
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವರ್ಚುವಲ್ ಕಾರ್ಯಕ್ರಮದ ಮೂಲಕ 51,000ಕ್ಕೂ ಹೆಚ್ಚು ಯುವಕರಿಗೆ ವಿವಿಧ ಕೇಂದ್ರ ಸರ್ಕಾರಿ ಇಲಾಖೆಗಳ ನೇಮಕಾತಿ ಪತ್ರಗಳನ್ನು ವಿತರಿಸಿದರು. ಈ ವೇಳೆ ತಮ್ಮ ಇತ್ತೀಚಿನ ಐದು ರಾಷ್ಟ್ರಗಳ ಪ್ರವಾಸದ ಸಾಧನೆಗಳನ್ನೂ ಪ್ರಸ್ತಾಪಿಸಿದರು.
ವಿದೇಶ ಪ್ರವಾಸದ ವೇಳೆ ಹಲವು ದೇಶಗಳ ಪ್ರಮುಖ ಕಂಪನಿಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿರುವುದಾಗಿ ತಿಳಿಸಿದ ಮೋದಿ, ಭಾರತದ ಯುವಶಕ್ತಿ ಹಾಗೂ ತಾಂತ್ರಿಕ ಸಾಮರ್ಥ್ಯದ ಬಗ್ಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿದ ವಿಶ್ವಾಸವನ್ನು ಉಲ್ಲೇಖಿಸಿದರು.
ಭಾರತವು ವಿಶ್ವದ ವಿಶ್ವಾಸಾರ್ಹ ಸಪ್ಲೈ ಚೈನ್ ಕೇಂದ್ರವಾಗಿ ಬೆಳೆಯುತ್ತಿದ್ದು, ನೆದರ್ಲ್ಯಾಂಡ್ಸ್ನ ASML ಮತ್ತು ಟಾಟಾ ನಡುವಿನ ಒಪ್ಪಂದ ಸೇರಿದಂತೆ ಹಲವು ಅಂತರರಾಷ್ಟ್ರೀಯ ಸಹಭಾಗಿತ್ವಗಳು ಉದ್ಯೋಗ ಸೃಷ್ಟಿಗೆ ನೆರವಾಗಲಿವೆ ಎಂದು ಹೇಳಿದರು.
ಸ್ವೀಡನ್, ಇಟಲಿ, ಯುಎಇ ಮತ್ತು ನಾರ್ವೆಯೊಂದಿಗೆ ಹಸಿರು ಇಂಧನ, ಕೃತಕ ಬುದ್ಧಿಮತ್ತೆ, ರಕ್ಷಣಾ, ಹಡಗು ನಿರ್ಮಾಣ ಹಾಗೂ ಸೂಪರ್ಕಂಪ್ಯೂಟಿಂಗ್ ಕ್ಷೇತ್ರಗಳಲ್ಲಿ ಒಪ್ಪಂದಗಳು ನಡೆದಿವೆ ಎಂದು ಮೋದಿ ತಿಳಿಸಿದರು.
ನೇಮಕಾತಿ ಪತ್ರ ಪಡೆದ ಯುವಕರನ್ನು ಅಭಿನಂದಿಸಿದ ಅವರು, ವಿಕಸಿತ ಭಾರತದ ನಿರ್ಮಾಣದಲ್ಲಿ ಅವರ ಪಾತ್ರ ಮಹತ್ವದ್ದಾಗಿದ್ದು, ಹಸಿರು ಹೈಡ್ರೋಜನ್ ಮತ್ತು ಸುಸ್ಥಿರ ಉತ್ಪಾದನಾ ಕ್ಷೇತ್ರಗಳಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.




























