32.5 C
Udupi
Monday, April 27, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 243

ಭರತೇಶ್ ಶೆಟ್ಟಿ, ಎಕ್ಕರ್

ಸಂಚಿಕೆ ೨೪೪ ಮಹಾಭಾರತ

ಯಮಧರ್ಮರಾಯ ಅಂತರ್ಧಾನನಾದ ಬಳಿಕ ಯುಧಿಷ್ಠಿರ ತನ್ನ ತಮ್ಮಂದಿರತ್ತ ತಿರುಗಿ, ಬಳಿ ಕರೆದು ಒಬ್ಬೊಬ್ಬರನ್ನು ತಬ್ಬಿಕೊಂಡನು. “ತಮ್ಮಂದಿರೇ ನಾವು ಒಂದರ್ಥದಲ್ಲಿ ಭಾಗ್ಯವಂತರು ಹೌದು. ವನವಾಸದ ಅವಕಾಶ ಕಲ್ಪಿಸಿದ ಮಾವ ಶಕುನಿಗೂ, ಸೋದರ ಕೌರವರಿಗೂ ನಾವು ಕೃತಜ್ಞರಾಗಬೇಕು. ವನವಾಸ ನಮ್ಮ ಪಾಲಿಗೆ ಕೆಲ ವಿಚಾರಗಳಲ್ಲಿ ಕಠಿಣ ಎಂದೆಣಿಸಿತ್ತು ನಿಜ. ನಮ್ಮ ಊಟೋಪಚಾರಕ್ಕಾಗಿ ಅಕ್ಷಯ ಪಾತ್ರೆಯ ಅನುಗ್ರಹವಾಯಿತು. ಬದುಕಿನ ಸೌಭಾಗ್ಯವಾಗಿ ದೇವಾತಾನುಗ್ರಹ, ಕ್ಷೇತ್ರ ದರ್ಶನ, ಮಹಾತ್ಮರು, ತಪೋನಿಧಿಗಳು, ಮಹಿಮಾನ್ವಿತರಾದ ಋಷಿವರೇಣ್ಯರ ಸಂದರ್ಶನ, ಧರ್ಮ ಬೋಧನೆ ನಮ್ಮೆಲ್ಲರಿಗಾಯಿತು. ಅರ್ಜುನ ತಪಸ್ಸನ್ನಾಚರಿಸಿ ಮಹಾದೇವ ಶಿವ ಪರಮಾತ್ಮ, ಗೌರಿ, ಗಣೇಶ, ಕಾರ್ತಿಕೇಯ, ನಂದಿ ಭೃಂಗಿಯಾದಿ ಶಿವ ಪ್ರಮಥರನ್ನು ಸಾಕ್ಷಾತ್ಕರಿಸಿ ಪಾಶುಪತಾಸ್ತ್ರ, ಅಂಜಲಿಕಾಸ್ತ್ರ, ಶಿವಗಣದಿಂದ ಶಕ್ತ್ಯಾಯುಧಗಳನ್ನು ಸಂಪಾದಿಸಿದ್ದಾನೆ. ಸಶರೀರಿಯಾಗಿ ದೇವಲೋಕ ಸೇರಿ ಕಾಲಕೇಯ- ನಿವಾತಕವಚರನ್ನು ನಿಗ್ರಹಿಸಿ ಕಿರೀಟಿ ಎಂದು ಬಹುಮಾನಿತನಾಗಿದ್ದಾನೆ. ದಿಗ್ದೇವತೆಗಳ ಅನುಗ್ರಹ – ದಿವ್ಯಾಯುಧಗಳನ್ನು ತನ್ನದಾಗಿಸಿಕೊಂಡಿದ್ದಾನೆ. ಮಾತ್ರವಲ್ಲ ಸೋದರನಾದ ಅರ್ಜುನ ದೇವಲೋಕದಲ್ಲಿ ಗಂಧರ್ವನಿಂದ ನಾಟ್ಯಶಾಸ್ತ್ರ ಅಧ್ಯಯನವನ್ನೂ ಮಾಡಿ ಬಂದಿದ್ದಾನೆ. ಈ ಎಲ್ಲಾ ಸಾಧನೆಗೈದು ಪಾರ್ಥ ಮರಳಿ ಬರುವರೆಗೆ ಐದು ವರ್ಷಗಳು ಸಂದು ಹೋದವು. ಭೀಮನಿಗೆ ವಜ್ರಕಾಯ ಹನುಮನ ದರುಶನ ಅನುಗ್ರಹ ಪ್ರಾಪ್ತವಾಯಿತು. ಭೀಮನಿಂದ ದೈತ್ಯ ಸಂಹಾರವೂ ಆಯಿತು. ಈಗ ತಾನೆ ನಡೆದ ವೃತ್ತಾಂತದಲ್ಲಿ ಮೃತ್ಯುವಿನ ಬಳಿ ಸೇರಿ ಮರಳಿ ಬಂದವರು ನೀವೆಲ್ಲರು. ಅಜ್ಞಾತವಾಸ ಕಾಲಕ್ಕೆ ಸಂರಕ್ಷಕ ಅಭಯವೂ ನಮ್ಮ ಪಾಲಿಗೆ ಪ್ರಾಪ್ತವಾಗಿದೆ. ಕಷ್ಟದಲ್ಲೂ ಸಂತೋಷ ಕಂಡವರು ನಾವಿದ್ದೇವೆ. ಧರ್ಮದ ಹಾದಿಯಲ್ಲಿ ಸಾಗಿದರೆ ಸಂಕಷ್ಟ ಕಾಲದಲ್ಲಿ ದೇವರ ಕೃಪೆ ಒದಗಿ ಬರುತ್ತದೆ. ಕಷ್ಟ ಬಂತೆಂದು ಅಧರ್ಮದ ದಾರಿ ಹಿಡಿಯದಿದ್ದರೆ ಬದುಕಿನ ಬವಣೆ ಪರೀಕ್ಷೆಯಾಗಿ ತೇರ್ಗಡೆಯಾದಾಗ ಪರಿಣಾಮ ಉನ್ನತವಾಗಿರುತ್ತದೆ. ಇದಕ್ಕೆ ಸಾಕ್ಷಿ ಪಾಂಡವರಾದ ನಮ್ಮ ಬದುಕು ನಿದರ್ಶನ ರೂಪದಲ್ಲಿದೆ. ಇನ್ನು ಮುಂದಕ್ಕೆ ಸಂತೋಷದಿಂದ ಗುಪ್ತವಾಸಕ್ಕೆ ಸಿದ್ಧರಾಗೋಣ. ಆ ಕುರಿತಾದ ಸಿದ್ಧತೆಗಳನ್ನು ಯೋಚಿಸುವ ಕಾಲ ಬಂದೊದಗಿದೆ. ಸದ್ಯ ದ್ರೌಪದಿಯೋರ್ವಳೆ ನಮಗಾಗಿ ಕಾಯುತ್ತಿದ್ದಾಳೆ, ಪರ್ಣಶಾಲೆಯತ್ತ ಹೋಗೋಣ” ಎಂದನು.

