ಭಾಗ – 138
ಭರತೇಶ್ ಶೆಟ್ಟಿ, ಎಕ್ಕಾರ್

ಹೀಗೆ ತನ್ನವರ ಬಗ್ಗೆ ಕೇಳಿ ತಿಳಿದು ಸಂತಸಪಡುತ್ತಾ ಕುಂತಿ ಸುಭದ್ರೆಗೆ ಬೇಕು ಬೇಕಾದ ವಸನ ಭೂಷಣ, ಸ್ನಾನಾದಿಗಳಿಗೆ ವ್ಯವಸ್ಥೆಯನ್ನು ಮಾಡಿಸಿದಳು. ಸುಭದ್ರೆ ಶುಚಿರ್ಭೂತಳಾಗಿ ಬಂದಾಗ ಊಟೋಪಚಾರವಾದ ಬಳಿಕ ತನ್ನ ನಾಲ್ವರು ಪುತ್ರರು ಹಾಗು ದ್ರೌಪದಿಯ ಬಳಿಗೆ ಸುಭದ್ರೆಯನ್ನು ಕರೆದೊಯ್ದಳು. ಪಾಂಡು ಪುತ್ರರು, ದ್ರೌಪದಿ ಜೊತೆಯಾಗಿ ಸಂತೋಷದಿಂದ ಸುಭದ್ರೆಯನ್ನು ಆದರಿಸಿದರು. ದ್ರೌಪದಿ ಅರ್ಜುನನಿಗೆ ಸರತಿಯಲ್ಲಿ ಸತಿಯಾಗಿದ್ದು ತನಗೊಬ್ಬಳು ಸವತಿ ಬಂದಳೆಂಬ ಮತ್ಸರ ತಳೆಯಲಿಲ್ಲ. ಅರ್ಜುನ ವನವಾಸ ಹೋದ ಬಳಿಕ ಅರ್ಜುನನ ಸರತಿಯ ಸಂವತ್ಸರ ಬಂದಾಗ ಅಂದರೆ ತೀರ್ಥಾಟನೆಗೆ ಹೋದ ಬಳಿಕದ ಮೂರನೇ ವರ್ಷ ಮತ್ತು ಎಂಟನೆಯ ವರ್ಷಗಳಲ್ಲಿ ತಾನು ಅರ್ಜುನನ ಪತ್ನಿಯಾಗಿರಬೇಕಿತ್ತು. ಪತಿಯನ್ನು ಅನುಸರಿಸಿ, ಮಡಿಯುಟ್ಟು ವ್ರತಸ್ಥಳಾಗಿ ಆಕೆಯೂ ಧ್ಯಾನ, ಪೂಜೆ, ವ್ರತ ನಿಯಮಾದಿಗಳಲ್ಲಿ ನಿರತಳಾಗಿ ಆ ವರ್ಷಗಳನ್ನು ಕಳೆದಂತಹ ಪತಿವೃತೆ.
