28.9 C
Udupi
Monday, May 4, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 188

ಭರತೇಶ ಶೆಟ್ಟಿ, ಎಕ್ಕಾರ್

ಭಗವಾನ್ ವೇದವ್ಯಾಸರು ಅನಿರೀಕ್ಷಿತವಾಗಿ ಪ್ರತ್ಯಕ್ಷರಾದದ್ದು ಪಾಂಡವರಿಗೆ ಆಶ್ಚರ್ಯ ಮತ್ತು ಮಹತ್ತರವಾದ ಆನಂದವನ್ನು ಏಕಕಾಲದಲ್ಲಿ ಉಂಟುಮಾಡಿತ್ತು. ದುರ್ಲಭವಾದ ಬಾದರಾಯಣರ ದರುಶನ ಪಾಂಡವರಿಗೆ ಬಯಸದೆ ಬಂದ ಭಾಗ್ಯದಂತೆ ಪ್ರಾಪ್ತವಾಗಿದೆ. ವನವಾಸದಲ್ಲಿರುವ ಪಾಂಡವರು ದ್ರೌಪದಿ ಸಮೇತರಾಗಿ ಯಥಾಸಾಧ್ಯ ಸತ್ಕರಿಸಿ ಪೂಜಿಸಿದರು. ಧೌಮ್ಯರೂ ಸೂಕ್ತ ಮಾರ್ಗದರ್ಶನವಿತ್ತು ಸಹಕಾರಿಯಾದರು.

ಧರ್ಮರಾಯ ವ್ಯಾಸರಲ್ಲಿ “ಸ್ವಾಮಿ, ದುರ್ದೆಸೆಯಿಂದಲೊ ಏನೋ ನಾವೀಗ ಕಾನನ ವಾಸಿಗಳಾಗಿದ್ದೇವೆ. ಮನ ಬಯಸಿದಂತೆ ನಿಮ್ಮನ್ನು ಸತ್ಕರಿಸುವಷ್ಟು ಸ್ಥಿತಿವಂತರಾಗಿ ನಾವೀಗ ಇಲ್ಲ. ಆದರೂ ಇಲ್ಲೇನು ಮಾಡಲು ಸಾಧ್ಯವೋ ಅಷ್ಟೆಲ್ಲವನ್ನು ಪೂರ್ಣ ಮನಸ್ಸಿನಿಂದ ಸಮರ್ಪಿಸಿ ಭಯ ಭಕ್ತಿ, ಪ್ರೀತ್ಯಾದರಗಳಿಂದ ನಿಮ್ಮನ್ನು ಸತ್ಕರಿಸಿದ್ದೇವೆ. ನಮ್ಮ ಈ ಪರಿಸ್ಥಿತಿಯನ್ನು ಮನ್ನಿಸಿ, ನಾವಿತ್ತ ಸೇವೆಯನ್ನು ಸಂತೋಷದಿಂದ ಸ್ವೀಕರಿಸಿ ಅನುಗ್ರಹಿಸಬೇಕು” ಎಂದು ವಿನಮ್ರತೆಯಿಂದ ಬೇಡಿ ಕೊಂಡನು.