ಅಂತೆಯೆ ಮರಳಿ ಬಂದ ಪಾಂಡವರು ಮೊದಲಾಗಿ ಬ್ರಾಹ್ಮಣನ ಅರಣಿಯನ್ನು ಒಪ್ಪಿಸಿ ಆಶೀರ್ವಾದ ಪಡೆದರು. ಬಳಿಕ ಕುಟೀರದಲ್ಲಿ ಕಾಯುತ್ತಿದ್ದ ದ್ರೌಪದಿಯ ಬಳಿ ಸಾಗಿ ನಡೆದ ಪೂರ್ಣ ವಿಚಾರ ವಿಸ್ತರಿಸಿ ಧರ್ಮಜ ಹೇಳಿದನು. ಕೇಳಿ ಸಮ್ಮಿಳಿತ ಭಾವ- ಭಯ ಮತ್ತು ಸಂತೋಷ ದ್ರೌಪದಿಗಾಯಿತು. ಕೌರವನ ವಾಮ ಮಾರ್ಗದ ಕೃತ್ಯ, ದೇವಾನುಗ್ರಹದ ಸಂಗತಿಗಳನ್ನು ತಿಳಿದು ಋಜುಮಾರ್ಗಿಯಾದ ಧರ್ಮರಾಯನ ಪಾದಕ್ಕೆರಗಿ ನಮಿಸಿದಳು.

