ಬಾಗ 135
ಭರತೇಶ್ ಶೆಟ್ಟಿ,ಎಕ್ಕಾರ್

ಸಂಚಿಕೆ ೧೩೯ ಮಹಾಭಾರತ
ನವ ವಧು ವರರಿನನ್ನು ಕರೆಸಿ ಶ್ರೀ ಕೃಷ್ಣನು ಅರ್ಜುನನಿಗೆ ಕೊಡತಕ್ಕವುಗಳನ್ನು ಕೊಟ್ಟು, ಸುಭದ್ರೆಗೆ ಹೇಳಬೇಕಾದುದನ್ನು ಹೇಳಿ ಎರಡು ದಿನ ಅಲ್ಲೇ ಉಳಿದನು. ವಾಸುದೇವನ ಅನುಗ್ರಹ ನವ ದಂಪತಿಗಳಿಗಾಯಿತೆಂದು ಎಲ್ಲರೂ ಸಂಭ್ರಮಿಸಿದರು. ಬಳಿಕ ಶ್ರೀಕೃಷ್ಣ ಮರಳಿ ದ್ವಾರಕೆಗೆ ಹೊರಟು ಹೋದನು.
ಸ್ವಲ್ಪ ದಿನಗಳೆಯಲು ದ್ರೌಪದಿಯು ಕುಂತಿದೇವಿಯ ಬಳಿ ಬಂದು ಸುಭದ್ರೆ ಗರ್ಭಿಣಿಯಾಗಿರುವ ವಿಚಾರ ತಿಳಿಸಿದಾಗ, ಪಾಂಡವರಿಗೂ ಕುಂತಿಗೂ ಪರಮಾನಂದವಾಯಿತು. ಮುಂದೆ ಯಥಾಕಾಲದಲ್ಲಿ ಪುಂಸವನ ಸೀಮಂತಾದಿ ಕ್ರಮಗಳು ನಡೆದವು. ನವ ಮಾಸ ತುಂಬಿತು, ಒಂದು ದಿನ ಶುಭಲಗ್ನದಲ್ಲಿ ಸುಭದ್ರಾರ್ಜುನರ ಪ್ರೇಮ ಪ್ರತೀಕವೆನಿಸಿದ ಪಾಂಡವ ವಂಶೋದ್ಧಾರಕನಾದ ಪಾರ್ಥ ಸುಪುತ್ರನು ಸುಭದ್ರಾ ಗರ್ಭ ಸಂಜಾತನಾಗಿ ಜನಿಸಿದನು.
ಗಂಡು ಮಗುವಿನ ಜನನದಿಂದ ವಂಶ ಬೆಳೆಯುವಂತಾಯಿತೆಂಬ ಸಂತಸವನ್ನು ಕುಂತೀದೇವಿ ಶ್ರೀ ಕೃಷ್ಣನಲ್ಲಿ ಹೇಳಿ ಸಂಭ್ರಮಿಸಿದಳು. ಕುಲಪುರೋಹಿತರು ಮಗುವಿಗೆ ಅಭಿಮನ್ಯು ಎಂದು ನಾಮಕರಣ ಮಾಡಿದರು. ಅನ್ನದಾನ, ವಸ್ತ್ರದಾನ, ಕನಕದಾನ, ಗೋ ದಾನಾದಿ ಪುಣ್ಯ ಕರ್ಮಗಳನ್ನು ನೆರವೇರಿಸಿ ಕುಲೋದ್ಧಾರಕನ ಜಾತಕರ್ಮ ವಿಧಿಯನ್ನು ವಿಜ್ರಂಭಣೆಯಿಂದ ಆಚರಿಸಿದರು. ಅಭಿಮನ್ಯು ಮಾಸಗಳುರುತ್ತಿದ್ದಂತೆ ಬೆಳೆದು ದೊಡ್ಡವನಾಗತೊಡಗಿದ.
ಮಾವ ಕೃಷ್ಣ ಅಭಿಮನ್ಯುವನ್ನು ಕಾಣುವುದಕ್ಕಾಗಿ ಇಂದ್ರಪ್ರಸ್ಥಕ್ಕೆ ಬಂದು ಕೆಲದಿನ ಅಲ್ಲೇ ಉಳಿದನು. ಪಾಂಡವರಿಗೂ ಕೃಷ್ಣನ ಉಪಸ್ಥಿತಿ ಸರ್ವ ವಿಧದಲ್ಲೂ ಉಪಯುಕ್ತವಾಗಿ, ಧಾರ್ಮಿಕ, ರಾಜನೈತಿಕ ವಿಚಾರಗಳಲ್ಲಿ ಕೃಷ್ಣನ ಮಂತ್ರಾಲೋಚನೆ, ಸಲಹೆ ಪಡೆದು ಮುನ್ನಡೆಯುವಲ್ಲಿ ಸಹಕಾರಿಯಾಯಿತು.