ಸಂತುಷ್ಟರಾದಂತೆ ಕಾಣಿಸಿದ ವ್ಯಾಸ ಭಗವಾನರು “ಯುಧಿಷ್ಠಿರಾ, ನಿಮ್ಮ ಅದೃಷ್ಟವನ್ನು ನೆನೆದು ಕೊರಗಬೇಡ. ನೀವಿರುವ ಈ ಸ್ಥಿತಿ ಸ್ಥಿರವಲ್ಲ. ರಾತ್ರಿಯ ಕತ್ತಲೆ ಕಳೆದು ಬೆಳಗಾಗುವಂತೆ ನಿಮ್ಮ ಬದುಕಲ್ಲೂ ಬದಲಾವಣೆ ಆಗಲಿದೆ. ಈ ಕಾಲ ನಿಮ್ಮನ್ನು ಪರಿಶುದ್ದಗೊಳಿಸಲು ಒದಗಿ ಬಂದಿದೆ ಎಂದು ತಿಳಿದುಕೊಳ್ಳಬೇಕು. ಭಗವಂತನ ನೈವೇದ್ಯ ಧಾರಣೆ ಮಾಡುವ ಪಾತ್ರೆ ಹೇಗೆ ನಿರ್ಮಲವಾಗಿರಬೇಕೋ ಹಾಗೆಯೆ ನೀವೂ ಮಡಿಯಾಗಿ, ಲೋಕಕ್ಕೆ ಕ್ಷೇಮವೆಂಬ ಭಗವತ್ಪ್ರಸಾದ ಹಂಚುವ ಪಾತ್ರ ಮಾಡಲಿಕ್ಕಿದೆ. ಅಳುಕದೆ, ಅಂಜದೆ, ಚಿಂತೆಗೊಳಗಾಗದೆ ಈ ಸಮಯವನ್ನು ಸಂಯಮದಿಂದ ಕಳೆಯಬೇಕು. ಮಾತ್ರವಲ್ಲ ಈ ಅವಕಾಶವನ್ನು ಸಾಮರ್ಥ್ಯ ವೃದ್ಧಿಗಾಗಿ, ಪುಣ್ಯ ಬಲ ಸಂಪಾದನೆಗಾಗಿ ವಿನಿಯೋಗಿಸಿ. ನಿನ್ನ ತಮ್ಮ ಅರ್ಜುನನ ಭುಜಸಿರಿಯಿಂದ ಸಜ್ಜನ ರಕ್ಷಣೆ – ದುರ್ಜನ ದಂಡನೆಯಾಗಲಿಕ್ಕಿದೆ. ಆರ್ಜನೆಯಲ್ಲಿ ವಿಶಿಷ್ಟನಾಗಿರುವ ಅರ್ಜುನ ಬಲಾರ್ಜನೆ ಮಾಡಿಕೊಳ್ಳಬೇಕಾಗಿದೆ. ಅದಕ್ಕಾಗಿ ಮಹಾದೇವ ಪರಮೇಶ್ವರನ ಬೀಜಮಂತ್ರವನ್ನು ಪರಮ ಧಾರ್ಮಿಕನೂ, ಪಾಂಡವಾಗ್ರಜನೂ ಆದ ನಿನಗೆ ಉಪದೇಶಿಸುತ್ತೇನೆ. ನಿನ್ನಿಂದ ಅದು ಅರ್ಜುನನಿಗೆ ಉಪದೇಶಿಸಲ್ಪಟ್ಟು, ಸಕಾಲದಲ್ಲಿ ಅರ್ಜುನ ಸರ್ವ ಶಕ್ತ ಮಹಾದೇವನನ್ನು ಸಾಕ್ಷಾತ್ಕರಿಸಿಕೊಳ್ಳಲಿ. ಭಕ್ತವತ್ಸಲನಾದ ಪಶುಪತಿಯ ಬಳಿ ಪಾಶುಪತ ಎಂಬ ದಿವ್ಯಾಯುಧವಿದೆ. ಲೋಕ ರಕ್ಷಣೆಗಾಗಿ ಅರ್ಜುನ ಆ ಮಹಾಯುಧವನ್ನು ಬೇಡಿ ಪಡೆಯಲಿ.” ಹೀಗೆ ನುಡಿದು ಶುಭಗಳಿಗೆಯಲ್ಲಿ ಶುಚಿರ್ಭೂತನಾಗಿ ಬಂದ ಧರ್ಮರಾಯನಿಗೆ ಶಿವಸ್ತೋತ್ರ ಬೀಜಮಂತ್ರ ಉಪದೇಶಿಸಿ, ಅವರೆಲ್ಲರನ್ನೂ ಅನುಗ್ರಹಿಸಿ ಅಂತರ್ಧಾನರಾದರು.

