
ಮುಂಬೈ: ಪತ್ನಿ ಅಡುಗೆ ಮಾಡದಿರುವುದು, ಮನೆ ಸ್ವಚ್ಛತೆ ಕಾಪಾಡದಿರುವುದು ಅಥವಾ ಪತಿಯ ಪೋಷಕರನ್ನು ನೋಡಿಕೊಳ್ಳದಿರುವುದನ್ನೇ ಆಧಾರವಾಗಿ ತೆಗೆದುಕೊಂಡು ‘ಕ್ರೌರ್ಯ’ ಎಂದು ಆರೋಪಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. “ಮದುವೆ ಎನ್ನುವುದು ಸಮಾನರ ನಡುವಿನ ಸಂಬಂಧ, ಅದು ಸೇವಾ ಒಪ್ಪಂದವಲ್ಲ. ಪತ್ನಿಯನ್ನು ಸೇವಕಿಯಂತೆ ಕಾಣಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಹಾಗೂ ಮಂಜುಷಾ ದೇಶಪಾಂಡೆ ಅವರಿದ್ದ ವಿಭಾಗೀಯ ಪೀಠವು, ಕುಟುಂಬ ನ್ಯಾಯಾಲಯ ನೀಡಿದ್ದ ವಿಚ್ಛೇದನ ಆದೇಶವನ್ನು ರದ್ದುಪಡಿಸಿ ಜೊತೆಗೆ ಹಲವು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಪತ್ನಿಗೆ ತಿಂಗಳಿಗೆ 20 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಪತಿಗೆ ನಿರ್ದೇಶನ ನೀಡಿದೆ.
ಚಾರ್ಟೆಡ್ ಅಕೌಂಟೆಂಟ್ ಆಗಿರುವ ಪತಿಯು, ತಮ್ಮ ಪತ್ನಿ ಮನೆ ಕೆಲಸ ಮಾಡುತ್ತಿರಲಿಲ್ಲ, ಅಡುಗೆ ಮಾಡುತ್ತಿರಲಿಲ್ಲ ಹಾಗೂ ತಮ್ಮ ಪೋಷಕರನ್ನು ನೋಡಿಕೊಳ್ಳುತ್ತಿರಲಿಲ್ಲ ಎಂದು ಆರೋಪಿಸಿ ವಿಚ್ಛೇದನ ಕೋರಿದ್ದರು. ಈ ಕಾರಣಗಳಿಂದ ತಾನು ಮಾನಸಿಕ ಒತ್ತಡ ಅನುಭವಿಸಿದ್ದೇನೆ ಎಂದು ಅವರು ವಾದಿಸಿದ್ದರು. ಆದರೆ ಇಂತಹ ಆರೋಪಗಳನ್ನು ಮಾತ್ರ ಆಧರಿಸಿ ಕ್ರೌರ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
2002ರಲ್ಲಿ ಮದುವೆಯಾದ ಈ ದಂಪತಿ ಕೆಲವೇ ತಿಂಗಳಲ್ಲಿ ಭಿನ್ನಾಭಿಪ್ರಾಯಕ್ಕೆ ಒಳಗಾಗಿದ್ದು ಬಳಿಕ ಪತ್ನಿ ಪತಿ ಮನೆಯನ್ನು ತೊರೆದು ತಮ್ಮ ಪೋಷಕರ ಮನೆಗೆ ತೆರಳಿದ್ದರು. ನಂತರ 2004ರಲ್ಲಿ ಪತಿಯು ವಿಚ್ಛೇದನ ಅರ್ಜಿ ಸಲ್ಲಿಸಿದ್ದರೆ, ಪತ್ನಿ ಜೀವನಾಂಶಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು. ಕುಟುಂಬ ನ್ಯಾಯಾಲಯವು 2010ರಲ್ಲಿ ಪತಿಗೆ ವಿಚ್ಛೇದನ ಮಂಜೂರು ಮಾಡಿದ್ದರೂ, ಜೀವನಾಂಶ ಅರ್ಜಿಯನ್ನು ತಿರಸ್ಕರಿಸಿತ್ತು.
ಇದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಪತ್ನಿಯು ವರದಕ್ಷಿಣೆ ಹಾಗೂ ಕಿರುಕುಳದ ಆರೋಪಗಳನ್ನು ಮಾಡಿದ್ದು, ಪತಿ ಮತ್ತು ಅವರ ಕುಟುಂಬದವರು ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ತಿಳಿಸಿದ್ದರು. ಪತ್ನಿ ಕಲಾ ತರಗತಿಗಳನ್ನು ನಡೆಸುತ್ತಿರುವ ಕಾರಣ ಜೀವನಾಂಶ ಅಗತ್ಯವಿಲ್ಲ ಎಂಬ ಪತಿಯ ವಾದವನ್ನೂ ಹೈಕೋರ್ಟ್ ತಳ್ಳಿ ಹಾಕಿದೆ. ಪತಿಯ ಆದಾಯ ಹಾಗೂ ಜೀವನ ವೆಚ್ಚಗಳನ್ನು ಪರಿಗಣಿಸಿ ಪತ್ನಿಗೆ ಮಾಸಿಕ ಜೀವನಾಂಶ ನೀಡಲು ನ್ಯಾಯಾಲಯ ಆದೇಶಿಸಿದೆ.




























