
ಬೈಲೂರು: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಮೈನ್ ಇದರ ಶಾಲಾ ಸಭಾಂಗಣದಲ್ಲಿ ದಿನಾಂಕ 15.06.2026ರ ಸೋಮವಾರದಂದು ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು. ಶಾಲೆಯ ಹಿರಿಯ ವಿದ್ಯಾರ್ಥಿಯಾದ ಶ್ರೀ ಪ್ರಸಾದ್ ಶೆಟ್ಟಿ ಅಚ್ಚೋಟು ಅವರು ತಮ್ಮ ಸ್ವಂತ ಖರ್ಚಿನಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತವಾಗಿ ಸ್ಕೂಲ್ ಬ್ಯಾಗ್ಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಮಾತೃಶಾಲೆಯ ಮೇಲಿನ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ.
ಕಾರ್ಯಕ್ರಮದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಾನಿ ಪ್ರಸಾದ್ ಶೆಟ್ಟಿ ಅವರ ಮಾತೃಶ್ರೀಯಾದ ರಮಣಿ ಶೆಟ್ಟಿ, ಸಹೋದರಿ ಜಯಲಕ್ಷ್ಮಿ ಶೆಟ್ಟಿ, ಸುರೇಶ್ ಶೆಟ್ಟಿ ಹಾಗೂ ಉಷಾ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಿ ಶುಭ ಹಾರೈಸಿದರು.ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಾಸುದೇವ ಶೆಟ್ಟಿಗಾರ್, S.D.M.C ಉಪಾಧ್ಯಕ್ಷರಾದ ಪುಷ್ಪ ಹಾಗೂ ವಿದ್ಯಾರ್ಥಿ ನಾಯಕಿ ಕುಮಾರಿ ಅಶ್ವಿತ ಉಪಸ್ಥಿತರಿದ್ದರು. ಶಾಲಾ S.D.M.C ಅಧ್ಯಕ್ಷರಾದ ಸಚ್ಚಿದಾನಂದ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಆರಂಭದಲ್ಲಿ ಹಿರಿಯ ಶಿಕ್ಷಕಿಯಾದ ಶ್ರೀಮತಿ ಸುಮಾ ದೇವಿ ಅವರು ಎಲ್ಲರನ್ನೂ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿಯಾದ ಆಶಾ ಭಾನು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹಿರಿಯ ವಿದ್ಯಾರ್ಥಿಯ ಈ ಉದಾತ್ತ ಕಾರ್ಯವನ್ನು ಶ್ಲಾಘಿಸಿ ಧನ್ಯವಾದ ಸಮರ್ಪಿಸಿದರು. ಸಹ ಶಿಕ್ಷಕಿಯಾದ ಅಶ್ವಿನಿ ನಾಯಕ್ ಅವರು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ, ವಂದನಾರ್ಪಣೆ ಮಾಡಿದರು.ಶಾಲೆಯ ಶಿಕ್ಷಕ ವೃಂದ, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ದಾನಿಗಳ ದಾತೃತ್ವ ಗುಣವನ್ನು ಮುಕ್ತಕಂಠದಿಂದ ಶ್ಲಾಘಿಸಿದರು

































