
ಕೋಲಾರ: ಆಂಧ್ರದ ಬೈನಪಲ್ಲಿ ಗ್ರಾಮದ ಲಿಖಿತಾಶ್ರೀ (20) ಹಾಗೂ ಚಂಬರಸನಹಳ್ಳಿಯ ನವೀನ್ (28) ಪರಸ್ಪರ ಪ್ರೀತಿಸಿದ್ದು ಆಗಸ್ಟ್ 7 ಬುಧವಾರದಂದು ಬೆಳಗ್ಗೆ ಮದುವೆಯಾಗಿದ್ದರು. ಆದರೆ ಅದೇ ದಿನ ಮಧ್ಯಾಹ್ನ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ ಪರಿಣಾಮ ನವವಧು ಸಾವನ್ನಪ್ಪಿದ್ದು ಮದುವೆಯ ಮರುದಿನ ಅಂದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ವರನೂ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.
ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಬುಧವಾರ ದಾಖಲಾಗಿದ್ದ ನವೀನ್ ನನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರಾತ್ರಿ ರವಾನಿಸಲಾಗಿತ್ತು. ಗುರುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಘಟನೆಯ ಹಿನ್ನೆಲೆ:
ನವೀನ್ ಮತ್ತು ಲಿಖಿತಾಶ್ರೀ ಜೋಡಿ ಪರಸ್ಪರ ಒಪ್ಪಿ ಮದುವೆಯಾಗಿದ್ದು ಬುಧವಾರ ಮುಂಜಾನೆ ಹಿರಿಯರ ಸಮ್ಮುಖದಲ್ಲಿ ಚಂಬರಸನಹಳ್ಳಿಯಲ್ಲಿ ಮದುವೆಯಾದರು. ಮದುವೆ ಕೆಲಗಂಟೆಗಳ ನಂತರ ನವಜೋಡಿ ರೂಮಿಗೆ ಹೋಗಿದ್ದಾರೆ. ಬಳಿಕ ಮಚ್ಚಿನಿಂದ ಪರಸ್ಪರರ ಮೇಲೆ ಹಲ್ಲೆ ನಡೆಸಿಕೊಂಡಿದ್ದಾರೆ. ಮಾರಾಮಾರಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಕೆಜಿಎಫ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಲಿಖಿತಾಶ್ರೀ ಸಾವನ್ನಪ್ಪಿದ್ದಳು. ನವೀನ್ ಸ್ಥಿತಿ ಚಿಂತಾಜನಕವಾಗಿದ್ದರಿಂದ ಆತನನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ವರನೂ ಸಾವನ್ನಪ್ಪಿದ್ದಾನೆ.ಬುಧವಾರ ಅಂಡರ್ಸನ್ ಪೇಟೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇಬ್ಬರ ಗಲಾಟೆಗೆ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.













