
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿ ಈ ವರ್ಷ ತೀವ್ರ ಬರಗಾಲ ಎದುರಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಅಣೆಕಟ್ಟು ನೀರನ್ನು ನಂಬಿಕೊಂಡು ರೈತರು ಬೆಳೆ ಬೆಳೆಯದಂತೆ ಮನವಿ ಮಾಡಿದ್ದಾರೆ.
ರಾಜ್ಯದ ಬಹುತೇಕ ಅಣೆಕಟ್ಟುಗಳಲ್ಲಿ ನೀರಿನ ಒಳಹರಿವು ಗಣನೀಯವಾಗಿ ಕುಸಿದಿದ್ದು, ಸಂಪೂರ್ಣ ಭರ್ತಿಯಾಗುವವರೆಗೆ ರೈತರು ಅವುಗಳ ಮೇಲೆ ಅವಲಂಬಿಸಬಾರದು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಣೆಕಟ್ಟುಗಳ ಒಳಹರಿವು ಶೇ.20ರಷ್ಟಕ್ಕೆ ಇಳಿದಿದೆ. ತುಂಗಭದ್ರಾ, ಘಟ್ಟಪ್ರಭಾ, ಮಲಪ್ರಭಾ, ನಾರಾಯಣಪುರ ಹಾಗೂ ವಾಣಿವಿಲಾಸ ಅಣೆಕಟ್ಟುಗಳಿಗೆ ಒಳಹರಿವು ಶೂನ್ಯವಾಗಿದ್ದು, ಕಾವೇರಿ ಜಲಾನಯನ ಪ್ರದೇಶದಲ್ಲಿಯೂ ಮಳೆ ಕೊರತೆಯಾಗಿದೆ ಎಂದರು.
ಹೇಮಾವತಿ, ಕೆಆರ್‌ಎಸ್ ಹಾಗೂ ಕಬಿನಿ ಅಣೆಕಟ್ಟುಗಳ ನೀರಿನ ಮಟ್ಟವೂ ಕಳೆದ ವರ್ಷಕ್ಕಿಂತ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ನೀರಿಗಾಗಿ ಒತ್ತಡ ಹೇರುವ ಬದಲು ಮಳೆಯ ಸ್ಥಿತಿಗತಿಯನ್ನು ಗಮನಿಸಿ ಬೆಳೆ ಆಯ್ಕೆ ಮಾಡಿಕೊಳ್ಳುವಂತೆ ರೈತರಿಗೆ ಸಲಹೆ ನೀಡಿದ ಸಿಎಂ, ಮಳೆ ಉತ್ತಮವಾದರೆ ಅಗತ್ಯ ನೀರು ಒದಗಿಸಲಾಗುವುದು. ಸಚಿವರಿಗೆ ವಿವಿಧ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದ್ದು, ತಾವೂ ನಾಲ್ಕು ವಿಭಾಗಗಳಲ್ಲಿ ಪರಿಸ್ಥಿತಿ ಪರಿಶೀಲನೆ ನಡೆಸುವುದಾಗಿ ಹೇಳಿದರು.
ಪ್ರಧಾನಿ ಕೂಡ ನೀರು ಮತ್ತು ವಿದ್ಯುತ್ ನಿರ್ವಹಣೆಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿರುವುದಾಗಿ ತಿಳಿಸಿದ ಅವರು, ವಿದ್ಯುತ್ ಪೂರೈಕೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲು ಇಂಧನ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದರು.
ಮೇವು ಹಾಗೂ ಕುಡಿಯುವ ನೀರಿನ ಕೊರತೆ ಎದುರಾಗದಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ಥಳ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ಅಗತ್ಯವಿರುವ ಕಡೆ ತುರ್ತಾಗಿ ಕೊಳವೆಬಾವಿ ಕೊರೆಯಲು ಆದೇಶ ನೀಡಲಾಗಿದ್ದು, ತಾವು ಸಹ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುವುದಾಗಿ ಮುಖ್ಯಮಂತ್ರಿ ಹೇಳಿದರು.








