ಧೌಮ್ಯರ ನಿರ್ದೇಶನದಲ್ಲಿ ಸುಮೂಹೂರ್ತ ನಿಗದಿಗೊಳಿಸಿ ಧರ್ಮರಾಯ ಭಗವಾನ್ ವ್ಯಾಸರಿಂದ ಉಪದಿಷ್ಟವಾದ ಬೀಜಮಂತ್ರದ ದೀಕ್ಷೆ ಅರ್ಜುನನಿಗಿತ್ತನು. ಮಹಾದೇವನ ಸಾಕ್ಷಾತ್ಕಾರಕ್ಕಾಗಿ ಇಂದ್ರಕೀಲಕ ಪ್ರದೇಶ ಸೂಕ್ತವೆಂದು ನಿರ್ಧರಿಸಿ ಅರ್ಜುನ ಹೊರಡಲು ಸನ್ನದ್ಧನಾದನು. ಧರ್ಮರಾಯ ಸಹೋದರರೊಡನೆ ಗುರುವರ್ಯರು, ದ್ರೌಪದಿ ಜೊತೆಯಾಗಿದ್ದು ಬೀಳ್ಗೊಡಲು ಸಿದ್ಧತೆಗೊಳಿಸಿ “ಅರ್ಜುನಾ! ನಿನ್ನ ಸಾಮರ್ಥ್ಯದ ಮೇಲೆ ನಮ್ಮ ಅದೃಷ್ಟದ ಸೌಧ ಸ್ಥಾಪನೆಯಾಗಲಿದೆ. ಮಹತ್ತರವಾದ ಕಾರ್ಯ ಈಗ ನಿನ್ನ ಹೆಗಲೇರಿದೆ. ನಮ್ಮೆಲ್ಲರ ಭಾಗ್ಯವೋ ಎಂಬಂತೆ ವ್ಯಾಸ ಭಗವಾನರು ಬಂದು ಮಾರ್ಗದರ್ಶನವಿತ್ತಿದ್ದಾರೆ. ಧೃಡ ಸಂಕಲ್ಪದಿಂದ ನೀನು ಸೂಚಿತ ಸಾಧನೆಗೈದು ಬರುವವನಾಗು. ನನ್ನ ಜೀವನದಲ್ಲಿ ಏನೆಲ್ಲ ಸತ್ಕಾರ್ಯ ಮಾಡಿದ್ದೇನೋ, ಅದೆಲ್ಲದರ ಸಂಪೂರ್ಣ ಸಂಚಿತ ಪುಣ್ಯ ಫಲವನ್ನು ನಿನ್ನಲ್ಲಿ ನಿಕ್ಷೇಪಗೊಳಿಸಿ ಹಾರೈಸುತ್ತಿದ್ದೇನೆ – ನೀನು ಮಾಡಲು ಹೊರಟಿರುವ ಕಾರ್ಯ ನಿರ್ವಿಘ್ನವಾಗಿ ಪೂರೈಸಿ ವಿಜಯಿಯಾಗಿ ಬಾ” ಎಂದು ಧರ್ಮಜ ಹರಸಿದನು. ಅರ್ಜುನ ಅಣ್ಣನ ಪಾದಪದ್ಮಗಳಿಗೆರಗಿ ವಂದಿಸಿದನು.

ಭೀಮ ಮುಂದೆ ಬಂದು, ” ತಮ್ಮಾ, ನೀನು ನಮ್ಮ ಪಾಲಿನ ಮಹಾಶಕ್ತಿಯೂ ಆಶಾಕಿರಣವೂ ಆಗಿರುವೆ. ನೀನು ಸದಾ ಬಯಸುತ್ತಿದ್ದುದು ಸಾಹಸ, ಸಾಧನೆ. ನಿನ್ನ ಅಪೇಕ್ಷೆಯಂತೆ ಇಂದು ಮಹತ್ತರವಾದದ್ದು ನಿನಗೆ ಒದಗಿ ಬಂದಿದೆ. ಸದಾ ನಾವು ಜೊತೆಗಿರುವವರು. ನಿನ್ನನ್ನು ಬಿಟ್ಟಿರಲು ನಮಗೆ ಕಷ್ಟವಾದರೂ, ಉದ್ದೇಶಿತ ಕಾರ್ಯ ನಮಗೆಲ್ಲರಿಗು ಶ್ರೇಯಸ್ಕರವಾದದ್ದು. ಅದಕ್ಕಾಗಿ ಏನೇ ಕಷ್ಟ ಮಾನಸಿಕ ಯಾ ಶಾರೀರಿಕವಾಗಿ ನಮಗೊದಗಿದರೂ ಸೈರಿಸಿಕೊಳ್ಳೋಣ. ನಿನಗಾಗಿ ನಾವು ದೇವತಾ ಪ್ರಾರ್ಥನೆಗೈಯುತ್ತಾ ಕಾಯುತ್ತೇವೆ. ಶೀಘ್ರವಾಗಿ ನೀನು ಕಾರ್ಯ ಸಾಧಿಸಿ ಬರುವಂತಾಗಲಿ. ನನ್ನ ನಿಷ್ಕಲ್ಮಶ ಮನಸ್ಸಿನ ಹಾರೈಕೆ ಸದಾ ನಿನ್ನ ಜೊತೆಗೆ ಶ್ರೀ ರಕ್ಷೆಯಾಗಿರಲಿದೆ. ನಿನಗೆ ಸನ್ಮಂಗಲವಾಗಲಿ” ಎಂದು ಹರಸಿ ಬಿಗಿದಪ್ಪಿದನು. ನಕುಲ ಸಹದೇವರೂ ಅಣ್ಣ ಅರ್ಜುನನ ಯಶಸ್ಸಿಗೆ ಭಗವಂತನಲ್ಲಿ ಪ್ರಾರ್ಥಿಸಿ ಪಾರ್ಥನಿಗೆ ವಂದಿಸಿ ಹರಸಿದರು.