ಒಂದು ದಿನ ಧರ್ಮರಾಯನ ಅನುಮತಿ ಪಡೆದು ಶ್ರೀ ಕೃಷ್ಣನೂ ಅರ್ಜುನನೂ ನದಿ ತೀರಕ್ಕೆ ವಿಹಾರಕ್ಕಾಗಿ ಹೊರಟರು. ಆಗ ಸುಭದ್ರೆ, ಕೃಷ್ಣನ ಜೊತೆ ಬಂದಿದ್ದ ಸತ್ಯಭಾಮೆ, ದಾಸಿಯರು, ಅಂಗರಕ್ಷಕರು, ಚಿಕ್ಕ ಸೈನ್ಯವೂ ಜೊತೆಯಾಗಿ ಸಾಗಿದರು. ವಿಧ ವಿಧ ಆಹಾರಗಳನ್ನು ಬಂಡೆಯಲ್ಲಿ ತುಂಬಿಸಿ ತಮ್ಮೊಂದಿಗೆ ಒಯ್ದಿದ್ದರು. ಹೀಗೆ ಸಾಗಿ ‘ಖಾಂಡವ’ ಎಂಬ ವನ ಪ್ರದೇಶದ ಬಳಿಯ ಯಮುನಾ ತೀರಕ್ಕೆ ಬಂದು ಸೇರಿದರು.
ಯಮುನೆ ಮಂದಗಮನೆಯಾಗಿ ಬಯಲು ಪ್ರದೇಶದಲ್ಲಿ ಸಾಗಿ ಹರಿಯುತ್ತಿದ್ದಳು. ಹೆಚ್ಚು ಆಳ ಸೆಳೆತಗಳಿಲ್ಲದ ಕಾರಣ ಈ ಪ್ರದೇಶ ಜಲಕ್ರೀಡೆಗೆ ಪ್ರಶಸ್ತವೆಂದು ತೀರ್ಮಾನಿಸಿ ಎಲ್ಲರೂ ಜಲಕೇಳಿಯಲ್ಲಿ ನಿರತರಾದರು. ವಿಹಂಗಮ ನೋಟ, ಸಾಧು ಪ್ರಾಣಿಗಳಾದ ಜಿಂಕೆ, ಕಡವೆಗಳ ಓಡಾಟ ರಮಣೀಯವಾಗಿತ್ತು. ನೀರಾಟವಾಡಿ ಮೇಲೆ ಬಂದವರು ಸುತ್ತು ಮುತ್ತಲ ಮರಗಳಿಂದ ಹಣ್ಣುಗಳನ್ನು ಕೊಯ್ದು ತಿನ್ನುತ್ತಾ, ಹೂವುಗಳನ್ನು ಕೊಯ್ಯುತ್ತಾ ಇರಬೇಕಾದರೆ ಅರ್ಜುನ ಮತ್ತು ಶ್ರೀ ಕೃಷ್ಣ ಜೊತೆಯಾಗಿ ನದಿಯನ್ನು ದಾಟಿ ವನವನ್ನು ಹೊಕ್ಕರು.
ಅದೇ ಖಾಂಡವ ವನ. ಅಲ್ಲಿ ನಾನಾ ಜಾತಿಯ ಮೃಗ ಪಕ್ಷಿಗಳೂ, ಹಾವುಗಳೂ ವಾಸವಾಗಿದ್ದವು. ಹೆಮ್ಮರಗಳು, ಬಿದಿರ ಹಿಂಡುಗಳು, ಬೆತ್ತದ ಬೀಳಲುಗಳು ಬೆಳೆದು ಸೂರ್ಯ ರಶ್ಮಿ ಭೂಮಿ ಸೋಕದಂತೆ ಆವರಿಸಿ ಕತ್ತಲು ಕವಿಯುವಂತೆ ಮಾಡಿತ್ತು ಆ ಕಾನನ. ಆ ದಟ್ಟಡವಿಯೊಳಗೆ ದುಷ್ಟ ಮೃಗಗಳು, ವಿಷಜಂತುಗಳೂ ತುಂಬಿ ತುಳುಕಾಡುತ್ತಿದ್ದವು. ಕೃಷ್ಣನಿಗೆ ಈ ದುಷ್ಟಜಂತುಗಳಿಂದ ಭವಿಷ್ಯದಲ್ಲಿ ಪ್ರಜಾಜನರಿಗೆ, ಕೃಷಿಗೆ, ಗೋವುಗಳಿಗೆ ಆಪತ್ತು ಬರಬಹುದೆಂದೆಣಿಸಿ ನಿಯಂತ್ರಿಸಬೇಕೆಂಬ ಮನಸ್ಸಾಯಿತು. ಸಮಕಾಲದಲ್ಲಿ ಅರ್ಜುನನಿಗೆ ಮುಳ್ಳುಗಂಟಿಗಳು ತುಂಬಿ ಕಾಡಿನ ಸೊಬಗು ನಷ್ಟವಾಗಿದೆಯೆಂದು ಭಾಸವಾಯಿತು. ಕಾಡಿನೊಳಗೆ ತುಸು ದೂರ ಸಾಗಿ ಮತ್ತೆ ಒಳ ಹೋಗಲಾಗದೆ ಮರಳಿ ನದಿ ತೀರಕ್ಕೆ ಬಂದು ನಡೆಯತೊಡಗಿದರು. ಹಾಗೇ ನಡೆಯುತ್ತಾ ಬಂದಾಗ ಒಂದು ವಿಶಾಲ ಶಿಲೆ ಕಾಣಿಸಿತು. ಇಬ್ಬರೂ ಅದರಲ್ಲಿ ಆಸೀನರಾಗಿ ಪ್ರಕೃತಿಯ ಸೊಬಗನ್ನು ಸವಿಯತೊಡಗಿದರು. ಅಲ್ಲಿಗೊಬ್ಬ ತೇಜಸ್ವಿಯಾದ ಬ್ರಾಹ್ಮಣನು ಬಂದನು.
ಮುಂದುವರಿಯುವುದು…