
ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಮಂಗಳೂರಿನ ಬಜ್ಪೆ ಬಳಿ ನಡು ರಸ್ತೆಯಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದ್ದು ಮಂಗಳೂರಿನ ಪೊಲೀಸರು ವಿಡಿಯೋಗಳನ್ನು ಆಧರಿಸಿ ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದರು. ಆರೋಪಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅವಿತುಕೊಂಡಿದ್ದ ವಿಚಾರ ತಿಳಿದಿದ್ದ ಪೊಲೀಸರು ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ಮೊಹಮ್ಮದ್ ರಿಜ್ವಾನ್, ರಂಜಿತ್ ಹಾಗೂ ನಾಗರಾಜ್ನನ್ನ ಬಂಧಿಸಿದ್ದು ವಿಚಾರಣೆ ವೇಳೆ ಸುಹಾಸ್ ಕೊಲೆಯಲ್ಲಿ ಒಂಬತ್ತು ಜನ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ವಿಚಾರಣೆ ನಡೆಸಿದ ವೇಳೆ ಈ ಕೊಲೆ ಪ್ರಕರಣಕ್ಕೆ 2023ರ ಪ್ರಕರಣವೊಂದರ ಲಿಂಕ್ ಇರುವುದು ಗೊತ್ತಾಗಿದೆ. ಅದೇನೆಂದರೆ ಸಫ್ವಾನ್ ಹಾಗೂ ಸುಹಾಸ್ ಶೆಟ್ಟಿಯ ಆಪ್ತ ಪ್ರಶಾಂತ್ ಎಂಬಾತನ ನಡುವಿನ ಗಲಾಟೆ. ಸಫ್ವಾನ್ ಎಂಬಾತನ ಜತೆಗೆ ಸುಹಾಸ್ ಶೆಟ್ಟಿ ಆಪ್ತ ಪ್ರಶಾಂತ್ ಗಲಾಟೆ ಮಾಡಿಕೊಂಡಿದ್ದು ಈ ಗಲಾಟೆ ವಿಚಾರಕ್ಕೆ ಮಾತುಕತೆ ನಡೆಸೋದಕ್ಕೆ ಸಫ್ವಾನ್ನನ್ನು ಕರೆದಿದ್ದ. ಮಾತಾನಾಡುವುದಕ್ಕೆ ಎಂದು ಕರೆದ ಪ್ರಶಾಂತ್ ಹಾಗೂ ಗ್ಯಾಂಗ್ 2023ರ ಸೆಪ್ಟೆಂಬರ್ನಲ್ಲಿ ಸಫ್ವಾನ್ಗೆ ಡ್ರ್ಯಾಗನರ್ನಿಂದ ಇರಿದಿತ್ತು. ಬಳಿಕ ಚೂರಿ ಇರಿತಕ್ಕೆ ಒಳಗಾದ ಸಫ್ವಾನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ಚೂರಿ ಇರಿತ ಪ್ರಕರಣ ಬಳಿಕ ಸಫ್ವಾನ್ ಹಾಗೂ ಪ್ರಶಾಂತ್ ನಡುವೆ ದ್ವೇಷಕ್ಕೆ ತಿರುಗಿತ್ತು.
ಸಫ್ವಾನ್ ಪ್ರಶಾಂತ್ ಮೇಲೆ ದಾಳಿ ಮಾಡುವುದಕ್ಕೆ ಅನೇಕ ಬಾರಿ ಸಂಚು ಹೂಡಿದ್ದು ಈ ವೇಳೆ ಪ್ರಶಾಂತ್ಗೆ ಸುಹಾಸ್ ಶೆಟ್ಟಿ ಬೆಂಬಲವಾಗಿ ನಿಂತಿದ್ದರಿಂದ ಪ್ರಶಾಂತ್ ಮೇಲಿನ ಸಫ್ವಾನ್ ದ್ವೇಷ ಸುಹಾಸ್ ಶೆಟ್ಟಿ ಕಡೆಗೆ ತಿರುಗಿತ್ತು. ಹೀಗಾಗಿ ಸಫ್ವಾನ್, ಸುಹಾಸ್ ಹತ್ಯೆಗೆ ಸ್ಕೆಚ್ ಹಾಕಿದ್ದು ಒಂದಷ್ಟು ಕ್ರಿಮಿನಲ್ಗಗಳ ಜೊತೆಸೇರಿ ಸಂಚು ರೂಪಿಸಿದ್ದ. ಅದರಂತೆ ಮಿನಿ ಕಂಟೇನರ್ ಚಲಾಯಿಸಿದ್ದ ಸಫ್ವಾನ್ ಸುಹಾಸ್ ಕಾರಿಗೆ ಗುದ್ದಿದ್ದು ಬಳಿಕ ಮುಝಮ್ಮಿಲ್ ಎಂಬಾತ ಚಲಾಯಿಸಿಕೊಂಡು ಬಂದ ಸ್ವಿಫ್ಟ್ ಕಾರಿನಲ್ಲಿದ್ದ ಹಂತಕರು, ನಟ್ಟ ನಡುರಸ್ತೆಯಲ್ಲೇ ಸುಹಾಸ್ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು.
ಸದ್ಯ ವಿಚಾರಣೆ ವೇಳೆ ಇಷ್ಟು ಮಾಹಿತಿ ಹೊರಬಂದಿದ್ದು ಮತ್ತಷ್ಟು ವಿಚಾರಗಳನ್ನು ಬಯಲಿಗೆಳೆಯಲು ಪೋಲಿಸರು ತನಿಖೆ ಮುಂದುವರಿಸಿದ್ದಾರೆ.













