
ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ ಮುಡಾ ಅಕ್ರಮ ಸಂಬಂಧ ನಾಡಹಬ್ಬ ದಸರಾ ಬಳಿಕ ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತ. ಇದು ರಾಜಕೀಯ ಹೇಳಿಕೆಯಲ್ಲ. ನಮ್ಮ ಪಾದಯಾತ್ರೆಯ ಸಮಾರೋಪದಿಂದಲೇ ಅವರ ರಾಜೀನಾಮೆಗೆ ಕ್ಷಣಗಣನೆ ಆರಂಭವಾಗಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಸಿದ್ದರಾಮಯ್ಯ ಯಾವುದೇ ಸಂದರ್ಭದಲ್ಲಿಯಾದರೂ ರಾಜೀನಾಮೆ ನೀಡಬಹುದು. ಹೈಕಮಾಂಡ್ ರಾಜೀನಾಮೆ ಪಡೆಯುವ ಚಿಂತನೆ ನಡೆಸಿದೆ. ಹೈಕಮಾಂಡ್ ಏನು ಚರ್ಚೆ ನಡೆಸುತ್ತಿದೆ ಎಂಬುದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ನಮ್ಮ ಉದ್ದೇಶ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಬೇಕು ಎಂಬುದಲ್ಲ, ಬದಲಾಗಿ ಭ್ರಷ್ಟ ಕಾಂಗ್ರೆಸ್ ಮುಖ್ಯಮಂತ್ರಿ ರಾಜ್ಯಕ್ಕೆ ಶಾಪವಾಗಿದ್ದು, ಅವರು ಕೆಳಗಿಳಿಯಬೇಕು ಎಂಬುದಷ್ಟೇ ಆಗಿದೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅಷ್ಟೇ ಏಳೆಂಟು ಜನ ಮುಖ್ಯಮಂತ್ರಿ ಹುದ್ದೆ ಮೇಲೆ ಟವಲ್ ಹಾಕಿ ಕೂತಿದ್ದಾರೆ. ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬುದು ನಮಗೆ ಗೊತ್ತಿಲ್ಲ. ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಆದರೆ, ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಸತ್ಯ ಎಂದರು.













