
ಧಾರವಾಡ: ಧಾರವಾಡ ಹೊರವಲಯದ ಮನ್ಸೂರ ಗ್ರಾಮದ ಹೊರವಲಯದಲ್ಲಿನ ಕಲ್ಲು ಕ್ವಾರಿಯ ಹೊಂಡದಲ್ಲಿ ಫೋಟೊಶೂಟ್, ರೀಲ್ಸ್ ಮಾಡುವ ಹುಚ್ಚಿಗೆಬಿದ್ದ ಅಪ್ರಾಪ್ತ ಬಾಲಕರಿಬ್ಬರು ಕಲ್ಲು ಕ್ವಾರಿಯ ಹೊಂಡಕ್ಕೆ ಬಿದ್ದು ನೀರಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಧಾರವಾಡದ ಕೆಇ ಬೋರ್ಡ್ ಶಾಲೆಯ ವಿದ್ಯಾರ್ಥಿಗಳಾದ 16 ವರ್ಷದ ಆರು ಜನ ಬಾಲಕರು ಮನೆಯಲ್ಲಿ ಸ್ನೇಹಿತನ ಮನೆಗೆ ಊಟಕ್ಕೆ ಹೋಗುವೆನೆಂದು ಹೇಳಿ ಹೊರಗೆ ಹೋಗಿದ್ದರು.
ರೀಲ್ಸ್, ಫೋಟೋಶೂಟ್ ಮಾಡುವ ಹುಚ್ಚಿನಿಂದ ಕಲ್ಲು ಕ್ವಾರಿಯ ಹೊಂಡಕ್ಕೆ ಇಳಿಯಲು ಸ್ಥಳೀಯ ದನಗಾಯಿಯೊಬ್ಬನ ಸಹಾಯ ಪಡೆದಿದ್ದರು.ಈ ಕಲ್ಲು ಕ್ವಾರಿ ತುಂಬಾ ಆಳವಾಗಿದ್ದು ಇತ್ತೀಚೆಗೆ ಸುರಿದ ಮಳೆಗೆ ಹೊಂಡದಲ್ಲಿ ನೀರು ತುಂಬಿತ್ತು. ದೊಡ್ಡ ಪ್ರಪಾತದಂತೆ ಕಾಣುತ್ತಿದ್ದ ಆ ಹೊಂಡಕ್ಕೆ ನಾಲ್ಕು ಜನ ಇಳಿದಿದ್ದು ಉಳಿದ ಇಬ್ಬರು ಮೊಬೈಲ್ ದಲ್ಲಿ ಫೋಟೊ ಹೊಡೆಯೋ ಪ್ಲ್ಯಾನ್ ಮಾಡಿದ್ದಾರೆ. ಆದರೆ ಈ ವೇಳೆ ತೀರಾ ಆಳಕ್ಕೆ ಹೋದಾಗ ಈಜು ಬಾರದ ಶ್ರೇಯಸ್ ಮತ್ತು ಧ್ರುವ್ ಮುಳುಗಿದ್ದಾರೆ. ಉಳಿದವರು ಹೆದರಿ ಮೇಲಕ್ಕೆ ಬಂದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.