ನಂತರ ತುಸು ಹೊತ್ತು ವಿಶ್ರಾಂತರಾದರು. ಬಳಿಕ ಧರ್ಮರಾಯ ಧೌಮ್ಯರನ್ನು ಏಕಾಂತದಲ್ಲಿ ಕಾಣಲು ಹೊರಟನು. “ಪೂಜ್ಯರೆ, ವನವಾಸದ ಹನ್ನೆರಡು ವರ್ಷಗಳ ವನವಾಸ ಇಂದಿಗೆ ಸಮಾಪ್ತವಾಗುತ್ತಿದೆ. ನಾಳೆಯಿಂದ ಅಜ್ಞಾತವಾಸ. ನಾವೈವರು ಮತ್ತು ದ್ರೌಪದಿ ಮಾತ್ರ ಈ ವಾಸ ಅನುಭವಿಸುವ ಬಾಧ್ಯರು. ನಾವೆತ್ತಲಾದರು ಹೋಗಿ ಬದುಕುವ ಪ್ರಯತ್ನ ಮಾಡುತ್ತೇವೆ. ನಿಮ್ಮ ಜೊತೆ ಇರುವ ಬ್ರಾಹ್ಮಣೋತ್ತಮರನ್ನು ಕರೆದುಕೊಂಡು ತಾವು ಉತ್ತಮ ಪ್ರದೇಶದಲ್ಲಿ ಒಂದು ಸಂವತ್ಸರ ಕಾಲ ಕಳೆಯಬೇಕು. ಅಜ್ಞಾತವಾಸ ಸುಸೂತ್ರವಾಗಿ ದೇವನೊಲುಮೆಯಿಂದ ಕಳೆದು, ನಾವು ಮರಳಿ ಬಂದರೆ ಮತ್ತೆ ಜೊತೆಯಾಗೋಣ” ಎಂದು ವಿನಮ್ರನಾಗಿ ಕೇಳಿಕೊಂಡನು.

ಧೌಮ್ಯರಿಗೆ ಒಂದು ವರ್ಷ ಕಾಲ ಅಜ್ಞಾತವಾಸ ಪೂರೈಸಲಿರುವ ಪಾಂಡವರ ಬಗ್ಗೆ ಕಾಳಜಿ ಆತಂಕ ಮನಮಾಡಿದರೂ, ಧರ್ಮಾತ್ಮರಾದ ಇವರಿಗೆ ಯಾವುದೆ ಸಮಸ್ಯೆಯಾಗದು ಎಂದು ಧೈರ್ಯ ತಳೆದರು. ಧರ್ಮರಾಯನನ್ನು ಉದ್ದೇಶಿಸಿ “ಧರ್ಮಜಾ! ನಿನ್ನ ಮಾತು ಸಾಧುವಾಗಿದೆ. ನಮ್ಮ ಚಿಂತೆ ಬಿಡು. ನಾವು ಸುಧಾರಿಸಿ ಕೊಂಡೇವು. ನೀವೆಲ್ಲರೂ ಕ್ಷೇಮವಾಗಿ ಈ ಒಂದು ವರ್ಷ ಕಳೆದು ಬರುತ್ತೀರೆಂಬ ಧೈರ್ಯ ವಿಶ್ವಾಸವೂ ನನಗಿದೆ. ವಾಸುದೇವನ ಪೂರ್ಣ ಶ್ರೀರಕ್ಷೆ ನಿಮಗಿರಲಿ. ನಿರ್ವಿಘ್ನವಾಗಿ ಒಂದು ಸಂವತ್ಸರ ಕ್ಷಣಾರ್ಧದಂತೆ ಸಾಗಿ ಹೋಗುವಂತಾಗಲಿ” ಎಂದು ಪೂರ್ಣ ಮನಸ್ಸಿನಿಂದ ಅನುಗ್ರಹಿಸಿದರು.

