
ಬೆಂಗಳೂರು: ಹಾಸಿಗೆಯಿಂದ ಬಿದ್ದು 11 ತಿಂಗಳ ಹೆಣ್ಣುಮಗು ಮೃತಪಟ್ಟಿದೆ ಎಂದು ಹೇಳಿ ಪ್ರಕರಣವನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಿದ ಪೋಷಕರ ಸುಳ್ಳು ಮರಣೋತ್ತರ ಪರೀಕ್ಷೆಯಿಂದ ಬಯಲಾಗಿದೆ. ಪ್ರಕರಣ ಸಂಬಂಧ ಅವಲಹಳ್ಳಿ ಪೊಲೀಸರು ಮಗುವಿನ ತಂದೆ ಶೇಖಪ್ಪ ಹಾಗೂ ತಾಯಿ ವಿಜಯಲಕ್ಷ್ಮಿಯನ್ನು ಬಂಧಿಸಿದ್ದಾರೆ.
ಕಿತಗಾನೂರು ಗ್ರಾಮದಲ್ಲಿ ನಡೆದ ಘಟನೆಯ ಬಳಿಕ, ಮಗು ಹಾಲು ಕುಡಿಯುವ ವೇಳೆ ಹಾಸಿಗೆಯಿಂದ ಕೆಳಗೆ ಬಿದ್ದು ಮೃತಪಟ್ಟಿದೆ ಎಂದು ಶೇಖಪ್ಪ ದೂರು ನೀಡಿದ್ದ. ಈ ಆಧಾರದ ಮೇಲೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.
ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ದೇಹದೊಳಗೆ ತೀವ್ರ ರಕ್ತಸ್ರಾವ, ಉಸಿರುಗಟ್ಟುವಿಕೆ ಹಾಗೂ ಮುಖ, ಎದೆ, ಕಾಲು ಮತ್ತು ಖಾಸಗಿ ಅಂಗಗಳ ಮೇಲೆ ಗಾಯಗಳಿರುವುದು ಪತ್ತೆಯಾಯಿತು. ಕೇವಲ ಎರಡು ಅಡಿ ಎತ್ತರದ ಹಾಸಿಗೆಯಿಂದ ಬಿದ್ದರೆ ಇಂತಹ ಗಾಯಗಳು ಸಾಧ್ಯವಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಬಳಿಕ ಪೋಷಕರನ್ನು ವಿಚಾರಣೆ ನಡೆಸಿದಾಗ, ಜೂನ್ 9ರಂದು ದಂಪತಿ ನಡುವೆ ಜಗಳ ನಡೆದಿದ್ದು, ಅಳುತ್ತಿದ್ದ ಮಗುವಿಗೆ ತಾಯಿ ಕಾಲಿನಿಂದ ಒದ್ದಿದ್ದಾಳೆ. ಇದರಿಂದ ಕೋಪಗೊಂಡ ತಂದೆ ಮಗುವನ್ನು ಬಲವಾಗಿ ನೆಲಕ್ಕೆ ಎಸೆದ ಪರಿಣಾಮ ಮಗು ಮೃತಪಟ್ಟಿದೆ ಎಂಬುದು ಬೆಳಕಿಗೆ ಬಂದಿದೆ.
ನೆರೆಹೊರೆಯವರ ಹೇಳಿಕೆಗಳ ಪ್ರಕಾರ, ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ವಿಜಯಲಕ್ಷ್ಮಿಗೆ ಪಕ್ಕದ ಮನೆಯ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧವಿದ್ದು, ಮಗುವಿನ ಬಗ್ಗೆ ಸಹ ಮಮತೆ ಇರಲಿಲ್ಲ ಎಂಬ ಆರೋಪಗಳೂ ತನಿಖೆ ವೇಳೆ ಕೇಳಿಬಂದಿವೆ. ವೈದ್ಯಕೀಯ ವರದಿ ಹಾಗೂ ಇತರೆ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) ಮತ್ತು 3(5) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.











































