
ಪ್ಯಾರಿಸ್: ಶುಕ್ರವಾರ ದೇಶದ ಪದಕ ಖಾತೆಗೆ ಮತ್ತೆ ಎರಡು ಪದಕ ಸೇರ್ಪಡೆಗೊಂಡಿದ್ದು ಪುರುಷರ ಹೈಜಂಪ್ ಟಿ64 ವಿಭಾಗದಲ್ಲಿ ಪ್ರವೀಣ್ ಕುಮಾರ್ ಏಷ್ಯಾ ದಾಖಲೆಯೊಂದಿಗೆ ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಹೀಗಾಗಿ ಭಾರತದ ಪದಕ ಸಂಖ್ಯೆ 27ಕ್ಕೆ ಹೆಚ್ಚಳವಾಗಿದ್ದು ಭಾರತ ಈ ಬಾರಿ 6 ಚಿನ್ನದ ಪದಕ, 9 ಬೆಳ್ಳಿ, 12 ಕಂಚಿನ ಪದಕಗಳನ್ನು ಗೆದ್ದಿದೆ.
ನೋಯ್ಡಾದ 21 ವರ್ಷದ ಪ್ರವೀಣ್ ಕುಮಾರ್ 2.08 ಮೀ. ಎತ್ತರಕ್ಕೆ ನೆಗೆದು ಈ ಮೂಲಕ ಅವರು ಏಷ್ಯನ್ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಮೊದಲ ಪ್ರಯತ್ನದಲ್ಲಿ 1.89 ಮೀ. ಎತ್ತರಕ್ಕೆ ನೆಗೆದ ಪ್ರವೀಣ್, ಬಳಿಕ 1.93 ಮೀಟರ್, 1.97 ಮೀಟರ್, 2.00 ಮೀಟರ್, 2.03 ಮೀಟರ್, 2.06 ಮೀಟರ್ ಪ್ರಯತ್ನಗಳಲ್ಲೂ ಸಫಲರಾದರು. ಬಳಿಕ 2.08 ಮೀ. ಎತ್ತರಕ್ಕೆ ಹಾರುವ ಎಲ್ಲಾ 3 ಪ್ರಯತ್ನಗಳಲ್ಲಿ ಯಶಸ್ಸು ಸಾಧಿಸುವ ಮೂಲಕ ಅಗ್ರಸ್ಥಾನ ಗಿಟ್ಟಿಸಿಕೊಂಡರು. ಅಮೆರಿಕದ ಡೆರೆಕ್ ಲಾಕಿ ಡೆಂಡ್ 2.06 ಮೀ. ಎತ್ತರಕ್ಕೆನೆಗೆದು ಬೆಳ್ಳಿ ಪದಕ ಪಡೆದರೆ, ಉಜೇಕಿಸ್ತಾನದ ಟೆಮುರ್ಬೆಕ್ ಗಿಯಾಜೊವ್ 2.03 ಮೀ. ಎತ್ತರಕ್ಕೆ ಹಾರಿ ಕಂಚಿನ ಪದಕ ಗಳಿಸಿದರು.
ಟಿ64 ಅಂದರೆ ಒಂದು ಕಾಲಿನ ಚಲನೆಯಲ್ಲಿ ಸಮಸ್ಯೆಯಿದ್ದರೆ ಅಥವಾ ಮೊಣಕಾಲಿನ ಕೆಳಗೆ ಒಂದು/ಎರಡು ಕಾಲು ತುಂಡಾಗಿರುವ ಕ್ರೀಡಾ ಪಟುಗಳು ಸ್ಪರ್ಧಿಸುವ ವಿಭಾಗ. ಆದರೆ ಪ್ರವೀಣ್ ಟಿ44 ವಿಭಾಗಕ್ಕೆ ಸೇರುತ್ತಾರೆ. ಅಂದರೆ ಕಾಲಿನ ಕೆಳ ಭಾಗದ ಚಲನೆಯಲ್ಲಿ ಸಮಸ್ಯೆಯಿರುವ ಕ್ರೀಡಾಪಟುಗಳು ಸ್ಪರ್ಧಿಸುವ ವಿಭಾಗ. ಈ ಎರಡೂ ವಿಭಾಗಗಳ ಸ್ಪರ್ಧೆ ಒಟ್ಟಿಗೇ ನಡೆಯುತ್ತದೆ.
ಈ ಬಾರಿ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ ಮತ್ತೊಂದು ದಾಖಲೆ ನಿರ್ಮಿಸಿದ್ದು ಅದೇನೆಂದರೆ ಭಾರತವು ಒಟ್ಟು 6 ಚಿನ್ನದ ಪದಕ ಗಳಿಸಿ ಈ ಮೂಲಕ ಪ್ಯಾರಾಲಿಂಪಿಕ್ಸ್ ಆವೃತ್ತಿಯಯೊಂದರಲ್ಲಿ ಗರಿಷ್ಠ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ. ಹೀಗಾಗಿ ಟೋಕಿಯೋ ಒಲಿಂಪಿಕ್ಸ್ನಲ್ಲಿ ಗೆದ್ದಿದ್ದ 5 ಚಿನ್ನದ ಪದಕಗಳ ದಾಖಲೆ ಪತನಗೊಂಡಿದೆ.













