
ಪಡುಬಿದ್ರೆ: ಇಲ್ಲಿನ ಐತಿಹಾಸಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯನ್ನು ಅತ್ಯಂತ ದಾಖಲೆ ಅವಧಿಯಲ್ಲಿ ಪೂರೈಸಿ, ಅದ್ಭುತ ಕಾಷ್ಟ ಶಿಲ್ಪದ ಸೌಂದರ್ಯವನ್ನು ಅನಾವರಣಗೊಳಿಸಿದ ‘ಎಸ್‌ಕೆಎಸ್ ಇನ್ಫ್ರಾ’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಜಯ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ಎಂ.ಆರ್.ಜೆ ಸಮೂಹ ಸಂಸ್ಥೆಗಳ ಮುಖ್ಯಸ್ಥ ಕೆ. ಪ್ರಕಾಶ್ ಶೆಟ್ಟಿ ಅವರು ಸುಜಯ್ ಕುಮಾರ್ ಶೆಟ್ಟಿ ಅವರ ಶ್ರದ್ಧೆ ಮತ್ತು ವೃತ್ತಿಪರತೆಯನ್ನು ಶ್ಲಾಘಿಸಿ ಗೌರವಿಸಿದರು.
ದಾಖಲೆ ಅವಧಿಯ ನಿರ್ಮಾಣ:
ಬೃಹತ್ ದೇಗುಲಗಳ ನಿರ್ಮಾಣಕ್ಕೆ ವರ್ಷಗಳ ಕಾಲಾವಕಾಶ ಬೇಕಾಗುತ್ತದೆ. ಆದರೆ ಸುಜಯ್ ಶೆಟ್ಟಿ ನೇತೃತ್ವದ ತಂಡ ಹಗಲಿರುಳು ಶ್ರಮಿಸಿ, ಕೇವಲ 11 ತಿಂಗಳಲ್ಲಿ ದೇವಸ್ಥಾನವನ್ನು ಭವ್ಯವಾಗಿ ಎದ್ದು ನಿಲ್ಲುವಂತೆ ಮಾಡಿದೆ. ದೇಗುಲದ ಪ್ರತಿಯೊಂದು ಕೆತ್ತನೆಯೂ ಪ್ರಾಚೀನ ಶಿಲ್ಪಕಲೆಯ ಸೊಬಗನ್ನು ಮರುಸೃಷ್ಟಿಸಿದಂತಿದೆ.
ಮಾನವೀಯತೆ ಮತ್ತು ದಕ್ಷತೆ:
ಕಾಪು ಹೊಸ ಮಾರಿಗುಡಿ ಹಾಗೂ ಕಾರ್ಕಳದ ಪಾರಂಪರಿಕ ಶೈಲಿಯ ನ್ಯಾಯಾಲಯದ ಕಟ್ಟಡ ನಿರ್ಮಾಣದ ಮೂಲಕ ಈಗಾಗಲೇ ರಾಷ್ಟ್ರಮಟ್ಟದ ಗಮನ ಸೆಳೆದಿರುವ ಸುಜಯ್ ಶೆಟ್ಟರು, ವೃತ್ತಿಯಲ್ಲಿನ ಪ್ರಾಮಾಣಿಕತೆ ಹಾಗೂ ಕಾರ್ಮಿಕರ ಕಲ್ಯಾಣಕ್ಕೆ ನೀಡುವ ಆದ್ಯತೆಯಿಂದಾಗಿ ಭರವಸೆಯ ಗುತ್ತಿಗೆದಾರರಾಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದ ಅಬ್ದುಲ್ ನಜೀರ್ ಅವರೂ ಸುಜಯ್ ಶೆಟ್ಟರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಸನ್ಮಾನದ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಮುಖರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.

















