ಕಾರ್ಕಳ ತಾಲೂಕು ಗುಡಿಗಾರ ಸಮಾಜ ಸುಧಾರಕ ಸಂಘ ಕೆರ್ವಾಶೆ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಂಗ್ಲೆಗುಡ್ಡೆ, ಕೆರ್ವಾಶೆ ಇಲ್ಲಿ ದಿನಾಂಕ :12-07-2026ನೇ ಭಾನುವಾರದಂದು ಬೆಳಿಗ್ಗೆ 9:00 ಗಂಟೆಗೆ ಕಾರ್ಕಳ ತಾಲೂಕು ಗುಡಿಗಾರ ಸಮಾಜ ಸುಧಾರಕ ಸಂಘ, ಕೆರ್ವಾಶೆ ಇವರ ವತಿಯಿಂದ ಪರಿಸರ ದಿನದ ಅಂಗವಾಗಿ ಗಿಡ ನೆಡುವ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ 15 ಕಾಳು ಮೆಣಸಿನ ಗಿಡಗಳನ್ನು ನೆಡಲಾಯಿತು. ಜೊತೆಗೆ ಶಾಲಾ ಆವರಣದಲ್ಲಿದ್ದ ಅರಣ್ಯ ಇಲಾಖೆಯವರಿಂದ ತೆರವುಗೊಳಿಸಲ್ಪಟ್ಟ ಮಾವಿನ ಮರದ ರೆಂಬೆಗಳನ್ನು ಸ್ಥಳಾಂತರಿಸುವ ಕಾರ್ಯವನ್ನೂ ಸಂಘದ ವತಿಯಿಂದ ಕೈಗೊಳ್ಳಲಾಯಿತು.
ಈ ಕಾರ್ಯಕ್ರಮವು ಸಂಘದ ಅಧ್ಯಕ್ಷರಾದ ಶ್ರೀ ಗಣೇಶ್ ಗುಡಿಗಾರ್ ಅವರ ನೇತೃತ್ವದಲ್ಲಿ ನಡೆಯಿತು. ಉಪಾಧ್ಯಕ್ಷೆ ಶ್ರೀಮತಿ ವಸಂತಿ ಗುಡಿಗಾರ್, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಪ್ರಕಾಶ್ ಗುಡಿಗಾರ್, ಗೌರವ ಸಲಹೆಗಾರರಾದ ಶ್ರೀ ವಾಸುದೇವ ಗುಡಿಗಾರ್ ಹಾಗೂ ಕೋಶಾಧಿಕಾರಿಯೂ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರೂ ಆದ ಶ್ರೀ ನಾರಾಯಣ ಗುಡಿಗಾರ್, ಎಸ್ ಡಿ ಎಮ್ ಸಿ ಯ ಉಪಾಧ್ಯಕ್ಷರಾದ ಶ್ರೀಮತಿ ರೂಪ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಮೀಳಾ ಅವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿ, ಸಂಘದ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವುದರ ಜೊತೆಗೆ ಶಾಲಾ ಪರಿಸರವನ್ನು ಇನ್ನಷ್ಟು ಹಸನಾಗಿಸಲು ಹಾಗೂ ಸ್ವಚ್ಛವಾಗಿಡಲು ಪ್ರೇರಣೆಯಾಯಿತು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.











