ದ್ರೌಪದಿ ಆರತಿ ಬೆಳಗಿ ಮಂಗಳ ತಿಲಕವನ್ನಿತ್ತು “ವೀರ ಪಾರ್ಥ, ನೀನು ಅಸದಳ ವಿಕ್ರಮಿಯಾಗಿಯೇ ಸ್ವಯಂವರ ಪಣದಲ್ಲಿ ಸಾಧಿಸಿ ಗೆದ್ದು ಬಂದವನು. ನಿನ್ನ ಹುಟ್ಟಿಗಾಗಿ ಮಾತೆ ಕುಂತಿದೇವಿ, ಪಾಂಡು ಚಕ್ರವರ್ತಿಯವರು ಸುದೀರ್ಘ ವೃತಧಾರಿಗಳಾಗಿ ತಪಸ್ಸನ್ನು ಆಚರಿಸದ್ದರಂತೆ. ತಪೋ ಮುಖದಿಂದ ಅನುಗ್ರಹಿತ ಜನ್ಮ ನಿನ್ನದ್ದು. ಗೋವಿಂದನ ಪ್ರೀತಿಯ ಸಖನೂ ಆಗಿರುವೆ. ಯೋಗ್ಯತಾವಂತನಾಗಿ ಇರುವ ನಿನ್ನನಿಂದು ಸುಯೋಗ ಅರಸುತ್ತಾ ಬಂದಂತಾಗಿದೆ. ನೀನು ಮುಂದೆ ತೊಡಗಲಿರುವ ಕಾರ್ಯ ತಪಸ್ಸು. ಜಿತೇಂದ್ರಿಯನಾಗಿ ಏಕಾಗ್ರಚಿತ್ತದಿಂದ ತಪ ವಿರಚಿಸುವಾಗ ನನ್ನನ್ನು ನೆನೆದು ವಿಚಲಿತನಾಗಬಾರದು. ಶಿವಾನುಗ್ರಹ ಪ್ರಾಪ್ತಿಯ ಏಕ ಉದ್ದೇಶವಿರಿಸಿ ಭಗವಂತನಲ್ಲಿ ಮನವಿರಿಸಿ ಪೂರ್ಣ ಕಾರುಣ್ಯ ಸಂಪಾದನೆಯಾಗುವವರೆಗೆ ಅನ್ಯ ಯಾವ ವಿಷಯವೂ, ಸಹೋದರರ, ಮಾತೆಯ, ರಾಜ್ಯದ ಬಗ್ಗೆ ಹೀಗೆ ಯಾವ ಸಂಗತಿಯೂ ನೆನಪಾಗಿ ಬಾಧಿಸದಿರಲಿ. ಜಗನ್ನಿಯಂತ್ರಕ, ತ್ರಿನೇತ್ರ, ಮಹಾರುದ್ರ ದೇವರು ಸಂತುಷ್ಟನಾಗಿ ಅನುಗ್ರಹಿಸುವಂತಾಗಲಿ” ಎಂದು ಪ್ರಾರ್ಥಿಸಿ ಹರಸಿದಳು. ಅರ್ಜುನ ಅಗ್ನಿ ಸಂಭವೆ ಯಾಜ್ಞಸೇನೆಗೆ ನಮಸ್ಕರಿಸಿದನು. ಬಳಿಕ ಧೌಮ್ಯರಿಂದ ಆಶೀರ್ವಾದ ಪಡೆದು ಇಂದ್ರಕೀಲಕದತ್ತ ಸುಮುಹೂರ್ತದಲ್ಲಿ ಪ್ರಯಾಣ ಬೆಳೆಸಿದನು.

ಮುಂದುವರಿಯುವುದು

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page