
ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆಯವರು ರಾಜ್ಯದಲ್ಲಿ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು ಇದರ ಬೆನ್ನಲ್ಲೇ ಕಲಬುರಗಿ ನಗರದಲ್ಲಿ ಬಿಜೆಪಿ ನಾಯಕರು ಬೀದಿಗಿಳಿದು, ‘ಐ ಲವ್ ಆರ್‌ಎಸ್‌ಎಸ್’ ಪೋಸ್ಟರ್ ಅಭಿಯಾನ ಆರಂಭಿಸಿದ್ದಾರೆ.
ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಸೇರಿದಂತೆ ಬಿಜೆಪಿಯ ಅನೇಕ ಪ್ರಮುಖರು, ಯುವ ಮುಖಂಡರು ಪ್ರಮುಖ ರಸ್ತೆ, ವೃತ್ತಗಳಲ್ಲಿ ‘ಯಾರು ಭಾರತವನ್ನು ಪ್ರೀತಿಸುತ್ತಾರೋ, ಅವರು ಆರ್‌ಎಸ್‌ಎಸ್ ಅನ್ನೂ ಪ್ರೀತಿಸುತ್ತಾರೆ’ ಎಂದು ಪೋಸ್ಟರ್ ಅಂಟಿಸುವ ಮೂಲಕ ಬಿಜೆಪಿ ನಾಯಕರು ಸಚಿವ ಪ್ರಿಯಾಂಕ್ ಖರ್ಗೆಗೆ ಟಾಂಗ್ ನೀಡಿದ್ದಾರೆ.
ಸಂಘ ಪರಿವಾರ ರಾಷ್ಟ್ರಾದ್ಯಂತ ದೇಶಭಕ್ತಿಗೆ ಪ್ರೇರಣೆ ನೀಡುತ್ತದೆ, ಇದು ಸಚಿವರಿಗೆ ಗೊತ್ತಿಲ್ಲವೆ? ಸಂಘದ ಜನ್ಮ ಶತಾಬ್ದಿ ವರ್ಷಾಚರಣೆಯಲ್ಲಿ ಇಡೀ ದೇಶದ ಜನರೇ ಪಾಲ್ಗೊಂಡು ಹರ್ಷ ಪಡುತ್ತಿರುವಾಗ ಸಚಿವ ಖರ್ಗೆಯವರು ಮೊಸರಲ್ಲಿ ಕಲ್ಲು ಹುಡುಕುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಖರ್ಗೆ ಬರೆದ ಪತ್ರವನ್ನು ಖಂಡಿಸಿದ್ದಾರೆ.




















































