
ನವದೆಹಲಿ: ‘ಲೈಂಗಿಕ ಹಗರಣದ ಆರೋಪಿ ಹಾಗೂ ಜನತಾ ದಳ ಸಂಸದ ಪ್ರಜ್ವಲ್ ರೇವಣ್ಣ ಅವರು, ಜರ್ಮನಿಗೆ ಪ್ರಯಾಣಿಸಿದ್ದು ಇಂತಹ ಘೋರ ಆರೋಪಗಳನ್ನು ಹೊತ್ತಿದ್ದರೂ ಪ್ರಜ್ವಲ್ ವಿದೇಶಕ್ಕೆ ಪ್ರಯಾಣಿಸಲು ಕೇಂದ್ರ ಸರ್ಕಾರ ಹೇಗೆ ಅನುಮತಿ ನೀಡಿತು? ಪ್ರಧಾನಿ ನರೇಂದ್ರ ಮೋದಿ ಅವರ ಅಣತಿಯಂತೆಯೇ ಪ್ರಜ್ವಲ್ ವಿದೇಶಕ್ಕೆ ಹೋಗಿದ್ದಾರೆ’ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಈ ಕುರಿತು ಸ್ಪಷ್ಟನೆ ನೀಡಿದ ವಿದೇಶಾಂಗ ಸಚಿವಾಲಯವು ಅವರು ನಮ್ಮಿಂದ ಯಾವುದೇ ರಾಜಕೀಯ ಅನುಮತಿ ಕೇಳಿಲ್ಲ ಅಥವಾ ನಾವು ನೀಡಿಯೂ ಇಲ್ಲ’ ಎಂದು ಹೇಳಿದೆ.
ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್, ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ‘ಈ ಸಂಸದ ಜರ್ಮನಿಗೆ ಪ್ರಯಾಣಿಸುವ ಬಗ್ಗೆ ವಿದೇಶಾಂಗ ಸಚಿವಾಲಯದಿಂದ ಯಾವುದೇ ರಾಜಕೀಯ ಅನುಮತಿ ಕೇಳಿಲ್ಲ. ನಾವು ಅನುಮತಿ ನೀಡಿಯೂ ಇಲ್ಲ. ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವವರಿಗೆ ಜರ್ಮನಿಗೆ ಪ್ರಯಾಣಿಸಲು ಯಾವುದೇ ವೀಸಾ ಅಗತ್ಯವಿಲ್ಲ. ಹೀಗಾಗಿ ಸಚಿವಾಲಯವು ಈ ಸಂಸದನಿಗೆ ಯಾವುದೇ ದೇಶಕ್ಕೆ ವೀಸಾ ಟಿಪ್ಪಣಿಯನ್ನು ನೀಡಿಲ್ಲ. ಅವರು ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಸಿದ್ದಾರೆ’ ಎಂದು ಜೈಸ್ವಾಲ್ ನುಡಿದರು.