
ರಾಷ್ಟ್ರಮಟ್ಟದ ಕ್ರೀಡಾಪಟುವಾದ ಸರಕಾರಿ ಪ್ರೌಢಶಾಲೆ ವಡ್ದರ್ಸೆಯಲ್ಲಿ ಶಿಕ್ಷಕಿಯಾಗಿರುವ ಶ್ರೀಮತಿ ಗೀತಾ ಶೆಟ್ಟಿಯವರು ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟದ ಕ್ರೀಡಾ ಜ್ಯೋತಿಯನ್ನು ಪ್ರಚಲಿಸುವುದರ ಮೂಲಕ ಕ್ರೀಡೆಗಳಿಗೆ ಚಾಲನೆಯನ್ನು ನೀಡಿದರು. ಡಾಕ್ಟರ್ ಸಂದೀಪ್ ಕುಡ್ವರವರು ಕ್ರೀಡಾ ದ್ವಜಾರೋಹಣ ಗೈದರು. ಜೇಸಿ ಚಿತ್ತರಂಜನ್ ಶೆಟ್ಟಿ ಯವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶ್ರೀಮತಿ ಗೀತಾ ಶೆಟ್ಟಿ ಅವರು ಮಾತನಾಡುತ್ತಾ, ಇಂದು ಜೇಸಿ ಶಾಲೆಯಲ್ಲಿ ಸಡಗರ ಮನೆ ಮಾಡಿದೆ. ಕ್ರೀಡಾಕೂಟ ವಿದ್ಯಾರ್ಥಿ ಜೀವನದಲ್ಲಿ ಅತಿ ಮುಖ್ಯವಾಗಿದೆ. ಆರೋಗ್ಯ ಮತ್ತು ಕ್ರೀಡೆ ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮ ಶಾರೀರಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಬಹು ಮುಖ್ಯ. ಸದೃಢ ಮನಸ್ಸಿನಲ್ಲಿ ಸದೃಢ ದೇಹವಿರುತ್ತದೆ. ಕ್ರೀಡೆ ಮನೋಲ್ಲಾಸ, ಚೈತನ್ಯ, ನಾಯಕತ್ವ ಗುಣ ಕಲ್ಪಿಸಿ ಕೊಡುತ್ತದೆ. ಈ ಶಾಲೆಯ ಪರಿಸರ ಕಲಿಯುವಿಕೆ ಸುಸಜ್ಜಿತವಾಗಿದೆ ಎಂದರು.
ಡಾ/ ಸಂದೀಪ್ ಕುಡ್ವ ಅವರು ನಾನು ನನ್ನ ಬಾಲ್ಯವನ್ನು ಈ ಕ್ರೀಡಾಂಗಣದಲ್ಲಿ ಕಳೆದಿದ್ದೇನೆ. ನಮ್ಮಲ್ಲಿ ಶಾರೀರಿಕ, ಮಾನಸಿಕ, ಸಾಮಾಜಿಕ ಆರೋಗ್ಯಗಳಿದ್ದರೆ ನಾವು ಆರೋಗ್ಯವಂತರಾಗಬಹುದು. ಉತ್ತಮ ಆರೋಗ್ಯವಂತ ಪ್ರಜೆಗಳಾಗಿ ಎಂದು ಹಾರೈಸಿದರು.
ಜೇಸಿ ಚಿತ್ತರಂಜನ್ ಶೆಟ್ಟಿ ಯವರು, ನಮ್ಮ ದೇಹಕ್ಕೆ ಆಹಾರ ಹಿತ-ಮಿತವಾಗಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ಶಾಲೆಯಲ್ಲಿ ಕ್ರೀಡೆಗಳಿದ್ದರೆ ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಾಗಿರುತ್ತೇವೆ. ಕ್ರೀಡೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಿ ಎಂದು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿ ಯವರು, ಶ್ರೀಮತಿ ಗೀತಾ ಎ ಶೆಟ್ಟಿ ಯವರು, ಡಾಕ್ಟರ್ ಸಂದೀಪ್ ಕುಡ್ವ ರವರು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಸುಪ್ರಿಯ ರವರು, ಶ್ರೀಮತಿ ಶಾಂತ ಹೆಗ್ಡೆ ರವರು, ಜೆ ಸಿ ಐ ಕಾರ್ಕಳದ ಅಧ್ಯಕ್ಷರಾದ ಸಚಿತ್ ಕುಮಾರ್ ರವರು, ಮಾಜಿ ಅಧ್ಯಕ್ಷರಾದ ವಿಘ್ನೇಶ್ ಪ್ರಸಾದ್ ರವರು, ಶಾಲಾ ಮುಖೋಪಾಧ್ಯಾಯನಿ ಶ್ರೀಮತಿ ಸುರೇಖಾ ರಾಜ್ ರವರು ಉಪಸ್ಥಿತರಿದ್ದರು.



