ಹೀಗೆ ಕೆಲವು ತಿಂಗಳುಗಳು ಕಳೆದಾಗ ಅರ್ಜುನ ಹನ್ನೆರಡು ವರ್ಷಗಳ ತೀರ್ಥಯಾತ್ರೆ ಸಮಾಪ್ತಿಗೊಳಿಸಿ ಬರುತ್ತಿರುವ ಸುದ್ದಿ ಹಬ್ಬಿತು. ಕ್ಷಾತ್ರ ಧರ್ಮ ಪಾಲನೆ ಮಾಡಿ ಆದರ್ಶನಾಗಿ ಅರ್ಜುನ ಎಲ್ಲರ ಬಾಯಲ್ಲೂ ಪ್ರಶಂಸನೀಯನಾಗಿದ್ದನು. ಪ್ರಜಾರಕ್ಷೆಗಾಗಿ ಧರ್ಮ ಸಂಕಟಕ್ಕೆ ಒಳಗಾದರೂ ಪ್ರಾಯಶ್ಚಿತ್ತವಿರುವ ದಾರಿ ಅನುಸರಿಸಿ ನಡೆದು ಬಂದವನಾಗಿದ್ದಾನೆ. ಬ್ರಾಹ್ಮಣರ, ಗೋವುಗಳ, ಗೊಲ್ಲರ ರಕ್ಷಣೆಗಾಗಿ ತನ್ನ ಬಾಳ್ವೆಯ ಹನ್ನೆರಡು ವರುಷಗಳ ಸುದೀರ್ಘ ಅವಧಿಯನ್ನೇ ಮುಡಿಪಾಗಿಟ್ಟ ಕೃತಿಯಿಂದ ಸರ್ವ ಜನ – ಜನಾಂಗಗಳಿಂದ ವಂದಿತನಾದನು. ಮಹಾರಾಜನ ಸೋದರನಾಗಿ, ಅಣ್ಣ ಧರ್ಮರಾಯನೇ ಸ್ವಯಂ ಧರ್ಮದ ಪ್ರತಿರೂಪವಾಗಿದ್ದು, ಅರ್ಜುನ ನೀನು ನಿಯಮ ಉಲ್ಲಂಘಿಸಿದಂತಾಗದು. ಸ್ವಾರ್ಥಕ್ಕಾಗಿ ಅಥವಾ ವೈಯಕ್ತಿಕ ಕಾರ್ಯಕ್ಕಾಗಿ ನಿಯಮ ತೊರೆದು ಬಂದಿಲ್ಲ. ಪ್ರಜಾರಕ್ಷೆಗಾಗಿ ನೀನು ಮುಂದಾಗಿರುವ ಕಾರಣ ತೀರ್ಥಯಾತ್ರೆಯ ಶಿಕ್ಷೆ ನಿನಗೆ ಅನ್ವಯವಾಗದು. ಕ್ಷತ್ರಿಯರಾದ ನಮಗೆ ಪ್ರಜಾರಕ್ಷಣೆ ಪ್ರಥಮ ಧರ್ಮವಾಗುತ್ತದೆ ಎಂದು ತಿಳಿ ಹೇಳಿದಾಗಲೂ ಕೇಳಿರಲಿಲ್ಲ. ಅಣ್ಣಾ ನೀನು ತರ್ಕಿಸುವ ಸರ್ವ ವಿಚಾರವೂ ಧರ್ಮ ಸಮ್ಮತವಾಗಿ ಇದೆ. ಆದರೂ ಧರ್ಮ ಸೂಕ್ಷ್ಮ ಅರಿಯದವರು ನಾಳೆ ಅರಸನಿಗೊಂದು ನ್ಯಾಯ- ಆಳಿಗೊಂದು ನ್ಯಾಯ ಎಂಬ ರೀತಿ ಮಾತನಾಡಲು ಅವಕಾಶವಾದೀತು. ಹಾಗಾಗಿ ನಮ್ಮ ಪೂರ್ವ ನಿರ್ಧಾರದ ಕಟ್ಟುಪಾಡಿನಂತೆ ನಿಯಮ ಪಾಲಿಸಬೇಕು. ಆಚಾರ, ನಿಯಮಗಳಿರುವುದು ಕಡ್ಡಾಯ ಅನುಸರಣೆಗೆ ಎಂಬ ನೀತಿಯನ್ನು ನಾವು ನಡೆದು ತೋರಿಸಬೇಕು ಎಂದು ಉತ್ತರಿಸಿ, ತಾನು ಏಕಾಂಗಿಯಾಗಿ ರಾಜ ವೈಭೋಗ, ಸುಖ ಸಂಪತ್ತುಗಳನ್ನು ತೊರೆದು