾವ ಪುರುಷನೇ ಆಗಲಿ, ಆತ ಹೆಣ್ಣಾಗಿ ಹೋಗಲಿ” ಎಂದು ಶಪಿಸಿದಳಂತೆ. ವಿಪರ್ಯಾಸವೆಂದರೆ ಹೆಣ್ಣಾಗಿದ್ದ ‘ಇಲಾ’ ವಸಿಷ್ಟರ ಅನುಗ್ರಹದಿಂದ ಪುರುಷತ್ವ ಪಡೆದು ಸುದ್ಯುಮ್ನ ಎಂಬ ಹೆಸರಿನ ರಾಜನಾಗಿದ್ದರೂ, ಈಗ ಶಾಪಗ್ರಸ್ಥ ವನ ಪ್ರವೇಶದಿಂದ ಮರಳಿ ಹೆಣ್ಣಾಗಬೇಕಾಯಿತು.

ಹೆಣ್ಣಾದ ಇಲಾ ಮರಳಿ ರಾಜ್ಯಕ್ಕೆ ಹೋಗಲಾಗದೆ ಕಾಡಿನಲ್ಲೇ ಸಂಚರಿಸುತ್ತಿರುವಂತಾಯಿತು. ಇದೇ ಸಮಯ ಚಂದ್ರನ ಮಗನಾದ ಬುಧ ವನವಿಹಾರಕ್ಕೆಂದು ಬಂದವನು ಈಕೆಯನ್ನು ನೋಡಿ ಮೋಹಿತನಾದ. ಇಲಾಳು ಪ್ರಿಕ್ರಿಯಿಸಿ ಒಡಗೂಡಿ ಸಮಾಗಮವಾದ ಪರಿಣಾಮ “ಪುರೂರವ” ಎಂಬ ಮಗನ ಜನನವಾಯಿತು. ಇದೆಲ್ಲವೂ ಆಗಿ ಹೋದ ಬಳಿಕ ಇಲಾಳಿಗೆ ತಾನು ಪುರುಷನಾಗಿ ಮತ್ತೆ ರಾಜ್ಯವಾಳಬೇಕು ಎಂಬ ಆಶಯ, ರಾಜನಿಲ್ಲದೆ ಅರಾಜಕತೆ ಬಂದಿರಬಹುದೇ ಎಂಬ ಆತಂಕಗಳಿತ್ತು. ಯೋಚಿಸಿ ಇಂತಹ ಚಿಂತೆಯ ಪರಿಹಾರಕ್ಕಾಗಿ ಅಚಿಂತ್ಯನಾದ ಶಿವನನ್ನು ತಪಸ್ಸಿನ ಮೂಲಕ ಮೆಚ್ಚಿಸಿ – ಮರಳಿ ಪುರುಷನಾಗುವ ಆಕಾಂಕ್ಷೆಯಿಂದ ವರ ಬೇಡಿದಳು. ಆದರೆ ಶಿವಾನುಗ್ರಹ ಆಕೆಯ ಆಸೆಯನ್ನು ಪೂರ್ಣವಾಗಿ ಈಡೇರಿಸಲಿಲ್ಲ. ಒಂದು ತಿಂಗಳು ಪುರುಷನಾಗಿಯೂ, ಮತ್ತೊಂದು ತಿಂಗಳು ಸ್ತ್ರೀಯಾಗಿಯೂ ಬದುಕುವಂತಾಯಿತು. ಹೀಗೆ ಪುರುಷನಾಗಿರುವ ತಿಂಗಳು ಸುದ್ಯುಮ್ನನಾಗಿ ರಾಜ್ಯದಲ್ಲಿ ಆಳ್ವಿಕೆ, ಮತ್ತೆ ಇಲಾದೇವಿಯಾಗಿ ಒಂದು ತಿಂಗಳು ಉಪವನದಲ್ಲಿ ವಾಸಮಾಡುವಂತಾಯಿತು. ರಾಜಾ ಸುದ್ಯುಮ್ನ ಮದುವೆಯಾಗಿ ಪಟ್ಟದರಸಿಯಲ್ಲಿ ಉತ್ಕಲ, ಗಯ, ವಿಮಲ ಎಂಬ ಮಕ್ಕಳನ್ನು ಪಡೆದನು. ಇಲಾದೇವಿ ಮದುವೆಯಾಗಲಿಲ್ಲ. ಮೊದಲೇ ವರಿಸಿದ್ದ ಬುಧನೇ ಪತಿಯೆಂದು ಭಾವಿಸಿ ಬದುಕುತ್ತಿದ್ದಳು. ತನ್ನ ಜೇಷ್ಠ ಪುತ್ರ ಪುರೂರವನನ್ನೇ ರಾಜ್ಯಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡಿ ಕಾಲಾಂತರದಲ್ಲಿ ತಪೋವನ ಸೇರಿ ತಪೋನಿರತಳಾದಳು/ನು.

ಮುಂದುವರಿಯುವುದು….

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page