
ನವದೆಹಲಿ: ಪ್ರತಿವರ್ಷದಂತೆ ಈ ವರ್ಷವೂ ರಾಜಪಥದಲ್ಲಿ ನಡೆಯಲಿರುವ ಸಾಂಪ್ರದಾಯಿಕ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ದೆಹಲಿಯ ಟ್ಯಾಬ್ಲೋ ತಿರಸ್ಕಾರಗೊಂಡಿದ್ದು ಈ ಮೂಲಕ ನಾಲ್ಕನೇ ಬಾರಿ ಈ ರೀತಿ ದೆಹಲಿಯ ಟ್ಯಾಬ್ಲೋ ತಿರಸ್ಕಾರಗೊಂಡಿದೆ.
ಈ ವಿಚಾರ ಆಪ್ ಹಾಗೂ ಬಿಜೆಪಿ ನಡುವೆ ಮತ್ತೆ ಸಂಘರ್ಷಕ್ಕೆ ಕಾರಣವಾಗಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಕಳೆದ ಕೆಲವು ವರ್ಷಗಳಿಂದ ದೆಹಲಿಯ ಟ್ಯಾಬ್ಲೋಗೆ ಪರೇಡ್‌ನಲ್ಲಿ ಭಾಗವಹಿಸಲು ಅವಕಾಶವಿಲ್ಲ. ಇದು ಯಾವ ರೀತಿಯ ರಾಜಕೀಯ? ಬಿಜೆಪಿಯವರು ದೆಹಲಿಯ ಜನರನ್ನು ಏಕೆ ದ್ವೇಷಿಸುತ್ತಾರೆ? ದೆಹಲಿಯ ಜನರು ಅವರಿಗೆ ಏಕೆ ಮತ ಹಾಕಬೇಕು? ದೆಹಲಿಯು ಭಾರತದ ರಾಜಧಾನಿಯಾಗಿದ್ದು ಪ್ರತಿ ವರ್ಷ ಜನವರಿ 26 ರ ಮೆರವಣಿಗೆಯಲ್ಲಿ ನಮ್ಮ ಟ್ಯಾಬ್ಲೋ ಪ್ರತಿನಿಧಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್‌ದೇವ್ ಈ ಕುರಿತು ಪ್ರತಿಕ್ರಿಯಿಸಿ ಕೇಜ್ರಿವಾಲ್ ಹೇಳಿಕೆಗಳು ಅರಾಜಕತಾವಾದಿ ಸ್ವಭಾವವನ್ನು ಸೂಚಿಸುತ್ತದೆ. ಏನನ್ನು ಪ್ರದರ್ಶಿಸಲು ಅವರು ಬಯಸಿದ್ದರು? ಪ್ರವಾಹದಲ್ಲಿ 60 ಕ್ಕೂ ಹೆಚ್ಚು ಜನರ ಸಾವನ್ನು ತೋರಿಸುತ್ತಾರೆಯೇ? ಅಥವಾ ಜನರ ಹಣವನ್ನು ಲೂಟಿ ಮಾಡಿ ಅವರು ಕಟ್ಟಿದ ʻಶೀಷ್ ಮಹಲ್ʼನ್ನು ತೋರಿಸುತ್ತಾರೆಯೇ?. ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಇಡೀ ದೇಶದ ಟ್ಯಾಬ್ಲೋವನ್ನು ಪ್ರದರ್ಶಿಸಲಾಗುತ್ತದೆ. ಸಮಿತಿಯು ಟ್ಯಾಬ್ಲೋ ಬಗ್ಗೆ ನಿರ್ಧರಿಸಲಿದ್ದು ಈಗ, ಅರವಿಂದ್ ಕೇಜ್ರಿವಾಲ್ ಇದರಲ್ಲೂ ರಾಜಕೀಯ ಮಾಡಲು ಬಯಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.