ತೀರ್ಥಯಾತ್ರೆಗೆ ಹೊರಟಿದ್ದವನು ಅರ್ಜುನ. ಗೋ, ಬ್ರಾಹ್ಮಣ ರಕ್ಷಣೆ ಮಾಡಿರುವುದು ಧರ್ಮ ಸಮ್ಮತ ಸತ್ಕಾರ್ಯ ಆಗಿದ್ದರೂ, ಆಂತರಿಕ ಒಪ್ಪಂದ ಮೀರಿದ ಕಾರಣಕ್ಕೆ ಶಿಕ್ಷೆಯಾಗಿ ಹನ್ನೆರಡು ವರ್ಷದ ವನವಾಸ ಪೂರೈಸಿ ಅರ್ಜುನ ಮರಳಿ ಬರುತ್ತಿದ್ದಾನೆ. ಈ ಯಾತ್ರೆಯಲ್ಲಿ ಶ್ರೇಷ್ಠಾತಿ ಶ್ರೇಷ್ಠ ತೀರ್ಥ – ಕ್ಷೇತ್ರ ಸಂದರ್ಶನ, ಉಲೂಪಿಯ ಅನುಗ್ರಹ, ಇರಾವಂತನ ಜನನ, ಚಿತ್ರಾಂಗದಾ ವಿವಾಹ, ಬಬ್ರುವಾಹನನ ಜನ್ಮ, ಪಂಚ ಸರೋವರ ಕ್ಷೇತ್ರ ಉದ್ಧರಿಸಿ, ಪಂಚ ಸುರಾಂಗನೆಯರ ಶಾಪ ವಿಮೋಚನೆ, ಸುಭದ್ರಾ ಕಲ್ಯಾಣ ಹೀಗೆ ಅನೇಕ ಫಲಪ್ರದ ಕಾರ್ಯಗಳನ್ನು ಗೈದು ಮರಳಿ ಬರುವ ಈ ಸುಸಂದರ್ಭ ಇಂದ್ರಪ್ರಸ್ಥವೇ ಉಲ್ಲಸಿತವಾಗಿದೆ. ಪ್ರಜಾಜನರು ಆನಂದ ಭರಿತರಾಗಿ ಉತ್ಸಾಹದಿಂದ ಓಡಾಡತೊಡಗಿದ್ದಾರೆ. ಮುಂಗಾರಿನ ಮಳೆಗೆ ತೋಯ್ದ ನೆಲವು ಮೊಳೆತ ಹಸಿರು ಹುಲ್ಲಿನಿಂದ ನಳನಳಿಸುವಂತೆ ಸಂತಸಪೂರ್ಣವಾಗಿ ರಾರಾಜಿಸಿತು.
ತೀರ್ಥಯಾತ್ರೆ ಪೂರೈಸಿ ಬಂದ ಅರ್ಜುನನಿಗೆ ಮಾತೆ ಕುಂತಿ, ಧರ್ಮರಾಯ, ಭೀಮ, ನಕುಲ ಸಹದೇವ, ದ್ರೌಪದಿ, ಸುಭದ್ರೆಯರೊಂದಿಗೆ ಸರ್ವ ಜನರೂ ಸೇರಿ ಪ್ರೀತಿ ಆದರಗಳಿಂದ ಭವ್ಯ ಸ್ವಾಗತವನ್ನೇ ಮಾಡಿದರು. ಪ್ರಜಾ ಜನ ಸಂತೋಷದಿಂದ ಕುಣಿದಾಡಿ ಉತ್ಸವವನ್ನೇ ಆಚರಿಸಿದರು. ಸುಭದ್ರೆ ಅರ್ಜುನರ ವಿವಾಹ ಮಹೋತ್ಸವ ವಿಜ್ರಂಭಣೆಯಿಂದ ದ್ವಾರಕೆಯ ಯಾದವ ಪರಿವಾರ, ಮಿತ್ರ ರಾಜರು, ಪರಿವಾರ ಸಹಿತ ಬಹಳ ವೈಭವದಿಂದ ನೆರವೇರಿತು.
ಬಳಿಕ ಸುಭದ್ರಾರ್ಜುನರು ವಿಹಾರಾರ್ಥಿಗಳಾಗಿ ಸುತ್ತಾಡಿ ಬಂದು ಸುಖ ಜೀವನ ಸಾಗಿಸುತ್ತಿರುವಾಗ ಒಂದು ದಿನ ಪರಮಾತ್ಮ ಶ್ರೀ ಕೃಷ್ಣನ ಆಗಮನ ಇಂದ್ರಪ್ರಸ್ಥಕ್ಕಾಯಿತು.
ಮುಂದುವರಿಯುವುದು…