ಪಾಂಡವರು ಆ ದಿನ ಸಂಧ್ಯಾಕಾಲದಲ್ಲಿ ನಿತ್ಯಾನುಷ್ಠಾನಗಳನ್ನು ಪೂರೈಸಿ ದ್ರೌಪದಿ ಸಮೇತರಾಗಿ ಹೋಮಾಗ್ನಿಗೆ ಮೂರು ಬಾರಿ ಪ್ರದಕ್ಷಿಣೆ ಬಂದು ನಮಸ್ಕರಿಸಿದರು. ಇಂದಿನವರೆಗೆ ಅನ್ನವಿತ್ತ ಅಕ್ಷಯ ಪಾತ್ರೆಯನ್ನು ಮರಳಿ ಹೋಮಾಗ್ನಿಗೆ ಸಮರ್ಪಿಸಿ ಹವ್ಯವಾಹನ (ಹವಿಸ್ಸನ್ನು ವಾಹಕನಾಗಿ ತಲುಪಿಸುವವ – ಅಗ್ನಿ) ಅಗ್ನಿಯನ್ನು ಪ್ರಾರ್ಥಿಸಿ ಹೋಮಕ್ಕೆ ಸಮಿಧೆಗಳನ್ನು ಎಲ್ಲರೂ ಹಾಕಿ ನಮಸ್ಕರಿಸಿದರು. ಜಗಚಕ್ಷು ಸೂರ್ಯ ನಾರಾಯಣ ದೇವರನ್ನೂ ಮನಸಾ ಸ್ಮರಿಸಿ ಕೃತಜ್ಞತಾ ಭಾವದಿಂದ ಸ್ತುತಿಸಿದರು. ಶುಭಪ್ರದವಾಗಿ ಯಜ್ಞೇಶ್ವರ ಧಗಧಗನೆ ಉರಿದು ಪ್ರಜ್ವಲಿಸಿದ. ನಮಗಿದು ಭವಿಷ್ಯತ್ತಿನ ಶಕುನ ಸೂಚಕವಿದು, ಎಲ್ಲವೂ ಒಳ್ಳೆಯದೆ ಆಗಲಿದೆ ಎಂಬ ವಿಶ್ವಾಸ ಮನ ಮಾಡಿ ನಿರಾತಂಕವಾಯಿತು.

ಆ ರಾತ್ರಿ ಎಲ್ಲರೂ ಏನೇನೋ ವಿಷಯಗಳ ಕುರಿತಾಗಿ ಚರ್ಚೆ ಮಾಡುತ್ತಾ ವನವಾಸದ ಕೊನೆಯ ರಾತ್ರಿಯ ಒಂದೊಂದು ಕ್ಷಣಗಳನ್ನೂ ಆಸ್ವಾದಿಸುತ್ತಾ ಕಳೆಯುತ್ತಿದ್ದರು. ಜಾವದ ಹೊತ್ತು ತುಸು ನಿದ್ರೆ ಆವರಿಸಿತು. ಜಾಗೃತ ಪ್ರಜ್ಞೆಯುಳ್ಳ ಅವರೆಲ್ಲರೂ ಬ್ರಾಹ್ಮಿ ಮುಹೂರ್ತಕ್ಕಿಂತ ಮೊದಲು ಎದ್ದು ಪ್ರಾತಃ ವಿಧಿಗಳನ್ನು ತೀರಿಸಿದರು. ಮರಳಿ ಆಶ್ರಮಕ್ಕೆ ಬಂದು ಹೋಮಕುಂಡಕ್ಕೆ ನಮಸ್ಕರಿಸಿ ಹುತ ಭಸ್ಮವನ್ನು ಹಣೆಗೆ ಲೇಪಿಸಿಕೊಂಡರು. ಭಗವಾನ್ ಶ್ರೀ ಕೃಷ್ಣನನ್ನು ಸ್ಮರಿಸಿ ಧ್ಯಾನಿಸುತ್ತಾ, ತಮ್ಮ ತಮ್ಮ ಆಯುಧಗಳನ್ನೆತ್ತಿ ಹಿಡಿದುಕೊಂಡು ಹೊರಟರು. ಪೃಕೃತಿ ಸೌಂದರ್ಯ ಸವಿಯುತ್ತಾ, ಮಂದಮಾರುತ ಒಯ್ದು ಬೀಸುತಿದ್ದ ಪುಷ್ಪರಾಜಿಯ ಸೌಗಂಧ ಆಘ್ರಾಣಿಸುತ್ತಾ, ಆ ಮಾರುತನ ತಂಪಿಗೆ ತನು ತಣಿಸುತ್ತಾ ಸಾಗುತ್ತಿದ್ದಾರೆ. ದಿಗ್ದೆಸೆಗಳನ್ನು ಅವಲೋಕಿಸುತ್ತಾ, ದಿಗಂತ ದಿಟ್ಟಿಸಿ ನೋಡುತ್ತಾ ಪೂರ್ವ ದಿಕ್ಕನ್ನೊಮ್ಮೆ ನೋಡಿ ಭಾನುವಿನ ಆಗಮನದ ಮೊದಲು ನಮಿಸಿದರು. ಮತ್ತೆ ಎತ್ತಲೊ ಹೊರಟು ಹೋದರು. ಇನ್ನು ಪಾಂಡವರ ಅಜ್ಞಾತವಾಸ ಆರಂಭ.

ಮುಂದುವರಿಯುವುದು….

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page